ಬ್ಯಾಂಕಾಕ್ ಟು ಬೆಂಗಳೂರು: ಸಿಲಿಕಾನ್ ಸಿಟಿಗೆ ಹರಿಯುತ್ತಿದೆ ಹೈಡ್ರೋ ಗಾಂಜಾ ಮಾಫಿಯಾ
x

ಬ್ಯಾಂಕಾಕ್ ಟು ಬೆಂಗಳೂರು: ಸಿಲಿಕಾನ್ ಸಿಟಿಗೆ ಹರಿಯುತ್ತಿದೆ ಹೈಡ್ರೋ ಗಾಂಜಾ ಮಾಫಿಯಾ

ಉಚಿತ ಪ್ರವಾಸದ ಆಮಿಷವೊಡ್ಡಿ ಸಾಮಾನ್ಯ ಜನರನ್ನು ಡ್ರಗ್ ಪೆಡ್ಲರ್‌ಗಳಾಗುತ್ತಿದ್ದು, ಕಳೆದ 2 ತಿಂಗಳಲ್ಲಿ 120 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.


ಮೋಜುಗಾರರ ಪಾಲಿಗೆ ‘ಸ್ವರ್ಗ’ ಎಂದೇ ಕರೆಯಲ್ಪಡುವ ಥೈಲ್ಯಾಂಡ್‌ ಇಂದು ಕರ್ನಾಟಕದ ಪಾಲಿಗೆ ಮಾದಕ ದ್ರವ್ಯಗಳ ‘ನರಕದ ಬಾಗಿಲಾಗಿ’ ಮಾರ್ಪಟ್ಟಿದೆ. ರಾಜ್ಯಕ್ಕೆ ಹರಿದು ಬರುತ್ತಿರುವ ‘ಹೈಡ್ರೋ ಗಾಂಜಾ’ ಎಂಬ ವಿಷಕಾರಿ ಮಾದಕ ವಸ್ತುವಿನ ಹಿಂದೆ ಬ್ಯಾಂಕಾಕ್ ನಗರ ಕೈವಾಡವಿರುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೇವಲ ಎರಡು ತಿಂಗಳಲ್ಲಿ 1 ಟನ್‌ಗಿಂತ ಹೆಚ್ಚು 120 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿರುವುದು ಕೇಳಿಬರುತ್ತಿರುವ ಆರೋಪಗಳಿಗೆ ಪುಷ್ಠಿ ನೀಡಿದೆ.

ಬೇರೆ ಬೇರೆ ದೇಶಗಳಿಂದ ಕಳ್ಳತನವಾಗಿ ತಂದ ಕೋಟ್ಯಂತರ ರೂ.ಮೌಲ್ಯದ ಡ್ರಗ್ಸ್‌ ವಸ್ತುಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ಇದರಲ್ಲಿ ಹೆಚ್ಚಾಗಿ ಬ್ಯಾಂಕಾಕ್‌ನಿಂದಲೇ ಎಂಬುದು ಗಮನಾರ್ಹವಾಗಿದೆ. ಕಳೆದ ಎರಡು ತಿಂಗಳಲ್ಲಿ ೧೨೦ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಡ್ರಗ್ಸ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ೩೦ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಿ, 1.10 ಟನ್‌ಗಿಂತ ಹೆಚ್ಚಿನ ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಾಮಾನ್ಯವಾಗಿ ಬೆಳೆಯುವ ಗಾಂಜಾಕ್ಕಿಂತ ‘ಹೈಡ್ರೋ ಗಾಂಜಾ’ ವಿಭಿನ್ನ ಹಾಗೂ ಅತ್ಯಂತ ಪ್ರಬಲವಾಗಿರುತ್ತದೆ. ಇದನ್ನು ಮಣ್ಣಿನಲ್ಲಿ ಬೆಳೆಯುವ ಬದಲು, ಸಂಪೂರ್ಣವಾಗಿ ನೀರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೆಳೆಯಲಾಗುತ್ತದೆ. ಇದರಲ್ಲಿ ಟಿಎಚ್‌ಸಿ (ಟೆಟ್ರಾ ಹೈಡ್ರೊಕಾನ್ನಬಿನಾಲ್) ಅಂಶ ಅತ್ಯಂತ ಹೆಚ್ಚಿರುತ್ತದೆ. ಇದು ಸೇವಿಸಿದವರ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರಾಜ್ಯದ ಮಾರುಕಟ್ಟೆಯಲ್ಲಿ ಒಂದು ಕೆಜಿ ಹೈಡ್ರೋ ಗಾಂಜಾಗೆ ಬರೋಬ್ಬರಿ 1 ಕೋಟಿ ರೂಪಾಯಿ ಬೆಲೆ ಇದೆ. ಈ ಬೃಹತ್ ಮೊತ್ತವೇ ಪೆಡ್ಲರ್‌ಗಳನ್ನು ಈ ಅಪಾಯಕಾರಿ ದಂಧೆಗೆ ಇಳಿಯುವಂತೆ ಮಾಡುತ್ತಿದೆ. ಒಂದು ಸಣ್ಣ ಬ್ಯಾಗ್‌ನಲ್ಲಿ ಒಂದು ಕೆಜಿ ಸಾಗಿಸಿದರೂ ಆತ ರಾತ್ರೋರಾತ್ರಿ ಕೋಟ್ಯಧಿಪತಿಯಾಗಬಹುದು ಎಂಬ ಆಸೆ ಈ ಕೃತ್ಯಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಹೇಳಲಾಗಿದೆ.

ಆಫ್ರಿಕಾದಿಂದ ಥೈಲ್ಯಾಂಡ್‌ಗೆ ವರ್ಗಾವಣೆ

ಈ ಹಿಂದೆ ಭಾರತಕ್ಕೆ ಬರುತ್ತಿದ್ದ ಡ್ರಗ್ಸ್ ಮೂಲ ಬೇರೆಯೇ ಇತ್ತು. ಮೊದಲು ಆಫ್ರಿಕನ್ ದೇಶಗಳಿಂದ ಎಂಡಿಎಂಎ, ಕೊಕೇನ್ ಮತ್ತು ಸಿಂಥೆಟಿಕ್ ಡ್ರಗ್ಸ್ ಬರುತ್ತಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಮ್ಯಾನ್ಮಾರ್‌ನಂತಹ ಗೋಲ್ಡನ್ ಕ್ರೆಸೆಂಟ್ ಮತ್ತು ಗೋಲ್ಡನ್ ಟ್ರಯಾಂಗಲ್ ಪ್ರದೇಶಗಳಿಂದ ಅಫೀಮು ಮತ್ತು ಚರಸ್ ಸರಬರಾಜಾಗುತ್ತಿತ್ತು.

ಈಗ ಈ ಸ್ಥಾನವನ್ನು ಥೈಲ್ಯಾಂಡ್ ಅಲಂಕರಿಸಿದೆ. ಥೈಲ್ಯಾಂಡ್‌ನಲ್ಲಿ ಗಾಂಜಾ ಕೃಷಿ ಮತ್ತು ಸೇವನೆಯನ್ನು ಕಾನೂನುಬದ್ಧಗೊಳಿಸಿದ ನಂತರ, ಅಲ್ಲಿಂದ ಹೈಡ್ರೋ ಗಾಂಜಾವನ್ನು ರಫ್ತು ಮಾಡುವುದು ದಂಧೆಕೋರರಿಗೆ ಸುಲಭವಾಗಿದೆ. ಮಲೇಷಿಯಾ ಕೂಡ ಈ ಕಳ್ಳಸಾಗಾಣಿಕೆಗೆ ಈಗ ಸೇತುವೆಯಾಗಿ ಬಳಕೆಯಾಗುತ್ತಿದೆ. 2022ರಲ್ಲಿ ಥೈಲ್ಯಾಂಡ್ ಸರ್ಕಾರವು ಗಾಂಜಾ ಬಳಕೆಯನ್ನು ಮತ್ತು ಬೆಳೆಯುವುದನ್ನು ಕಾನೂನುಬದ್ಧಗೊಳಿಸಿತು. ಅಂದಿನಿಂದ ಆಗ್ನೇಯ ಏಷ್ಯಾದಲ್ಲಿ ಥೈಲ್ಯಾಂಡ್ ಮಾದಕವಸ್ತುಗಳ ಹಬ್ ಆಗಿ ಮಾರ್ಪಟ್ಟಿದೆ. ಅಲ್ಲಿ ಅತ್ಯಂತ ಸುಧಾರಿತ ತಂತ್ರಜ್ಞಾನ ಬಳಸಿ ಬೆಳೆಯಲಾಗುವ 'ಹೈಡ್ರೋಪೋನಿಕ್ ಗಾಂಜಾ'ಗೆ ಭಾರತದ ಮೆಟ್ರೋ ನಗರಗಳಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಭಾರಿ ಬೇಡಿಕೆಯಿದೆ. ಸಾಮಾನ್ಯ ಗಾಂಜಾಕ್ಕಿಂತ ಇದು ಹೆಚ್ಚು ಅಮಲೇರಿಸುವ ಗುಣ ಹೊಂದಿರುವುದರಿಂದ ಇದರ ಬೆಲೆ ಕೋಟಿಗಳಲ್ಲಿದೆ ಎನ್ನಲಾಗಿದೆ.

ಉಚಿತ ಪ್ರವಾಸದ ಆಮಿಷದಲ್ಲಿ ಡ್ರಗ್ಸ್‌ ದಂಧೆ

ಡ್ರಗ್ಸ್ ಮಾಫಿಯಾ ಸಾಮಾನ್ಯ ಜನರನ್ನು ಹೇಗೆ ತನ್ನ ಗಾಳಕ್ಕೆ ಹಾಕಿಕೊಳ್ಳುತ್ತಿದೆ ಎಂಬುದು ಅತ್ಯಂತ ರೋಚಕಕಾರಿ ಸಂಗತಿ. ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಂತೆ, ಮಾಫಿಯಾವು ಸಾಮಾನ್ಯ ದಂಪತಿಗಳನ್ನು ಅಥವಾ ಮಧ್ಯಮ ವರ್ಗದ ಜನರನ್ನು ಗುರುತಿಸುತ್ತದೆ. ಅವರಿಗೆ ಥೈಲ್ಯಾಂಡ್ ಉಚಿತ ಪ್ರವಾಸದ ಆಸೆಯನ್ನು ತೋರಿಸಲಾಗುತ್ತದೆ. ಹೋಟೆಲ್ ಬುಕ್ಕಿಂಗ್‌ನಿಂದ ಹಿಡಿದು ವಿಮಾನದ ಟಿಕೆಟ್‌ವರೆಗೂ ಎಲ್ಲವನ್ನೂ ಮಾಫಿಯಾವೇ ಭರಿಸುತ್ತದೆ. ಪ್ರವಾಸ ಮುಗಿಸಿ ಹಿಂದಿರುಗುವಾಗ, ಅವರಿಗೆ ಕೆಲವು ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಇದರಲ್ಲಿ ಕೆಲವು ಗಿಫ್ಟ್ ಐಟಂಗಳು ಮತ್ತು ಬಟ್ಟೆಗಳಿವೆ. ಇದನ್ನು ಬೆಂಗಳೂರಿನಲ್ಲಿರುವ ನಮ್ಮ ಸಂಬಂಧಿಕರಿಗೆ ನೀಡಿ ಎಂದು ಹೇಳಿ ಅವರ ಮೂಲಕ ಕಿಲೋ ಗಟ್ಟಲೆ ಹೈಡ್ರೋ ಗಾಂಜಾವನ್ನು ಸಾಗಿಸಲಾಗುತ್ತದೆ. ಅಮಾಯಕ ಪ್ರವಾಸಿಗರು ತಮಗೆ ತಿಳಿಯದಂತೆಯೇ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸ್ಮಗ್ಲರ್‌ಗಳಾಗಿ ಬದಲಾಗುತ್ತಿದ್ದಾರೆ. ಮತ್ತೊಂದೆಡೆ, ಸ್ಮಗ್ಲಿಂಗ್‌ನಲ್ಲಿ ತೊಡಗಿರುವವರಿಗೂ ಇದೇ ರೀತಿಯಲ್ಲಿ ಕಳುಹಿಸಲಾಗುತ್ತದೆ. ಹಣದಾಸೆಗೆ ಪ್ರವಾಸಿಗರ ಸೋಗಿನಲ್ಲಿ ಪ್ರಯಾಣಿಸಿ ಡ್ರಗ್ಸ್‌ ತರಲಾಗುತ್ತದೆ. ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್‌ ಅಧಿಕಾರಿಗಳಿಗೆ ಇದೇ ಮಾಫಿಯಾ ಮೂಲಗಳಿಂದ ಮಾಹಿತಿ ಲಭ್ಯವಾಗುತ್ತದೆ. ಹೀಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಸುಲಭವಾಗುತ್ತದೆ. ಕೆಲವು ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಓಡಾಡುವವರನ್ನು ವಿಚಾರಣೆಗೊಳಪಡಿಸಿದಾಗ ಪೆಡ್ಲರ್‌ಗಳು ಪತ್ತೆಯಾಗಿರುವ ಉದಾಹರಣೆಗಳಿವೆ ಎಂದು ಕಸ್ಟಮ್ಸ್‌ ಮೂಲಗಳು ಹೇಳಿವೆ.

ಬಿಟ್ ಕಾಯಿನ್, ಡಾರ್ಕ್ ವೆಬ್ ವ್ಯವಹಾರ

ಈ ಅಂತಾರಾಷ್ಟ್ರೀಯ ದಂಧೆ ಕೇವಲ ಮುಖಾಮುಖಿ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಮಾದಕ ದ್ರವ್ಯಗಳ ಖರೀದಿ ಮತ್ತು ಮಾರಾಟಕ್ಕೆ ‘ಡಾರ್ಕ್ ವೆಬ್’ ಬಳಸಲಾಗುತ್ತಿದೆ. ಇಲ್ಲಿ ಹಣದ ವರ್ಗಾವಣೆ ಬ್ಯಾಂಕ್ ಖಾತೆಗಳ ಮೂಲಕ ನಡೆಯದೆ, ಕ್ರಿಪ್ಟೋ ಕರೆನ್ಸಿ ಅಥವಾ ಬಿಟ್ ಕಾಯಿನ್ ಮೂಲಕ ನಡೆಯುತ್ತಿದೆ. ಇದರಿಂದ ಹಣ ಎಲ್ಲಿಂದ ಎಲ್ಲಿಗೆ ಹರಿಯುತ್ತಿದೆ ಎಂಬುದನ್ನು ಪತ್ತೆಹಚ್ಚುವುದು ಪೊಲೀಸರಿಗೆ ಕಷ್ಟವಾಗಿದೆ. ಥೈಲ್ಯಾಂಡ್‌ನಲ್ಲಿ ಪ್ರವಾಸಿಗರನ್ನು ಸೆಳೆಯಲು ಡ್ರಗ್ಸ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಬ್ಯಾಂಕಾಕ್ ಮತ್ತು ಫುಕೆಟ್ ವಿಮಾನ ನಿಲ್ದಾಣಗಳಲ್ಲಿ ಡ್ರಗ್ಸ್ ತಪಾಸಣೆ ಅಷ್ಟೊಂದು ಕಟ್ಟುನಿಟ್ಟಾಗಿಲ್ಲ. ಅಲ್ಲಿನ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ನಿಂತಿರುವುದರಿಂದ ಪ್ರವಾಸಿಗರನ್ನು ಅತಿಯಾಗಿ ಪೀಡಿಸುವುದಿಲ್ಲ. ಈ ಎರಡು ಕಾರಣಗಳಿಂದಾಗಿ ಪೊಲೀಸರಿಗೆ ಸಿಕ್ಕಿ ಬೀಳುವುದಿಲ್ಲ ಎಂಬ ನಂಬಿಕೆ ಮೇಲೆ ಬ್ಯಾಂಕಾಕ್‌ನಿಂದ ತರಲು ಕೆಲವರು ಮುಂದಾಗುತ್ತಾರೆ.

ಕಾರ್ಯಾಚರಣೆಯ ವಿಧಾನ

ಕಳ್ಳಸಾಗಣೆದಾರರು ಕಸ್ಟಮ್ಸ್‌ ಕಣ್ಣು ತಪ್ಪಿಸಲು ಅತ್ಯಂತ ಚಾಣಾಕ್ಷ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಸ್ಕ್ಯಾನರ್‌ಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಡ್ರಗ್ಸ್‌ಗಳನ್ನು ಪ್ಯಾಕ್ ಮಾಡಲಾಗುತ್ತಿದೆ. ಗಾಂಜಾದ ವಾಸನೆ ಹೊರಬರದಂತೆ ಅದನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ವ್ಯಾಕ್ಯೂಮ್ ಪ್ಯಾಕ್ ಮಾಡಿ, ನಂತರ ಅವುಗಳನ್ನು ಬಟ್ಟೆಗಳು ಅಥವಾ ಆಹಾರ ಪದಾರ್ಥಗಳ ನಡುವೆ ಇರಿಸಲಾಗುತ್ತದೆ. ಮಕ್ಕಳ ಆಟಿಕೆಗಳು, ಚಾಕೊಲೇಟ್ ಬಾಕ್ಸ್‌ಗಳು ಅಥವಾ ಹ್ಯಾಂಡ್ ಬ್ಯಾಗ್‌ಗಳ ಒಳಗೆ ರಹಸ್ಯವಾಗಿ ಮಾದಕವಸ್ತುವನ್ನು ಅಡಗಿಸಿಡಲಾಗುತ್ತದೆ. ಸೂಟ್‌ಕೇಸ್‌ಗಳ ತಳಭಾಗದಲ್ಲಿ ವಿಶೇಷವಾದ ಕದಗಳನ್ನು ನಿರ್ಮಿಸಿ ಅಲ್ಲಿ ಮಾದಕವಸ್ತುವನ್ನು ಬಚ್ಚಿಡಲಾಗುತ್ತಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳು ಪ್ರಯಾಣಿಕರ ಪ್ರಯಾಣದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಪದೇ ಪದೇ ಬ್ಯಾಂಕಾಕ್‌ಗೆ ಹೋಗಿ ಬರುವವರು, ಕಡಿಮೆ ಅವಧಿಯ ಪ್ರವಾಸ ಮಾಡುವವರು ಮತ್ತು ಅನುಮಾನಾಸ್ಪದ ಟಿಕೆಟ್ ಬುಕ್ಕಿಂಗ್ ಹೊಂದಿರುವವರ ಮೇಲೆ ಕಣ್ಣಿಡಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಡವಳಿಕೆಯನ್ನು ಅಧಿಕಾರಿಗಳು ಗಮನಿಸುತ್ತಾರೆ. ಅತಿಯಾದ ಆತಂಕ, ಬೆವರುವಿಕೆ ಅಥವಾ ಅಸಹಜ ನಡವಳಿಕೆ ಕಂಡುಬಂದಲ್ಲಿ ಅಂತಹವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಲಗೇಜ್‌ಗಳನ್ನು ಅತ್ಯಾಧುನಿಕ ಎಕ್ಸ್-ರೇ ಯಂತ್ರಗಳ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ಡ್ರಗ್ಸ್ ಅಡಗಿಸಿಟ್ಟಿರುವ ಸಣ್ಣ ಸುಳಿವು ಸಿಕ್ಕರೂ ಬ್ಯಾಗ್ ಅನ್ನು ಹರಿದು ತಪಾಸಣೆ ಮಾಡುತ್ತಾರೆ.

ವಿಮಾನ ನಿಲ್ದಾಣಗಳಲ್ಲಿ ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ವಿಶೇಷ ತರಬೇತಿ ಪಡೆದ ಶ್ವಾನಗಳನ್ನು ಬಳಸಲಾಗುತ್ತದೆ. ಈ ನಾಯಿಗಳು ಲಗೇಜ್‌ಗಳಲ್ಲಿ ಅಡಗಿಸಿಟ್ಟಿರುವ ಡ್ರಗ್ಸ್ ವಾಸನೆಯನ್ನು ಅತಿ ವೇಗವಾಗಿ ಪತ್ತೆಹಚ್ಚುತ್ತವೆ. ಭಾರತದ ಅಧಿಕಾರಿಗಳು ಥೈಲ್ಯಾಂಡ್‌ನ ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಮತ್ತು ಇಂಟರ್‌ಪೋಲ್‌ನೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಬ್ಯಾಂಕಾಕ್‌ನಿಂದ ಹೊರಡುವ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮೊದಲೇ ಮಾಹಿತಿ ಸಿಕ್ಕಿರುತ್ತದೆ. ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, ಬ್ಯಾಂಕಾಕ್‌ನಿಂದ ಬರುವ ಪಾರ್ಸೆಲ್‌ಗಳು ಮತ್ತು ಕಾರ್ಗೋ ಶಿಪ್‌ಮೆಂಟ್‌ಗಳನ್ನು ಕೂಡ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತದೆ ಎನ್ನಲಾಗಿದೆ.

Read More
Next Story