
ಬೀದರ್ನ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಬಳಿ ಪೆಟ್ರೋಲ್ ಬಂಕ್ನಲ್ಲಿ ಸೋಲಾರ್ ಸ್ವಚ್ಛಗೊಳಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ 19 ವರ್ಷದ ಅಮಿತ್ ಮೃತಪಟ್ಟಿದ್ದಾರೆ.
ಪೆಟ್ರೋಲ್ ಬಂಕ್ನಲ್ಲಿ ವಿದ್ಯುತ್ ಸ್ಪರ್ಶ: 19 ವರ್ಷದ ಯುವಕ ಸಾವು
ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲ್ ರಗಟೆ ಅವರಿಗೆ ಸೇರಿದ ಪೆಟ್ರೋಲ್ ಬಂಕ್ನಲ್ಲಿ ಘಟನೆ ನಡೆದಿದೆ. ಅಮಿತ್ನನ್ನು ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸುವ ಕೆಲಸಕ್ಕೆ ನೇಮಿಸಲಾಗಿತ್ತು.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿಯ ಪೆಟ್ರೋಲ್ ಬಂಕ್ನಲ್ಲಿ ವಿದ್ಯುತ್ ಸ್ಪರ್ಶಿಸಿ 19 ವರ್ಷದ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ಮಂಠಾಳ ಗ್ರಾಮದ ಅಮಿತ್ ಎಂದು ಗುರುತಿಸಲಾಗಿದೆ. ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲ್ ರಗಟೆ ಅವರಿಗೆ ಸೇರಿದ ಪೆಟ್ರೋಲ್ ಬಂಕ್ನಲ್ಲಿ ಈ ಘಟನೆ ಸಂಭವಿಸಿದೆ. ಬಂಕ್ನ ಕಟ್ಟಡದ ಮೇಲ್ಭಾಗದಲ್ಲಿದ್ದ ಸೋಲಾರ್ ಪ್ಯಾನೆಲ್ಗಳನ್ನು ಸ್ವಚ್ಛಗೊಳಿಸುವ ವೇಳೆ ಅಮಿತ್ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾನೆ. ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕುಟುಂಬಸ್ಥರಿಂದ ಬಂಕ್ ಮಾಲೀಕರ ವಿರುದ್ಧ ಆಕ್ರೋಶ
ಅಮಿತ್ನನ್ನು ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸುವ ಕೆಲಸಕ್ಕೆ ಬಂಕ್ನಲ್ಲಿ ನೇಮಿಸಲಾಗಿತ್ತು. ಆದರೆ ಸೋಲಾರ್ ಸ್ವಚ್ಛಗೊಳಿಸುವ ಕೆಲಸಕ್ಕೆ ಆತನನ್ನು ನಿಯೋಜಿಸಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವಕನ ಸಾವಿಗೆ ಬಂಕ್ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆಯನ್ನು ಖಂಡಿಸಿ ಕುಟುಂಬಸ್ಥರು ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೆಟ್ರೋಲ್ ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮೃತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಘಟನೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

