ಡ್ರೋನ್ ತಂತ್ರಜ್ಞಾನ, ಡೇಟಾ ಆಧಾರಿತ ಕೃಷಿಗೆ ಸರ್ಕಾರಿ ಪ್ರೋತ್ಸಾಹ - ಸಚಿವ ಚಲುವರಾಯಸ್ವಾಮಿ
x

ಡ್ರೋನ್ ತಂತ್ರಜ್ಞಾನ, ಡೇಟಾ ಆಧಾರಿತ ಕೃಷಿಗೆ ಸರ್ಕಾರಿ ಪ್ರೋತ್ಸಾಹ - ಸಚಿವ ಚಲುವರಾಯಸ್ವಾಮಿ

ಕೃಷಿ ಕ್ಷೇತ್ರವು ನೈಸರ್ಗಿಕ ವಿಕೋಪಗಳು, ಏರಿಕೆಯಾಗುತ್ತಿರುವ ಉತ್ಪಾದನಾ ವೆಚ್ಚ, ಮಾರುಕಟ್ಟೆಯಲ್ಲಿನ ಬೆಲೆಗಳ ಅಸ್ಥಿರತೆ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಮಿಕರ ಕೊರತೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ.


Click the Play button to hear this message in audio format

ಆಧುನಿಕ ಕೃಷಿ ಕ್ಷೇತ್ರ ಎದುರಿಸುತ್ತಿರುವ ಜಟಿಲ ಸವಾಲುಗಳಿಗೆ ತಂತ್ರಜ್ಞಾನವೇ ಅಂತಿಮ ಉತ್ತರ ಎಂದು ಪ್ರತಿಪಾದಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರಾಜ್ಯ ಸರ್ಕಾರವು ಕೃಷಿಯನ್ನು ಕೇವಲ ಸಾಂಪ್ರದಾಯಿಕ ಬದುಕಿನ ದಾರಿಯಾಗಿ ನೋಡದೆ, ಅದನ್ನು ಒಂದು ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ಅಗ್ರಿ ಸ್ಟಾರ್ಟ್ ಅಪ್ ಕ್ಲಾನ್ ಕೇವ್ 2.0 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೃಷಿ ವಲಯದಲ್ಲಿ ಆಗಬೇಕಾದ ಆಮೂಲಾಗ್ರ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಇಂದಿನ ಕೃಷಿ ಕ್ಷೇತ್ರವು ಹವಾಮಾನ ವೈಪರೀತ್ಯದಂತಹ ನೈಸರ್ಗಿಕ ವಿಕೋಪಗಳು, ದಿನೇ ದಿನೇ ಏರಿಕೆಯಾಗುತ್ತಿರುವ ಉತ್ಪಾದನಾ ವೆಚ್ಚ, ಮಾರುಕಟ್ಟೆಯಲ್ಲಿನ ಬೆಲೆಗಳ ಅಸ್ಥಿರತೆ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಮಿಕರ ಕೊರತೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸವಾಲುಗಳ ನಡುವೆ ರೈತನು ಕೃಷಿಯನ್ನು ಮುಂದುವರಿಸುವುದು ಸವಾಲಾಗಿ ಪರಿಣಮಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸ್ಟಾರ್ಟ್ ಅಪ್‌ಗಳು ಮತ್ತು ನವೀನ ತಂತ್ರಜ್ಞಾನಗಳು ರೈತನ ಕೈಹಿಡಿಯಬಲ್ಲವು ಎಂದು ಹೇಳಿದರು.

ಡಿಜಿಟಲ್ ಕೃಷಿಯತ್ತ ಸರ್ಕಾರಿ ಪ್ರೋತ್ಸಾಹ

ಕೃಷಿ ಇಲಾಖೆಯು ರೈತರ ಆದಾಯ ಹೆಚ್ಚಿಸಲು ವಿವಿಧ ತಂತ್ರಜ್ಞಾನಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿದೆ. ಡಿಜಿಟಲ್ ಕೃಷಿ, ಡ್ರೋನ್ ತಂತ್ರಜ್ಞಾನ, ಡೇಟಾ ಆಧಾರಿತ ಬೆಳೆ ನಿರ್ವಹಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆಗಳನ್ನು ಒದಗಿಸುವ ಸ್ಟಾರ್ಟ್ ಅಪ್‌ಗಳಿಗೆ ಸರ್ಕಾರವು ಹೆಚ್ಚಿನ ಆದ್ಯತೆ ಮತ್ತು ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ಇಂದು ಜಾಗತಿಕವಾಗಿ ಸ್ಟಾರ್ಟ್ ಅಪ್‌ಗಳ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿದೆ. ಈ ಅವಕಾಶವನ್ನು ಕೃಷಿ ವಲಯದಲ್ಲೂ ಬಳಸಿಕೊಳ್ಳುವ ಅಗತ್ಯವಿದೆ. ಇಂದಿನ ಯುವಕರು ಉದ್ಯೋಗವನ್ನೇ ಹುಡುಕುತ್ತಾ ಕೂರದೆ, ಸ್ಟಾರ್ಟ್ ಅಪ್‌ಗಳ ಮೂಲಕ ಉದ್ಯೋಗ ಸೃಷ್ಟಿಸುವವರಾಗಬೇಕು. ಕೃಷಿ ಆಧಾರಿತ ಉದ್ಯಮಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ದೊಡ್ಡ ಅವಕಾಶಗಳಾಗಿವೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ರೈತ ಉತ್ಪಾದಕರ ಸಂಘಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ಪಾತ್ರ ನಿರ್ಣಾಯಕ. ಇವೆಲ್ಲವೂ ಯುವ ಉದ್ಯಮಿಗಳೊಂದಿಗೆ ಒಗ್ಗೂಡಿದಾಗ ಮಾತ್ರ ಗ್ರಾಮೀಣ ಆರ್ಥಿಕತೆಯಲ್ಲಿ ನಿಜವಾದ ಬದಲಾವಣೆ ತರಲು ಸಾಧ್ಯ. ಕೃಷಿ ಇಲಾಖೆಯು ರೈತರಿಗೆ ತಂತ್ರಜ್ಞಾನವನ್ನು ಕೇವಲ ಪ್ರಚಾರಕ್ಕಾಗಿ ತಲುಪಿಸದೆ, ಅದನ್ನು ಪ್ರಾಯೋಗಿಕವಾಗಿ ರೈತನ ಬದುಕಿಗೆ ಅಳವಡಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಸ್ಟಾರ್ಟ್ ಅಪ್‌ಗಳ ಪ್ರದರ್ಶನ

ಕಾರ್ಯಕ್ರಮದ ಅಂಗವಾಗಿ ಜಿಕೆವಿಕೆ ಆವರಣದಲ್ಲಿ ವಿವಿಧ ಅಗ್ರಿ ಸ್ಟಾರ್ಟ್ ಅಪ್‌ಗಳು ತಮ್ಮ ನವೀನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮಳಿಗೆಗಳನ್ನು ಹಾಕಿದ್ದವು. ಸಚಿವರು ಈ ಮಳಿಗೆಗಳಿಗೆ ಭೇಟಿ ನೀಡಿ, ಯುವ ಉದ್ಯಮಿಗಳು ಕೃಷಿ ಸಮಸ್ಯೆಗಳಿಗೆ ಕಂಡುಹಿಡಿದಿರುವ ತಾಂತ್ರಿಕ ಪರಿಹಾರಗಳ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆದರು. ಮಣ್ಣಿನ ಆರೋಗ್ಯ ತಪಾಸಣೆಯಿಂದ ಹಿಡಿದು, ಬೆಳೆ ರೋಗ ಪತ್ತೆ ಮತ್ತು ಸುಧಾರಿತ ಮಾರುಕಟ್ಟೆ ಜಾಲಗಳವರೆಗೆ ಸ್ಟಾರ್ಟ್ ಅಪ್‌ಗಳು ಮಾಡುತ್ತಿರುವ ಕೆಲಸವನ್ನು ಅವರು ಶ್ಲಾಘಿಸಿದರು.

'ಅಗ್ರಿ ಸ್ಟಾರ್ಟ್ ಅಪ್ ಕ್ಲಾನ್ ಕೇವ್ 2.0' ಕಾರ್ಯಕ್ರಮವು ಕೇವಲ ಒಂದು ಸಮಾವೇಶವಾಗಿ ಉಳಿಯದೆ, ಇದು ಹೊಸ ಆಲೋಚನೆಗಳಿಗೆ ವೇದಿಕೆಯಾಗಬೇಕು. ಈ ಮೂಲಕ ರಾಜ್ಯದ ರೈತರ ಬದುಕಿನಲ್ಲಿ ನಿಜವಾದ ಪರಿವರ್ತನೆ ಉಂಟಾಗಿ, ಕೃಷಿಯು ಮತ್ತೆ ಗೌರವಯುತ ಮತ್ತು ಲಾಭದಾಯಕ ವೃತ್ತಿಯಾಗಿ ರೂಪುಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಭಾಗಗಳ ರೈತ ಪ್ರತಿನಿಧಿಗಳು ಪಾಲ್ಗೊಂಡು ಕೃಷಿ ತಂತ್ರಜ್ಞಾನದ ಭವಿಷ್ಯದ ಕುರಿತು ಚರ್ಚಿಸಿದರು.

Read More
Next Story