Coastal Water Crisis| ಕರಾವಳಿಯಲ್ಲಿ ಕುಡಿಯಲು, ಕೃಷಿ ಬಳಕೆಗೆ ನೀರಿಲ್ಲ ಬೋರ್‌ವೆಲ್ ಮಾಫಿಯಾದಿಂದ ಅಂತರ್ಜಲವೂ ಇಲ್ಲ!
x

ಕರ್ನಾಟಕ ಕರಾವಳಿಯಲ್ಲಿ ಕುಡಿಯುವ ಮತ್ತು ಕೃಷಿ ಬಳಕೆಯ ನೀರಿನ ಅಭಾವ ಈ ಬೇಸಿಗೆಯಲ್ಲಿ ಹೆಚ್ಚಾಗಿದೆ. 

Coastal Water Crisis| ಕರಾವಳಿಯಲ್ಲಿ ಕುಡಿಯಲು, ಕೃಷಿ ಬಳಕೆಗೆ ನೀರಿಲ್ಲ ಬೋರ್‌ವೆಲ್ ಮಾಫಿಯಾದಿಂದ ಅಂತರ್ಜಲವೂ ಇಲ್ಲ!

ಕರಾವಳಿ ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯ ತಾಪ ಮತ್ತು ಅಂತರ್ಜಲ ಕುಸಿತವು ಜನಜೀವನ ಹಾಗೂ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರಿದೆ.


Click the Play button to hear this message in audio format

ಕರ್ನಾಟಕ ಕರಾವಳಿಯಲ್ಲಿ ಕುಡಿಯುವ ಮತ್ತು ಕೃಷಿ ಬಳಕೆಯ ನೀರಿನ ಅಭಾವ ಈ ಬೇಸಿಗೆಯಲ್ಲಿ ಹೆಚ್ಚಾಗಿದೆ. ಪಂಚಾಯತ್‌ಗಳು ಕುಡಿಯುವ ನೀರನ್ನು ಟ್ಯಾಂಕ್‌ಗಳ ಮೂಲಕ ಸರಬರಾಜು ಮಾಡುತ್ತಿದ್ದರೆ, ಕೃಷಿಕರು ಬೋರ್‌ವೆಲ್ ತೆಗೆಸಿ ಹೈರಾಣಾಗಿದ್ದಾರೆ.

ಕರಾವಳಿಯಲ್ಲಿ ಮಳೆಗಾಲ ಮುಗಿದೊಡನೇ ಬೇರೆ ರಾಜ್ಯಗಳಲ್ಲಿ ನೋಂದಾಯಿತ ಬೋರ್‌ವೆಲ್ ಡ್ರಿಲ್ಲಿಂಗ್ ಮೆಷಿನ್ ಹೊಂದಿರುವ ಟ್ರಕ್‌ಗಳು ಕರಾವಳಿ ಕರ್ನಾಟಕದಲ್ಲಿ ತಮ್ಮ ವ್ಯವಹಾರ ಕುದುರಿಸುತ್ತವೆ. ಒಂದು ಬೋರ್‌ವೆಲ್‌ನಲ್ಲಿ ಅಡಿ ಒಂದರ ರೂ.135 ರಿಂದ ರೂ. 400 ವರೆಗೆ ಚಾರ್ಜು ಮಾಡಿ ಲಕ್ಷಾಂತರ ರೂಪಾಯಿ ಕಮಾಯಿಸುತ್ತಾರೆ. ಬೋರ್‌ವೆಲ್‌ನಲ್ಲಿ ನೀರು ಸಿಕ್ಕರೂ ಸಿಗದೇ ಇದ್ದರೂ ಅವರ ಚಾರ್ಜು ಪಡೆದುಕೊಳ್ಳುತ್ತಾರೆ. ಗ್ರಾಹಕರ ಸಂತೃಪ್ತಿಗಾಗಿ ನೀರು ಸಿಗದೇ ಇರುವ ಬೋರ್‌ವೆಲ್‌ಗಳಲ್ಲಿ ತಮ್ಮದೇ ವಾಹನದ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾದ ನೀರು ಹರಿಸಿ ನೀರು ಸಿಕ್ಕಿದೆ ಎಂಬ ನಂಬಿಕೆ ಸೃಷ್ಟಿಸುವ ಲಾಬಿ ಕೂಡಾ ಇದೆ.

ಯಮುನಾ ಬೋರ್‌ವೆಲ್ ಎಂಬ ಟ್ರಕ್ ಒಂದರ ಡ್ರಿಲ್ಲಿಂಗ್ ಏಜೆಂಟ್, ನಮಗೆ ಬೇಸಿಗೆ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಇದು ನಮ್ಮ ವಾರ್ಷಿಕ ಆದಾಯ. ಎಲ್ಲಾ ಗ್ರಾಹಕರಿಗೂ ನೀರು ಸಿಕ್ಕಿದೆ ಎಂದಾದರೆ ನಮಗೆ ತೃಪ್ತಿ ಇರುತ್ತದೆ. `ಹಳ್ಳಿಗಳಲ್ಲಿ ಹಣ ಸುರಿಯುವ ಗ್ರಾಹಕರ ತೃಪ್ತಿಗಾಗಿ ನೀರು ಸಿಕ್ಕಿದೆ ಎಂದು ಹೇಳುವುದೂ ಇದೆ'' ಎನ್ನುತ್ತಾರೆ.

ಬಂಟ್ವಾಳದ ಕೃಷಿಕ ಸುರೇಂದ್ರ ನಾಯಕ್, ನಾನು ಬೋರ್ ವೆಲ್ ತೆಗೆಸಿದಾಗ ಎರಡು ಇಂಚು ನೀರು ಬಂದಂತೆ ತೋರಿಸಿದರು, ಬಳಿಕ ಮೋಟಾರ್ ಪಂಪ್ ಅಳವಡಿಸಿದಾಗ ಒಂದು ಹನಿ ನೀರೂ ಬಂದಿಲ್ಲ. ಬೋರ್‌ವೆಲ್ ಏಜೆಂಟರನ್ನು ಸಂಪರ್ಕಿಸಿದಾಗ ಅದು ನಿಮ್ಮ ಅದೃಷ್ಟದಂತೆ ಆಗಿದೆ ಎಂದು ಹೇಳಿ ಫೋನ್ ಡಿಸ್‌ಕನೆಕ್ಟ್ ಮಾಡಿದವರು ಮತ್ತೆ ಕರೆ ಸ್ವೀಕರಿಸಲೇ ಇಲ್ಲ, ಎಂದು ಅಳಲು ತೋಡಿಕೊಂಡರು.

ಅಂತರ್ಜಲ ಕೊರತೆ!

ಕರಾವಳಿ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ಕೆಲವು ದಶಕಗಳಿಂದ ಬೋರ್‌ವೆಲ್ ನೀರು ಬಳಕೆ ಹೆಚ್ಚಾಗಿದೆ. ಹಿಂದಿನ ದಶಕಗಳಲ್ಲಿ, ಬಾವಿ, ಕೆರೆ ಅಥವಾ ನದೀ ನೀರಿನ ಬಳಕೆಯಿಂದ ಮಾಡಲಾಗುತ್ತಿದ್ದ ಕೃಷಿ ಈಗ ಇಲ್ಲವಾಗಿದೆ. ಬೋರ್‌ವೆಲ್‌ಗಳಿಗೆ ಅಂತರ್ಜಲ ನೀರಿನ ಬಳಕೆಯಿಂದ ಭೂಮಿಯ ಮೇಲ್ಮೈ ನೀರಿನ ಆಳ ಪಾತಾಳಕ್ಕೆ ಕುಸಿದಿದೆ. ಹಾಗಾಗಿ ಬೋರ್‌ವೆಲ್‌ಗಳ ಆಳವೂ 1000ಅಡಿ ಆಳಕ್ಕೆ ಇಳಿದಿದೆ.

ಅಂತರ್ಜಲ ಸಂಶೋಧಕ ಚೇತನ್ ಮರುವಾಳ ತನ್ನ ವೃತ್ತಿಯ ಆರಂಭಿಕ ದಿನಗಳಲ್ಲಿ ಕರಾವಳಿಯ ಹೆಚ್ಚಿನ ಭಾಗಗಳಲ್ಲಿ 350 ಅಡಿ ಒಳಗೆ ನೀರಿನ ಹರಿವು ಕಂಡು ಹಿಡಿಯುತ್ತಿದ್ದೆ. ಆದರೆ ಈಗ 700-1000 ಅಡಿವರೆಗೆ ತಲುಪಿದೆ. ರೈತರೂ ಕೂಡಾ ಅಷ್ಟೊಂದು ಅಡಿ ಆಳದವರೆಗೆ ಬೋರ್‌ವೆಲ್ ಕೊರೆಯಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. "ಅಷ್ಟೊಂದೂ ಆಳ ಕೊರೆದರೂ ನೀರು ಹಿಂದಿನಂತೆ ಸಿಗುತ್ತಿಲ್ಲ. ಕೇವಲ ಒಂದು ಅಥವಾ ಮುಕ್ಕಾಲು ಇಂಚು ನೀರಿಗೆ ಸೀಮಿತವಾಗಿರುತ್ತದೆ'' ಎನ್ನುತ್ತಾರೆ.

ಸುಳ್ಯದ ಕೃಷಿಕ ಮಹಾಲಿಂಗೇಶ್ವರ ಭಟ್, ಸುಳ್ಯ ಮತ್ತು ಉಪ್ಪಿನಂಗಡಿ ಎಂದರೆ ನೀರಿನ ನಿಧಿಗಳಿರುವ ಪ್ರದೇಶಗಳಾಗಿದ್ದವು. ಆದರೆ ಈಗ ಅದೇ ತಾಲೂಕುಗಳು ಬರಡು ಭೂಮಿಗಳಾಗಿವೆ. ಇದಕ್ಕೆ ಕಾರಣ ಜನರಿಗೆ ಸುಲಭದಲ್ಲಿ ಬೋರ್‌ವೆಲ್ ಕೊರೆಯಿಸಿ ನೀರು ಪಡೆಯುವ ಅವಕಾಶ ಸಿಕ್ಕಿದ್ದು. ಈ ಕಾರಣದಿಂದ ಅಂತರ್ಜಲ ತಳಕ್ಕೆ ಕುಸಿಯುತ್ತಿದೆ. ಬಾವಿ ಅಥವಾ ಕೆರೆ ಮೂಲಕ ಮಳೆ ನೀರು ಇಂಗಿಸಿ ನೀರಿನ ಲಾಭ ಪಡೆಯುವ ವಿಧಾನ ಯಾರಿಗೂ ಬೇಡವಾಗಿದೆ. `` ಕುಡಿಯುವ ನೀರಿಗೂ ಕಷ್ಟ ಪಡಬೇಕಾದ ದಿನಗಳು, ಈ ಹವಾಮಾನ ವೈಪರೀತ್ಯ ಕಾಲದಲ್ಲಿ ಎದುರಾಗಲಿವೆ'' ಎನ್ನುತ್ತಾರವರು.

ಭೂಗರ್ಭ ಶಾಸ್ತ ವಿಜ್ಞಾನಿ ಏನೆನ್ನುತ್ತಾರೆ?

ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜಿಯೋಲಾಜಿಸ್ಟ್ ಆಗಿ ಸುಮಾರು 30 ವರ್ಷಗಳಿಂದ ದುಡಿಯುತ್ತಿರುವ, ಶಿರಸಿ-ಹುಬ್ಬಳ್ಳಿ ಮೂಲದ ನಾಗಲಿಂಗ ಸ್ವಾಮಿ ಕಲಬುರಗಿ ವಿಶ್ವವಿದ್ಯಾನಿಲಯದಿಂದ ಭೂಗರ್ಭ ಶಾಸ್ತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅವರು ಹೇಳುವಂತೆ, ಜನರು ಅಂತರ್ಜಲ ನೀರಿನ ಕಂಡುಹಿಡಿಯಲು ಆರಂಭಿಸಿದ ನಂತರ ಭೂಮಿಯ ಮೇಲಿನ ನೀರಿನ ಒರತೆ ಕಡಿಮೆಯಾಯಿತು. ನದಿಗಳು, ಹಳ್ಳಗಳು, ಬೇಸಿಗೆ ಕಾಲಕ್ಕೂ ಮುನ್ನವೇ ಬತ್ತಿ ಹೋಗಲು ಆರಂಭವಾಯಿತು. ಅಂತರ್ಜಲ ಎನ್ನುವುದು ಹೊಸತೇನಲ್ಲ. ಶತಮಾನಗಳ ಹಿಂದೆಯೇ ಇತ್ತು. ಆದರೆ ಮೇಲ್ಮೈ ನೀರಿನ ಹರಿವಿನ ಲಭ್ಯತೆ ಕಾರಣ ಅದನ್ನು ಜನ ಬಳಸಲಿಲ್ಲ. ಈಗ ಹವಾಮಾನ- ತಾಪಮಾನ ಹೆಚ್ಚಾದ ಕಾರಣ ಜನ ಅಂತರ್ಜಲ ಹುಡುಕಲು ಆರಂಭಿಸಿದ್ದಾರೆ.

ಎಲ್ಲೆಡೆಯೂ ಬೋರ್‌ವೆಲ್ ಕೊರೆಸುವ ಕಾರಣ ಅಂತರ್ಜಲ ಕೂಡಾ ಆಳಕ್ಕೆ ಇಳಿದಿದೆ. ದಶಕಗಳ ಹಿಂದೆಲ್ಲಾ ಅಬ್ಬಾ ಅಂದರೆ 500 ಅಡಿ ಆಳದಲ್ಲಿ ಬೇಕಾದಷ್ಟು ನೀರು ಸಿಗುತ್ತಿತ್ತು, ಈಗ ಸಾವಿರ ಅಡಿ ದಾಟಿದರೂ ನೀರು ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪರಿಸರ ನಾಶ. ಭೂಮಿ ಮೇಲೆ ಮರಗಳಿಂದ ಕೂಡಿದ ತಂಪಾದ ಪ್ರದೇಶಗಳು, ಒಂದು ಹರಿಯುವ ಹಳ್ಳ ಇದ್ದರೆ ಅಲ್ಲಿ ನೀರು ಮೇಲ್ಭಾಗದಲ್ಲಿ ಸಿಗುತ್ತದೆ. "ಎಲ್ಲರೂ ಕಾಡು ಕಡಿದು ಕಾಂಕ್ರೀಟ್ ಕಟ್ಟಡ ಕಟ್ಟಿದರೆ ಮಳೆ ನೀರು ಕೂಡ ನಿಲ್ಲೋಲ್ಲ, ಅಲ್ಲದೇ ಮಳೆ ಬರೋ ಸಾಧ್ಯತೆನೇ ಕಡಿಮೆ ಇರುತ್ತದೆ. ಮಳೆ ಬಾರದಿದ್ದರೆ ಭೂಮಿಯಲ್ಲಿ ನೀರು ಎಲ್ಲಿರುತ್ತದೆ?'' ಎಂದು ಪ್ರಶ್ನಿಸುತ್ತಾರೆ.

ಬೋರವೆಲ್‌ ಕೊರೆದು ಅಂತಜರ್ಜಲಕ್ಕೆ ಹಾನಿ

ತಾಪಮಾನ ಹೆಚ್ಚಳ

ಬಿಸಿಗಾಳಿಯ ಪ್ರಭಾವ, ಸೂರ್ಯನ ತಾಪಮಾನದ ಹೆಚ್ಚಳ ಎಂಬಿತ್ಯಾದಿ ಕಾರಣಗಳಿಂದ ಕರಾವಳಿಯ ಗ್ರಾಮೀಣ ಭಾಗದ ಜನತೆ ಮಳೆರಾಯನಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅತಿಯಾದ ಅಂತರ್ಜಲ ಬಳಕೆ ನೀರಿನ ಕೊರತೆಗೆ ಕಾರಣವಾಗಿದೆ ಎಂಬ ವಿಚಾರ ಒಂದೆಡೆಯಾದರೆ, ಪಟ್ಟಣ ಪಂಚಾಯತ್, ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಹೆಚ್ಚಾದ ಕಾರಣ ನೀರಿನ ಲಭ್ಯತೆ ಜನಜೀವನಕ್ಕೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ. ಬಂಟ್ವಾಳ ಪಂಚಾಯತ್ ವ್ಯಾಪ್ತಿಯಲ್ಲಿ ಹೊಟೇಲು, ರೆಸ್ಟುರಾಂಟ್‌ಗಳ ನೀರಿನ ಬಳಕೆಯ ಮೇಲೆ ಕಡಿವಾಣ ಹಾಕಲಾಗಿದ್ದರೆ, ಬೆಳ್ತಂಗಡಿ ತಾಲೂಕಿನಲ್ಲಿ ನೀರು ಪೋಲಾಗುತ್ತಿದೆ ಎಂಬ ದೂರಿನಡಿಯಲ್ಲಿ ಪಂಚಾಯತ್ ಅಧಿಕಾರಿಗಳು ಹೋಟೇಲುಗಳ ಮೇಲೆ ಮಿತಬಳಕೆಯ ಸೂಚನೆ ನೀಡಿದ್ದಾರೆ. ಪುತ್ತೂರು ತಾಲೂಕಿನಲ್ಲಿ ನೀರು ಲಭ್ಯತೆ ಕಡಿಮೆ ಇದೆಯೆಂದು ಹೊಟೇಲು ಮತ್ತು ಉದ್ದಿಮೆಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ತಿಳಿಸಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಪೋಲಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಜರುಗಿಸುವುದಾಗಿ ನೋಟಿಸ್ ನೀಡಿದ ಕಾರಣ ಹೊಟೇಲುಗಳ ಟಾಯ್ಲೆಟ್‌ಗಳಿಗೆ ಬೀಗ ಜಡಿದಿದ್ದಾರೆ.

ಆದರೆ ಕೃಷಿಕರು ತಮ್ಮ ಜಮೀನಿನಲ್ಲಿ ಅಂತರ್ಜಲ ಕೊರತೆ ಕಾರಣದಿಂದ ಹೊಸತಾಗಿ ಬೋರ್‌ವೆಲ್ ಕೊರೆಸಿ, ನೀರು ಸಿಗದೇ ಕಂಗಾಲಾಗಿದ್ದಾರೆ. ಕಳೆದ 5 ವರ್ಷಗಳ ಹಿಂದೆ 350-400 ಅಡಿಗೆ ಸಾಧಾರಣ ಎರಡು ಇಂಚು ನೀರಿನ ಒರತೆ ಸಿಗುತ್ತಿದ್ದಲ್ಲಿ ಇದೀಗ ಒಂದು ಸಾವಿರ ಅಡಿ ಆಳ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ ಎನ್ನುವ ಗೋಳು ಹುಯ್ದುಕೊಳ್ಳುತ್ತಿದ್ದಾರೆ. ಕರಾವಳಿ ಕರ್ನಾಟಕದ ಭಾಗದಲ್ಲಿ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ನದಿಗಳು ತುಂಬಾ ನೀರಿನೊಂದಿಗೆ ಹರಿಯುತ್ತಿದ್ದ ಕಾಲವಿದ್ದರೂ ಈ ಬಾರಿ ಕೇವಲ ಅಣೆಕಟ್ಟುಗಳು ಇರುವ ಭಾಗದಲ್ಲಿ ಮಾತ್ರ ನೀರು ಕಾಣಿಸುತ್ತಿದೆ.

ನೇತ್ರಾವತಿ ನದಿಯ ತಟದಲ್ಲಿಯೇ ಕೃಷಿ ಜಮೀನಿನೊಂದಿಗೆ ವಾಸವಾಗಿರುವ ಕೃಷ್ಣಪ್ಪ ಸಫಲ್ಯ ಹೇಳುವಂತೆ, ನೇತ್ರಾವತಿ ನದಿ ಮಳೆಗಾಲದಲ್ಲಿ ಮಾತ್ರ ತುಂಬಿ ತುಳುಕುತ್ತದೆ. ಮತ್ತೆ ಪಾಣೆಮಂಗಳೂರು ಅಣೆಕಟ್ಟೆಯಲ್ಲಿ ಅದರ ನೀರು ಕಾಣಿಸುತ್ತದೆ. ನದಿಗೆ 5 ಮೀಟರ್ ದೂರದಲ್ಲಿ ಬೋರ್‌ವೆಲ್ ಅಗೆಸಿದರೂ ನೀರು ಸಿಗುತ್ತಿಲ್ಲ. ಅಡಿಕೆ ಮತ್ತು ತೆಂಗು ಕೃಷಿ ನಂಬಿದವರಿಗೆ ಇದು ದೌರ್ಭಾಗ್ಯ ಸ್ಥಿತಿಯನ್ನು ಕಾಣಿಸುತ್ತಿದೆ. ಈ ಬಾರಿ ನೀರಿನ ಅಭಾವ ಜಾಸ್ತಿ ಇದೆ. ಹೀಗೆಯೇ ಮುಂದುವರೆದರೆ ಕೃಷಿಕರು ಕಂಗಾಲಾಗಿ, ಬೇರೆ ದಾರಿ ಹುಡುಕಬೇಕಾಗಬಹುದು, ಎನ್ನುತ್ತಾರೆ.

ಬೆಳ್ತಂಗಡಿಯ ನಿಡಿಗಲ್ ನಿವಾಸಿ ಜೋಸೆಫ್ ಕುಟ್ಟನ್, ನಮ್ಮ ಪಕ್ಕದ ನದಿಯಲ್ಲಿ ಬೇಸಿಗೆಯಲ್ಲಿ ತುಂಬಾ ನೀರು ಹರಿಯದಿದ್ದರೂ ಅಲ್ಲಲ್ಲಿ ನೀರಿನ ಒರತೆ ಇರುತ್ತಿತ್ತು. ಅದಕ್ಕೆ ನಾವು ಮೋಟಾರ್ ಪಂಪ್ ಬಳಸಿ ನೀರೆತ್ತುತ್ತಾ ಕೃಷಿ ಮಾಡುತ್ತಿದ್ದೆವು. ಈಗ ನದಿ ಬರಡಾಗಿದೆ. ಅದರಿಂದ ಅಕ್ರಮ ಮರಳುಗಾರಿಕೆ ಸುಗಮವಾಗಿ ನಡೆಯುತ್ತಿದೆ. ನೀರಿನ ಒರತೆ ಕಡಿಮೆಯಾಗಲು ಬೋರ್‌ವೆಲ್‌ಗಳೇ ಕಾರಣ ಎನ್ನುತ್ತಾರೆ.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮ ನಿವಾಸಿ ವಿಶ್ವನಾಥ ಕುಲಾಲ್ ಅವರ 350 ಅಡಿ ಆಳದ ಬೋರ್‌ವೆಲ್ ಕಳೆದ 12 ವರ್ಷಗಳಿಂದ ಅವರ 5 ಎಕ್ರೆ ಕೃಷಿಗೆ ಬೇಕಾದಷ್ಟು ನೀರು ಕೊಡುತ್ತಿತ್ತು. ಆದರೆ ಈ ಬಾರಿ ಆ ಬೋರ್‌ವೆಲ್‌ನಿಂದ ಒಂದು ಹನಿ ನೀರೂ ಬರುತ್ತಿಲ್ಲ. "ಸುತ್ತಮುತ್ತ ಹತ್ತಾರು ಮಂದಿ 500-1000 ಅಡಿವರೆಗೆ ಬೋರ್‌ವೆಲ್ ಕೊರೆಸಿದ್ದಾರೆ. ಹಾಗೆಯೇ ಕಾಡು ಕೂಡಾ ನಾಶವಾಗಿ ಭೂಮಿಯ ತಾಪಮಾನ ಹೆಚ್ಚಾಗಿದೆ'' ಎನ್ನುತ್ತಾರೆ.

ಸ್ಥಳೀಯ ತರಕಾರಿ ಕೂಡಾ ದುಬಾರಿ!

ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ತರಕಾರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ ನೀರಿನ ಕೊರತೆಯಿಂದಾಗಿ ತರಕಾರಿ ಬೆಲೆ ಕೂಡಾ ಗಗನಕ್ಕೇರಿದೆ. ಸ್ಥಳೀಯ ಬೆಂಡೆಕಾಯಿ ಬೆಲೆ ರೂ.150-200 ವರೆಗೆ ಏರಿದ್ದರೆ, ಅಲಸಂಡೆ ಬೆಲೆ ಕೇಜಿಗೆ ರೂ.100 ರಿಂದ ರೂ. 130ರ ವರೆಗೆ ಏರಿದೆ. ಹಾಗೆಯೇ ಎಲ್ಲಾ ಸ್ಥಳೀಯ ತರಕಾರಿಗಳ ಬೆಲೆ ಹೆಚ್ಚಾಗಿದೆ.

ಮಂಗಳೂರು ಸೆಂಟ್ರಲ್ ಮಾರ್ಕೆಟ್ ವ್ಯಾಪಾರಿ ಮುಸ್ತಫಾ ಹುಸೇನ್, " ಊರಿನ ತರಕಾರಿ ಬೆಲೆ ಕೇಳಬೇಡಿ. ಬೇಕಿದ್ದರೆ ಒಯ್ಯಿರಿ, ಒಳ್ಳೆ ಡಿಮಾಂಡ್ ಇದೆ. ಬೆಳಗ್ಗೆ 10ಗಂಟೆ ಒಳಗೆ ಖಾಲಿಯಾಗುತ್ತದೆ'' ಎನ್ನುತ್ತಾರೆ ಬೆಳಗ್ಗೆ ಏಳು ಗಂಟೆಯ ವೇಳೆಗೆ.

ಪುತ್ತೂರಿನ ಬೊಳ್ವಾರಿನ ವೆಜ್‌ಹೊಟೇಲೊಂದರ ಮೇನೇಜರ್, ಈ ಬಾರಿ ಯುದ್ಧದಿಂದಾಗಿ ಗ್ಯಾಸ್ ಕೊರತೆಯಾದರೂ ನಾವು ಮ್ಯಾನೇಜ್ ಮಾಡಿದ್ದೇವೆ, ಆದರೆ ಊರಿನ ತರಕಾರಿ ಬೆಲೆ ನಮಗೆ ಕಷ್ಟವಾಗಿದೆ. ಒಳ್ಳೆಯ ಬೆಲೆ ಕೊಟ್ಟರೂ ಒಳ್ಳೆಯ ತರಕಾರಿ ಸಿಗುತ್ತಿಲ್ಲ. ನಾವು ಊರಿನ ತರಕಾರಿ ಬಳಸುವ ಕಾರಣ ನಮ್ಮ ಖಾದ್ಯಗಳಿಗೆ ಒಳ್ಳೆಯ ಬೇಡಿಕೆ ಇತ್ತು. "ಇದಕ್ಕೆಲ್ಲಾ ಕಾರಣ ರೈತರಿಗೆ ನೀರಿನ ಕೊರತೆಯಾಗಿರುವುದು. ಇದಕ್ಕೆ ಹವಾಮಾನ ವೈಪರೀತ್ಯ ಕಾರಣ ಇರಬಹುದು'' ಎಂದರು.

Read More
Next Story