
ಸುಪ್ರೀಂ ಕೋರ್ಟ್ ಹಾಗೂ ಕೊಲೆ ಆರೋಪಿ, ನಟ ದರ್ಶನ್
ಇಂದು ನಟ ದರ್ಶನ್ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ; ಸಾಕ್ಷ್ಯ ವಿಚಾರಣೆ ವಿಳಂಬದ ಹಿನ್ನೆಲೆ ಜಾಮೀನು?
ಈ ಪ್ರಕರಣದಲ್ಲಿ ಒಟ್ಟು 270 ಸಾಕ್ಷಿಗಳಿದ್ದು, ಈವರೆಗೆ ಕನಿಷ್ಠ 10 ಸಾಕ್ಷಿಗಳ ವಿಚಾರಣೆ ಕೂಡ ಪೂರ್ಣಗೊಂಡಿಲ್ಲ. ವಿಚಾರಣೆ ಇಷ್ಟು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಜಾಮೀನು ನೀಡಬೇಕು ಎಂದು ದರ್ಶನ್ ಕೋರಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ಪಾಲಿಗೆ ಇಂದು ಅತ್ಯಂತ ನಿರ್ಣಾಯಕ ದಿನ. ಸಾಕ್ಷ್ಯಗಳ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಜೈಲಿನಲ್ಲಿ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಮುಂದಿಟ್ಟುಕೊಂಡು ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದ್ದು, ಸ್ಯಾಂಡಲ್‌ವುಡ್ ನಟನಿಗೆ 'ಸುಪ್ರೀಂ' ಸಿಹಿ ಸುದ್ದಿ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ.
ಕಳೆದ 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನನ್ನು ರದ್ದುಗೊಳಿಸಿತ್ತು. ಅಂದಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ, ಇದೀಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ ದರ್ಶನ್ ಮುಖ್ಯವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
ಈ ಪ್ರಕರಣದಲ್ಲಿ ಒಟ್ಟು 270 ಸಾಕ್ಷಿಗಳಿದ್ದು, ಈವರೆಗೆ ಕನಿಷ್ಠ 10 ಸಾಕ್ಷಿಗಳ ವಿಚಾರಣೆ ಕೂಡ ಪೂರ್ಣಗೊಂಡಿಲ್ಲ. ವಿಚಾರಣೆ ಇಷ್ಟು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ತಮಗೆ ಜಾಮೀನು ನೀಡಬೇಕು ಎಂದು ದರ್ಶನ್ ವಿನಂತಿಸಿದ್ದಾರೆ.
ಜೈಲಿನಲ್ಲಿ ಸಹಕೈದಿಗಳಿಂದ ಬೆದರಿಕೆ ಮತ್ತು ನಿಂದನೆ ಎದುರಾಗುತ್ತಿದೆ. ಅಷ್ಟೇ ಅಲ್ಲದೆ, ನಿಯಮ ಬಾಹಿರವಾಗಿ ತಮ್ಮನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಎಸ್‌ಪಿಪಿ ವಾದವೇನು?
ದರ್ಶನ್ ಅವರ ಈ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವರದಿಯನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಮೂಲಗಳ ಪ್ರಕಾರ, "ದರ್ಶನ್ ಅವರು ಪದೇ ಪದೇ ಸಲ್ಲಿಸುತ್ತಿರುವ ಇತರೆ ಅರ್ಜಿಗಳ ಕಾರಣಕ್ಕಾಗಿಯೇ ಮುಖ್ಯ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ" ಎಂದು ಎಸ್‌ಪಿಪಿ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

