2 acres of land and Rs 5 crore grant announced for Padma Shri Anke Gowdas high-tech library!
x

ಹಳೆಯ ನಾಣ್ಯಗಳು ಹಾಗೂ ಅಂಚೆಚೀಟಿಗಳನ್ನು ಸಿಎಂ ಡಿ.ಕೆ. ಶಿವಕುಮಾರ್‌ ಕುತೂಹಲದಿಂದ ವೀಕ್ಷಿಸಿದರು.

ಪದ್ಮಶ್ರೀ ಅಂಕೇಗೌಡರ ಹೈಟೆಕ್ ಗ್ರಂಥಾಲಯಕ್ಕೆ 2 ಎಕರೆ ಜಮೀನು, 5 ಕೋಟಿ ರೂ. ಅನುದಾನ ಘೋಷಣೆ!

"ಇದು ಕೇವಲ ಪುಸ್ತಕಗಳ ಸಂಗ್ರಹವಲ್ಲ, ದೇಶದ ಅತಿ ದೊಡ್ಡ ಜ್ಞಾನದ ಭಂಡಾರ. ಇಂತಹ ಅಪರೂಪದ ದಾಖಲೆಗಳು ಮತ್ತು ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯ." ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.


Click the Play button to hear this message in audio format

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿ ‘ಪುಸ್ತಕ ಮನೆ’ ಮೂಲಕ ದೇಶದಲ್ಲೇ ಅತಿ ದೊಡ್ಡ ವೈಯಕ್ತಿಕ ಗ್ರಂಥಾಲಯ ನಿರ್ಮಿಸಿರುವ ಪದ್ಮಶ್ರೀ ಪುರಸ್ಕೃತ ಎಂ. ಅಂಕೇಗೌಡರ ದಶಕಗಳ ಕನಸಿಗೆ ಕೊನೆಗೂ ಸರ್ಕಾರದಿಂದ ದೊಡ್ಡ ಮನ್ನಣೆ ಸಿಕ್ಕಿದೆ.

ಸೋಮವಾರ (ಜೂ.22) ವಿಧಾನಸೌಧದಲ್ಲಿ ಅಂಕೇಗೌಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬೆನ್ನಲ್ಲೇ, ಸಿಎಂ ಭರ್ಜರಿ ಕೊಡುಗೆಯನ್ನು ಘೋಷಿಸಿದ್ದಾರೆ. ಅವರ ಅಪರೂಪದ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ರಕ್ಷಣೆ ಹಾಗೂ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕಾಗಿ ಸರ್ಕಾರದ ವತಿಯಿಂದ 2 ಎಕರೆ ಜಮೀನು ಹಾಗೂ 5 ಕೋಟಿ ರೂ. ಅನುದಾನ ಮಂಜೂರು ಮಾಡಲು ಆದೇಶ ಹೊರಡಿಸಿದ್ದಾರೆ.


ವಿಧಾನಸೌಧದಲ್ಲಿ ಸನ್ಮಾನ

ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಅಂಕೇಗೌಡರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ತಮ್ಮ ಸಂಗ್ರಹದಲ್ಲಿರುವ ಅತ್ಯಂತ ಅಪರೂಪದ ಹಳೆಯ ನಾಣ್ಯಗಳು ಹಾಗೂ ಅಂಚೆ ಚೀಟಿಗಳನ್ನು ಮುಖ್ಯಮಂತ್ರಿಯವರಿಗೆ ತೋರಿಸಿ ಅದರ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು. ಸಿಎಂ ಇವುಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ, ಶ್ಲಾಘಿಸಿದರು. "ಇದು ಕೇವಲ ಪುಸ್ತಕಗಳ ಸಂಗ್ರಹವಲ್ಲ, ದೇಶದ ಅತಿ ದೊಡ್ಡ ಜ್ಞಾನದ ಭಂಡಾರ. ಇಂತಹ ಅಪರೂಪದ ದಾಖಲೆಗಳು ಮತ್ತು ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯ." ಎಂದು ಸಿಎಂ ತಿಳಿಸಿದ್ದಾರೆ.

ಪದ್ಮಶ್ರೀ ಪುರಸ್ಕೃತ ಅಂಕೇಗೌಡರ ಪುಸ್ತಕಗಳನ್ನು ವೀಕ್ಷಿಸಿದ ಸಿಎಂ ಡಿ.ಕೆ. ಶಿವಕುಮಾರ್‌

ತಕ್ಷಣದ ಕ್ರಮಕ್ಕೆ ಸೂಚನೆ

ಅಂಕೇಗೌಡರ ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ದ ಅಡಿಯಲ್ಲಿರುವ ಈ ಬೃಹತ್ ಜ್ಞಾನನಿಧಿಗೆ ಸೂಕ್ತ ಸುಸಜ್ಜಿತ ಹೈಟೆಕ್ ಕಟ್ಟಡ ವ್ಯವಸ್ಥೆ ಮಾಡಲು ಬಿಬಿಎಂಪಿ ಕಮಿಷನರ್ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ತುಷಾರ್ ಗಿರಿನಾಥ್ ಅವರಿಗೆ ಸಿಎಂ ತಕ್ಷಣವೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಯಾರು ಈ ಪುಸ್ತಕ ಪ್ರೇಮಿ ಅಂಕೇಗೌಡ?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿಯ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಅಂಕೇಗೌಡ ಆರಂಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸಂಜೆ ಕಾಲೇಜಿನಲ್ಲಿ ಓದಿ ಬಿ.ಎ ಮತ್ತು ಮೈಸೂರು ವಿಶ್ವವಿದ್ಯಾಲಯದ ಮೂಲಕ ಕನ್ನಡದಲ್ಲಿ ಎಂ.ಎ ಪದವಿ ಪಡೆದರು. ನಂತರ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಟೈಮ್‌ಕೀಪರ್ ಆಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿದರು.

ಸಂಬಳದ ಶೇ. 80 ಪುಸ್ತಕಕ್ಕೆ ಮೀಸಲು

ತಮ್ಮ ದುಡಿಮೆಯ ಶೇ. 80ರಷ್ಟು ಭಾಗವನ್ನು ಪುಸ್ತಕ ಕೊಳ್ಳುವುದಕ್ಕೇ ಬಳಸುತ್ತಿದ್ದರು. ಅಷ್ಟೇ ಅಲ್ಲದೆ, ಪುಸ್ತಕಗಳ ಸಂಗ್ರಹದ ತೀವ್ರ ಹಂಬಲದಿಂದ ಮೈಸೂರಿನಲ್ಲಿದ್ದ ತಮ್ಮ ಸ್ವಂತ ನಿವೇಶನವನ್ನೂ ಮಾರಾಟ ಮಾಡಿದ್ದರು!. ಇವರ ಗ್ರಂಥಾಲಯದಲ್ಲಿ ಕೇವಲ ಸಾಹಿತ್ಯ ಮಾತ್ರವಲ್ಲದೆ, ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ತತ್ವಶಾಸ್ತ್ರ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಹಾಗೂ ವಿದೇಶಿ ಭಾಷೆಗಳ ಪುಸ್ತಕಗಳಿವೆ. ಮಹಾತ್ಮ ಗಾಂಧೀಜಿ ಹಾಗೂ ಭಗವದ್ಗೀತೆಯ ಮೇಲೆಯೇ ಸಾವಿರಾರು ಪುಸ್ತಕಗಳಿವೆ. 1832ರಷ್ಟು ಹಳೆಯದಾದ ಹಸ್ತಪ್ರತಿಗಳು, 5 ಸಾವಿರಕ್ಕೂ ಹೆಚ್ಚು ನಿಘಂಟುಗಳು 35 ಸಾವಿರ ಅಂತಾರಾಷ್ಟ್ರೀಯ ಪತ್ರಿಕೆಗಳು ಹಾಗೂ 2,500 ಕನ್ನಡ ನಿಯತಕಾಲಿಕೆಗಳು ಇಲ್ಲಿವೆ.

ಸಂದ ಪ್ರಶಸ್ತಿಗಳು

ಅಂಕೇಗೌಡರ ಈ ನಿಸ್ವಾರ್ಥ ಸೇವೆಗೆ ದೇಶ-ವಿದೇಶಗಳಲ್ಲಿ ಮನ್ನಣೆ ಸಿಕ್ಕಿದೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಅಪೂರ್ವ ಕೊಡುಗೆಗಾಗಿ ಕೇಂದ್ರ ಸರ್ಕಾರ 2026ನೇ ಸಾಲಿನ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿದೆ. ದೇಶದ ಅತಿ ದೊಡ್ಡ ವೈಯಕ್ತಿಕ ಪುಸ್ತಕ ಸಂಗ್ರಹಕಾರ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. 2011ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಹಾಗೂ 2009ರಲ್ಲಿ ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಲಭಿಸಿದೆ.

Read More
Next Story