ಕಂಪ್ಯೂಟರ್ ಕಲಿಯಲು ಹೋಗಿದ್ದ 15 ವರ್ಷದ ಬಾಲಕ ಹೈಡ್ರಾಲಿಕ್ ಲಿಫ್ಟ್‌ನಲ್ಲಿ ಸಿಲುಕಿ ಸಾವು
x

15 ವರ್ಷದ ಬಾಲಕನೊಬ್ಬ ಹಾರ್ಡ್‌ವೇರ್ ಅಂಗಡಿಯ ಹೈಡ್ರಾಲಿಕ್ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ. 

ಕಂಪ್ಯೂಟರ್ ಕಲಿಯಲು ಹೋಗಿದ್ದ 15 ವರ್ಷದ ಬಾಲಕ ಹೈಡ್ರಾಲಿಕ್ ಲಿಫ್ಟ್‌ನಲ್ಲಿ ಸಿಲುಕಿ ಸಾವು

ಕಂಪ್ಯೂಟರ್ ಕಲಿಯಲು ಬಂದಿದ್ದ ಬಾಲಕನನ್ನು ಹಾರ್ಡ್​ವೇರ್ ಅಂಗಡಿಯ ಮಾಲೀಕ ಪೇಂಟ್​ ಡಬ್ಬ ಸಾಗಿಸಲು ಬಳಸಿದ್ದೇ ಘಟನೆಗೆ ಕಾರಣ ಎಂಬುದಾಗಿ ಆತನ ತಂದೆ ಆರೋಪಿಸಿದ್ದಾರೆ.


Click the Play button to hear this message in audio format

ಶಾಲಾ ರಜೆಯ ಅವಧಿಯಲ್ಲಿ ಕಂಪ್ಯೂಟರ್ ಕೆಲಸ ಕಲಿಯುವ ಉದ್ದೇಶದಿಂದ ಹಾರ್ಡ್‌ವೇರ್ ಅಂಗಡಿಗೆ ತೆರಳಿದ್ದ 15 ವರ್ಷದ ಬಾಲಕನೊಬ್ಬ ಹೈಡ್ರಾಲಿಕ್ ಲಿಫ್ಟ್‌ನಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮುಂಬೈನ ಶಾಲೆಯೊಂದರಲ್ಲಿ 9ನೇ ತರಗತಿ ಪೂರ್ಣಗೊಳಿಸಿದ್ದ ಸಲ್ಮಾನ್ ಖಾನ್ ಮೃತ ಬಾಲಕ. ಅಂಗಡಿ ಮಾಲೀಕರು ಕಂಪ್ಯೂಟರ್ ಕೆಲಸ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕನನ್ನು ಕಾನೂನುಬಾಹಿರವಾಗಿ ಅಪಾಯಕಾರಿ ಕೆಲಸಕ್ಕೆ ಬಳಸಿಕೊಂಡಿದ್ದೇ ಈ ದುರ್ಘಟನೆಗೆ ಕಾರಣ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.

ರಜೆ ವೇಳೆ ಕಂಪ್ಯೂಟರ್ ಕಲಿಸಿಕೊಡುತ್ತೇವೆ ಎಂಬ ಭರವಸೆ

ಮೂಲತಃ ಪೇಂಟರ್ ಆಗಿರುವ ಅಮೀನ್ ಅಲ್ಲಾಬಕ್ಷ್ ಸೈಯದ್ ಅವರ ಕುಟುಂಬ ಇತ್ತೀಚೆಗಷ್ಟೇ ಮುಂಬೈನಿಂದ ಬೆಂಗಳೂರಿನ ಕೆ.ಜಿ. ಹಳ್ಳಿಗೆ ವಲಸೆ ಬಂದಿತ್ತು. ಸಲ್ಮಾನ್ ಖಾನ್ ಮುಂಬೈನಲ್ಲಿ 9ನೇ ತರಗತಿ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯಲ್ಲಿದ್ದ. ಬೆಂಗಳೂರಿನ ಶಾಲೆಯಲ್ಲಿ 10ನೇ ತರಗತಿಗೆ ದಾಖಲಾತಿ ಮಾಡಿಸಲು ಅಗತ್ಯ ದಾಖಲೆಗಳು ಸಿಗಲು ವಿಳಂಬವಾಗುತ್ತಿದ್ದ ಕಾರಣ, ಬಿಡುವಿನ ವೇಳೆಯಲ್ಲಿ ಮಗ ಕಂಪ್ಯೂಟರ್ ಕೆಲಸ ಕಲಿಯಲಿ ಎಂಬ ಉದ್ದೇಶದಿಂದ ತಂದೆ ನಿರ್ಧರಿಸಿದ್ದರು.

ಈ ವೇಳೆ ಟ್ಯಾನರಿ ರಸ್ತೆಯಲ್ಲಿರುವ 'ನೆಲ್ಲೈ ಹಾರ್ಡ್‌ವೇರ್ ಸ್ಟೋರ್ಸ್' ಮಾಲೀಕರಾದ ನೌಶಾದ್ ಅಲಿ, ಮೊಹಮ್ಮದ್ ಮೀನಾರ್ ಹಾಗೂ ಎಂ. ಶಫೀವುಲ್ಲಾ ಪರಿಚಯವಾಗಿದ್ದು, ಸಲ್ಮಾನ್‌ಗೆ ಕಂಪ್ಯೂಟರ್ ಕೆಲಸ ಕಲಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅವರ ಮಾತು ನಂಬಿದ ತಂದೆ ಜೂನ್ 8ರಂದು ಮಗನನ್ನು ಅಂಗಡಿಗೆ ಕಳುಹಿಸಿದ್ದರು.

ಕಂಪ್ಯೂಟರ್ ಬದಲು ಪೇಂಟ್ ಡಬ್ಬಿ ಸಾಗಿಸುವ ಕೆಲಸ

ಬಾಲಕನಿಗೆ ಕಂಪ್ಯೂಟರ್ ಕೆಲಸ ಕಲಿಸುವ ಬದಲು, ನೆಲಮಹಡಿಯಿಂದ ಮೊದಲ ಮಹಡಿಗೆ 20 ಲೀಟರ್ ಸಾಮರ್ಥ್ಯದ ಭಾರವಾದ ಪೇಂಟ್ ಡಬ್ಬಿಗಳನ್ನು ಹೈಡ್ರಾಲಿಕ್ ಲಿಫ್ಟ್ ಮೂಲಕ ಸಾಗಿಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಜೂನ್ 28ರಂದು ಮಧ್ಯಾಹ್ನ ಸಲ್ಮಾನ್ ಎಂದಿನಂತೆ ಪೇಂಟ್ ಡಬ್ಬಿಗಳನ್ನು ಲಿಫ್ಟ್ ಮೂಲಕ ಮೇಲಕ್ಕೆ ಸಾಗಿಸುತ್ತಿದ್ದ ವೇಳೆ ಆತನ ತಲೆಗೂದಲು ಲಿಫ್ಟ್‌ನ ಯಂತ್ರದ ಭಾಗದಲ್ಲಿ ಸಿಲುಕಿಕೊಂಡಿದೆ. ಇದರಿಂದ ಸಮತೋಲನ ಕಳೆದುಕೊಂಡ ಬಾಲಕನ ತಲೆ ಹೈಡ್ರಾಲಿಕ್ ಲಿಫ್ಟ್‌ನ ಮಧ್ಯೆ ಸಿಲುಕಿ ನಜ್ಜುಗುಜ್ಜಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಮಗನಿಗೆ ಗಾಯವಾಗಿದೆ ಎಂದು ಕರೆ; ಸ್ಥಳಕ್ಕೆ ಹೋದಾಗ ಶವ

ಮಧ್ಯಾಹ್ನ ಸುಮಾರು 12.40ರ ವೇಳೆಗೆ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ಶಫೀವುಲ್ಲಾ ಅವರು ಬಾಲಕನ ತಂದೆಗೆ ಕರೆ ಮಾಡಿ, "ಮಗನಿಗೆ ಗಾಯವಾಗಿದೆ, ಕೂಡಲೇ ಅಂಗಡಿಗೆ ಬನ್ನಿ" ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ತಂದೆಗೆ, ಲಿಫ್ಟ್‌ನಲ್ಲಿ ತಲೆ ಸಿಲುಕಿ ರಕ್ತದ ಮಡುವಿನಲ್ಲಿ ಮಗನ ಮೃತದೇಹ ಬಿದ್ದಿರುವ ದೃಶ್ಯ ಕಂಡುಬಂದಿದೆ.

ಸುರಕ್ಷತಾ ಕ್ರಮಗಳನ್ನು ಅನುಸರಿಸದೇ, ತಾಂತ್ರಿಕ ದೋಷವಿದ್ದ ಲಿಫ್ಟ್‌ನ್ನು ಅಪ್ರಾಪ್ತ ಬಾಲಕನಿಂದ ಕಾರ್ಯನಿರ್ವಹಿಸುವಂತೆ ಮಾಡಲಾಗಿತ್ತು ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಬಾಲಕಾರ್ಮಿಕ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ಅಪಾಯಕಾರಿ ಕೆಲಸಕ್ಕೆ ಬಾಲಕನನ್ನು ಬಳಸಿಕೊಂಡಿದ್ದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ. ಹಳ್ಳಿ ಪೊಲೀಸರು ಹಾರ್ಡ್‌ವೇರ್ ಅಂಗಡಿ ಮಾಲೀಕರ ವಿರುದ್ಧ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಹಾಗೂ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Read More
Next Story