Actor Chetan vs Sa Ra Govindu | ನಟ ಚೇತನ್ ದೂರಿನ ಬೆನ್ನಲ್ಲೇ ಸಾರಾ ಗೋವಿಂದು ವಿರುದ್ಧ FIR ದಾಖಲು
x
ಸಾರಾ ಗೋವಿಂದು ವಿರುದ್ಧ ದೂರು ದಾಖಲಿಸಿದ ಚೇತನ್‌ ಅಹಿಂಸಾ(ಸಂಗ್ರಹ ಚಿತ್ರ)

Actor Chetan vs Sa Ra Govindu | ನಟ ಚೇತನ್ ದೂರಿನ ಬೆನ್ನಲ್ಲೇ ಸಾರಾ ಗೋವಿಂದು ವಿರುದ್ಧ FIR ದಾಖಲು

ನಟ ಚೇತನ್ ಅಹಿಂಸಾ ನೀಡಿದ ದೂರಿನ ಅನ್ವಯ ನಿರ್ಮಾಪಕ ಸಾರಾ ಗೋವಿಂದು ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ BNS ಸೆಕ್ಷನ್‌ಗಳ ಅಡಿ FIR ದಾಖಲಾಗಿದೆ.


ಡಾ. ರಾಜ್‌ಕುಮಾರ್ ಅವರ ಸ್ಮಾರಕದ ಕುರಿತು ನೀಡಿದ್ದ ಹೇಳಿಕೆಯಿಂದ ಶುರುವಾದ ವಿವಾದ ಇದೀಗ ಕಾನೂನು ಹೋರಾಟವಾಗಿ ಮಾರ್ಪಟ್ಟಿದೆ. ನಟ ಚೇತನ್ ಅಹಿಂಸಾ ನೀಡಿದ ದೂರಿನ ಮೇರೆಗೆ ಹಿರಿಯ ನಿರ್ಮಾಪಕ ಹಾಗೂ ಕನ್ನಡ ಹೋರಾಟಗಾರ ಸಾ.ರಾ. ಗೋವಿಂದು ಮತ್ತು ಅವರ ಸಹಚರರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ಸ್ಮಾರಕದ ಜಾಗದ ವಿವಾದ

ಇತ್ತೀಚೆಗೆ ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸ್ಮಾರಕದ ಜಾಗಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದನ್ನು ವಿರೋಧಿಸಿ ಸಾ.ರಾ. ಗೋವಿಂದು ನೇತೃತ್ವದಲ್ಲಿ ಅಣ್ಣಾವ್ರ ಅಭಿಮಾನಿಗಳು ಚೇತನ್ ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನಡೆದ ಗಲಾಟೆ ಮತ್ತು ನಿಂದನೆ ಈಗ ಎಫ್‌ಐಆರ್ ದಾಖಲಾಗಲು ಕಾರಣವಾಗಿದೆ.

ದಾಖಲಾದ ಸೆಕ್ಷನ್‌ಗಳು ಯಾವುವು?

ನಟ ಚೇತನ್ ಅಹಿಂಸಾ ನೀಡಿದ ದೂರಿನ ಅನ್ವಯ ಶೇಷಾದ್ರಿಪುರಂ ಪೊಲೀಸರು ಸಾ.ರಾ. ಗೋವಿಂದು ಮತ್ತು ಅವರ ಸಹಚರರ ವಿರುದ್ಧ ಗಂಭೀರ ಕ್ರಮ ಕೈಗೊಂಡಿದ್ದು, ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಕಾನೂನುಬಾಹಿರವಾಗಿ ಗುಂಪುಗೂಡಿದ ಆರೋಪದ ಮೇಲೆ BNS ಸೆಕ್ಷನ್ 189(2) ಮತ್ತು 190, ಅಕ್ರಮವಾಗಿ ಮನೆಗೆ ಅತಿಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಸೆಕ್ಷನ್ 329(4), ಹಾಗೂ ಪ್ರಾಣ ಬೆದರಿಕೆ ಒಡ್ಡಿ ಶಾಂತಿ ಭಂಗಕ್ಕೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಸೆಕ್ಷನ್ 351(2) ಮತ್ತು 352 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ನಟ ಚೇತನ್ ಗಂಭೀರ ಆರೋಪ

ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್ ಅಹಿಂಸಾ, ಸಾ.ರಾ. ಗೋವಿಂದು ವಿರುದ್ಧ ವಾಗ್ದಾಳಿ ನಡೆಸಿದರು. "ಕಳೆದ ಶನಿವಾರ ಸಾ.ರಾ. ಗೋವಿಂದು ನನ್ನ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರ ಮುಂದೆಯೇ ಬೆದರಿಕೆ ಹಾಕಿದ್ದಾರೆ. ಅವರು ಸಿನಿರಂಗದ ಒಳಿತಿಗೆ ಯಾರೇ ನಿಂತರೂ ದಾದಾಗಿರಿ ಮಾಡುತ್ತಾರೆ. ಅವರು ಈ ಹಿಂದೆ ಮಾಧ್ಯಮ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದ ಇತಿಹಾಸ ಹೊಂದಿದ್ದಾರೆ. ಇವರು ಡಾ. ರಾಜ್‌ಕುಮಾರ್ ಹೆಸರನ್ನು ಕೆಡಿಸುತ್ತಿದ್ದಾರೆ, ಅವರ ಅಭಿಮಾನಿ ಎಂದು ಹೇಳಿಕೊಳ್ಳಲು ಇವರಿಗೆ ಯೋಗ್ಯತೆ ಇಲ್ಲ."

ಚೇತನ್ ಮುಂದುವರಿದು ಮಾತನಾಡುತ್ತಾ, "ಅವರು ದುರಹಂಕಾರದಿಂದ ಗೂಂಡಾಗಿರಿ ಮಾಡುತ್ತಿದ್ದಾರೆ. ದಲಿತರ ವಿರುದ್ಧವಾಗಿ ಮಾತನಾಡಿದ ಆರೋಪವೂ ಅವರ ಮೇಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಜನಪರ ಸಂಘಟನೆಗಳ ಜೊತೆಗೂಡಿ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಕ್ರಮ

ಈಗಾಗಲೇ ದೂರಿನ ಅಕ್ನಾಲೆಜ್‌ಮೆಂಟ್ ಪಡೆದಿರುವ ಚೇತನ್, ಕಾನೂನು ತಜ್ಞರ ಸಲಹೆ ಮೇರೆಗೆ ಮುಂದಿನ ಹೆಜ್ಜೆ ಇಡುತ್ತಿದ್ದಾರೆ. ಶೇಷಾದ್ರಿಪುರಂ ಪೊಲೀಸರು ಸಾ.ರಾ. ಗೋವಿಂದು ಮತ್ತು ಅವರ ಸಹಚರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

Read More
Next Story