
ಬಣ್ಣದ ಲೋಕಕ್ಕೆ ಹಿರಿಯ ನಟ ಅನಂತ್ ನಾಗ್ ಗುಡ್ ಬೈ; ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಐದು ದಶಕಗಳಿಗೂ ಅಧಿಕ ಕಾಲ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡಿಗರು ಹಾಗೂ ಇಡೀ ಭಾರತೀಯರ ಮನ ಗೆದ್ದಿರುವ ಅನಂತ್ ನಾಗ್ ಅವರ ದಿಢೀರ್ ನಿರ್ಧಾರ, ಚಿತ್ರರಂಗದ ದಿಗ್ಗಜರು, ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ.
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಬೆನ್ನಲ್ಲೇ ಹಿರಿಯ ನಟ ಅನಂತ್ ನಾಗ್ ಅವರು ಬಣ್ಣದ ಲೋಕಕ್ಕೆ ಗುಡ್ ಬೈ ಹೇಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಇನ್ನು ಮುಂದೆ ಎಂದಿಗೂ ಬಣ್ಣದ ಪ್ರಪಂಚಕ್ಕೆ ಮರಳುವುದಿಲ್ಲ ಎಂದಿರುವ ಅನಂತನಾಗ್ ಅವರು ಇಂದಿನ ಸಿನಿಮಾ ರಂಗದ ಬದಲಾದ ಆದ್ಯತೆ ಮತ್ತು ಕಥೆಗಳ ಕಳಪೆ ಗುಣಮಟ್ಟದ ಬಗ್ಗೆಯೂ ಅಸಮಾಧಾನ ಹಾಗೂ ಕಳವಳ ಹೊರಹಾಕಿದ್ದಾರೆ. ಐದು ದಶಕಗಳಿಗೂ ಅಧಿಕ ಕಾಲ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡಿಗರು ಹಾಗೂ ಇಡೀ ಭಾರತೀಯರ ಮನ ಗೆದ್ದಿರುವ ಅನಂತ್ ನಾಗ್ ಅವರ ಈ ದಿಢೀರ್ ನಿರ್ಧಾರ, ಚಿತ್ರರಂಗದ ದಿಗ್ಗಜರು, ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ.
ಕಲೆಕ್ಷನ್ ರಾಜಕಾರಣಕ್ಕೆ ಅಸಮಾಧಾನ
ಇಂದಿನ ಚಿತ್ರರಂಗದಲ್ಲಿ ಕಥೆ ಮತ್ತು ವಿಷಯ ಆಧಾರಿತ ಸಿನಿಮಾಗಳಿಗೆ ಬೆಲೆ ಇಲ್ಲದಂತಾಗಿದೆ. ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಹಾಗೂ ಹಣ ಗಳಿಕೆಗೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅನಂತ್ ನಾಗ್ ಬೇಸರ ಹೊರಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಸಿನಿಮಾಗಳ ಕಥೆಗಳ ಗುಣಮಟ್ಟ ಸಂಪೂರ್ಣ ಕುಸಿಯುತ್ತಿದ್ದು, ಇದು ನಿಜವಾದ ಕಲಾವಿದರಿಗೆ ಬೇಸರ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿವೃತ್ತಿಗೆ ಅಸಲಿ ಕಾರಣವೇನು?
ಇದಲ್ಲದೇ ನಿವೃತ್ತಿ ಘೋಷಣೆಗೆ ಹಲವು ಕಾರಣಗಳನ್ನು ಅನಂತನಾಗ್ ನೀಡಿದ್ದಾರೆ. ನಾನು ಒಪ್ಪಿಕೊಂಡ ಕೊನೆಯ ಐದೂ ಸಿನಿಮಾಗಳು ಸೋತವು. ಆ ಕ್ಷಣವೇ ನನಗನಿಸಿತು. ಇಷ್ಟಕ್ಕೇ ಸಾಕು, ಇದನ್ನೆಲ್ಲಾ ಬಿಟ್ಟುಬಿಡಬೇಕು. ನಾನು ಇನ್ಮುಂದೆ ನಟಿಸಬಾರದು ಎಂದು ನಿರ್ಧರಿಸಿದೆ ಎಂದು ನಿವೃತ್ತಿ ಘೋಷಣೆ ಹಿಂದಿನ ನೈಜ ಕಾರಣ ಹಂಚಿಕೊಂಡಿದ್ದಾರೆ. ತಾವು ನಟನೆಯಿಂದ ದೂರ ಉಳಿಯಲು ಯಾವುದೇ ಆರೋಗ್ಯದ ಸಮಸ್ಯೆಗಳು ಕಾರಣವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ, ಪೀಳಿಗೆಯ ಯಾವುದೇ ಸಮಕಾಲೀನ ನಿರ್ದೇಶಕರ ಜತೆ ಕೆಲಸ ಮಾಡಲು ತಮಗೆ ಆಸಕ್ತಿ ಇಲ್ಲ. ಉತ್ತಮ ಕಥಾವಸ್ತು ಹಾಗೂ ಪ್ರೇಕ್ಷಕರ ಬುದ್ಧಿಮತ್ತೆ ಕಡೆಗಣಿಸಿ ಕೇವಲ ಹಣದ ಹಿಂದೆ ಬಿದ್ದಿರುವ ಇಂದಿನ ಸಿನಿಮಾ ಸಂಸ್ಕೃತಿಯ ಬಗ್ಗೆ ಮರುಗಿದ್ದಾರೆ.
ಅಭಿಮಾನಿಗಳಲ್ಲಿ ನಿರಾಶೆ
ಐದು ದಶಕಗಳ ಕಾಲ ಸಕ್ರಿಯವಾಗಿ ನೂರಾರು ವಿಭಿನ್ನ ಪಾತ್ರಗಳ ಮೂಲಕ ರಂಜಿಸಿದ್ದ ಅನಂತ್ ನಾಗ್, ಈಗ ಕಠಿಣ ನಿರ್ಧಾರ ಕೈಗೊಂಡಿರುವುದು ಚಿತ್ರಪ್ರೇಮಿಗಳಿಗೆ ಬರಸಿಡಿಲು ಬಡಿದಂತಾಗಿದೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಸಂಭ್ರಮದಲ್ಲಿರುವ ಅವರು ತಮ್ಮ ನಿಲುವನ್ನು ಬದಲಿಸಿ, ನಟನೆಗೆ ಮರಳಬೇಕು ಎಂಬುದು ಅಭಿಮಾನಿಗಳು ಹಾಗೂ ಕಲಾಪ್ರೇಮಿಗಳ ಒಕ್ಕೊರಲ ಕೋರಿಕೆಯಾಗಿದೆ. ಅನಂತನಾಗ್ ಅವರು ತಮ್ಮ ಐದು ದಶಕಗಳ ಸುದೀರ್ಘ ಸಿನಿಮಾ ಪಯಣದಲ್ಲಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

