Ayodhya Impact| ರಾಜ್ಯದ ದೇವಸ್ಥಾನಗಳ ರಕ್ಷಣೆಗೆ ಸರ್ಕಾರದ ಹೈಟೆಕ್ ಮಾಸ್ಟರ್ ಪ್ಲ್ಯಾನ್
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲೂ ದೊಡ್ಡ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ತಹಸೀಲ್ದಾರ್ ಅಥವಾ ಕಂದಾಯ ಅಧಿಕಾರಿಗಳ ಕಡ್ಡಾಯ ಮೇಲ್ವಿಚಾರಣೆಯಲ್ಲೇ ಎಣಿಕೆ ನಡೆಯಲಿದೆ.
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಹುಂಡಿ ಕಳವು ಪ್ರಕರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ, ರಾಜ್ಯದ ದೇವಾಲಯಗಳ ಭದ್ರತೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಘಟನೆಯು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಇನ್ನು ಮುಂದೆ ಸಾಮಾನ್ಯ ಸಿಸಿಟಿವಿಗಳ ಬದಲಾಗಿ ವೆಬ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು, ಫೇಸ್ ರೆಕಗ್ನಿಷನ್ ತಂತ್ರಜ್ಞಾನ, ಮತ್ತು ಪೊಲೀಸರ ಲೈವ್ ನಿಗಾವನ್ನು ಕಡ್ಡಾಯಗೊಳಿಸಲಾಗಿದೆ. ಕಳ್ಳರು ಕ್ಯಾಮೆರಾಗಳನ್ನು ಒಡೆದರೂ ವಿಡಿಯೋಗಳು ನೇರವಾಗಿ ರಾಜ್ಯಮಟ್ಟದ ಕೇಂದ್ರ ಸರ್ವರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹವಾಗಲಿವೆ. ಭಕ್ತರ ಜೇಬುಗಳ್ಳತನ ತಡೆಯಲು ಮತ್ತು ಸುರಕ್ಷತೆಗಾಗಿ ಹುಂಡಿಗಳ ಬಳಿ ಕ್ಯೂಆರ್ ಕೋಡ್ ಅಳವಡಿಸಿ ನಗದು ರಹಿತ ಡಿಜಿಟಲ್ ದೇಣಿಗೆ ಹಾಗೂ ಸೇವಾ ಟಿಕೆಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಹುಂಡಿ ಎಣಿಕೆಯಲ್ಲಿ ಪಾರದರ್ಶಕತೆ ಮತ್ತು ಕಠಿಣ ನಿಯಮಗಳು
ಹುಂಡಿ ಎಣಿಕೆ ಪ್ರಕ್ರಿಯೆಯಲ್ಲೂ ದೊಡ್ಡ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ತಹಸೀಲ್ದಾರ್ ಅಥವಾ ಕಂದಾಯ ಅಧಿಕಾರಿಗಳ ಕಡ್ಡಾಯ ಮೇಲ್ವಿಚಾರಣೆಯಲ್ಲೇ ಎಣಿಕೆ ನಡೆಯಲಿದೆ. ಹೆಚ್ಚು ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಮತ್ತು ಉಳಿದ ಕಡೆ ಎರಡು ವಾರಕ್ಕೊಮ್ಮೆ ಎಣಿಕೆ ನಡೆಸಬೇಕು. ಹುಂಡಿ ತೆರೆಯುವ ಕ್ಷಣದಿಂದ ಹಿಡಿದು ಬ್ಯಾಂಕ್‌ಗೆ ಜಮಾ ಮಾಡುವವರೆಗಿನ ಪ್ರತಿಯೊಂದು ಹಂತದ ವಿಡಿಯೋ ಚಿತ್ರೀಕರಣ ಕಡ್ಡಾಯವಾಗಿದೆ. ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವ ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ ವ್ಯವಸ್ಥೆ ಇರಲಿದ್ದು, ಸಾರ್ವಜನಿಕರನ್ನು ಈ ಕಾರ್ಯಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ. ಕೇವಲ ಗೃಹರಕ್ಷಕರು, ಬ್ಯಾಂಕ್ ಅಥವಾ ಸರ್ಕಾರಿ ನೌಕರರು ಮಾತ್ರ ಇದರಲ್ಲಿ ಭಾಗಿಯಾಗಲಿದ್ದು, ಯಾವುದೇ ಅಕ್ರಮ ನಡೆದರೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದಿದ್ದ ಚಿನ್ನಾಭರಣ ನಿರ್ವಹಣೆ ಅಕ್ರಮದಂತಹ ಘಟನೆಗಳು ಮರುಕಳಿಸದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ದೇವಾಲಯಗಳ ಆದಾಯ ಮತ್ತು ಹಣದ ಬಳಕೆ
ಕಳೆದ ಆರ್ಥಿಕ ವರ್ಷದಲ್ಲಿ ಮುಜರಾಯಿ ಇಲಾಖೆಯ 11 ಪ್ರಮುಖ ದೇವಾಲಯಗಳು ಒಟ್ಟು 602 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದು, ಇದರಲ್ಲಿ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನ 168 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಮಲೆ ಮಹಾದೇಶ್ವರ ಬೆಟ್ಟ 118 ಕೋಟಿ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ 84 ಕೋಟಿ ರೂ. ಆದಾಯ ಗಳಿಸಿವೆ. ರಾಜ್ಯದಲ್ಲಿ ಒಟ್ಟು 34,560 ಕ್ಕೂ ಹೆಚ್ಚು ದೇವಾಲಯಗಳಿದ್ದು, ಇವುಗಳನ್ನು ಆದಾಯದ ಆಧಾರದ ಮೇಲೆ ಎ, ಬಿ ಮತ್ತು ಸಿ ಗ್ರೇಡ್ ಎಂದು ವಿಂಗಡಿಸಲಾಗಿದೆ. ದೇವಾಲಯದ ಕಾಣಿಕೆ ಹಣವನ್ನು ಸರ್ಕಾರ ತನ್ನ ರಸ್ತೆ ಅಥವಾ ಉಚಿತ ಯೋಜನೆಗಳಿಗೆ ಬಳಸುವಂತಿಲ್ಲ. ಶ್ರೀಮಂತ ದೇವಾಲಯಗಳಿಂದ ಪಡೆಯುವ ಶೇಕಡಾ 5 ರಷ್ಟು ಕಾಮನ್ ಪೂಲ್ ಫಂಡ್ ಹಣವನ್ನು ಕೇವಲ ಆದಾಯವಿಲ್ಲದ ಸಣ್ಣ ಪುಟ್ಟ ದೇವಾಲಯಗಳ ಜೀರ್ಣೋದ್ದಾರ ಹಾಗೂ ಅರ್ಚಕರ ವೇತನಕ್ಕಾಗಿ ಮಾತ್ರ ಬಳಸಲು ಕಾನೂನಿನಲ್ಲಿ ಸ್ಪಷ್ಟ ನಿಯಮ ರೂಪಿಸಲಾಗಿದೆ.

