ಹಿರಿಯ ನಟ ಅನಂತನಾಗ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಗರಿ
x

ಹಿರಿಯ ನಟ ಅನಂತನಾಗ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಗರಿ

ಐದು ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಐದು ಫಿಲ್ಮ್‌ಫೇರ್‌ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಅನಂತನಾಗ್‌ ಅವರಿಗೆ ಸಂದಿವೆ. ಈ ಹಿಂದೆ ಡಾ. ರಾಜಕುಮಾರ್‌, ಸಿನಿಮಾ ಛಾಯಾಗ್ರಾಹ ವಿ.ಕೆ. ಮೂರ್ತಿ ಅವರು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.


ಕನ್ನಡದ ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರು 2024ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅನಂತನಾಗ್ ನೀಡಿರುವ ಕೊಡುಗೆ ಹಾಗೂ ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿರುವ ಅವರ ಸಾಧನೆ ಪರಿಗಣಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪಿಐಬಿ ತನ್ನ ʼಎಕ್ಸ್ʼ ಖಾತೆಯಲ್ಲಿ ಪ್ರಕಟಿಸಿದೆ.

ಗುಜರಾತಿನ ಕೆವಾಡಿಯಾದಲ್ಲಿ ಸೆ.22 ರಂದು ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. 78 ವರ್ಷ ವಯಸ್ಸಿನ ಅನಂತನಾಗ್ ಅವರು 1973ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅಂದಿನಿಂದ ಇಲ್ಲಿಯವರೆಗೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ನಟರಾಗಿ ನಟಿಸಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಅನಂತನಾಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

"ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ಅನಂತ್ ನಾಗ್ ಅವರಿಗೆ ಅಭಿನಂದನೆಗಳು. ದಶಕಗಳಿಂದ ಅವರ ಸಹಜ ಅಭಿನಯ, ಅದ್ಭುತ ಬಹುಮುಖಿ ಪ್ರತಿಭೆ ಮತ್ತು ಚಾತುರ್ಯವು ಭಾರತೀಯ ಚಿತ್ರರಂಗದ ಮೇಲೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರವೂ ಅಭಿಮಾನಿಗಳಲ್ಲಿ ಚಿರಕಾಲ ಉಳಿಯುವಂತಿದೆ. ನಿಜಕ್ಕೂ ಶ್ರೇಷ್ಠ ಕಲಾವಿದರೊಬ್ಬರಿಗೆ ಸಂದ ಅತ್ಯಂತ ಸೂಕ್ತ ಗೌರವವಿದು," ಎಂದು ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದಿದ್ದಾರೆ.

ಸಿನಿಮಾದಿಂದ ರಾಜಕೀಯದವರೆಗೆ

ಅನಂತನಾಗ್ ಅವರು 'ಬಯಲು ದಾರಿ', 'ನಾ ನಿನ್ನ ಬಿಡಲಾರೆ', 'ಮಿಂಚಿನ ಓಟ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಗೌರಿ ಗಣೇಶ', 'ಬರ' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್.ಕೆ. ನಾರಾಯಣ್ ಅವರ ಕಥೆ ಆಧರಿಸಿದ 'ಮಾಲ್ಗುಡಿ ಡೇಸ್' ದೂರದರ್ಶನ ಸರಣಿಯಲ್ಲಿ ತಮ್ಮ ಸಹೋದರ ಶಂಕರ್ ನಾಗ್ ಅವರೊಂದಿಗೆ ನಟಿಸಿದ್ದರು.

2025ರಲ್ಲಿ ಅನಂತನಾಗ್ ಅವರಿಗೆ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿವಂಗತ ಸಹೋದರನ ಕುರಿತಾದ ಜೀವನಚರಿತ್ರೆ ಕೃತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿವೆ.

ಐದು ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಐದು ಫಿಲ್ಮ್‌ಫೇರ್‌ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳು ಅನಂತನಾಗ್‌ ಅವರ ಪ್ರತಿಭೆಯನ್ನು ಗುರುತಿಸಿವೆ. 2023ರಲ್ಲಿ ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿ, ತಮ್ಮ ವೃತ್ತಿಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಂಡಿದ್ದರು.

ರಾಜಕಾರಣಿಯಾಗಿ, ಅನಂತನಾಗ್ ಅವರು 1988ರಿಂದ 1994ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1994ರಿಂದ 1999ರ ಅವಧಿಯಲ್ಲಿ ವಿಧಾನ ಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಆ ಸಮಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕದ ಮೂವರಿಗೆ ಈ ಗೌರವ

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎನಿಸಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಈವರೆಗೆ ಕನ್ನಡ ಚಿತ್ರರಂಗದ ಮೂವರು ಭಾಜನರಾಗಿದ್ದಾರೆ. 1995 ರಲ್ಲಿ ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆಯ ಗೌರವ ಸಂದಿತ್ತು. ಈ ಗೌರವ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.

ಅದಾದ ಬಳಿಕ 2008 ರಲ್ಲಿ ಮೈಸೂರು ಮೂಲದ ಖ್ಯಾತ ಸಿನಿಮಾ ಛಾಯಾಗ್ರಾಹಕ ವಿ. ಕೆ. ಮೂರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತಂತ್ರಜ್ಞರ ವಿಭಾಗದಲ್ಲಿ ವಿ.ಕೆ. ಮೂರ್ತಿ ಅವರು ಈ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿದ್ದರು. ಭಾರತದ ಮೊದಲ ಸಿನಿಮಾಸ್ಕೋಪ್ ಚಿತ್ರವಾದ 'ಕಾಗಜ್ ಕೆ ಪೂಲ್' (1959) ಚಿತ್ರಕ್ಕೆ ಮೂರ್ತಿ ಅವರೇ ಕ್ಯಾಮೆರಾಮನ್ ಆಗಿದ್ದರು. 'ಪ್ಯಾಸಾ', 'ಸಾಹಿಬ್ ಬೀವಿ ಔರ್ ಗುಲಾಮ್' ಮುಂತಾದ ಚಿತ್ರಗಳ ಕಪ್ಪು-ಬಿಳುಪಿನ ಅದ್ಭುತ ದೃಶ್ಯಾವಳಿಗಳು ಇವರ ಕೈಚಳಕದಲ್ಲೇ ಮೂಡಿಬಂದಿದ್ದವು.

ಈಗ ಹಿರಿಯ ನಟ ಅನಂತನಾಗ್ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಗೌರವ ಸಂದಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಎರಡನೇ ನಟ ಎಂಬ ಖ್ಯಾತಿಯೂ ಅನಂತನಾಗ್‌ ಅವರಿಗೆ ಸಲ್ಲಲಿದೆ.

Read More
Next Story