Female elephant dies after drinking contaminated water: Baby cries in front of mother
x

ಮೃತ ತಾಯಿ ಆನೆ ಎದುರು ರೋದಸುತ್ತಿರುವ ಮರಿಆನೆ

ಅರ್ಕಾವತಿ ನದಿಯ ಕಲುಷಿತ ನೀರು ಸೇವಿಸಿ ಹೆಣ್ಣಾನೆ ಸಾವು? ತಾಯಿಯ ಶವದ ಮುಂದೆ ಮರಿಯ ರೋದನೆ!

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಆನೆಯ ಹೊಟ್ಟೆಯಲ್ಲಿ ಸುಮಾರು 35 ಲೀಟರ್ ನೀರು ಪತ್ತೆಯಾಗಿದ್ದು, ಅದರಲ್ಲಿ ವಿಷಕಾರಿ ಅಂಶಗಳು ಇರುವುದು ದೃಢಪಟ್ಟಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.


Click the Play button to hear this message in audio format

ಕಾವೇರಿ ವನ್ಯಜೀವಿ ಧಾಮದ ಮಗ್ಗೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಅರ್ಕಾವತಿ ನದಿಯ ಕಲುಷಿತ ನೀರು ಸೇವಿಸಿ ಸುಮಾರು 40 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಸಂಗಮ ಮತ್ತು ಮಡಿವಾಳ ಪ್ರದೇಶದ ಮಧ್ಯೆ ಈ ಹೆಣ್ಣಾನೆ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಆನೆಯ ಹೊಟ್ಟೆಯಲ್ಲಿ ಸುಮಾರು 35 ಲೀಟರ್ ನೀರು ಪತ್ತೆಯಾಗಿದ್ದು, ಅದರಲ್ಲಿ ವಿಷಕಾರಿ ಅಂಶಗಳು ಇರುವುದು ದೃಢಪಟ್ಟಿದೆ. ಅರ್ಕಾವತಿ ನದಿಯ ಕಲುಷಿತ ನೀರನ್ನೇ ಕುಡಿದಿದ್ದರಿಂದ ಆನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮನಕಲುಕುವ ದೃಶ್ಯ

ಮೃತಪಟ್ಟ ಆನೆಗೆ ಮರಿಯೊಂದಿದ್ದು, ತನ್ನ ತಾಯಿಯ ಶವದ ಮುಂದೆ ಮರಿ ಆನೆ ನಿಂತು ರೋದಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತ್ತು. ಅರಣ್ಯದ ಇತರೆ ಆನೆಗಳು ಬಂದು ಮರಿ ಆನೆಯನ್ನು ಸಮಾಧಾನಪಡಿಸಿ, ತಮ್ಮೊಂದಿಗೆ ಕಾಡಿನೊಳಗೆ ಕರೆದುಕೊಂಡು ಹೋಗಿವೆ.

ಅಂತಿಮ ವಿಧಿವಿಧಾನ

ಮಂಗಳವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪಶುವೈದ್ಯರು ಪರಿಶೀಲನೆ ನಡೆಸಿದರು. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ಮುಗಿಸಿದ ನಂತರ, ಅರಣ್ಯ ಇಲಾಖೆಯ ನಿಯಮಾವಳಿಯಂತೆ ಆನೆಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಅರ್ಕಾವತಿ ನದಿಯ ನೀರು ಅತ್ಯಂತ ಕಲುಷಿತ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಅರ್ಕಾವತಿ ನದಿಯ ನೀರು ಪ್ರಸ್ತುತ 'ಇ' ಕೆಟಗರಿಗೆ (ಅತ್ಯಂತ ಕಲುಷಿತ ವಿಭಾಗ) ಇಳಿದಿದೆ. ಸಂಶೋಧನಾ ವರದಿಗಳ ಪ್ರಕಾರ ನದಿಯ ನೀರಿನಲ್ಲಿ ಕ್ಯಾನ್ಸರ್ ಕಾರಕ ಲೋಹಗಳು, ಪಾದರಸ ಮತ್ತು ನಿಷೇಧಿತ ಕೀಟನಾಶಕವಾದ ಡಿಡಿಟಿ ಪತ್ತೆಯಾಗಿವೆ. ಕೈಗಾರಿಕಾ ರಾಸಾಯನಿಕ ತ್ಯಾಜ್ಯಗಳು ಮತ್ತು ನಗರದ ಒಳಚರಂಡಿ ನೀರು ನೇರವಾಗಿ ನದಿಗೆ ಸೇರುತ್ತಿರುವುದರಿಂದ ನೀರಿನಲ್ಲಿ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕುಸಿದಿದೆ.

ನದಿ ಪಾತ್ರದಲ್ಲಿನ ದುರಂತಗಳು

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯ ಅರ್ಕಾವತಿ ನದಿಯ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ನದಿ ದಾಟಲು ಯತ್ನಿಸಿದ ಎರಡು ಕಾಡಾನೆಗಳು ಜಲಸಸ್ಯಗಳ ನಡುವೆ ಸಿಲುಕಿ, ಹೊರಬರಲಾರದೆ ಮುಳುಗಿ ಮೃತಪಟ್ಟಿದ್ದವು. ಇದೀಗ ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಬಳಿ ಬಹುಅಂಗಾಂಗ ವೈಫಲ್ಯ ಹಾಗೂ ಅನಾರೋಗ್ಯದಿಂದ ಹೆಣ್ಣಾನೆಯೊಂದು ಮೃತಪಟ್ಟಿದ್ದು, ವನ್ಯಜೀವಿ ತಜ್ಞರ ಪ್ರಕಾರ, ಕಲುಷಿತ ನೀರು ಹಾಗೂ ಮಳೆಗಾಲದ ಆರಂಭದಲ್ಲಿ ಕರುಳಿನ ಸೋಂಕುಗಳು ಸಾವಿಗೆ ಪ್ರಮುಖ ಕಾರಣವಾಗುತ್ತವೆ ಎಂದು ತಿಳಿಸಿದ್ದಾರೆ.

Read More
Next Story