ಕರ್ನಾಟಕದ ಮನವಿ ತಳ್ಳಿಹಾಕಿದ ಪ್ರಾಧಿಕಾರ; ತಮಿಳುನಾಡಿಗೆ ಮನ್ನಣೆ
x

ಕರ್ನಾಟಕದ ಮನವಿ ತಳ್ಳಿಹಾಕಿದ ಪ್ರಾಧಿಕಾರ; ತಮಿಳುನಾಡಿಗೆ ಮನ್ನಣೆ

ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ಬಾರಿ ಒಳಹರಿವು ಶೇ.65.65ರಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಸೂಪರ್ ಎಲ್ ನಿನೋ ಪರಿಣಾಮದಿಂದ ಉಂಟಾದ ಮಳೆ ಕೊರತೆ ಎಂದು ಕರ್ನಾಟಕ ವಾದಿಸಿತು.


Click the Play button to hear this message in audio format

ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ನಡೆಸಿದ 54ನೇ ಸಭೆಯು ಕರ್ನಾಟಕಕ್ಕೆ ತೀವ್ರ ನಿರಾಶೆಯನ್ನುಂಟುಮಾಡಿದೆ. ರಾಜ್ಯವು ಎದುರಿಸುತ್ತಿರುವ ಭೀಕರ ಜಲಕ್ಷಾಮ ಮತ್ತು ಕುಡಿಯುವ ನೀರಿನ ಅಭಾವದ ವಸ್ತುಸ್ಥಿತಿಯನ್ನು ಪ್ರಾಧಿಕಾರದ ಮುಂದಿಟ್ಟಿದ್ದರೂ, ಕರ್ನಾಟಕದ ಮನವಿಯನ್ನು ತಿರಸ್ಕರಿಸಿರುವ ಪ್ರಾಧಿಕಾರವು, ತಮಿಳುನಾಡಿಗೆ ನಿತ್ಯ 3,500 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಕರ್ನಾಟಕದ ಅಣೆಕಟ್ಟುಗಳಿಗೆ ಒಳಹರಿವಿನ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ಬಾರಿ ಒಳಹರಿವು ಶೇ. 65.65ರಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಸೂಪರ್ ಎಲ್ ನಿನೋ ಪರಿಣಾಮದಿಂದ ಉಂಟಾದ ಮಳೆ ಕೊರತೆ. ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ಇದು ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದೆ ಎಂದು ಕರ್ನಾಟಕ ಸಮರ್ಥಿಸಿಕೊಂಡಿದೆ. ಕರ್ನಾಟಕದಿಂದ ಬಿಡುಗಡೆಯಾಗುವ ನೀರು ಒಂದು ಕಡೆಯಾದರೆ, ತಮಿಳುನಾಡಿಗೆ ಶೀಘ್ರವೇ ಈಶಾನ್ಯ ಮುಂಗಾರು ಮಳೆ ಆರಂಭವಾಗಲಿದೆ. ಈ ಮಳೆಯಿಂದ ತಮಿಳುನಾಡಿನ ಜಲಾಶಯಗಳು ಭರ್ತಿಯಾಗುತ್ತವೆ. ಹೀಗೆ ತಮಿಳುನಾಡು ಎರಡು ಕಡೆಯಿಂದ ನೀರನ್ನು ಪಡೆಯುತ್ತಿದ್ದು, ಕರ್ನಾಟಕದ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂಬುದು ಸರ್ಕಾರದ ವಾದ ಮಂಡಿಸಿತು.

ನೀರು ಬಿಡುಗಡೆಗೆ ಒತ್ತಾಯ ಅವಿವೇಕ

ಕರ್ನಾಟಕವು ಈಗಾಗಲೇ ತಮಿಳುನಾಡಿಗೆ ಬಿಡುಗಡೆ ಮಾಡಿರುವ ನೀರಿನಿಂದಾಗಿ ಅಲ್ಲಿನ ಜಲಾಶಯಗಳಲ್ಲಿ ಸಾಕಷ್ಟು ಸಂಗ್ರಹವಿದೆ. ಈ ಹಿಂದಿನ ಹಂಚಿಕೆಯ ನೀರನ್ನು ಬಳಸಿಕೊಳ್ಳುವ ಅವಕಾಶವಿರುವಾಗ, ಹೊಸದಾಗಿ ನೀರು ಬಿಡುಗಡೆಗೆ ಒತ್ತಾಯಿಸುವುದು ಅವಿವೇಕ ಎಂದು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಮಳೆ ಕೊರತೆಯ ವರ್ಷಗಳಲ್ಲಿ ಈಶಾನ್ಯ ಮುಂಗಾರು ಮಳೆಯು ತಮಿಳುನಾಡಿನ ಜಲಾಶಯಗಳ ನೀರಿನ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಈ ಬಾರಿ ಕೂಡ ಮಳೆ ಸುರಿಯುವ ಸಾಧ್ಯತೆಯಿದ್ದು, ತಮಿಳುನಾಡು ತನ್ನ ಅಗತ್ಯವನ್ನು ಮಳೆಯ ನೀರನ್ನೇ ಅವಲಂಬಿಸಬೇಕು ಎಂದು ರಾಜ್ಯ ಸರ್ಕಾರ ವಾದಿಸಿದೆ. ಬಿಳಿಗುಂಡ್ಲು ಕೇಂದ್ರದಲ್ಲಿ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ತಲುಪಿಸಬೇಕೆಂದರೆ, ಕರ್ನಾಟಕವು ಸುಮಾರು 7 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕಾಗುತ್ತದೆ. ನದಿಯ ಮಾರ್ಗದಲ್ಲಿನ ಒಣ ಹವಾಮಾನ ಮತ್ತು ನೀರಿನ ಆವಿಯಾಗುವಿಕೆಯಿಂದಾಗಿ ಭಾರಿ ನಷ್ಟ ಉಂಟಾಗುತ್ತದೆ. ರಾಜ್ಯದ ಪರಿಸ್ಥಿತಿಯಲ್ಲಿ ಇಷ್ಟು ಪ್ರಮಾಣದ ನೀರು ಬಿಡುಗಡೆ ಮಾಡುವುದು ಅಸಾಧ್ಯ ಎಂದು ವಿವರಿಸಿತು.

ಕುಡಿಯುವ ನೀರಿನ ಆದ್ಯತೆ

ಜೂನ್ 2027ರವರೆಗೆ ಬೆಂಗಳೂರು ನಗರ ಸೇರಿದಂತೆ ಕಾವೇರಿ ಕಣಿವೆಯ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ತಡೆಯಲು ಕರ್ನಾಟಕಕ್ಕೆ ಕನಿಷ್ಠ 40 ಟಿಎಂಸಿ ನೀರು ಮೀಸಲಿಡುವುದು ಅನಿವಾರ್ಯವಾಗಿದೆ. ಕುಡಿಯುವ ನೀರು ಮಾನವನ ಮೂಲಭೂತ ಹಕ್ಕು, ಇದಕ್ಕೆ ಆದ್ಯತೆ ನೀಡಲೇಬೇಕು ಎಂದು ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಪ್ರಸ್ತುತ ಹವಾಮಾನದ ಪರಿಸ್ಥಿತಿ ಅನಿಶ್ಚಿತವಾಗಿರುವುದರಿಂದ, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ನೀಡಿರುವ ಆದೇಶವನ್ನು ಮುಂದಿನ 15 ದಿನಗಳವರೆಗೆ ಜಾರಿಗೊಳಿಸದಂತೆ ತಡೆಹಿಡಿಯಬೇಕು. ಹವಾಮಾನದ ಬೆಳವಣಿಗೆಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿತು.

ತಮಿಳುನಾಡಿನ ವಾದ

ಸಭೆಯಲ್ಲಿ ತಮಿಳುನಾಡಿನ ಪ್ರತಿನಿಧಿಗಳು ತಮ್ಮ ಹಕ್ಕನ್ನು ಪ್ರತಿಪಾದಿಸಿದರು. ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಜಲಕ್ಷಾಮ ಉಂಟಾಗಿದೆ. ಕರ್ನಾಟಕ ಬಿಡುಗಡೆ ಮಾಡುತ್ತಿರುವ 3,500 ಕ್ಯೂಸೆಕ್ ನೀರು ಸಾಕಾಗುತ್ತಿಲ್ಲ. ತಮಿಳುನಾಡಿನ ಬೆಳೆಗಳ ರಕ್ಷಣೆಗಾಗಿ ಕರ್ನಾಟಕವು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಬೇಕೆಂದು ಪ್ರಾಧಿಕಾರಕ್ಕೆ ಒತ್ತಾಯಿಸಿತು.

ನೀರು ಬಿಡಲು ಪ್ರಾಧಿಕಾರದ ತೀರ್ಪು

ಕರ್ನಾಟಕದ ಅಳಲನ್ನು ಆಲಿಸಿದರೂ, ಅಂತಿಮವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿನ ಪರವಾಗಿ ಒಲವು ತೋರಿತು. ಕಾವೇರಿ ನೀರು ನಿಯಂತ್ರಣ ಸಮಿತಿ ಹೊರಡಿಸಿದ್ದ ಆದೇಶವನ್ನು ಪ್ರಾಧಿಕಾರವು ಸಂಪೂರ್ಣವಾಗಿ ಅನುಮೋದಿಸಿತು. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಬಿಳಿಗುಂಡ್ಲು ಅಂತಾರಾಜ್ಯ ಗಡಿಯಲ್ಲಿ ನಿತ್ಯ 3,500 ಕ್ಯೂಸೆಕ್ ನೀರು ಹರಿಸಲೇಬೇಕು. ಕರ್ನಾಟಕದ ಯಾವುದೇ ಮೇಲ್ಮನವಿ ಅಥವಾ ಮನವಿಯನ್ನು ಪರಿಗಣಿಸದೆ, ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಾಧಿಕಾರ ಸೂಚಿಸಿದೆ.

ಪ್ರಾಧಿಕಾರದ ಈ ನಿರ್ಧಾರವು ರಾಜ್ಯದ ಪಾಲಿಗೆ ದೊಡ್ಡ ಆಘಾತವಾಗಿದೆ. ಈಗಾಗಲೇ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಈ ಸಂದರ್ಭದಲ್ಲಿ ನೀರು ಬಿಡುಗಡೆ ಮಾಡುವುದು ರೈತರ ಪಾಲಿಗೆ ಮರಣಶಾಸನವಾಗಲಿದೆ. ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯತೆಗಾಗಿ ಕಾಯ್ದಿರಿಸಬೇಕಾದ ನೀರನ್ನು ತಮಿಳುನಾಡಿಗೆ ಹರಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಸರ್ವಪಕ್ಷ ಸಭೆಯಲ್ಲಿ ಕೈಗೊಳ್ಳುವ ನಿರ್ಣಯ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ವಾದ ಮಂಡನೆ ಯಾವ ರೀತಿಯಲ್ಲಿದೆ ಎಂಬುದರ ಮೇಲೆ ಗಮನಹರಿಸಲಾಗಿದೆ.

Read More
Next Story