x

11ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ: ಮೂಲಸೌಕರ್ಯ ಕೊರತೆ, ಅನಾರೋಗ್ಯದಿಂದ ಮಹಿಳೆಯರ ಪರದಾಟ

ಮಳೆ ಹಾಗೂ ಚಳಿಯ ವಾತಾವರಣದಿಂದಾಗಿ ಪ್ರತಿಭಟನಾಕಾರರಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲೇ ಆರೋಗ್ಯ ಶಿಬಿರವನ್ನು ತೆರೆಯಲಾಗಿದೆ.


Click the Play button to hear this message in audio format

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಹನ್ನೊಂದು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರಾರು ಮಹಿಳೆಯರು ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ. ಆದರೆ, ಪ್ರತಿಭಟನಾ ಸ್ಥಳದಲ್ಲಿ ಶೌಚಾಲಯ, ಸ್ನಾನಗೃಹ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಮಹಿಳಾ ಕಾರ್ಯಕರ್ತೆಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ದ ಫೆಡರಲ್ ಕರ್ನಾಟಕ’ ತಂಡವು 11ನೇ ದಿನದ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಅಳಲನ್ನು ಆಲಿಸಿತು.

ಮೂಲಸೌಕರ್ಯ ಕೊರತೆ ಮತ್ತು ಯೂರಿನರಿ ಇನ್ಫೆಕ್ಷನ್ ಆತಂಕ

ಹನ್ನೊಂದು ದಿನಗಳಿಂದ ಬೀದಿಯಲ್ಲಿ ಕುಳಿತು ಹೋರಾಟ ಮಾಡುತ್ತಿದ್ದರೂ ಸರ್ಕಾರ ನಮ್ಮ ಕಷ್ಟವನ್ನು ಆಲಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದಲ್ಲಿರುವ ಜನಪ್ರತಿನಿಧಿಗಳ ಮನೆಯ ಹೆಣ್ಣುಮಕ್ಕಳು ಬಂದು ಇಲ್ಲಿ ಕುಳಿತುಕೊಂಡಾಗ ಮಾತ್ರ ನಮ್ಮ ನೋವು ಅವರಿಗೆ ಅರ್ಥವಾಗುತ್ತದೆ ಎಂದು ಮಹಿಳೆಯರು ಕಿಡಿಕಾರಿದರು. ಫ್ರೀಡಂ ಪಾರ್ಕ್‌ನಲ್ಲಿ ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಬಹುತೇಕ ಕಾರ್ಯಕರ್ತೆಯರಿಗೆ ಯೂರಿನರಿ ಇನ್ಫೆಕ್ಷನ್ (ಮೂತ್ರನಾಳದ ಸೋಂಕು) ಕಾಣಿಸಿಕೊಂಡಿದೆ. ಸ್ನಾನ ಮಾಡುವುದಿರಲಿ, ಕನಿಷ್ಠ ಬಟ್ಟೆ ಬದಲಾಯಿಸಲು ಸಹ ಸುರಕ್ಷಿತ ಜಾಗವಿಲ್ಲದಂತಾಗಿದೆ. ಬಟ್ಟೆ ಬದಲಾಯಿಸಬೇಕಾದರೆ ನಾಲ್ಕೈದು ಮಹಿಳೆಯರು ಸುತ್ತಲೂ ಸೀರೆ ಹಿಡಿದು ನಿಂತುಕೊಳ್ಳುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಯಕರ್ತೆಯರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಸಚಿವರು ಮತ್ತು ಸಿಎಂ ಹೇಳಿಕೆಗೆ ತೀವ್ರ ಖಂಡನೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಪರವಾಗಿ ನಿಲ್ಲುತ್ತದೆ ಎಂಬ ದೊಡ್ಡ ಭರವಸೆಯಿತ್ತು, ಆದರೆ ಆ ನಂಬಿಕೆ ಹುಸಿಯಾಗಿದೆ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ಹೊರಹಾಕಿದರು. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೂ ಆರೋಗ್ಯ ವ್ಯವಸ್ಥೆ ನಡೆಯುತ್ತದೆ ಎಂಬ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದಾಗ ಈ ಮಾತನ್ನು ಹೇಳಬೇಕಿತ್ತು, ಇಂತಹ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು ಎಂದು ತಿರುಗೇಟು ನೀಡಿದರು. ಇನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಬ್ಲ್ಯಾಕ್‌ಮೇಲ್’ ಹೇಳಿಕೆಗೂ ಪ್ರತಿಕ್ರಿಯಿಸಿದ ಕಾರ್ಯಕರ್ತೆಯರು, ನಾವು ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡುತ್ತಿಲ್ಲ, ಬದಲಾಗಿ ನಾವು ಮಾಡಿದ ದುಡಿಮೆಗೆ ತಕ್ಕ ಗೌರವಧನ ಹೆಚ್ಚಳ ಮಾಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಶಿಬಿರದಲ್ಲಿ ನೂರಾರು ಮಂದಿಗೆ ಚಿಕಿತ್ಸೆ; ಯುವಕರ ಮಾನವೀಯ ಸೇವೆ

ಮಳೆ ಹಾಗೂ ಚಳಿಯ ವಾತಾವರಣದಿಂದಾಗಿ ಪ್ರತಿಭಟನಾಕಾರರಲ್ಲಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲೇ ಆರೋಗ್ಯ ಶಿಬಿರವನ್ನು ತೆರೆಯಲಾಗಿದೆ. ಪ್ರತಿದಿನ 300ರಿಂದ 400 ಆಶಾ ಕಾರ್ಯಕರ್ತೆಯರು ಈ ಶಿಬಿರದಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ. ತಪಾಸಣೆ ನಡೆಸುತ್ತಿರುವ ವೈದ್ಯರ ಪ್ರಕಾರ, ಬಹುತೇಕ ಮಹಿಳೆಯರಲ್ಲಿ ತೀವ್ರ ತಲೆನೋವು, ಬೆನ್ನುನೋವು ಹಾಗೂ ಅನಿಯಮಿತ ಋತುಸ್ರಾವದ ಸಮಸ್ಯೆಗಳು ಕಂಡುಬರುತ್ತಿವೆ. ರಕ್ತದೊತ್ತಡ (ಬಿಪಿ) ಹೆಚ್ಚಾದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸುತ್ತಿದ್ದಾರೆ. ಈ ನಡುವೆ, ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟ ಮತ್ತು ಸಂಕಷ್ಟವನ್ನು ಕಂಡು ಮರುಗಿರುವ ಹಲವು ಯುವಕರು, ಸ್ವಯಂಪ್ರೇರಿತರಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಡುಗೆ ತಯಾರಿಸುವ ಮತ್ತು ಆಹಾರ ಬಡಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ.

Read More
Next Story