
ಕಾಂಗ್ರೆಸ್ ಮತಗಳಿಗೆ ಎಸ್‌ಡಿಪಿಐ ಲಗ್ಗೆ: ಮುಸ್ಲಿಂ ಮತಬ್ಯಾಂಕ್‌ನಲ್ಲಿ ಶುರುವಾಯ್ತಾ ಬಿರುಕು..!
ಕಾಂಗ್ರೆಸ್‌ನಲ್ಲಿ ಅತೃಪ್ತ ನಾಯಕರಿಗೆ ಎಸ್‌ಡಿಪಿಐ ಈಗ ಆಶ್ರಯ ತಾಣವಾಗುತ್ತಿದೆ. ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿದ ಪ್ರಬಲ ಆಕಾಂಕ್ಷಿಗಳು ಎಸ್‌ಡಿಪಿಐ ಕಡೆಗೆ ಮುಖ ಮಾಡುತ್ತಿದ್ದಾರೆ.
ಕಾಂಗ್ರೆಸ್‌ನ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿದ್ದ ಅಲ್ಪಸಂಖ್ಯಾತ ಮತಬ್ಯಾಂಕ್‌ನಲ್ಲಿ ಈಗ ಬಿರುಕು ಕಾಣಿಸಿಕೊಳ್ಳತೊಡಗಿದೆ. ಕಳೆದ ವಿಧಾನಸಭಾ ಚುನಾವಣೆ ಮತ್ತು ಇತ್ತೀಚಿನ ಉಪಚುನಾವಣೆಗಳ ಫಲಿತಾಂಶವನ್ನು ಗಮನಿಸಿದರೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕೇವಲ ಒಂದು ಸಣ್ಣ ರಾಜಕೀಯ ಗುಂಪಾಗಿ ಉಳಿಯದೆ, ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲು ಮುಳ್ಳು ಆಗಿ ಪರಿಣಮಿಸುತ್ತಿದೆ. ಅತೃಪ್ತ ನಾಯಕರು ಮತ್ತು ಬಂಡಾಯವೇ ಆಧಾರವಾಗಿ ಎಸ್‌ಡಿಪಿಐ ರಾಜ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಾಳಯದಲ್ಲಿ ತೆರೆಮರೆಯ ಭಿನ್ನಮತಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಪಡೆದ 18,975 ಮತಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನು ವಿಭಜಿಸಿವೆ. ಕಾಂಗ್ರೆಸ್‌ನ ಹಿರಿಯ ಮುಖಂಡ ದಿವಂಗತ ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ದೊಡ್ಡ ಸಂಖ್ಯೆಯ ಮತಗಳು ಎಸ್‌ಡಿಪಿಐ ಪರವಾಗಿ ಚಲಾವಣೆಯಾಗಿರುವುದು, ಅಲ್ಪಸಂಖ್ಯಾತರು ಪರ್ಯಾಯ ನಾಯಕತ್ವವನ್ನು ಹುಡುಕುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ್ದನ್ನು ವಿರೋಧಿಸಿದ ಸಮುದಾಯದ ಮತಗಳು ಚದುರಿಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಪ್ರಯಾಸಕರವಾಗುವಂತೆ ಮಾಡಿದೆ.
ಎಸ್‌ಡಿಪಿಐ ದಾಪುಗಾಲು
2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಪ್ರದರ್ಶನ ಆಕಸ್ಮಿಕವಲ್ಲ. ಈ ಹಿಂದಿನ ಚುನಾವಣೆಗಳಿಂದಲೂ ಹಂತ ಹಂತವಾಗಿ ಮತಗಳನ್ನು ಪಡೆದುಕೊಳ್ಳುತ್ತಿರುವುದು ಹೆಚ್ಚಳವಾಗುತ್ತಿದೆ. 16 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 7 ಕ್ಷೇತ್ರದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ 41,037 ಮತಗಳನ್ನು ಪಡೆದಿದ್ದರು. ಇದು ವಿಜೇತ ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ಪಡೆದ ಒಟ್ಟು ಮತಗಳ ಸುಮಾರು ಶೇ. 50ರಷ್ಟು ಭಾಗವಾಗಿದೆ. ಮಂಗಳೂರು, ಬಂಟ್ವಾಳ, ಪುಲಿಕೇಶಿನಗರ, ಮೂಡಬಿದ್ರೆ, ತೇರದಾಳ, ಸರ್ವಜ್ಞನಗರ, ಪುತ್ತೂರು, ಚಿತ್ರದುರ್ಗ ಮತ್ತು ಬೆಳಗಾವಿಯಂತಹ ಕಡೆಗಳಲ್ಲಿ ಎಸ್‌ಡಿಪಿಐ ಗಮನಾರ್ಹ ಪ್ರಮಾಣದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಮತಗಳು ಬಹುತೇಕ ಕಾಂಗ್ರೆಸ್‌ನ ಮತಬ್ಯಾಂಕ್‌ನಿಂದಲೇ ಬಂದಿದೆ ಎಂದು ಹೇಳಲಾಗಿದೆ.
ಬಂಡಾಯವೇ ಎಸ್‌ಡಿಪಿಐಗೆ ಬಂಡವಾಳ
ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರಾದ ಅಥವಾ ಟಿಕೆಟ್ ವಂಚಿತರಾದ ನಾಯಕರಿಗೆ ಎಸ್‌ಡಿಪಿಐ ಈಗ ಆಶ್ರಯ ತಾಣವಾಗುತ್ತಿದೆ. ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿದ ಪ್ರಬಲ ಆಕಾಂಕ್ಷಿಗಳು ಎಸ್‌ಡಿಪಿಐ ಕಡೆಗೆ ಮುಖ ಮಾಡುತ್ತಿದ್ದಾರೆ. ದಾವಣಗೆರೆಯ ಉದಾಹರಣೆಯನ್ನೇ ತೆಗೆದುಕೊಂಡರೆ, ಅಲ್ಲಿನ ಅತೃಪ್ತ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಸಮುದಾಯದ ನಾಯಕರು ಎಸ್‌ಡಿಪಿಐ ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ನೀಡಿದೆ. ಕಾಂಗ್ರೆಸ್‌ನ ಒಳಗಿನ ಈ ಅತೃಪ್ತಿಯೇ ಎಸ್‌ಡಿಪಿಐ ಶಕ್ತಿಯಾಗಿ ರೂಪಾಂತರಗೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.
ಎಸ್‌ಡಿಪಿಐ ಕೇವಲ ಕರ್ನಾಟಕಕ್ಕೆ ಸೀಮಿತವಾದ ಪಕ್ಷವಲ್ಲ. ದೇಶದ 16 ರಾಜ್ಯಗಳಲ್ಲಿ ಇದು ತನ್ನ ಅಸ್ತಿತ್ವವನ್ನು ಹೊಂದಿದೆ. ಪಶ್ಚಿಮ ಬಂಗಾಳದ ನಂತರ ದಕ್ಷಿಣದ ರಾಜ್ಯಗಳಾದ ಕೇರಳ, ಕರ್ನಾಟಕ, ಗೋವಾ ಮತ್ತು ಆಂಧ್ರಪ್ರದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಈ ಪಕ್ಷ, ಕೇರಳದ ಪಾಲಿಕೆ ಚುನಾವಣೆಯಲ್ಲಿ 32 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ.
ಮುಂಬರುವ ಚುನಾವಣೆಗಳ ಮೇಲೆ ಪರಿಣಾಮ
ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಬಿಎ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಎಸ್‌ಡಿಪಿಐ ಭೀತಿ ಎದುರಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಮತಗಳು ಒಂದು ಕಡೆ ಧ್ರುವೀಕರಣಗೊಂಡರೆ, ಮತ್ತೊಂದೆಡೆ ಕಾಂಗ್ರೆಸ್‌ನ ಮತಗಳನ್ನು ಎಸ್‌ಡಿಪಿಐ ಕಸಿದುಕೊಂಡರೆ, ಕಾಂಗ್ರೆಸ್ ಸೋಲಿಗೆ ಇದು ನೇರ ಕಾರಣವಾಗಲಿದೆ. ಕೇವಲ ಅಲ್ಪಸಂಖ್ಯಾತರಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಆಕಾಂಕ್ಷಿಗಳೂ ಎಸ್‌ಡಿಪಿಐ ಟಿಕೆಟ್‌ಗೆ ಮೊರೆ ಹೋಗುತ್ತಿರುವುದು ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಮಂತ್ರಕ್ಕೆ ಸವಾಲೊಡ್ಡಿದೆ.
ವಿಧಾನಸಭಾ ಚುನಾವಣೆಗಿಂತ ಸ್ಥಳೀಯ ಚುನಾವಣೆಗಳಲ್ಲಿ ವೈಯಕ್ತಿಕ ಪ್ರಭಾವ ಹೆಚ್ಚಿರುತ್ತದೆ. ಕಾಂಗ್ರೆಸ್‌ನಿಂದ ಬೇಸತ್ತ ಸ್ಥಳೀಯ ನಾಯಕರು ಎಸ್‌ಡಿಪಿಐ ಚಿಹ್ನೆಯಡಿ ಸ್ಪರ್ಧಿಸಿದರೆ, ವಾರ್ಡ್ ಮಟ್ಟದಲ್ಲಿ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಳ್ಳಬಹುದು. ಒಂದು ವೇಳೆ ಎಸ್‌ಡಿಪಿಐ ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಣಾಯಕ ಸ್ಥಾನಗಳನ್ನು ಗೆದ್ದರೆ, ಅಧಿಕಾರ ಹಿಡಿಯಲು ಕಾಂಗ್ರೆಸ್ ಈ ಪಕ್ಷದ ಬೆಂಬಲ ಕೋರಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಇದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಲಿದೆ.
ಎಸ್‌ಡಿಪಿಐ ತಂತ್ರ
ಕಾಂಗ್ರೆಸ್ ಪಕ್ಷವು ಯಾವಾಗಲೂ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮಂತ್ರವನ್ನು ಜಪಿಸುತ್ತದೆ. ಆದರೆ ಎಸ್‌ಡಿಪಿಐ ಈಗ ಕೇವಲ ಅಲ್ಪಸಂಖ್ಯಾತರಿಗೆ ಸೀಮಿತವಾಗದೆ, ದಲಿತ ಮತ್ತು ಹಿಂದುಳಿದ ವರ್ಗದ ಆಕಾಂಕ್ಷಿಗಳಿಗೂ ಟಿಕೆಟ್ ನೀಡುತ್ತಿದೆ. ದಲಿತ ನಾಯಕರು ಮತ್ತು ಎಸ್‌ಡಿಪಿಐ ನಡುವಿನ ಹೊಂದಾಣಿಕೆಯು ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ದಲಿತ ಮತಗಳನ್ನೂ ಸೀಳುವ ಸಾಧ್ಯತೆಯಿದೆ. ಇದು ಸಿದ್ದರಾಮಯ್ಯನವರ ಅಹಿಂದ ಸಿದ್ಧಾಂತಕ್ಕೆ ದೊಡ್ಡ ಸವಾಲಾಗಿದೆ.
ಎಸ್‌ಡಿಪಿಐ ಪ್ರಬಲವಾದಷ್ಟು ಕಾಂಗ್ರೆಸ್‌ಗೆ ನಷ್ಟ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಈ ಸಂದರ್ಭದಲ್ಲಿ, ಹಿಂದೂ ಮತಗಳು ಒಂದು ಕಡೆ ಧ್ರುವೀಕರಣಗೊಳ್ಳುತ್ತಿವೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ನ ಬೆನ್ನೆಲುಬಾಗಿರುವ ಮುಸ್ಲಿಂ ಮತ್ತು ದಲಿತ ಮತಗಳು ಎಸ್‌ಡಿಪಿಐ ಪಾಲಾದರೆ, ಗೆಲುವಿನ ಸಮೀಕರಣವು ಬದಲಾಗುತ್ತದೆ. ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕೇವಲ 2ಸಾವಿರದಿಂದ 5ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದಾರೆ. ಅಂತಹ ಕಡೆಗಳಲ್ಲಿ ಎಸ್‌ಡಿಪಿಐ 10ಸಾವಿರ ಮತಗಳನ್ನು ಪಡೆದರೆ, ಅದು ಪರೋಕ್ಷವಾಗಿ ಬಿಜೆಪಿಯ ಗೆಲುವಿಗೆ ಹಾದಿ ಮಾಡಿಕೊಡುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಮುಂದಿನ ದಿನದಲ್ಲಿ ರಾಜಕೀಯ ತಿರುವು
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ, ದಾವಣಗೆರೆ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ತಳಮಟ್ಟದಲ್ಲಿ ಸಂಘಟನೆ ನಡೆಸುತ್ತಿದ್ದು, ಈ ಬಾರಿಯ ಚುನಾವಣಾ ಫಲಿತಾಂಶಗಳು ಹೊಸ ರಾಜಕೀಯ ತಿರುವಿಗೆ ನಾಂದಿ ಹಾಡಲಿವೆ. ದಾವಣಗೆರೆಯಲ್ಲಿ ಮತದಾರರು ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದಾರೆ. ಇದು ಕೇವಲ ಒಂದು ಚುನಾವಣೆಯ ಫಲಿತಾಂಶವಲ್ಲ, ಬದಲಾಗಿ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಆಗಲಿರುವ ದೊಡ್ಡ ಬದಲಾವಣೆಯ ದಾರಿಯಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ದಶಕಗಳಿಂದ ಶೋಷಿತ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿದೆಯೇ ಹೊರತು, ಅವರಿಗೆ ನ್ಯಾಯ ಒದಗಿಸಿಲ್ಲ. ಪರಿಣಾಮವಾಗಿ, ಇಂದು ಶೋಷಿತ ಸಮುದಾಯಗಳು ಕಾಂಗ್ರೆಸ್ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಅಹಿಂದ ವರ್ಗದ ಮತಗಳು ದೊಡ್ಡ ಪ್ರಮಾಣದಲ್ಲಿ ಎಸ್‌ಡಿಪಿಐ ಕಡೆಗೆ ಬರಲಿದೆ. ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುವ ಎಸ್‌ಡಿಪಿಐ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಲಿಷ್ಠ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

