
ನಟ ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆಗೆ ಕೋರ್ಟ್ ಸೂಚನೆಯಂತೆ ಪರಪ್ಪನ ಅಗ್ರಹಾರ ಜೈಲಿನಲ್ಲೇ ಫಿಸಿಯೋಥೆರಪಿ ಆರಂಭಿಸಲಾಗಿದೆ. ಪ್ರತಿ 2-3 ದಿನಕ್ಕೊಮ್ಮೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಜೈಲಿನಲ್ಲೇ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಆರಂಭ
ಈ ಹಿಂದೆಯೂ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರು ದರ್ಶನ್ ಅವರಿಗೆ ಹಂತ ಹಂತವಾಗಿ ಫಿಸಿಯೋಥೆರಪಿ ಚಿಕಿತ್ಸೆ ನೀಡಿದ್ದರು. ಆಗ ಚಿಕಿತ್ಸೆಯಿಂದ ಅವರ ಬೆನ್ನು ನೋವು ಗಣನೀಯವಾಗಿ ಕಡಿಮೆಯಾಗಿತ್ತು ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಲಾಗಿದೆ. ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ ಅವರಿಗೆ ನ್ಯಾಯಾಲಯದ ನಿರ್ದೇಶನದಂತೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ವೈದ್ಯರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಸಂಜಯ್ ಗಾಂಧಿ ಆಸ್ಪತ್ರೆಯ ಫಿಸಿಯೋಥೆರಪಿ ತಜ್ಞ ವೈದ್ಯರ ತಂಡವು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಚಿಕಿತ್ಸೆ ಆರಂಭಿಸಿದೆ.
ಬ್ಯಾರಕ್‌ನಲ್ಲೇ ಒಂದೂವರೆ ಗಂಟೆ ಚಿಕಿತ್ಸೆ
ದರ್ಶನ್ ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ 2ರಿಂದ 3 ದಿನಗಳಿಗೊಮ್ಮೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನ ಜೈಲಿನ ಬ್ಯಾರಕ್‌ನಲ್ಲಿಯೇ ವೈದ್ಯರು ಸುಮಾರು ಒಂದೂವರೆ ಗಂಟೆಗಳ ಕಾಲ ಫಿಸಿಯೋಥೆರಪಿ ಚಿಕಿತ್ಸೆ ನೀಡಿದ್ದಾರೆ. ಈ ಹಿಂದೆಯೂ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರು ದರ್ಶನ್ ಅವರಿಗೆ ಹಂತ ಹಂತವಾಗಿ ಫಿಸಿಯೋಥೆರಪಿ ಚಿಕಿತ್ಸೆ ನೀಡಿದ್ದರು. ಆಗ ಚಿಕಿತ್ಸೆಯಿಂದ ಅವರ ಬೆನ್ನು ನೋವು ಗಣನೀಯವಾಗಿ ಕಡಿಮೆಯಾಗಿತ್ತು ಎನ್ನಲಾಗಿದೆ.
ವೈದ್ಯರ ಉಸ್ತುವಾರಿಯಲ್ಲಿ ಚಿಕಿತ್ಸೆ ಮುಂದುವರಿಕೆ
ನ್ಯಾಯಾಲಯದ ಆದೇಶದ ಅನ್ವಯ ಇದೀಗ ಜೈಲಿನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ವೈದ್ಯಕೀಯ ತಂಡಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಜೈಲಾಧಿಕಾರಿಗಳು ಒದಗಿಸಿದ್ದಾರೆ. ವೈದ್ಯರ ಉಸ್ತುವಾರಿಯಲ್ಲಿ ದರ್ಶನ್ ಅವರ ಆರೋಗ್ಯದಲ್ಲಿ ಎಷ್ಟು ಚೇತರಿಕೆ ಕಂಡುಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

