ರಾಮನ ಮೇಲಿನ ಭಕ್ತಿ ಅಚಲ, ಟ್ರಸ್ಟ್‌ನ ಹಣಕಾಸಿನ ವ್ಯವಹಾರದ ಮೇಲೆಯೇ ಭಕ್ತರಿಗೆ ಅನುಮಾನ
x

ರಾಮನ ಮೇಲಿನ ಭಕ್ತಿ ಅಚಲ, ಟ್ರಸ್ಟ್‌ನ ಹಣಕಾಸಿನ ವ್ಯವಹಾರದ ಮೇಲೆಯೇ ಭಕ್ತರಿಗೆ ಅನುಮಾನ

ಕರ್ನಾಟಕದಿಂದ ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಶೇ.300 ರಿಂದ 400 ರಷ್ಟು ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿದಿನ 2 ಸಾವಿರದಿಂದ 5 ಸಾವಿರ ಭಕ್ತರು ಪ್ರಯಾಣಿಸುತ್ತಾರೆ.


ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ ಮತ್ತು ದೇಣಿಗೆ ಸಂಗ್ರಹದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ರಾಮಮಂದಿರ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಪಾರದರ್ಶಕತೆ ಕುರಿತು ಪ್ರಶ್ನೆಗಳು ಎದ್ದಿದ್ದು, ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಭಕ್ತರಿಂದ ದೇಣಿಗೆಯಾಗಿ ಬಂದ ಹಣದ ಲೆಕ್ಕಪತ್ರದಲ್ಲಿ ಪಾರದರ್ಶಕತೆ ಇಲ್ಲ ಎಂಬ ಆರೋಪಗಳು ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಟೀಕೆಗಳಿಗೆ ಕಾರಣವಾಗಿವೆ. ಕರ್ನಾಟಕದಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ರಾಜಕೀಯ ನಾಯಕರು, ಹಿಂದೂ ಸಂಘಟನೆಗಳು, ಭಕ್ತರು ಮತ್ತು ಸಾರ್ವಜನಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ, ಈ ವಿವಾದಗಳ ನಡುವೆಯೂ ಕರ್ನಾಟಕದ ಜನರ ರಾಮನ ಮೇಲಿನ ಭಕ್ತಿ ಕಡಿಮೆಯಾಗಿಲ್ಲ. ಅಯೋಧ್ಯೆಗೆ ಪ್ರಯಾಣಿಸುವ ಉತ್ಸಾಹದಲ್ಲೂ ಯಾವುದೇ ದೊಡ್ಡ ಮಟ್ಟದ ಕುಸಿತ ಕಂಡುಬಂದಿಲ್ಲ.

ಕರ್ನಾಟಕದ ಮೂಲೆಮೂಲೆಗಳಿಂದ ಪ್ರತಿದಿನ ಸಾವಿರಾರು ಭಕ್ತರು ಅಯೋಧ್ಯೆಯತ್ತ ಯಾತ್ರೆ ಕೈಗೊಳ್ಳುತ್ತಿದ್ದಾರೆ. ರಾಮಮಂದಿರದ ದರ್ಶನವನ್ನು ಜೀವನದ ಮಹತ್ವದ ಧಾರ್ಮಿಕ ಕ್ಷಣವೆಂದು ಭಾವಿಸುವ ಭಕ್ತರು, ದೀರ್ಘ ಪ್ರಯಾಣವನ್ನೂ ಲೆಕ್ಕಿಸದೆ ಉತ್ತರ ಭಾರತದತ್ತ ಹೊರಡುತ್ತಿದ್ದಾರೆ. ಆದರೆ, ಇದೇ ಭಕ್ತಿಯ ಪಯಣದ ನಡುವೆ ಅಯೋಧ್ಯೆಯಿಂದ ಕೇಳಿಬರುತ್ತಿರುವ ದೇಣಿಗೆ ಅಕ್ರಮದ ಆರೋಪಗಳು ಭಕ್ತರ ಮನದಲ್ಲಿ ಬೇಸರ ಮತ್ತು ದ್ವಂದ್ವದ ಭಾವನೆಯನ್ನು ಮೂಡಿಸಿವೆ. “ರಾಮನ ಮೇಲೆ ನಂಬಿಕೆ ಬೇರೆ, ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಬೇರೆ” ಎಂಬ ಮನೋಭಾವನೆ ಭಕ್ತರಲ್ಲಿ ವ್ಯಕ್ತವಾಗುತ್ತಿದೆ.

ರಾಮಮಂದಿರವು ಕರ್ನಾಟಕದ ಲಕ್ಷಾಂತರ ಭಕ್ತರ ಪಾಲಿಗೆ ಭಕ್ತಿ, ನಂಬಿಕೆ ಮತ್ತು ಆತ್ಮೀಯತೆಯ ಕೇಂದ್ರಬಿಂದು. ದಕ್ಷಿಣ ಭಾರತದ ಕರ್ನಾಟಕದಿಂದ ಉತ್ತರ ಭಾರತದ ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ಪ್ರವಾಹವು ಸಾರಿಗೆ, ಪ್ರವಾಸೋದ್ಯಮ ಮತ್ತು ಧಾರ್ಮಿಕ ಸಂಘಟನೆಗಳ ಚಟುವಟಿಕೆಗಳಲ್ಲಿ ದೊಡ್ಡ ಬದಲಾವಣೆ ತಂದಿದೆ. ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಗೆ ಭೇಟಿ ನೀಡುವವರ ಸಂಖ್ಯೆ ಸೀಮಿತವಾಗಿದ್ದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕರ್ನಾಟಕದಿಂದ ಅಯೋಧ್ಯೆಗೆ ತೆರಳುವ ಭಕ್ತರ ಸಂಖ್ಯೆಯಲ್ಲಿ ಶೇಕಡಾ 300ರಿಂದ 400ರಷ್ಟು ಏರಿಕೆ ಕಂಡುಬಂದಿದೆ. ಸಾಮಾನ್ಯ ದಿನಗಳಲ್ಲಿ ಕರ್ನಾಟಕದಿಂದ ಪ್ರತಿದಿನ ಸರಾಸರಿ 2 ಸಾವಿರದಿಂದ 5 ಸಾವಿರ ಭಕ್ತರು ಅಯೋಧ್ಯೆಯತ್ತ ಪ್ರಯಾಣಿಸುತ್ತಿದ್ದಾರೆ. ತಿಂಗಳಿಗೆ ಅಂದಾಜು 60 ಸಾವಿರದಿಂದ 1 ಲಕ್ಷ ಮಂದಿ ರಾಮಲಲ್ಲಾ ದರ್ಶನಕ್ಕೆ ತೆರಳುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ವರ್ಷಕ್ಕೆ ಸುಮಾರು 15ರಿಂದ 20 ಲಕ್ಷ ಭಕ್ತರು ಕರ್ನಾಟಕದಿಂದ ಅಯೋಧ್ಯೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ರೈಲು ಮಾರ್ಗಕ್ಕೆ ಭಕ್ತರ ಮೊದಲ ಆದ್ಯತೆ

ಅಯೋಧ್ಯೆಗೆ ತೆರಳುವ ಕರ್ನಾಟಕದ ಭಕ್ತರು ಪ್ರಮುಖವಾಗಿ ಮೂರು ಮಾರ್ಗಗಳನ್ನು ಅವಲಂಬಿಸಿದ್ದಾರೆ. ರೈಲು ಮಾರ್ಗ, ವಿಮಾನಯಾನ ಮತ್ತು ಪ್ರವಾಸ ಪ್ಯಾಕೇಜ್‌ಗಳ ಮೂಲಕ ಭಕ್ತರು ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇವುಗಳಲ್ಲಿ ಅತಿಹೆಚ್ಚು ಜನರು ರೈಲು ಮಾರ್ಗವನ್ನೇ ಆಯ್ಕೆ ಮಾಡುತ್ತಿದ್ದಾರೆ. ವಿಮಾನಯಾನ ವೆಚ್ಚ ಹೆಚ್ಚು ಇರುವುದರಿಂದ ಸಾಮಾನ್ಯ ಮತ್ತು ಮಧ್ಯಮ ವರ್ಗದ ಭಕ್ತರು ರೈಲ್ವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅಂದಾಜು ಪ್ರಕಾರ, ಕರ್ನಾಟಕದಿಂದ ಅಯೋಧ್ಯೆಗೆ ತೆರಳುವವರಲ್ಲಿ ಶೇಕಡಾ 70ರಿಂದ 75ರಷ್ಟು ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರವಾಸ ಪ್ಯಾಕೇಜ್‌ಗಳ ಮೂಲಕ ಶೇಕಡಾ 20ರಷ್ಟು ಭಕ್ತರು ತೆರಳುತ್ತಿದ್ದರೆ, ವಿಮಾನಯಾನ ಆಯ್ಕೆಮಾಡುವವರ ಪ್ರಮಾಣ ಶೇಕಡಾ 5ರಿಂದ 10ರಷ್ಟಿದೆ.

ಭಾರತೀಯ ರೈಲ್ವೆಯು ವಿಶೇಷ ರೈಲುಗಳು ಮತ್ತು ಸಾಮಾನ್ಯ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಕರ್ನಾಟಕದಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ರೈಲಿನ ಮೂಲಕ ಪ್ರಯಾಣಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆಗಳು ಆರಂಭವಾಗಿರುವುದರಿಂದ ಮಧ್ಯಮ ಮತ್ತು ಮೇಲ್ವರ್ಗದ ಭಕ್ತರು ವಿಮಾನಯಾನಕ್ಕೂ ಆಸಕ್ತಿ ತೋರಿಸುತ್ತಿದ್ದಾರೆ. ಐಆರ್‌ಸಿಟಿಸಿ ಹಾಗೂ ಖಾಸಗಿ ಪ್ರವಾಸ ಸಂಸ್ಥೆಗಳು ಕರ್ನಾಟಕದಿಂದ ಅಯೋಧ್ಯೆ, ವಾರಣಾಸಿ ಮತ್ತು ಪ್ರಯಾಗರಾಜ್‌ಗಳನ್ನು ಒಳಗೊಂಡ ಧಾರ್ಮಿಕ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದ್ದು, ಈ ಪ್ಯಾಕೇಜ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಯಾವ ಜಿಲ್ಲೆಗಳಿಂದ ಹೆಚ್ಚು?

ಅಯೋಧ್ಯೆಗೆ ತೆರಳುವ ಭಕ್ತರ ಸಂಖ್ಯೆಯಲ್ಲಿ ಜಿಲ್ಲಾವಾರು ವ್ಯತ್ಯಾಸವೂ ಕಂಡುಬರುತ್ತಿದೆ. ರೈಲು ಸಂಪರ್ಕ, ಪ್ರ ವಾಸೋದ್ಯಮ ವ್ಯವಸ್ಥೆ, ಧಾರ್ಮಿಕ ಸಂಘಟನೆಗಳ ಚಟುವಟಿಕೆ ಮತ್ತು ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಈ ಪ್ರಯಾಣದ ಪ್ರಮಾಣ ನಿರ್ಧಾರವಾಗುತ್ತಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಭಕ್ತರು ಬೆಂಗಳೂರಿನಿಂದಲೇ ಅಯೋಧ್ಯೆಗೆ ಪ್ರಯಾಣಿಸುತ್ತಿದ್ದಾರೆ. ನಗರದಲ್ಲಿನ ದೊಡ್ಡ ಜನಸಂಖ್ಯೆ, ಆರ್ಥಿಕ ಸಾಮರ್ಥ್ಯ, ನೇರ ವಿಮಾನ ಸೇವೆ ಮತ್ತು ವಿಶೇಷ ರೈಲುಗಳ ಲಭ್ಯತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಮತ್ತು ವಿಶೇಷ ರೈಲುಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ.

ಬೆಂಗಳೂರಿನ ನಂತರ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ದಕ್ಷಿಣ ಕನ್ನಡ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಭಾಗದ ಭಕ್ತರು ಅಯೋಧ್ಯೆಗೆ ಹೋಗಲು ಹುಬ್ಬಳ್ಳಿ ರೈಲು ನಿಲ್ದಾಣವನ್ನು ಪ್ರಮುಖವಾಗಿ ಅವಲಂಬಿಸುತ್ತಿದ್ದಾರೆ. ಇದು ಉತ್ತರ ಕರ್ನಾಟಕದ ಪ್ರಮುಖ ಪ್ರವೇಶ ದ್ವಾರವಾಗಿರುವುದರಿಂದ ಈ ಭಾಗದಿಂದ ಹೆಚ್ಚು ಪ್ರಯಾಣಿಕರು ಹೊರಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಧಾರ್ಮಿಕ ಸಂಘಟನೆಗಳು ಮತ್ತು ಟ್ರಾವೆಲ್ ಏಜೆನ್ಸಿಗಳು ವಿಶೇಷ ಬಸ್ ಹಾಗೂ ರೈಲು ಪ್ರವಾಸಗಳನ್ನು ಆಯೋಜಿಸುತ್ತಿರುವುದರಿಂದ ಅಲ್ಲಿಂದಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮೈಸೂರು ಸಾಂಸ್ಕೃತಿಕ ಕೇಂದ್ರವಾಗಿರುವುದರಿಂದ, ದಕ್ಷಿಣ ಕನ್ನಡ ಭಾಗದಲ್ಲಿ ಧಾರ್ಮಿಕ ಸಂಘಟನೆಗಳ ಚಟುವಟಿಕೆಗಳು ಬಲವಾಗಿರುವುದರಿಂದ ಈ ಭಾಗಗಳಿಂದಲೂ ಸಾಕಷ್ಟು ಮಂದಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಿಂದಲೂ ಅಯೋಧ್ಯೆ ಯಾತ್ರಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮದ ಆರೋಪಗಳ ಬಗ್ಗೆ ರಾಜ್ಯದ ಭಕ್ತರಿಂದ ಮಿಶ್ರ ಪ್ರತಿಕ್ರಿಯೆ

ರಾಮಮಂದಿರದ ದೇಣಿಗೆ ಸಂಗ್ರಹದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ ಕರ್ನಾಟಕದ ಭಕ್ತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ರಾಮಮಂದಿರವು ನಂಬಿಕೆಯ ಸಂಕೇತವೇ ಹೊರತು ಹಣಕಾಸು ವ್ಯವಹಾರದ ಕೇಂದ್ರವಲ್ಲ ಎಂದು ಹೇಳುತ್ತಾ, ಇಂತಹ ಆರೋಪಗಳು ಕೇಳಿಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ಪವಿತ್ರ ಧಾರ್ಮಿಕ ಸ್ಥಳದಲ್ಲಿ ಹಣದ ವಿಚಾರದಲ್ಲಿ ಅಪಸ್ವರ ಬರುವುದು ಅತ್ಯಂತ ನೋವಿನ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಕ್ತರು ನೀಡುವ ದೇಣಿಗೆ ಎಂದರೆ ಅದು ಅವರ ನಂಬಿಕೆಯ ಪ್ರತೀಕವಾಗಿರುವುದರಿಂದ, ಅದರ ಲೆಕ್ಕಪತ್ರ ಪಾರದರ್ಶಕವಾಗಿರಲೇಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಆಕೃತಿ ಕನ್ನಡ ಆನ್‌ಲೈನ್‌ ಪತ್ರಿಕೆಯ ಸಂಪಾದಕಿ ಶಾಲಿನಿ ಹೂಲಿ ಪ್ರದೀಪ್‌ ಅವರು, “ರಾಮಮಂದಿರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ದೇವಾಲಯಗಳ ಮೇಲೆ ಜನರಿಗೆ ಅಪಾರ ಭಕ್ತಿ, ನಂಬಿಕೆ ಇರುತ್ತದೆ. ದೇವರ ಹೆಸರಿನಲ್ಲಿ ಅಕ್ರಮ ನಡೆದರೆ ಆ ದೇವಾಲಯದ ಮೇಲಿನ ನಂಬಿಕೆಗೆ ಧಕ್ಕೆಯಾಗುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೇವಾಲಯಗಳ ಬಗ್ಗೆ ಭಕ್ತರಲ್ಲಿ ಅನುಮಾನ ಮೂಡುವ ಸಾಧ್ಯತೆ ಇದೆ” ಎಂದು ಹೇಳಿದರು.

ಹಲಸೂರಿನ ನಿವಾಸಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಎಂ. ರಮೇಶ್‌ ಅವರು, “ರಾಮಮಂದಿರ ನಿರ್ಮಾಣ ಕೋಟ್ಯಂತರ ಭಕ್ತರ ಕನಸು. ಅದರಲ್ಲಿ ಯಾರಾದರೂ ಕೆಲವರು ತಪ್ಪು ಮಾಡಿದ್ದರೆ ಅವರನ್ನು ಕಾನೂನಿನ ಮೂಲಕ ಶಿಕ್ಷಿಸಬೇಕು. ಆದರೆ ಅದಕ್ಕಾಗಿ ಇಡೀ ವ್ಯವಸ್ಥೆಯನ್ನಾಗಲಿ, ಭಕ್ತಿಯನ್ನಾಗಲಿ ಪ್ರಶ್ನಿಸುವುದು ಸರಿಯಲ್ಲ. ಅಲ್ಲಿ ನಡೆದಿರುವುದು ವ್ಯಕ್ತಿಗಳ ವೈಫಲ್ಯವೇ ಹೊರತು ರಾಮಮಂದಿರದ ವೈಫಲ್ಯವಲ್ಲ. ದೇಣಿಗೆ ಹಣ ಎಂದರೆ ಪ್ರತಿಯೊಬ್ಬ ಭಕ್ತನೂ ಕಷ್ಟಪಟ್ಟು ದುಡಿದು ನೀಡಿದ ಹಣ. ಆದ್ದರಿಂದ ಟ್ರಸ್ಟ್ ಸಂಪೂರ್ಣ ಪಾರದರ್ಶಕವಾಗಿರಬೇಕು. ಆರೋಪಗಳು ಬಂದಾಗ ಸುಮ್ಮನಿರದೆ, ಸರಿಯಾದ ತನಿಖೆ ನಡೆಸಿ ಭಕ್ತರಿಗೆ ಸ್ಪಷ್ಟನೆ ನೀಡಬೇಕು. ಆಗ ಮಾತ್ರ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಘಟನೆ ನೋವು ತಂದಿದೆ”: ಹಿಂದೂ ಸಂಘಟನೆಗಳ ಬೇಸರ

ದೇಣಿಗೆ ಸಂಗ್ರಹದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಹಿಂದೂ ಸಂಘಟನೆಗಳಲ್ಲಿಯೂ ಬೇಸರಕ್ಕೆ ಕಾರಣವಾಗಿವೆ. ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರ ತನಿಖೆ ಕೈಗೊಂಡಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ವಿಶ್ವಾಸವನ್ನು ಕೆಲವು ಸಂಘಟನೆಗಳು ವ್ಯಕ್ತಪಡಿಸಿವೆ. ಆದರೆ, ಈ ಘಟನೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕೆಲವರು ರಾಮಮಂದಿರದ ವಿರುದ್ಧ ಟೀಕೆ ಮಾಡಲು ಪ್ರಾರಂಭಿಸಿದ್ದಾರೆ ಎಂಬ ಅಸಮಾಧಾನವೂ ವ್ಯಕ್ತವಾಗುತ್ತಿದೆ. ರಾಮಮಂದಿರವು ನೂರಾರು ವರ್ಷಗಳ ಹೋರಾಟದ ಫಲ. ಮಂದಿರ ನಿರ್ಮಾಣವಾಗಿರುವುದನ್ನು ವಿರೋಧಿಗಳು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಣ್ಣಪುಟ್ಟ ವಿಚಾರಗಳನ್ನು ದೊಡ್ಡದಾಗಿ ಮಾಡಿ ಜನರ ನಂಬಿಕೆಯನ್ನು ಅಲುಗಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹಿಂದೂ ಸಂಘಟನೆಗಳ ಕೆಲ ನಾಯಕರು ಆರೋಪಿಸಿದ್ದಾರೆ.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ರಾಷ್ಟ್ರೀಯ ಕೇಸರಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಹರೀಶ್‌ ಅವರು, “ರಾಮಮಂದಿರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ಹಿಂದೂಗಳಿಗೆ ನೋವುಂಟು ಮಾಡಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಕರಸೇವಕರು ಹೋರಾಟ ಮಾಡಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್‌ ಯಾದವ್‌ ಅವರು ಈ ಹಿಂದೆ ಕರಸೇವಕರಿಗೆ ಸಾಕಷ್ಟು ಕಿರುಕುಳ ನೀಡಿದ್ದರು. ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯೂಂಟು ಮಾಡಿದ್ದರು. ಲಕ್ಷಾಂತರ ಕರಸೇವಕರ ಹೋರಾಟದ ಫಲವಾಗಿ ಕೊನೆಗೂ ರಾಮಮಂದಿರ ನಿರ್ಮಾಣವಾಗಿದೆ. ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ನಿರ್ಮಾಣವಾಗಿರುವ ಮಂದಿರದಲ್ಲಿ ಇಂತಹ ಅಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇದು ಜನರ ಭಾವನೆಗೆ ಧಕ್ಕೆಯುಂಟು ಮಾಡುವ ಕೆಲಸ. ಭಕ್ತಿ ಕೇಂದ್ರದಲ್ಲಿ ಸೇವೆ ಮಾಡುವ ಬದಲು ಹಣಕ್ಕಾಗಿ ಕೆಲಸ ಮಾಡಿ ದ್ರೋಹ ಎಸಗಲಾಗಿದೆ. ಅಕ್ರಮ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಜನರ ನಂಬಿಕೆಯನ್ನು ಉಳಿಸಬೇಕು” ಎಂದು ಹೇಳಿದರು.

“ಅತ್ಯಂತ ನಾಚಿಕೆಗೇಡಿನ ಸಂಗತಿ”: ಪ್ರಮೋದ್‌ ಮುತಾಲಿಕ್‌

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು ಈ ಆರೋಪಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬುದು ದಶಕಗಳ ಹೋರಾಟವಲ್ಲ, ಅದು 500 ವರ್ಷಗಳ ಹೋರಾಟ. ಸುಮಾರು 70 ಯುದ್ಧಗಳು ನಡೆದಿವೆ. ಸ್ವಾತಂತ್ರ್ಯ ನಂತರವೂ ನಿರಂತರ ಹೋರಾಟಗಳು ನಡೆದಿವೆ. ಕಾನೂನು ಹೋರಾಟವೂ ನಡೆದಿದೆ. ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬಳಿಕ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು. ಲಕ್ಷಾಂತರ ಹೋರಾಟಗಾರರ ಶ್ರಮವನ್ನು ಈಗ ಮಣ್ಣುಪಾಲು ಮಾಡುವಂತಾಗಿದೆ. ರಾಮಮಂದಿರ ನಿರ್ಮಾಣದಲ್ಲಿ ತಮ್ಮ ಪಾಲು ಇರಲಿ ಎಂದು ಜನರು ತಮ್ಮ ಕೈಲಾದಷ್ಟು ಹಣ ನೀಡಿದ್ದರು. ಆ ಭಕ್ತಿಯ ದೇಣಿಗೆಗೆ ಮಸಿ ಬಳಿಯುವ ಕೆಲಸ ನಡೆದಿದೆ. ರಾಮನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವವರನ್ನು ಕೇವಲ ಶಿಕ್ಷೆಗೊಳಪಡಿಸುವುದಷ್ಟೇ ಅಲ್ಲ, ಕಠಿಣತಮ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಮಾಡಬಾರದು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಘಟನೆ ಮರೆಯಲಾರದ ನೋವು, ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

“ಹಿಂದೂತ್ವವಾದಿಗಳು ಲೂಟಿ ಹೊಡೆದಿದ್ದಾರೆ”: ಕಾಂಗ್ರೆಸ್‌

ದೇಣಿಗೆ ಅಕ್ರಮದ ಆರೋಪ ರಾಜಕೀಯ ವಲಯದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೂ, ಘಟನೆಯನ್ನು ಆಧಾರ ಮಾಡಿಕೊಂಡು ರಾಮಮಂದಿರದ ಮೇಲೆ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ನಾಯಕರು, ರಾಮನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದ ಹಣದ ಪಾರದರ್ಶಕತೆ ಕುರಿತು ಪ್ರಶ್ನಿಸುವುದು ಭಕ್ತರ ಹಕ್ಕು ಎಂದು ಪ್ರತಿಪಾದಿಸಿದ್ದಾರೆ.

ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಈ ವಿಚಾರದಲ್ಲಿ ಹಿಂದೂತ್ವವಾದಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಹಿಂದೂಗಳ ಭಾವನೆಗಳನ್ನು ಕೆರಳಿಸಲು ಹಿಂದೂತ್ವವಾದಿಗಳು ಮಹಮ್ಮದ್‌ ಘಸ್ನಿ ಲೂಟಿಯ ಬಗ್ಗೆ ಪ್ರಸ್ತಾಪಿಸುತ್ತಾರೆ. ಆದರೆ ಘಸ್ನಿಯ ನಂತರ ರಾಮನ ಹೆಸರಿನಲ್ಲಿ ಲೂಟಿ ಹೊಡೆದವರು ಹಿಂದೂತ್ವವಾದಿಗಳು. ದೇಣಿಗೆ ಸಂಗ್ರಹದಲ್ಲಿ ಕೋಟ್ಯಂತರ ರೂಪಾಯಿ ಲಪಟಾಯಿಸಲಾಗಿದೆ. ಇಂತಹ ಕೆಲಸ ಅವರಿಗೆ ಹೊಸದಲ್ಲ. ಈ ಹಿಂದೆ ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಮೆರವಣಿಗೆ ನಡೆಸಿದ ವೇಳೆ 900 ಕೋಟಿ ರೂಪಾಯಿ ಲೂಟಿ ಆಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆಗ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಅಕ್ರಮ ಎಸಗಿದ್ದರು. ಈಗ ಭಕ್ತರು ನೀಡಿರುವ ದೇಣಿಗೆಯಲ್ಲಿಯೂ ಅವ್ಯವಹಾರ ನಡೆದಿದೆ. ಇವರಿಂದ ನಾವು ಕಲಿಯಬೇಕಿಲ್ಲ” ಎಂದು ಅವರು ಟೀಕಿಸಿದ್ದಾರೆ.

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್‌ ಅವರು, “ಹಿಂದೂಧರ್ಮವನ್ನು ಉಳಿಸುವವರು ಎಂದು ಹೇಳಿಕೊಳ್ಳುವವರು ರಾಮಮಂದಿರವನ್ನು ಹಿಂದೂ ಧರ್ಮದ ಮೇರು ಕಿರೀಟ ಎಂದು ಬಣ್ಣಿಸಿದ್ದರು. ಆದರೆ ಇದೀಗ ಅದರ ಹೆಸರಿನಲ್ಲಿ ಲೂಟಿ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದನ್ನು ನೋಡಿದರೆ ಅವರ ನಿಲುವಿನ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆ. ಮಂದಿರಕ್ಕೆ ಬರುವ ದೇಣಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ ಅಲ್ಲಿನ ವ್ಯವಸ್ಥೆ ಎಷ್ಟು ಲೋಪದಿಂದ ಕೂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಶ್ರೀರಾಮನ ಹೆಸರಿನಲ್ಲಿ ಹಿಂದೂ ರಕ್ಷಕರು ಎಂದು ಹೇಳಿಕೊಳ್ಳುವವರು, ಆತನ ಆಸ್ತಿಯನ್ನೇ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹವರು ದೇಶವನ್ನು ಹೇಗೆ ರಕ್ಷಿಸುತ್ತಾರೆ?” ಎಂದು ಕಿಡಿಕಾರಿದರು.

ಯಾತ್ರಾರ್ಥಿಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆಯೇ?

ರಾಮಮಂದಿರದ ದೇಣಿಗೆ ಸಂಗ್ರಹದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಿಂದ ಅಯೋಧ್ಯೆಗೆ ತೆರಳುವ ಭಕ್ತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಪರಿಣಾಮ ಕಂಡುಬಂದಿಲ್ಲ. ಪ್ರಸ್ತುತ ಶಾಲಾ-ಕಾಲೇಜುಗಳು ಆರಂಭವಾಗಿರುವುದರಿಂದ ಅಯೋಧ್ಯೆಗೆ ಹೋಗುವವರ ಸಂಖ್ಯೆಯಲ್ಲಿ ಋತುಸಹಜ ಕುಸಿತ ಕಂಡುಬಂದಿರಬಹುದು. ಆದರೆ ಅದನ್ನು ದೇಣಿಗೆ ವಿವಾದದ ನೇರ ಪರಿಣಾಮವೆಂದು ಹೇಳಲು ಸಾಧ್ಯವಿಲ್ಲ. ಭಕ್ತರು ಅವ್ಯವಹಾರದ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಹಣ ಎಲ್ಲಿಗೆ ಹೋಗುತ್ತದೆ ಎಂಬ ಬಗ್ಗೆ ಜಾಗೃತಿಯೂ ಹೆಚ್ಚಾಗಿದೆ. ಆದರೂ ಅಯೋಧ್ಯೆಗೆ ತೆರಳುವ ಭಕ್ತಿ, ರಾಮನ ದರ್ಶನದ ಹಂಬಲ ಮತ್ತು ಧಾರ್ಮಿಕ ಆಕರ್ಷಣೆ ಕಡಿಮೆಯಾಗಿಲ್ಲ. ಭಕ್ತರು ದೇಣಿಗೆ ನೀಡುವುದನ್ನೇ ಸಂಪೂರ್ಣ ನಿಲ್ಲಿಸುವ ಸಾಧ್ಯತೆ ಕಡಿಮೆ. ಆದರೆ “ನಾವು ಕೊಟ್ಟ ಹಣದ ಲೆಕ್ಕವೇನು?” ಎಂಬ ಪ್ರಶ್ನೆ ಮಾತ್ರ ಇನ್ನು ಮುಂದೆ ಹೆಚ್ಚು ಗಟ್ಟಿಯಾಗಿ ಕೇಳಿಬರುವ ಸಾಧ್ಯತೆ ಇದೆ.

Read More
Next Story