
'ಜನಸ್ಪಂದನ'ದತ್ತ ತಮಿಳುನಾಡು ಸರ್ಕಾರ: ರಾಜ್ಯದ ಸಿಎಂಒ ಶೈಲಿ ಅಳವಡಿಸಿಕೊಳ್ಳಲು ನಿರ್ಧಾರ
ಸಾರ್ವಜನಿಕರು ಸಲ್ಲಿಸುವ ದೂರುಗಳು ಕೇವಲ ಕಾಗದದ ಕಡತಗಳಾಗಿ ಉಳಿಯದೇ, ಇಲಾಖಾವಾರು ವರ್ಗೀಕರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಬರುವ ದೂರುಗಳನ್ನು ಡಿಜಿಟಲ್ ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೆರೆ ರಾಜ್ಯ ಕರ್ನಾಟಕದ ಆಡಳಿತ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಎಂಒ (ಮುಖ್ಯಮಂತ್ರಿ ಕಚೇರಿ) ಆಡಳಿತದ ಮಾದರಿಯನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಆಡಳಿತ ಕಚೇರಿ ಮುಂದಾಗಿರುವುದು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ, ಬದಲಾಗಿ ಅದೊಂದು ರಾಜಕೀಯ ದೂರದೃಷ್ಟಿ ಆಗಿದೆ.
ತಮಿಳುನಾಡಿನಲ್ಲಿ ದಶಕಗಳಿಂದ ಡಿಎಂಕೆ ಹಾಗೂ ಎಐಎಡಿಎಂಕೆ ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯ ಇತ್ತು. ಇಂತಹ ಸಂದರ್ಭದಲ್ಲಿ ವಿಜಯ್ ತಮ್ಮದೇ ಆದ ತಮಿಳಗ ವೆಟ್ರಿ ಕಳಗಂ ಪಕ್ಷದ ಮೂಲಕ ಅಧಿಕಾರಕ್ಕೆ ಬಂದಿರುವುದು ಜನಾದೇಶದ ಸಂಕೇತವಾಗಿದೆ. ಆದರೆ, ಜನಾದೇಶವನ್ನು ಉಳಿಸಿಕೊಳ್ಳುವುದು ಮತ್ತು ಜನಪ್ರಿಯತೆಯನ್ನು ಕಾಯ್ದುಕೊಳ್ಳುವುದು ಈಗ ವಿಜಯ್ ಮುಂದಿರುವ ಅತಿದೊಡ್ಡ ಸವಾಲು. ಈ ಸವಾಲಿಗೆ ಪರಿಹಾರವಾಗಿ ಅವರು ಆಡಳಿತದ ಕೇಂದ್ರ ಬಿಂದು ಎಂದು ಕರೆಯಲಾಗುವ ಮುಖ್ಯಮಂತ್ರಿ ಕಚೇರಿಯನ್ನು ಬಲಪಡಿಸಲು ಮುಂದಾಗಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಜನಸ್ಪಂದನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದೇ ಮಾದರಿಯನ್ನು ವಿಜಯ್ ಅಳವಡಿಸಿಕೊಳ್ಳಲು ನಿರ್ಧರಿಸಿರುವುದು, ಅವರು ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.
ಕರ್ನಾಟಕ ಮಾದರಿಯ ಸಿಎಂಓ
ರಾಜ್ಯದ ಸಿಎಂಓ ಕಾರ್ಯವೈಖರಿಯು ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ಡಾ. ವೈಷ್ಣವಿ ಕುಪ್ಪಸ್ವಾಮಿ ಅವರ ನೇತೃತ್ವದಲ್ಲಿ ಈ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಸಲ್ಲಿಸುವ ದೂರುಗಳು ಕೇವಲ ಕಾಗದದ ಕಡತಗಳಾಗಿ ಉಳಿಯದೇ, ಇಲಾಖಾವಾರು ವರ್ಗೀಕರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್ಬುಕ್, ವಾಟ್ಸಾಪ್ ಮತ್ತು ನೇರ ಭೇಟಿಗಳ ಮೂಲಕ ಬರುವ ದೂರುಗಳನ್ನು ಡಿಜಿಟಲ್ ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ. ಇಲ್ಲಿ ಪ್ರತಿ ದೂರಿಗೂ ಒಂದು ಯೂನಿಕ್ ಐಡಿ ಸಿಗುತ್ತದೆ, ಇದರಿಂದ ದೂರಿನ ಸ್ಥಿತಿಗತಿಯನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು. ಒಂದು ನಿಗದಿತ ಅವಧಿಯಲ್ಲಿ ಆ ದೂರು ಇತ್ಯರ್ಥವಾಗದಿದ್ದರೆ, ಅದು ಸ್ವಯಂಚಾಲಿತವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಹೋಗುತ್ತದೆ. ಈ ಜವಾಬ್ದಾರಿ ವ್ಯವಸ್ಥೆಯೇ ಸಿದ್ದರಾಮಯ್ಯ ಸರ್ಕಾರದ ಯಶಸ್ಸಿನ ಗುಟ್ಟು ಎಂದು ಹೇಳಲಾಗಿದೆ.
ಅನುಷ್ಠಾನದಲ್ಲಿ ಎದುರಾಗುವ ಸವಾಲುಗಳು
ಮುಖ್ಯಮಂತ್ರಿ ವಿಜಯ್ ಅವರು ತಮಿಳುನಾಡಿನಲ್ಲಿ ಇದೇ ಮಾದರಿಯನ್ನು ಜಾರಿಗೆ ತರುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗಿದೆ. ತಮಿಳುನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಈ ಆನ್ಲೈನ್ ವ್ಯವಸ್ಥೆಯನ್ನು ಸಮರ್ಥವಾಗಿ ಜಾರಿಗೆ ತರಲು ತಳಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡುವುದು ಮೊದಲ ಕೆಲಸವಾಗಿರುತ್ತದೆ. ದಶಕಗಳ ಕಾಲ ಸಾಂಪ್ರದಾಯಿಕ ಆಡಳಿತ ನಡೆಸಿದ ಅಧಿಕಾರಿಗಳಿಗೆ ಇಂತಹ ಹೈ-ಟೆಕ್ ಮತ್ತು ವೇಗದ ವ್ಯವಸ್ಥೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರು ಈ ನಡೆಯನ್ನು ಕೇವಲ ನಟನ ಪ್ರದರ್ಶನ ಎಂದು ಟೀಕಿಸುವ ಸಾಧ್ಯತೆಯಿದೆ. ಆದರೆ, ಜನರಿಗೆ ಸಮಸ್ಯೆ ಪರಿಹಾರವಾಗುತ್ತಿದ್ದರೆ, ವಿರೋಧದ ಅಲೆಗಳು ತಾನಾಗಿಯೇ ತಣ್ಣಗಾಗುತ್ತವೆ.
ವಿಜಯ್ ಅವರ ಮತ್ತು ಮುಖ್ಯಮಂತ್ರಿಗಳ ಕಚೇರಿಯ ನಡೆಯು ಜನಸಾಮಾನ್ಯರ ಸಮಸ್ಯೆಗಳತ್ತ ಗಮನಹರಿಸಲಿದೆ ಎಂಬುದನ್ನು ಬಿಂಬಿಸುತ್ತದೆ. ಯುವಜನತೆಯಲ್ಲಿ ವಿಜಯ್ಗೆ ಇರುವ ಅಪಾರ ಬೆಂಬಲವನ್ನು ಆಡಳಿತಕ್ಕೆ ಬಳಸಿಕೊಳ್ಳುವುದು ಅವರ ಚಾಣಾಕ್ಷತನ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಯುವಕರು ದೂರುಗಳನ್ನು ದಾಖಲಿಸಲು ಸುಲಭವಾಗುತ್ತದೆ. ರಾಜಕಾರಣಿಗಳು ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವ ಈ ಕ್ರಮವು ಜನರೊಂದಿಗೆ ಸಂಪರ್ಕ ಹೆಚ್ಚಿಸಲಿದೆ. ಸಿಎಂಓನಲ್ಲಿ ದಕ್ಷ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಮೂಲಕ ವಿಜಯ್ ತಮ್ಮ ಸರ್ಕಾರವು ವೃತ್ತಿಪರ ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಭವಿಷ್ಯದ ದೃಷ್ಟಿಕೋನ: ಒಂದು ಬದಲಾವಣೆಯ ಮುನ್ನುಡಿ
ಕರ್ನಾಟಕದ ಆಡಳಿತ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ವಿಜಯ್ ಅವರು ರಾಜಕಾರಣದಲ್ಲಿ ಒಂದು ಹೊಸ ಸಂಪ್ರದಾಯವನ್ನು ಹುಟ್ಟುಹಾಕುತ್ತಿದ್ದಾರೆ. ರಾಜ್ಯಗಳ ನಡುವೆ ಉತ್ತಮ ಆಡಳಿತ ಮಾದರಿಗಳ ವಿನಿಮಯ ನಡೆಯಬೇಕೆಂಬ ಆಶಯವಿದೆಯಾದರೂ, ಅದನ್ನು ರಾಜಕೀಯ ಇಚ್ಛಾಶಕ್ತಿಯಿಂದ ಜಾರಿಗೆ ತರುವವರು ಕಡಿಮೆ. ಒಂದು ವೇಳೆ ವಿಜಯ್ ಈ ಸಿಎಂಓ ಮಾದರಿಯನ್ನು ತಮಿಳುನಾಡಿನಲ್ಲಿ ಸಂಪೂರ್ಣವಾಗಿ ಯಶಸ್ವಿಗೊಳಿಸಿದರೆ, ಅದು ಮುಂದಿನ ದಿನಗಳಲ್ಲಿ ತಮಿಳುನಾಡಿನ ಅಭಿವೃದ್ಧಿಯ ಚಿತ್ರಣವನ್ನೇ ಬದಲಿಸಲಿದೆ. ಅಷ್ಟೇ ಅಲ್ಲದೆ, ವಿಜಯ್ ಅವರು ಕೇವಲ ಸಿನಿಮಾಗಳಲ್ಲಿ 'ರಿಯಲ್ ಹೀರೋ' ಆಗಿರದೆ, ವಾಸ್ತವ ಜೀವನದಲ್ಲೂ ಆಡಳಿತದ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿದ್ದಾರೆ.
ಸಿದ್ದರಾಮಯ್ಯ ಅವರ ಸಿಎಂಒ ಕಾರ್ಯವೈಖರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಎಂಒ ಕಚೇರಿಗೆ ಬರುವ ಪ್ರತಿ ದೂರಿಗೂ ಒಂದು ಡಿಜಿಟಲ್ ಸಂಖ್ಯೆಯನ್ನು ನೀಡಲಾಗುತ್ತದೆ. ಇದರಿಂದ ದೂರುದಾರರು ತಮ್ಮ ದೂರು ಯಾವ ಹಂತದಲ್ಲಿದೆ ಎಂಬುದನ್ನು ಗಮನಿಸಬೇಕು. ದೂರುಗಳು ಸ್ವೀಕೃತವಾದ ನಂತರ, ಅವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ಸಿದ್ದರಾಮಯ್ಯ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ಪ್ರತಿ ದೂರಿಗೂ ನಿಗದಿತ ಸಮಯದೊಳಗೆ ಉತ್ತರ ನೀಡಬೇಕಾಗುತ್ತದೆ.
ಡಾ. ವೈಷ್ಣವಿ ಕುಪ್ಪಸ್ವಾಮಿ ನೇತೃತ್ವದ ಸಮರ್ಥ ತಂಡ
ಸಿಎಂ ವಿಶೇಷ ಕರ್ತವ್ಯಾಧಿಕಾರಿ ಡಾ. ವೈಷ್ಣವಿ ಕುಪ್ಪಸ್ವಾಮಿ ಅವರ ನೇತೃತ್ವದಲ್ಲಿ ಸಿಎಂಒ ತಂಡವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಈ ತಂಡವು ಕೇವಲ ದೂರುಗಳನ್ನು ಸ್ವೀಕರಿಸುವುದಿಲ್ಲ, ಬದಲಾಗಿ ಅವುಗಳ ವಿಶ್ಲೇಷಣೆ ಮಾಡುತ್ತದೆ. ಯಾವ ಜಿಲ್ಲೆಯಿಂದ, ಯಾವ ಇಲಾಖೆಯ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ ಎಂಬುದನ್ನು ಗುರುತಿಸಿ, ಆ ಇಲಾಖೆಯ ಕಾರ್ಯವೈಖರಿಯನ್ನು ಸುಧಾರಿಸಲು ಸಿಎಂ ಅವರಿಗೆ ವರದಿ ನೀಡುತ್ತದೆ. ಸಾಮಾಜಿಕ ಜಾಲತಾಣಗಳನ್ನು ಈ ತಂಡವು ನಿರಂತರವಾಗಿ ಗಮನಿಸುತ್ತದ್ದು, ಸಾರ್ವಜನಿಕರ ದೂರುಗಳನ್ನು ನೋಡಿ, ತಕ್ಷಣವೇ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪರಿಹಾರ ನೀಡುವ ವ್ಯವಸ್ಥೆ ಇಲ್ಲಿ ಚಾಲ್ತಿಯಲ್ಲಿದೆ. ಸಿದ್ದರಾಮಯ್ಯ ಅವರ ಸಿಎಂಒ ವ್ಯವಸ್ಥೆಯು 'ಸಾರ್ವಜನಿಕ ಕುಂದುಕೊರತೆಗಳ ಪರಿಹಾರ' ಅನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ದೂರುಗಳನ್ನು ತುರ್ತು, ಸಾಮಾನ್ಯ, ಮತ್ತು ನೀತಿ ಸಂಬಂಧಿತ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.

