
ಒತ್ತಡಕ್ಕೆ ಸಿಲುಕಿರುವ ಟ್ರಂಪ್: ಇರಾನ್ ಯುದ್ಧ ಕೊನೆಗೊಳಿಸದೇ ಅನ್ಯ ಮಾರ್ಗವಿಲ್ಲ
ಒಂದು ಕಡೆ ಕದನ ವಿರಾಮ. ಇನ್ನೊಂದು ಕಡೆ ರಾಜತಾಂತ್ರಿಕ ಕಸರತ್ತು. ಅಷ್ಟರ ನಡುವೆಯೂ ಇಸ್ರೇಲ್-ಅಮೆರಿಕ- ಇರಾನ್ ಸಂಘರ್ಷಕ್ಕೆ ಇನ್ನೂ ತೆರೆಬಿದ್ದಿಲ್ಲ.
ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಈ ಸುದೀರ್ಘ ಕಾಲದ ಸಂಘರ್ಷವು ಕೇವಲ ಇರಾನಿನ ಪರಮಾಣು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದು ಈಗೇನು ಗುಟ್ಟಾಗಿ ಉಳಿದಿಲ್ಲ. ಇದು ಹೊರ್ಮುಜ್ ಜಲಸಂಧಿ ಮತ್ತು ಲೆಬನಾನ್ನಲ್ಲಿ ಇಸ್ರೇಲಿನ ಸೇನಾ ಕಾರ್ಯಾಚರಣೆಗಳಂತಹ ವಿಶಾಲ ಪ್ರಾದೇಶಿಕ ಬಿಕ್ಕಟ್ಟುಗಳ ಕಡೆಗೆ ಹೆಚ್ಚು ವಾಲುತ್ತಿರುವುದು ಸ್ಪಷ್ಟ ಎಂಬುದು ʼದಿ ಫೆಡರಲ್ʼ ಸಲಹಾ ಸಂಪಾದಕ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳ ತಜ್ಞರಾದ ಕೆ.ಎಸ್. ದಕ್ಷಿಣಾಮೂರ್ತಿ ಅವರ ಅಭಿಪ್ರಾಯ. ಎಲ್ಲರೂ ಶಾಂತಿಯ ಬಗ್ಗೆ ಮಾತನಾಡುತ್ತಿದ್ದರೂ ಅವರೆಲ್ಲರ ಮೂಲಭೂತ ಗುರಿಗಳು ಮಾತ್ರ ಭಿನ್ನ. ಹಾಗಾಗಿ ಮಾತುಕತೆಗಳು ದುರ್ಬಲವೂ ಸಂಕೀರ್ಣವೂ ಆಗಿವೆ ಎಂದು ಅವರು ಪ್ರತಿಪಾದಿಸುತ್ತಾರೆ.
ಫೆಡರಲ್ ನಡೆಸುತ್ತಿರುವ ʼವರ್ಡ್ಲಿ ವೈಸ್ʼ ಮಾತುಕತೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಅಮೆರಿಕ-ಇರಾನ್ ಒಪ್ಪಂದದ ಸಾಧ್ಯತೆಗಳು, ಶಾಂತಿ ಮಾತುಕತೆಗಳಲ್ಲಿ ಲೆಬನಾನ್ ಪಾತ್ರ, ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಹಾಗೂ ಸಂಘರ್ಷದ ವಿಚಾರದಲ್ಲಿ ಭಾರತದ ಎಚ್ಚರಿಕೆಯ ನಿಲುವಿನ ಬಗ್ಗೆ ಮಾತನಾಡಿದ್ದಾರೆ.
ಕೇವಲ ಕಾಲಹರಣದ ಕಸರತ್ತೇ?
ತನ್ನ ಸಾರ್ವಭೌಮತ್ವಕ್ಕೆ ಯಾವ ಕಾರಣಕ್ಕೂ ಧಕ್ಕೆ ಬರಬಾರದು, ಅಂತಹ ಶಾಂತಿ ಒಪ್ಪಂದಕ್ಕೆ ತಾನು ಬದ್ಧ ಎಂಬುದು ಇರಾನ್ ಸ್ಪಷ್ಟ ನಿಲುವಾಗಿದೆ. ಒತ್ತಡ ತಂತ್ರ ಬಳಸಿ ಯಾವುದೇ ಶಾಂತಿ ಒಪ್ಪಂದಕ್ಕೆ ಸಹಿಹಾಕಲು ಬಿಲ್ಕುಲ್ ಸಾಧ್ಯವಿಲ್ಲದ ಮಾತು ಎಂದು ಅದು ಕಡಕ್ಕಾಗಿ ತಿಳಿಸಿಬಿಟ್ಟಿದೆ.
ಇನ್ನು ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಕಾರ್ಯಕ್ರಮಗಳನ್ನು ಹೊಂದಿರಬಾರದು ಎಂಬುದು ಟ್ರಂಪ್ ಅವರ ಸ್ಪಷ್ಟ ನಿಲುವು. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಕರಿಸಿದ ಯುರೇನಿಯಂನ್ನು ಅಮೆರಿಕಕ್ಕೆ ಅಥವಾ ಇನ್ನಾರಿಗೇ ಆಗಲಿ ಹಸ್ತಾಂತರ ಮಾಡಬೇಕು ಮತ್ತು ಅದು ಇರಾನ್ನಲ್ಲಿ ಉಳಿಯಕೂಡದು ಎಂಬುದು ಅವರು ಮಾಡುತ್ತಿರುವ ತಾಕೀತು. ಇರಾನ್ ಶತಾಯಗತಾಯ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯಬೇಕು ಎಂಬುದು ಇದರ ಹಿಂದಿನ ಉದ್ದೇಶ.
ಇನ್ನು ಇಸ್ರೇಲ್, ಅದರಲ್ಲೂ ವಿಶೇಷವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಷಯಕ್ಕೆ ಬಂದರೆ, ಅವರ ಗುರಿ 'ಆಡಳಿತ ಬದಲಾವಣೆ'. ಇರಾನ್ನ ಇಸ್ಲಾಮಿಕ್ ವ್ಯವಸ್ಥೆಯ ಬದಲಾಗಿ, ಇಸ್ರೇಲ್ನೊಂದಿಗೆ ಕಡಿಮೆ ದ್ವೇಷ ಹೊಂದಿರುವ ಬೇರೆಯದೇ ರಾಜಕೀಯ ವ್ಯವಸ್ಥೆ ಅಲ್ಲಿ ಬರಬೇಕೆಂಬುದು ನೆತನ್ಯಾಹು ಬಯಕೆ.
ಮೂರೂ ರಾಷ್ಟ್ರಗಳ ನಡುವೆ ಮುಂದೆ ನಡೆಯುವ ಯಾವುದೇ ಒಪ್ಪಂದವು ಈ ಮೂರು ಭಿನ್ನ ಬೇಡಿಕೆಗಳ ಮೇಲೆ ತೀರ್ಮಾನವಾಗಬೇಕಿದೆ.
ಆರಂಭದಲ್ಲಿ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡಬೇಕೆಂದು ಟ್ರಂಪ್ ಒತ್ತಾಯ ಮಾಡಿದ್ದರು. ಆದಾಗ್ಯೂ, ಕಾಲ ಸರಿದಂತೆ ಅವರ ನಿಲುವು ಮೃದುವಾದಂತೆ ತೋರುತ್ತಿದೆ. ಇತ್ತೀಚೆಗೆ ಕದನ ವಿರಾಮವನ್ನು ಮತ್ತೆ 60 ದಿನಗಳ ಕಾಲ ವಿಸ್ತರಿಸಿರುವುದನ್ನು ಗಮನಿಸಿದರೆ, ಈಗ ಗಮನವು ಬದಲಾಗಿರುವುದು ಕಂಡುಬರುತ್ತದೆ. ಈಗ ಇರಾನ್, ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ಮತ್ತು ಯಾವುದೇ ನಿರ್ಬಂಧಕ್ಕೆ ಒಳಪಡದಂತೆ ಮಾಡಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಬಯಸುತ್ತಿದೆ.
ಬದಲಾಗುತ್ತಿರುವ ಅಮೆರಿಕದ ನಿಲುವು
ಇಲ್ಲಿ ಗುರಿಗಳು ಬದಲಾಗಿವೆ. ಅಮೆರಿಕ ಈಗ ಮುಖ್ಯವಾಗಿ ಇರಾನ್ನ ಪರಮಾಣು ಕಾರ್ಯಕ್ರಮವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವ ಯಾವುದೇ ಪ್ರಯತ್ನವನ್ನು ಇರಾನ್ ಕೈಬಿಡಬೇಕೆಂದು ಅದು ಬಯಸುತ್ತಿದೆ. ಇದಕ್ಕೆ ಪ್ರತಿಯಾಗಿ, ಅಮೆರಿಕ ಪರ್ಷಿಯನ್ ಕೊಲ್ಲಿಯಲ್ಲಿನ ತನ್ನ ದಿಗ್ಬಂಧನ ಕ್ರಮಗಳನ್ನು ಸಡಿಲಿಸುತ್ತದೆ. ಹೀಗೆ ಮಾತುಕತೆಗಳು ಮುಂದುವರಿದು, ಅಂತಿಮವಾಗಿ ಪರಮಾಣು ಸಮಸ್ಯೆಯನ್ನು ಬಗೆಹರಿಸಬಹುದು.
ಇದು ಇಸ್ರೇಲ್ ಬಯಸದ ವಿಷಯವಾಗಿದೆ. ಇಂತಹ ವ್ಯವಸ್ಥೆಯಿಂದ ಹೆಚ್ಚಿನ ಲಾಭವಿಲ್ಲ ಎಂದು ಅದು ಪರಿಗಣಿಸುವುದರಿಂದ, ಈ ದಿಕ್ಕಿನಲ್ಲಿ ಸಾಗುತ್ತಿರುವ ಬೆಳವಣಿಗೆಯ ಬಗ್ಗೆ ಅತೃಪ್ತಿ ಹೊಂದಿದೆ. ಆದರೆ, ಸದ್ಯಕ್ಕೆ ವಿಷಯಗಳು ಇದೇ ದಿಕ್ಕಿನಲ್ಲಿ ಸಾಗುತ್ತಿರುವಂತೆ ಕಂಡುಬರುತ್ತಿದೆ.
ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ಅವರ ನಡುವಿನ ಸಂಭಾಷಣೆಯಲ್ಲಿ ವ್ಯಕ್ತವಾಗಿರುವ ಕಠಿಣ ಭಾಷೆ ಮತ್ತು ಅಸಮಾಧಾನ ಈ ಸಂಘರ್ಷದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಅಮೆರಿಕದಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯ ದೃಷ್ಟಿಯಿಂದ, ಟ್ರಂಪ್ ಈ ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂಬ ಒತ್ತಡದಲ್ಲಿದ್ದಾರೆ. ಅವರ ಜನಪ್ರಿಯತೆ ಕುಸಿಯುತ್ತಿರುವುದು ಮತ್ತು ರಿಪಬ್ಲಿಕನ್ ಪಕ್ಷದ ಒಳಗೇ ಭಿನ್ನಾಭಿಪ್ರಾಯಗಳು ಮೂಡಿರುವುದು ಟ್ರಂಪ್ರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಡೊನಾಲ್ಡ್ ಟ್ರಂಪ್ ಅವರು ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸಲು ಬಯಸುತ್ತಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಗಳು ಶಾಂತಿ ಮಾತುಕತೆಗಳಿಗೆ ಅಡ್ಡಿಯಾಗುತ್ತಿರುವುದು ಟ್ರಂಪ್ಗೆ ಕಿರಿಕಿರಿ ಉಂಟುಮಾಡಿದೆ. ಅವರು ನೆತನ್ಯಾಹು ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಇರಾನ್ ಕುವೈತ್ನ ಮೇಲೆ ದಾಳಿ ನಡೆಸಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಹೊರ್ಮುಜ್ ಜಲಸಂಧಿಯ ಸುತ್ತ ನಡೆಯುತ್ತಿರುವ ಈ ಸಂಘರ್ಷವು ಅಂತಾರಾಷ್ಟ್ರೀಯ ಹಡಗು ಸಂಚಾರಕ್ಕೆ ಭೀತಿ ಹುಟ್ಟುಹಾಕಿದೆ. ಅಮೆರಿಕ ಇರಾನ್ ಮೇಲೆ ಡ್ರೋನ್ ದಾಳಿ ಬಳಸುತ್ತಿದೆಯೆಂದು ಆರೋಪಿಸಿದರೆ, ಇರಾನ್ ತನ್ನ ಕ್ರಮಗಳನ್ನು ಹೊರ್ಮುಜ್ ಜಲಸಂಧಿಯ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರತೀಕಾರ ಎಂದು ಸಮರ್ಥಿಸಿಕೊಳ್ಳುತ್ತಿದೆ.
ಹೊರ್ಮುಜ್ ಬಿಕ್ಕಟ್ಟು ಬಗೆಹರಿದರೆ ಸಾಕೆಂಬ ಸ್ಥಿತಿ
ಸದ್ಯಕ್ಕೆ ದೊಡ್ಡ ಮಟ್ಟದ ಗುರಿಗಳಿಗಿಂತ (ಪರಮಾಣು ಕಾರ್ಯಕ್ರಮ), ಹೊರ್ಮುಜ್ ಜಲಸಂಧಿಯ ಸುತ್ತಲಿನ ದಿಗ್ಬಂಧನ ಸ್ಥಿತಿಯನ್ನು ಕೊನೆಗೊಳಿಸುವುದೇ ಅಮೆರಿಕ ಮತ್ತು ಇರಾನ್ ಎರಡರ ತಕ್ಷಣದ ಆದ್ಯತೆಯಾಗಿದೆ. ಇದೇ ಕಾರಣಕ್ಕೆ ಪರಮಾಣು ವಿಷಯದಂತಹ ಮೂಲಭೂತ ಬೇಡಿಕೆಗಳು ಸದ್ಯಕ್ಕೆ ಹಿನ್ನೆಲೆಗೆ ಸರಿದಿವೆ.
ನೀವು ಲೆಬನಾನ್ನ ಪಾತ್ರವನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಹಿಜ್ಬುಲ್ಲಾವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಹಿಜ್ಬುಲ್ಲಾ ಲೆಬನಾನ್ನ ಒಂದು ಸ್ವತಂತ್ರ ರಾಜಕೀಯ ಪಕ್ಷವಾಗಿದ್ದು, ಅದು ಸಶಸ್ತ್ರ ಮಿಲಿಟರಿ ಪಡೆಯನ್ನು ಹೊಂದಿದೆ. ಜೊತೆಗೆ ಅದಕ್ಕೆ ಲೆಬನಾನ್ನ ಶಿಯಾ ಜನಸಂಖ್ಯೆಯ ಗಣನೀಯ ಬೆಂಬಲವಿದೆ.
ಇರಾನ್-ಅಮೆರಿಕ ಯುದ್ಧ ಪ್ರಾರಂಭವಾದಾಗ ನಡೆದ ಅತಿ ದೊಡ್ಡ ಬೆಳವಣಿಗೆಗಳಲ್ಲಿ ಒಂದೆಂದರೆ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಹಿಜ್ಬುಲ್ಲಾ ಇಸ್ರೇಲ್ ಮೇಲೆ ರಾಕೆಟ್ಗಳನ್ನು ಹಾರಿಸಿತು.
ಇಸ್ರೇಲ್ನ ಉತ್ತರ ಭಾಗವು ದಕ್ಷಿಣ ಲೆಬನಾನ್ನೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ದಕ್ಷಿಣ ಲೆಬನಾನ್ನಿಂದ ಹಿಜ್ಬುಲ್ಲಾ ಇಸ್ರೇಲ್ನತ್ತ ರಾಕೆಟ್ಗಳನ್ನು ಉಡಾಯಿಸಿತು. ಈ ರಾಕೆಟ್ಗಳು ಇಸ್ರೇಲ್ ಮಿಲಿಟರಿ ಸಾಮರ್ಥ್ಯದ ಮುಂದೆ ಬಹಳ ಸಣ್ಣ ಕಿಡಿಯಾಗಿದ್ದರೂ, ಇಸ್ರೇಲ್ ಈ ದಾಳಿಗಳನ್ನು ಗಂಭೀರವಾಗಿ ಪರಿಗಣಿಸಿತು ಮತ್ತು ಲೆಬನಾನ್ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಗುರಿಯಾಗಿಸಿ ಪ್ರತೀಕಾರ ತೀರಿಸಿಕೊಂಡಿತು.
ಹೀಗೆ ಲೆಬನಾನ್ ನೇರವಾಗಿ ಈ ಸಂಘರ್ಷದಲ್ಲಿ ಶಾಮೀಲಾಯಿತು. ಒಂದು ಹಂತದಲ್ಲಿ, ಇಸ್ರೇಲ್ ನೇರವಾಗಿ ಇರಾನ್ನ್ನು ಗುರಿಯಾಗಿ ಮಾಡುತ್ತಿದ್ದರೆ, ಅದೇ ಸಮಯದಲ್ಲಿ ಲೆಬನಾನ್ನಲ್ಲಿರುವ ಹಿಜ್ಬುಲ್ಲಾ ಮೇಲೂ ದಾಳಿ ಮಾಡಿತು.
ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಇತಿಹಾಸವು 1980ರ ದಶಕದ ಲೆಬನಾನ್ ಅಂತರ್ಯುದ್ಧದ ಕಾಲದಿಂದಲೂ ಇದೆ. 2000ನೇ ಇಸವಿಯಲ್ಲಿ ಯುದ್ಧವನ್ನು ಹಿಂತೆಗೆದುಕೊಳ್ಳುವ ಮುನ್ನ ಇಸ್ರೇಲ್ ಹಲವು ವರ್ಷಗಳ ಕಾಲ ದಕ್ಷಿಣ ಲೆಬನಾನ್ನ ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಅಂದಿನಿಂದ, 2006ರಲ್ಲಿ ನಡೆದ ಸಂಘರ್ಷ ಸೇರಿದಂತೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಲೇ ಇವೆ. ಆದರೆ, ಪ್ರಸ್ತುತ ನಡೆಯುತ್ತಿರುವ ಆಕ್ರಮಣವು ಇತ್ತೀಚಿನ ದಶಕಗಳಲ್ಲಿ ಇಸ್ರೇಲ್ ಲೆಬನಾನ್ನಲ್ಲಿ ಕೈಗೊಂಡ ಅತ್ಯಂತ ಮಹತ್ವದ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ಇಸ್ರೇಲ್ ಒತ್ತಡ ತಂತ್ರಕ್ಕೆ ಮಣಿಯದ ಹಿಜ್ಬುಲ್ಲಾ
ಜೂನ್ 2026ರ ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮದ ಮಾತುಕತೆಗಳು ನಡೆಯುತ್ತಿವೆಯಾದರೂ, ಹಿಜ್ಬುಲ್ಲಾ ಈ ಕದನ ವಿರಾಮವನ್ನು ಒಪ್ಪಲು ನಿರಾಕರಿಸಿದೆ. ದಕ್ಷಿಣ ಲೆಬನಾನ್ನಿಂದ ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವುದು ಮತ್ತು ಅಲ್ಲಿಂದ ಅವರನ್ನು ಹೊರಹಾಕುವುದು ಈ ಶಾಂತಿ ಮಾತುಕತೆಯ ಪ್ರಮುಖ ಷರತ್ತುಗಳಲ್ಲಿ ಒಂದಾಗಿದೆ. ಆದರೆ, ಹಿಜ್ಬುಲ್ಲಾ ತನ್ನ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಲೆಬನಾನ್ನ ಪರಿಸ್ಥಿತಿಯು ಈಗ ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ಇನ್ನಷ್ಟು ಸಂಕೀರ್ಣವಾಗಿ ಮಾಡಿದೆ. ಇದರ ಹಿಂದಿನ ಪ್ರಮುಖ ಕಾರಣಗಳನ್ನು ಹೀಗೆ ವಿಶ್ಲೇಷಿಸಬಹುದು:
ಹಿಜ್ಬುಲ್ಲಾ ಇರಾನ್ನ ಪ್ರಮುಖ ಪ್ರಾದೇಶಿಕ ಬೆಂಬಲಿಗ ಮತ್ತು ಪಾಲುದಾರ. ಹೀಗಾಗಿ, ಇರಾನ್ ತನ್ನ ಈ ನಿಕಟ ಮಿತ್ರನನ್ನು ಕೈಬಿಟ್ಟು ಯಾವುದೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಿಲ್ಲ. ಶಾಂತಿ ಮಾತುಕತೆಯಲ್ಲಿ ಇರಾನ್ ತನ್ನ ಈ ನಿಲುವನ್ನು ಸ್ಪಷ್ಟಪಡಿಸಿದೆ.
ಇಸ್ರೇಲ್ ಸರ್ಕಾರವು, ಅದರಲ್ಲೂ ಪ್ರಧಾನಿ ನೆತನ್ಯಾಹು ಇರಾನ್ನಲ್ಲಿ 'ಆಡಳಿತ ಬದಲಾವಣೆ' ಆಗಬೇಕೆಂಬ ಗುರಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮದೇ ಬಲಪಂಥೀಯ ಸಮ್ಮಿಶ್ರ ಸರ್ಕಾರದ ಆಂತರಿಕ ಒತ್ತಡಕ್ಕೆ ಅವರು ಸಿಲುಕಿದ್ದಾರೆ. ಇದು ರಾಜತಾಂತ್ರಿಕ ಮಾತುಕತೆಗಳಲ್ಲಿ ಕಠಿಣ ನಿಲುವು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸುತ್ತಿದೆ.
ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮ ಒಪ್ಪಂದವನ್ನು ಹಿಜ್ಬುಲ್ಲಾ ತಿರಸ್ಕರಿಸಿದೆ. ಇಸ್ರೇಲ್ ಲಿಟಾನಿ ನದಿಯ ದಕ್ಷಿಣ ಭಾಗದವರೆಗೂ ತನ್ನ ಮಿಲಿಟರಿ ಆಕ್ರಮಣವನ್ನು ಮುಂದುವರಿಸಿದೆ ಮತ್ತು ಅಲ್ಲಿಂದ ಹಿಜ್ಬುಲ್ಲಾವನ್ನು ಸಂಪೂರ್ಣವಾಗಿ ಹೊರಹಾಕುವವರೆಗೂ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದೆ. ಇತ್ತ ಹಿಜ್ಬುಲ್ಲಾ ಸಮಗ್ರ ಕದನ ವಿರಾಮ ಮತ್ತು ತನ್ನ ನೆಲೆಯಿಂದ ಇಸ್ರೇಲ್ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಪ್ರಯತ್ನಗಳಲ್ಲಿ, ಇರಾನ್-ಅಮೆರಿಕದ ನಡುವಿನ ಪರಮಾಣು ಮತ್ತು ಹೊರ್ಮುಜ್ ಜಲಸಂಧಿಯ ವಿಷಯಗಳ ಜೊತೆಗೆ ಲೆಬನಾನ್ನ ಯುದ್ಧವೂ ಸೇರಿಕೊಂಡಿರುವುದರಿಂದ, ಒಪ್ಪಂದಕ್ಕೆ ಬರುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಶಾಂತಿಯ ಕಡೆಗೆ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದ್ದರೂ, ಲೆಬನಾನ್ನಲ್ಲಿನ ಮಿಲಿಟರಿ ಸಂಘರ್ಷವು ಮಾತುಕತೆಯ ದಿಕ್ಕನ್ನೇ ಬದಲಾಯಿಸುತ್ತಿದೆ.
ಹಾಗಾದರೆ ಈಗ ಜಗತ್ತು ಯಾವುದರ ಬಗ್ಗೆ ಅತ್ಯಂತ ನಿಕಟವಾಗಿ ಗಮನ ಹರಿಸಬೇಕು?
ಗಮನಿಸಬೇಕಾದ ಅತ್ಯಂತ ಪ್ರಮುಖ ವಿಷಯವೆಂದರೆ ಮಾತುಕತೆಗಳು.
ಈ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ, ಟ್ರಂಪ್ ಅವರ ಮೇಲೆ ಕಾಂಗ್ರೆಸ್ನಿಂದ ಬರುತ್ತಿರುವ ಒತ್ತಡ, ಮತ್ತು ಪಾಕಿಸ್ತಾನ, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ ಹಾಗೂ ಈಗ ಕತಾರ್ ಒಳಗೊಂಡಿರುವ ಮಧ್ಯಸ್ಥಿಕೆ ಪ್ರಯತ್ನಗಳು - ಈ ಮೂರು ಪ್ರಮುಖ ಬೆಳವಣಿಗೆಗಳನ್ನು ಗಮನಿಸಿದರೆ, ಮಧ್ಯಸ್ಥಿಕೆ ಪ್ರಕ್ರಿಯೆ ಮಾತ್ರ ನಡೆಯುತ್ತಿದೆ ಎಂಬುದು ಗಮನಾರ್ಹ.
ಈಗ ಅಮೆರಿಕದ ಕಾಂಗ್ರೆಸ್ನ್ನೇ ತೆಗೆದುಕೊಳ್ಳಿ. ಇರಾನ್ ವಿರುದ್ಧ ಯುದ್ಧ ಮುಂದುವರಿಸುವ ಟ್ರಂಪ್ ಅವರ ಸಾಮರ್ಥ್ಯವನ್ನು ಮಿತಗೊಳಿಸುವ ನಿರ್ಣಯಗಳ ಪರವಾಗಿ ಕೆಲವು ರಿಪಬ್ಲಿಕನ್ನರು ಡೆಮೋಕ್ರಾಟ್ಗಳ ಜೊತೆ ಸೇರಿ ಮತ ಚಲಾಯಿಸಿದ್ದಾರೆ.
ಟ್ರಂಪ್ ಅವರು ಕಾನೂನುಬದ್ಧವಾಗಿ ಆ ಮತಗಳಿಗೆ ಬದ್ಧರಾಗಿಲ್ಲದಿದ್ದರೂ, ಅವು ಅಮೆರಿಕದ ಒಳಗಿನ ಸಾರ್ವಜನಿಕ ಭಾವನೆ ಮತ್ತು ರಾಜಕೀಯ ಒತ್ತಡದ ಸ್ಪಷ್ಟ ಸೂಚನೆಯನ್ನು ನೀಡುತ್ತವೆ.
ಕೊಲ್ಲಿ ರಾಷ್ಟ್ರಗಳಲ್ಲಿ, ಯುದ್ಧದ ಬಗ್ಗೆ ತೀವ್ರ ಅಸಮಾಧಾನ ಉಂಟಾಗಿದೆ. ಅವರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ ಮತ್ತು ಈ ಸಂಘರ್ಷದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರಿಂದ ಚೇತರಿಸಿಕೊಳ್ಳಲು ಹಲವು ವರ್ಷಗಲೇ ಬೇಕಾಗುತ್ತವೆ.
ಜಗತ್ತಿನ ಅತ್ಯಂತ ಸ್ಥಿರ ಪ್ರದೇಶಗಳಲ್ಲಿ ಒಂದಾದ ಕೊಲ್ಲಿಯ ಖ್ಯಾತಿಗೂ ಪೆಟ್ಟು ಬಿದ್ದಿದೆ. ಅಲ್ಲಿ ಭಾರತೀಯರು ಸೇರಿದಂತೆ ಲಕ್ಷಾಂತರ ವಲಸಿಗರು ಕೆಲಸ ಮಾಡುತ್ತಿದ್ದಾರೆ. ಈ ವಲಯದಲ್ಲಿ ಸ್ಥಿರತೆ ನೆಲೆಸಿದರೆ ಗಲ್ಫ್ ದೇಶಗಳಿಗೆ ಮತ್ತು ಆ ಪ್ರದೇಶವನ್ನು ಅವಲಂಬಿಸಿರುವ ಜನರಿಗೂ ಪ್ರಯೋಜನಕಾರಿ.
ಇದರ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳು ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಪ್ಪಿಸಲು ಅಮೆರಿಕ ಮತ್ತು ಇರಾನ್ ಎರಡಕ್ಕೂ ಒತ್ತಡ ಹೇರುತ್ತಿವೆ.
ಈ ಎಲ್ಲಾ ಬೆಳವಣಿಗೆಗಳು ಅತ್ಯಂತ ಮುಖ್ಯವಾಗಿವೆ, ಆದರೆ ಮಾತುಕತೆಯ ಪ್ರಕ್ರಿಯೆಯೇ ಪ್ರಮುಖ ಅಂಶ. ಶಾಂತಿಗೆ ಯಾವುದೇ ಅವಕಾಶವಿದ್ದರೆ, ಅದು ಮಾತುಕತೆಗಳ ಮೂಲಕವೇ ಹೊರಹೊಮ್ಮಬೇಕು.
ಅಮೆರಿಕ ಮತ್ತು ಇರಾನ್ ಜೊತೆಗೆ ಭಾರತ ತನ್ನ ಸಂಬಂಧ ಕಾಯ್ದುಕೊಳ್ಳಲು ಹೇಗೆ ಕಸರತ್ತು ನಡೆಸುತ್ತಿದೆ?
ಭಾರತದ ವಿಷಯಕ್ಕೆ ಬಂದರೆ, ಅದು ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ನೇರವಾಗಿ ಭಾಗವಹಿಸುವುದರಿಂದ ಬಹುತೇಕ ಹಿಂದೆ ಸರಿದಿದೆ.
ಈ ಮೂರು ದೇಶಗಳ ಜೊತೆಗೆ ಭಾರತಕ್ಕಿರುವ ಸಂಬಂಧ ಅತ್ಯಂತ ಗಟ್ಟಿಯಾದುದು. ಭಾರತವು ಅಮೆರಿಕದೊಂದಿಗೆ ನಿಕಟವಾಗಿದೆ, ಇರಾನ್ನೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ ಮತ್ತು ಇಸ್ರೇಲ್ನೊಂದಿಗೆ ಹೊಸ ಕಾರ್ಯತಂತ್ರದ ಒಡಂಬಡಿಕೆಯನ್ನು ಅಭಿವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಈ ರೀತಿಯ ಪರಸ್ಪರ ಸಂಬಂಧಗಳ ಕಾರಣದಿಂದ, ಭಾರತವು ಆಗಾಗ್ಗೆ ಎಚ್ಚರಿಕೆಯ ನಿಲುವಿನ ಮೊರೆ ಹೋಗುತ್ತದೆ. ವಿಶ್ವಸಂಸ್ಥೆಯ ಮಹಾಸಭೆಯಾಗಲಿ ಅಥವಾ ಇತರ ಅಂತರರಾಷ್ಟ್ರೀಯ ವೇದಿಕೆಗಳಾಗಲಿ, ಭಾರತವು ಸಾಮಾನ್ಯವಾಗಿ ಪಕ್ಷಪಾತದ ನಿಲುವನ್ನು ತೆಗೆದುಕೊಳ್ಳುವ ಬದಲು ಶಾಂತಿ ಮತ್ತು ಮಾತುಕತೆಗಳಿಗೆ ಕರೆ ನೀಡುತ್ತದೆ.
ಭಾರತವು ಈ ಸಂಘರ್ಷದಲ್ಲಿ ಸಕ್ರಿಯ ಪಾತ್ರ ವಹಿಸಲು ಪ್ರಯತ್ನಿಸಿಲ್ಲ. ನನ್ನ ದೃಷ್ಟಿಯಲ್ಲಿ, ಇದು ಕೈತಪ್ಪಿದ ಅವಕಾಶವಾಗಿದೆ, ಯಾಕೆಂದರೆ ಎಲ್ಲಾ ರಾಷ್ಟ್ರಗಳ ಜೊತೆ ಇರುವ ಉತ್ತಮ ಸಂಬಂಧದಿಂದಾಗಿ ಭಾರತವನ್ನು ವಿಶ್ವಾಸಾರ್ಹ ಮಧ್ಯಸ್ಥಿಕೆದಾರನನ್ನಾಗಿ ಮಾಡಬಹುದಿತ್ತು.
ಹಾಗಿದ್ದೂ ನರೇಂದ್ರ ಮೋದಿ ಸರ್ಕಾರವು ಅಂತಹ ಪಾತ್ರವನ್ನು ವಹಿಸಲು ಅಷ್ಟೇನೂ ಆಸಕ್ತಿ ಹೊಂದಿರುವಂತೆ ತೋರುತ್ತಿಲ್ಲ.
ಸದ್ಯಕ್ಕೆ, ಭಾರತವು ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ.
ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ ಭಾರತವು ಚೀನಾ ರೀತಿಯಲ್ಲಿ ದೊಡ್ಡ ಶಕ್ತಿಯಲ್ಲ, ಆದ್ದರಿಂದ ಯುದ್ಧದ ಫಲಿತಾಂಶದ ಮೇಲೆ ಅದರ ನೇರ ಪ್ರಭಾವ ಸೀಮಿತವಾಗಿರುವ ಸಾಧ್ಯತೆ ಇರುತ್ತದೆ.
ಭಾರತಕ್ಕೆ ಮುಖ್ಯವಾಗಿರುವುದು ಏನೆಂದರೆ, ಸಂಘರ್ಷವು ಕೊನೆಗೊಂಡಾಗ ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು. ಇಂದು ಕೈಗೊಳ್ಳುವ ಯಾವುದೇ ಕ್ರಮವು ಭವಿಷ್ಯದಲ್ಲಿ ಭಾರತಕ್ಕೆ ವಿರುದ್ಧವಾಗಿ ಪರಿಣಮಿಸಬಾರದು ಎಂದು ಸರ್ಕಾರ ಬಯಸುತ್ತದೆ.
ಇದು ದಶಕಗಳಿಂದ ಭಾರತದ ವಿದೇಶಾಂಗ ನೀತಿಯಲ್ಲಿ ಕಂಡುಬರುವ ಎಚ್ಚರಿಕೆಯ ನಡೆಯ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಪಾಕಿಸ್ತಾನದೊಂದಿಗೆ ಇರುವ ಸಂಬಂಧವನ್ನು ಹೊರತುಪಡಿಸಿ, ಭಾರತವು ಸಾಮಾನ್ಯವಾಗಿ ಎಲ್ಲಾ ಕಡೆಯವರೊಂದಿಗೆ ಸ್ನೇಹಯುತ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಆಕ್ರಮಣಕಾರಿ ನಿಲುವನ್ನು ತಪ್ಪಿಸಲು ಆದ್ಯತೆ ನೀಡಿದೆ.
ಆ ಎಚ್ಚರಿಕೆಯ ಧೋರಣೆಯು ಈಗಿನ ಸಂಘರ್ಷದಲ್ಲೂ ನಿಚ್ಚಳವಾಗಿ ಕಂಡುಬರುತ್ತದೆ.

