
ವಾಯುಸೇನೆ: ಬೆಂಗಳೂರಿನಲ್ಲಿ 118 ಇಂಜಿನಿಯರಿಂಗ್ ಅಧಿಕಾರಿಗಳ ಪದವಿ ಪ್ರದಾನ
ದೇಶದ 113 ಅಧಿಕಾರಿಗಳ ಜತೆಗೆ ಸ್ನೇಹಪರ ವಿದೇಶಿ ರಾಷ್ಟ್ರಗಳ ಐವರು ಅಧಿಕಾರಿಗಳು ಸೇರಿ 118 ಮಂದಿ ಪದವಿ ಪಡೆದರು. ಈ ಅಧಿಕಾರಿಗಳು ವಾಯುಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲಿದ್ದಾರೆ.
ಭಾರತೀಯ ವಾಯುಸೇನೆಯ ತಾಂತ್ರಿಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಏರ್ ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ 107ನೇ ಏರೋನಾಟಿಕಲ್ ಇಂಜಿನಿಯರಿಂಗ್ ಕೋರ್ಸ್‌ನ ಪದವಿ ಪ್ರದಾನ ಸಮಾರಂಭವು ಅತ್ಯಂತ ವೈಭವದಿಂದ ನಡೆಯಿತು. 62 ವಾರಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 118 ಇಂಜಿನಿಯರಿಂಗ್ ಅಧಿಕಾರಿಗಳು ದೇಶಸೇವೆಗೆ ಸಜ್ಜಾಗಿದ್ದಾರೆ.
ಭಾರತದ 113 ಅಧಿಕಾರಿಗಳ ಜತೆಗೆ ಸ್ನೇಹಪರ ವಿದೇಶಿ ರಾಷ್ಟ್ರಗಳ ಐವರು ಅಧಿಕಾರಿಗಳು ಸೇರಿದಂತೆ ಒಟ್ಟು 118 ಮಂದಿ ಪದವಿ ಪಡೆದರು. ಈ ಅಧಿಕಾರಿಗಳು ತಾಂತ್ರಿಕ ವಿಭಾಗದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿದ್ದು, ವಾಯುಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ವೃದ್ಧಿಸಲಿದ್ದಾರೆ.
ವೈಭವದ ಸಮಾರಂಭ: ಆಕರ್ಷಣೀಯ ಪ್ರದರ್ಶನಗಳು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮೇಂಟೆನೆನ್ಸ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಏರ್ ಮಾರ್ಷಲ್ ಯಲ್ಲಾ ಉಮೇಶ್ ಅವರನ್ನು ಎ.ಎಫ್.ಟಿ.ಸಿ. ಕಮಾಂಡೆಂಟ್ ಏರ್ ಕಮೋಡೋರ್ ವಿ.ಎನ್. ರಾವ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಆಕರ್ಷಣೆಯಾಗಿ 'ಏರ್ ವಾರಿಯರ್ ಡ್ರಿಲ್ ಟೀಮ್' ನೀಡಿದ ಪ್ರದರ್ಶನವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಡೋರ್ನಿಯರ್ ವಿಮಾನಗಳು ಮತ್ತು ಎಂಐ-17 ಹೆಲಿಕಾಪ್ಟರ್‌ಗಳ ಫ್ಲೈಪಾಸ್ಟ್ ಸಮಾರಂಭಕ್ಕೆ ಮತ್ತಷ್ಟು ಮೆರುಗು ನೀಡಿತು. ಸಮಾರಂಭದ ಕೊನೆಯಲ್ಲಿ ಭಾರತೀಯ ಸೇನೆಯ ವಿಶ್ವವಿಖ್ಯಾತ ಮೋಟಾರ್ ಸೈಕಲ್ ಪ್ರದರ್ಶನ ತಂಡ 'ಟೊರ್ನಾಡೋಸ್' ನಡೆಸಿಕೊಟ್ಟ ರೋಚಕ ಸ್ಟಂಟ್‌ಗಳು ಉಪಸ್ಥಿತರಿದ್ದ ಗಣ್ಯರು, ಪೋಷಕರು ಮತ್ತು ಮಾಜಿ ಯೋಧರಲ್ಲಿ ರೋಮಾಂಚನ ಮೂಡಿಸಿದವು.
ಸಾಧಕ ಅಧಿಕಾರಿಗಳಿಗೆ ಗೌರವ
ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ಏರ್ ಮಾರ್ಷಲ್ ಯಲ್ಲಾ ಉಮೇಶ್ ಅವರು ಪದಕಗಳು ಮತ್ತು ಟ್ರೋಫಿಗಳನ್ನು ಪ್ರದಾನ ಮಾಡಿದರು. ಮೆರಿಟ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದ ಫ್ಲೈಯಿಂಗ್ ಆಫೀಸರ್ ರಾಘವೇಂದ್ರ ಪ್ರತಾಪ್ ಸಿಂಗ್ ಅವರಿಗೆ ಪ್ರತಿಷ್ಠಿತ ಸ್ವಾಡ್ ಆಫ್ ಆನರ್ ಪ್ರಶಸ್ತಿ ನೀಡಲಾಯಿತು. ವೃತ್ತಿಪರ ವಿಷಯಗಳು ಮತ್ತು ಸಾಮಾನ್ಯ ಸೇನಾ ತರಬೇತಿಯಲ್ಲಿ ಅತ್ಯುತ್ತಮ ಸಾಧನೆಗಾಗಿ ಫ್ಲೈಯಿಂಗ್ ಆಫೀಸರ್ ವೈಭವ್ ಮಿಶ್ರಾ ಅವರಿಗೆ ಪ್ರೆಸಿಡೆಂಟ್ಸ್ ಪ್ಲೇಕ್ ಪ್ರದಾನ ಮಾಡಲಾಯಿತು. ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಫ್ಲೈಯಿಂಗ್ ಆಫೀಸರ್ ರೋಹನ್ ವೀರ್ ಸಿಂಗ್ ರಾವತ್ ಮತ್ತು ಫ್ಲೈಯಿಂಗ್ ಆಫೀಸರ್ ಕೇಶಿಕಾ ಕೆ. ಅವರಿಗೆ ಈ ಪದಕಗಳನ್ನು ನೀಡಲಾಯಿತು.
ಸೈನಿಕರಿಗೆ ಸಾರಿದ ಸಂದೇಶ
ಪದವಿ ಪಡೆದ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಏರ್ ಮಾರ್ಷಲ್ ಯಲ್ಲಾ ಉಮೇಶ್, ತರಬೇತಿಯು ಮುಗಿದಿದ್ದು, ಇಂದಿನಿಂದ ವೃತ್ತಿಪರ ಬದುಕಿನ ನಿಜವಾದ ಸವಾಲು ಆರಂಭವಾಗಲಿದೆ ಎಂದು ನೆನಪಿಸಿದರು. "ವೃತ್ತಿಪರತೆ, ಸಮಗ್ರತೆ ಮತ್ತು ಸೇವಾ ಮನೋಭಾವನೆ" - ಈ ಮೂರು ತತ್ವಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ. ಭಾರತೀಯ ವಾಯುಸೇನೆಯ ಉನ್ನತ ಸಂಪ್ರದಾಯಗಳನ್ನು ಎತ್ತಿಹಿಡಿಯುವಲ್ಲಿ ನಿಮ್ಮ ಪಾತ್ರ ಬಹಳ ಮುಖ್ಯ ಎಂದು ಸಲಹೆ ನೀಡಿದರು. ಅಲ್ಲದೆ, ವಾಯುಸೇನೆಯ ಕಾರ್ಯಾಚರಣೆಯ ಸಿದ್ಧತೆಯನ್ನು ಸುಧಾರಿಸುವಲ್ಲಿ ಇಂಜಿನಿಯರಿಂಗ್ ಅಧಿಕಾರಿಗಳ ಜವಾಬ್ದಾರಿ ಹಿರಿದು ಎಂದು ಹೇಳಿದರು. ಸದಾ ಶ್ರೇಷ್ಠತೆಯತ್ತ ಗಮನ ಹರಿಸುವ ಮೂಲಕ ದೇಶದ ಸುರಕ್ಷತೆಯಲ್ಲಿ ಮಹತ್ತರ ಕೊಡುಗೆ ನೀಡುವಂತೆ ಯುವ ಅಧಿಕಾರಿಗಳಿಗೆ ಕರೆ ನೀಡಿದರು.

