Actor Darshans bail application: Supreme Court issues notice to state government, hearing postponed!
x

ಸುಪ್ರೀಂ ಕೋರ್ಟ್‌ ಹಾಗೂ ಕೊಲೆ ಆರೋಪಿ, ನಟ ದರ್ಶನ್‌

ದರ್ಶನ್‌ಗೆ ಜಾಮೀನು ನಿರಾಕರಣೆ; ಆದೇಶ ಪರಿಷ್ಕರಣೆ ಕೋರಿ ಮೇಲ್ಮನವಿ

ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ತಮಗೆ ಭಾರಿ ಅನ್ಯಾಯವಾಗಿದ್ದು, ಆದೇಶ ಮರುಪರಿಶೀಲಿಸಬೇಕು ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ವಿನಂತಿಸಿಕೊಂಡಿದ್ದಾರೆ.


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಅರ್ಜಿ ಸಲ್ಲಿಕೆಗೆ ನಿರ್ಬಂಧ ಹೇರಿರುವ ಸುಪ್ರೀಂಕೋರ್ಟ್ ಆದೇಶವನ್ನು ಪರಿಷ್ಕರಿಸುವಂತೆ ಕೋರಿ ನಟ ದರ್ಶನ್, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್, ದರ್ಶನ್ ಅವರ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಮುಗಿಸುವಂತೆ ಕರ್ನಾಟಕ ಸರ್ಕಾರ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತ್ತು.

ದಿನನಿತ್ಯದ ಆಧಾರದ ಮೇಲೆ ಸಾಕ್ಷಿಗಳ ವಿಚಾರಣೆ ನಡೆಸಿ, ಒಂದು ವರ್ಷದ ಬಳಿಕವಷ್ಟೇ ದರ್ಶನ್ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಸೂಚಿಸಿತ್ತು. ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ತಮಗೆ ಭಾರಿ ಅನ್ಯಾಯವಾಗಿದ್ದು, ಆದೇಶ ಮರುಪರಿಶೀಲಿಸಬೇಕು ಎಂದು ದರ್ಶನ್ ತಮ್ಮ ಅರ್ಜಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ದರ್ಶನ್ ಸಲ್ಲಿಸಿರುವ ಅರ್ಜಿಯಲ್ಲೇನಿದೆ?

ಸುಪ್ರೀಂ ಕೋರ್ಟ್ ಹೇರಿರುವ ಒಂದು ವರ್ಷದ ಸುದೀರ್ಘ ನಿರ್ಬಂಧದಿಂದಾಗಿ ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆ ಇನ್ನಷ್ಟು ವಿಳಂಬವಾಗಬಹುದು. ಇದು ತಮ್ಮ ಬಂಧನದ ಅವಧಿಯನ್ನು ಮತ್ತಷ್ಟು ವಿಸ್ತರಿಸಲಿದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಹಕ್ಕನ್ನು ಸಂವಿಧಾನದ 21 ವಿಧಿ ನೀಡಿದೆ. ಸುದೀರ್ಘ ಅವಧಿಯ ಬಂಧನವನ್ನು ನ್ಯಾಯಾಲಯಗಳು ಕಾಲಕಾಲಕ್ಕೆ ಪರಿಶೀಲಿಸಬೇಕೇ ಹೊರತು, ವರ್ಷಗಟ್ಟಲೆ ಅರ್ಜಿ ಸಲ್ಲಿಸದಂತೆ ತಡೆಯುವುದು ಈ ಹಕ್ಕಿನ ಉಲ್ಲಂಘನೆ ಎಂದು ಉಲ್ಲೇಖಿಸಲಾಗಿದೆ.

ಮಾನವೀಯ ನೆಲೆಗಟ್ಟು ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ತಮಗೆ ಜಾಮೀನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವೃತ್ತಿಜೀವನ, ಜೀವನೋಪಾಯ ಹಾಗೂ ತಮ್ಮನ್ನು ನಂಬಿರುವ ಕುಟುಂಬಕ್ಕೆ ಹಾನಿಯಾಗಿದೆ. ಅಲ್ಲದೆ, ತಮ್ಮ ತಾಯಿಯವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಒಂದು ವರ್ಷದ ನಿರ್ಬಂಧದ ಆದೇಶವು ವ್ಯಾಪಕ ದುಷ್ಪರಿಣಾಮ ಬೀರಲಿದೆ. ಕೂಡಲೇ ಆದೇಶವನ್ನು ಪರಿಷ್ಕರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆ.14ರಂದೇ ರದ್ದಾಗಿದ್ದ ಜಾಮೀನು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಹಾಗೂ ಇತರ ಪ್ರಮುಖ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ಕಳೆದ 2025ರ ಆಗಸ್ಟ್ 14ರಂದೇ ರದ್ದುಗೊಳಿಸಿ ಜೈಲಿಗಟ್ಟುವಂತೆ ಆದೇಶಿಸಿತ್ತು.

ಸೆಲೆಬ್ರಿಟಿ ಎಂಬ ಕಾರಣಕ್ಕೆ ಕಾನೂನಿನ ಬಿಗಿಹಿಡಿತದಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಆ ಬಳಿಕ ಸುದೀರ್ಘ ಕಾಲದಿಂದ ಜೈಲಿನಲ್ಲೇ ಇರುವ ದರ್ಶನ್, ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ತಮಗೆ ಸಿಕ್ಕಿದ್ದ ಒಂದು ವರ್ಷದ ಗಡುವು ಹಾಗೂ ಸುದೀರ್ಘ ವಿಚಾರಣೆಯ ಪ್ರಕ್ರಿಯೆಗೆ ಬೇಸತ್ತು ಈಗ ಹೊಸ ವಕೀಲರ ಮೂಲಕ ಮೇಲ್ಮನವಿ ಸಲ್ಲಿಸಿದ್ದಾರೆ.

Read More
Next Story