ಮರ್ಯಾದೆಯ ಹೆಸರಲ್ಲಿ ಮನುಷ್ಯತ್ವ ಬಲಿ: ಮಡದಿ -ಮಗುವನ್ನು ಕಳೆದುಕೊಂಡ ವಿವೇಕಾನಂದನ ಕಣ್ಣೀರಿನ ಕಥೆ
x
ಮಾನ್ಯ ಪಾಟೀಲ್‌ ಮತ್ತು ವಿವೇಕಾನಂದ ದೊಡ್ಡಮಣಿ

ಮರ್ಯಾದೆಯ ಹೆಸರಲ್ಲಿ ಮನುಷ್ಯತ್ವ ಬಲಿ: ಮಡದಿ -ಮಗುವನ್ನು ಕಳೆದುಕೊಂಡ ವಿವೇಕಾನಂದನ ಕಣ್ಣೀರಿನ ಕಥೆ

ಧಾರವಾಡದ ಇನಾಂ ವೀರಪುರದಲ್ಲಿ ನಡೆದ ಆ ರಣಭೀಕರ ಮರ್ಯಾದೆಗೇಡು ಹತ್ಯೆ ಘಟನೆಯ ನಂತರ ಪತಿ ವಿವೇಕಾನಂದ ದೊಡ್ಡಮಣಿ ಅವರ ನ್ಯಾಯಕ್ಕಾಗಿನ ಹೋರಾಟ ಮತ್ತು ಇಂದಿನ ಸ್ಥಿತಿಯ ಸಂಪೂರ್ಣ ವರದಿ.


Click the Play button to hear this message in audio format

ದಿನದ 24ಗಂಟೆಗಳ ಕಾಲ ಊರ ಮುಂದೆ ಕಾವಲಿರುವ 20ಪೊಲೀಸರಿರುವ ವ್ಯಾನ್‌…. ಸದಾ ಪೊಲೀಸ್‌ ರಕ್ಷಣೆಯ ಜೊತೆಗೇ ತಿರುಗಾಡುವ 24ವರ್ಷದ ಯುವಕ… ಮತ್ತೊಂದೆಡೆ ಯಾವ ಕ್ಷಣದಲ್ಲಿ ಏನಾಗುತ್ತೆ ಅನ್ನುವ ಭೀತಿಯಲ್ಲಿರುವ ಕುಟುಂಬ… ಇದು ಧಾರವಾಡದ ಹುಬ್ಬಳ್ಳಿ ತಾಲೂಕಿನ ಇನಾಂ ವೀರಪುರ ಗ್ರಾಮದ ಪ್ರಸ್ತುತ ಸ್ಥಿತಿ. ಕಳೆದ ಆರು ತಿಂಗಳಿಂದ ಈ ಗ್ರಾಮ ಹಾಗೂ ಇಲ್ಲಿನ ಜನ ನಿತ್ಯ ನೋಡುತ್ತಿರುವ ಸಂಗತಿ ಆಗಿದೆ. ಸಹಜವಾಗಿದ್ದ ಇನಾಂ ವೀರಪುರದಲ್ಲಿ ಕೆಲವು ತಿಂಗಳಿಂದ ಸ್ಮಶಾನ ಮೌನ ತಲೆದೋರಲು ಕಾರಣ ಅಲ್ಲಿ ನಡೆದಂತಹ ರಣಭೀಕರ ಘಟನೆ.

2025, ಡಿಸೆಂಬರ್‌ 21. ಶಾಂತವಾಗಿದ್ದ ಇನಾಂ ವೀರಪುರ ಗ್ರಾಮ ಏಕಾಏಕಿ ರಣರಂಗವಾಗಿತ್ತು. ಕೆಲಸ ಕಾರ್ಯಗಳನ್ನು ಮುಗಿಸಿ ದೂರದ ಹೊಲಗಳಿಂದ ಜನ ತಮ್ಮ ತಮ್ಮ ಗೂಡು ಸೇರುವ ಹೊತ್ತಿಗೆ ಗ್ರಾಮದಲ್ಲಿ ನೆತ್ತರ ಕೋಡಿಯೇ ಹರಿದಿತ್ತು. 19ವರ್ಷದ ಮಾನ್ಯಾ ಪಾಟೀಲ್‌ ಬರ್ಬರವಾಗಿ ಹತ್ಯೆಯಾಗಿದ್ದಳು. ಏಳು ತಿಂಗಳ ಗರ್ಭಿಣಿ ಎಂಬುದನ್ನೂ ನೋಡದೇ ಹಂತಕರು ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದರು. ತಡೆಯಲು ಬಂದ ಆಕೆ ಅತ್ತೆ ಹಾಗೂ ನಾದಿನಿ ಮೇಲೆ ಅತ್ಯಂತ ಬರ್ಬರವಾಗಿ ಹಲ್ಲೆ ನಡೆದಿತ್ತು. ಕೇವಲ 15-20ನಿಮಿಷಗಳ ಅವಧಿಯಲ್ಲಿ ಎಲ್ಲವೂ ಮುಗಿದೇ ಹೋಗಿತ್ತು. ಹೆತ್ತ ತಂದೆಯೇ ಅಂದು ಕೊಡಲಿ ಹಿಡಿದು ರಾಕ್ಷಸನಾಗಿ ನಿಂತಿದ್ದ! ಬಲಿಯಾದ ಆ ಪುಟ್ಟ ಜೀವ ಮಾಡಿದ್ದ ತಪ್ಪು ತಾನು ಮೆಚ್ಚಿದಾತನ ಕೈ ಹಿಡಿದದ್ದು!


ತಾನು ಪ್ರೀತಿಸಿ ಕೈ ಹಿಡಿದ ಮಡತಿ ಮತ್ತು ಇನ್ನೇನು ಕೆಲವೇ ತಿಂಗಳಲ್ಲಿ ಪ್ರಪಂಚ ನೋಡಬೇಕಿದ್ದ ಮಗುವಿನೊಂದಿಗೆ ಸುಂದರ ಜೀವನದ ಕನಸು ಕಂಡಿದ್ದ ವಿವೇಕಾನಂದ ದೊಡ್ಡಮಣಿ, ಇಂದು ನ್ಯಾಯಕ್ಕಾಗಿ ಹೋರಾಡುತ್ತಿರುವ ಒಂಟಿ ಜೀವ. ಅಂದಿನಿಂದ ಇಂದಿನವರೆ ತನ್ನ ಯಾತನಾಮಯ ಬದುಕಿನ ಜೊತೆ ಹೆಜ್ಜೆ ಹಾಕಿಕೊಂಡು, ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸುತ್ತಾ “ಸಾಯಲು ಸಿದ್ಧ, ಆದರೆ ಸೋಲೊಪ್ಪಿಕೊಳ್ಳುವುದಿಲ್ಲ” ಎನ್ನುತ್ತಿದ್ದಾನೆ ಆ ಯುವಕ. ʻದ ಫೆಡರಲ್‌ ಕರ್ನಾಟಕʼ ಕಚೇರಿಗೆ ಪೊಲೀಸ್‌ ಭದ್ರತೆಯ ಜೊತೆಗೇ ಆಗಮಿಸಿದ್ದ ವಿವೇಕಾನಂದ ದೊಡ್ಡಮಣಿಯವರು ಈ ರಣಭೀಕರ ಕೃತ್ಯದ ಕುರಿತ ಹಲವು ಸಂಗತಿಗಳು, ತಮ್ಮ ಕಾನೂನು ಸಮರದ ಬಗ್ಗೆ ಹಂಚಿಕೊಂಡಿದ್ದಾರೆ.

ಸ್ನೇಹದಿಂದ ದಾಂಪತ್ಯದವರೆಗೆ...

ವಿವೇಕಾನಂದ ಮತ್ತು ಮಾನ್ಯ ಪಾಟೀಲ್ (ನೇಹ) ಅವರದ್ದು ಬಾಲ್ಯದ ಪರಿಚಯ. ಕೇವಲ 150 ಮೀಟರ್ ಅಂತರದ ಮನೆಯವರು. ವಿವೇಕಾನಂದ ಪದವಿ ಜೊತೆಗೆ ಮಾರ್ಷಲ್ ಆರ್ಟ್ಸ್ (ಕರಾಟೆ) ಕಲಿಯುತ್ತಿರುವ ವಿದ್ಯಾರ್ಥಿಯಾದರೆ, ಮಾನ್ಯ ಇಂಜಿನಿಯರಿಂಗ್ ಓದುತ್ತಿದ್ದ ಪ್ರತಿಭಾವಂತೆ. ಪಿಯುಸಿ ಅವಧಿಯಲ್ಲಿ ಮೊಳಕೆಯೊಡೆದ ಪ್ರೀತಿ, ಜಾತಿಯ ಬೇಲಿಗಳನ್ನು ಮೀರಿ ಬೆಳೆದಿತ್ತು. ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದವರಾದರೆ, ಮಾನ್ಯ ಲಿಂಗಾಯತ ಸಮುದಾಯದವರು. ಬಸವಣ್ಣನವರ ತತ್ವಗಳನ್ನು ಪಾಲಿಸುವ ಕುಟುಂಬದಿಂದ ಬಂದ ವಿವೇಕಾನಂದನಿಗೆ, ಜಾತಿಗಿಂತ ಪ್ರೀತಿಯೇ ದೊಡ್ಡದಾಗಿತ್ತು.

ಇವರ ಪ್ರೀತಿಯ ವಿಷಯ ಮಾನ್ಯ ಅವರ ತಂದೆ ಪ್ರಕಾಶಗೌಡ ಅವರಿಗೆ ತಿಳಿದಾಗ ಚಿತ್ರಹಿಂಸೆ ಶುರುವಾಯಿತು. ಮನೆಯಲ್ಲೇ ಮಗಳ ಮೇಲೆ ಹಲ್ಲೆ ನಡೆಯುತ್ತಿತ್ತು. "ನನ್ನ ಕೈಕೆಳಗೆ ಕೆಲಸ ಮಾಡುವವನ ಮಗನನ್ನು ಮದುವೆಯಾಗುತ್ತೀಯಾ?" ಎಂಬ ಅಹಂಕಾರದ ಮಾತುಗಳು ಕೇಳಿಬಂದವು. ಅಂತಿಮವಾಗಿ ಪ್ರಾಣಭಯದಿಂದ ಮಾನ್ಯ ಮನೆ ಬಿಟ್ಟು ಹೊರಬಂದರು. ಈ ಜೋಡಿ ಇದೇ ವರ್ಷ ಮೇ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಹಾವೇರಿಯಲ್ಲಿ ಹೊಸ ಜೀವನ ಆರಂಭಿಸಿದರು.


ಅಂದು ನಡೆದಿದ್ದೇನು? ಆ ಕರಾಳ ದಿನ

ಮಾನ್ಯ ಏಳು ತಿಂಗಳ ಗರ್ಭಿಣಿಯಾಗಿದ್ದಾಗ, ಕೆಲವು ದಾಖಲೆಗಳ ಕೆಲಸಕ್ಕಾಗಿ ಈ ಜೋಡಿ ಊರಿಗೆ ಮರಳಿದ್ದರು. ಅದೇ ಅವರಿಗೆ ಸಂಚಕಾರವಾಯಿತು. "ಅವತ್ತು ಸಂಜೆ ನನ್ನ ತಂದೆಯ ಮೇಲೆ ಟ್ರ್ಯಾಕ್ಟರ್ ಹರಿಸಲು ಪ್ರಯತ್ನಿಸಿದ್ದಾರೆ ಎಂಬ ಕರೆಯೊಂದು ಬಂದಿತ್ತು. ವಿಷಯ ತಿಳಿದು ನಾನು ಅಲ್ಲಿಗೆ ಹೋದಾಗ ನನ್ನ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದರು. ನಾನು ಹೇಗೋ ಪ್ರಾಣ ಉಳಿಸಿಕೊಂಡು ಪೊಲೀಸರಿಗೆ ದೂರು ನೀಡಲು ಓಡಿದೆ. ಆದರೆ ಅಷ್ಟರಲ್ಲೇ ಅವರು ಮನೆಗೆ ನುಗ್ಗಿ, ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಂದರು. ಅಲ್ಲದೇ ಅದನ್ನು ತಡೆಯಲು ಬಂದ ನನ್ನ ತಾಯಿ ಮತ್ತು ತಂಗಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದರು" ಎಂದು ವಿವೇಕಾನಂದ ಕಣ್ಣೀರು ಸುರಿಸುತ್ತಾರೆ.

ತನ್ನ ಪತ್ನಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ, ಕುಡಿಯಲು ನೀರು ಕೊಡಲೂ ಯಾರೂ ಮುಂದೆ ಬರಲಿಲ್ಲ ಎಂಬುದು ಮನುಷ್ಯತ್ವಕ್ಕೆ ಹಿಡಿದ ಕನ್ನಡಿ.

ನ್ಯಾಯಕ್ಕಾಗಿ ಹೋರಾಟ

ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ಆರೋಪಿಗಳು ಹಣದ ಬಲದಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದಾರೆ. ಸರ್ಕಾರ 'ಇವ ನಮ್ಮವ' ಎಂಬ ಯೋಜನೆಯಡಿ ಅಂತರ್ಜಾತೀಯ ವಿವಾಹಿತರಿಗೆ ರಕ್ಷಣೆ ಘೋಷಿಸಿದೆ. ಆದರೆ ವಿವೇಕಾನಂದ ಕೇಳುವುದು ಒಂದೇ: "ನನ್ನ ಹೆಂಡತಿ ಮತ್ತು ಮಗುವನ್ನು ಕೊಂದವರಿಗೆ ಶೀಘ್ರವಾಗಿ ಶಿಕ್ಷೆಯಾಗಲಿ."


ಮೌನಕ್ಕೆ ಶರಣಾದ ಗ್ರಾಮ

ಘಟನೆ ನಡೆದ ನಂತರ ಇಡೀ ಗ್ರಾಮವೇ ಈ ಕುಟುಂಬದೊಂದಿಗೆ ಸಾಮಾಜಿಕ ಬಹಿಷ್ಕಾರದಂತೆ ವರ್ತಿಸುತ್ತಿದೆ. ಊರಿನ ಜನರು ಮಾತಾಡಿಸುವುದನ್ನೇ ನಿಲ್ಲಿಸಿದ್ದಾರೆ. ವಿವೇಕಾನಂದ ಅವರಿಗೆ ಈಗಲೂ ಜೀವಬೆದರಿಕೆ ಇರುವುದರಿಂದ 24 ಗಂಟೆ ಪೊಲೀಸ್ ಭದ್ರತೆ ನೀಡಲಾಗಿದೆ.

ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಆಗ್ರಹ

ಹಣದ ಬಲದ ಮುಂದೆ ಕಾನೂನು ಸೋಲಬಾರದು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಶೀಘ್ರ ನ್ಯಾಯ ಸಿಗಬೇಕಿದೆ ಎಂಬುದ ವಿವೇಕಾನಂದ ಅವರು ಸಮಾಜಕ್ಕೆ ಮತ್ತು ಸರ್ಕಾರಕ್ಕೆ ನೀಡುವ ಸಂದೇಶ ಸ್ಪಷ್ಟವಾಗಿದೆ. “ಎಲೆಕ್ಷನ್ ಅಬ್ಬರಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ, ಇಂತಹ ಸೂಕ್ಷ್ಮ ಪ್ರಕರಣಗಳಿಗೆ 'ಫಾಸ್ಟ್ ಟ್ರ್ಯಾಕ್ ಕೋರ್ಟ್' ಮೂಲಕ ಒಂದು ವರ್ಷದೊಳಗೆ ನ್ಯಾಯ ಒದಗಿಸಬೇಕು. ನ್ಯಾಯ ವಿಳಂಬವಾದಷ್ಟೂ ಸಮಾಜ ಘಟನೆಯನ್ನು ಮರೆಯುತ್ತದೆ ಮತ್ತು ಆರೋಪಿಗಳಿಗೆ ಸಾಕ್ಷಿ ನಾಶಪಡಿಸಲು ಅವಕಾಶ ಸಿಗುತ್ತದೆ. ಹಣವಿದ್ದರೆ ಸಾಕು ಹೊರಗೆ ಬರಬಹುದು ಎಂಬ ಭ್ರಮೆಯನ್ನು ಕಾನೂನು ಮುರಿಯಬೇಕು. ಆಗ ಮಾತ್ರ ಇಂತಹ ಮರ್ಯಾದೆ ಹತ್ಯೆಗಳು ನಿಲ್ಲಲು ಸಾಧ್ಯ. ಜಾತಿಗಿಂತ ಮನುಷ್ಯತ್ವ ದೊಡ್ಡದು ಎಂದು ಬಸವಣ್ಣನವರು ಹೇಳಿದ್ದರು. ಆದರೆ ಇಂದು ಅದೇ ಬಸವಣ್ಣನವರ ಹೆಸರಿಟ್ಟುಕೊಂಡವರು ಮಗಳನ್ನೇ ಕೊಲ್ಲುವ ಮಟ್ಟಕ್ಕೆ ಇಳಿದಿದ್ದಾರೆ," ಎಂಬ ವಿವೇಕಾನಂದನ ಮಾತುಗಳು ಸಮಾಜದ ಆತ್ಮಸಾಕ್ಷಿಯನ್ನು ಪ್ರಶ್ನಿಸುತ್ತಿವೆ.

"ನಾನು ಊರ ಗೌಡ, ನನ್ನ ಮರ್ಯಾದೆ ಮಣ್ಣುಪಾಲಾಯಿತು ಎಂದು ಹೆಣ್ಣಿನ ಮೇಲೆ ಕೈ ಮಾಡುವುದು ಶೌರ್ಯವಲ್ಲ, ಅದು ಹೇಡಿತನ. ಕೊಂದ ತಕ್ಷಣ ಮರ್ಯಾದೆ ವಾಪಸ್ ಬರುವುದಿಲ್ಲ, ಬದಲಿಗೆ ಇಡೀ ಕುಟುಂಬ ಜೈಲು ಪಾಲಾಗಿ ಮರ್ಯಾದೆ ಹರಾಜಾಗುತ್ತದೆ," - ಇದು ಪ್ರೀತಿಯ ಮಡತಿ ಮಾನ್ಯಳನ್ನು ಕಳೆದುಕೊಂಡ ವಿವೇಕಾನಂದ ದೊಡ್ಡಮಣಿ ಅವರ ಮನದಾಳದ ಮಾತು.

ಅಹಂಕಾರದ ಮುಂದೆ ಸೋತ ಅರಿವು

ವಿವೇಕಾನಂದ ಅವರ ಪ್ರಕಾರ, ಈ ಘಟನೆಗೆ ಮುಖ್ಯ ಕಾರಣ ಅತಿವಿಶ್ವಾಸ ಮತ್ತು ಹಣದ ಹುಂಬತನ. ಆರೋಪಿ ಪ್ರಕಾಶಗೌಡ, ನನ್ನ ಹತ್ತಿರ ಕಾನೂನನ್ನು ಕೊಂಡುಕೊಳ್ಳುವಷ್ಟು ಹಣವಿದೆ ಎಂದು ಹೇಳುತ್ತಿದ್ದುದು ವ್ಯವಸ್ಥೆಯ ಮೇಲಿನ ಅಟ್ಟಹಾಸವನ್ನು ತೋರಿಸುತ್ತದೆ. ಆದರೆ, ವಿವೇಕಾನಂದ ಹೇಳುವಂತೆ, ತಂದೆಯೇ ತಪ್ಪು ದಾರಿಯಲ್ಲಿದ್ದಾಗ ಮಗಳಿಗೆ ಸಂಸ್ಕಾರ ಹೇಳಿಕೊಡುವುದು ಹೇಗೆ ಸಾಧ್ಯ? ಮಾನ್ಯಳ ತಂದೆ ಹಿಂದೆ ಮತ್ತೊಂದು ಧರ್ಮದ ಹುಡುಗಿಯನ್ನು ಮದುವೆಯಾಗಲು ಬಯಸಿದ್ದಾಗ ಬಾರದ 'ಜಾತಿ', ಮಗಳು ತನ್ನಿಷ್ಟದ ಹುಡುಗನನ್ನು ಆರಿಸಿಕೊಂಡಾಗ ಮೃಗೀಯ ರೂಪ ತಾಳಿದ್ದು ವಿಪರ್ಯಾಸ.

ಪೂರ್ವಯೋಜಿತ ಸಂಚು

ಆ ಕರಾಳ ದಿನದಂದು ನಡೆದದ್ದು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಸಂಚು. ವಿವೇಕಾನಂದರನ್ನು ಮನೆಯಿಂದ ದೂರವಿರಿಸಲು ತಂದೆಯ ಮೇಲೆ ಹಲ್ಲೆ ಮಾಡುವ ನಾಟಕವಾಡಿ, ಇತ್ತ ಮನೆಯಲ್ಲಿ ರಕ್ಷಣೆ ಇಲ್ಲದ ಏಳು ತಿಂಗಳ ಗರ್ಭಿಣಿಯ ಮೇಲೆ ಕೊಡಲಿ ಎತ್ತಿದ್ದು ಅಪ್ಪಟ ಹೇಡಿತನ. "ನಾನು ಅಲ್ಲಿ ಇರುತ್ತಿದ್ದರೆ ಕಥೆಯೇ ಬೇರೆಯಾಗುತ್ತಿತ್ತು, ನನ್ನ ಹೆಂಡತಿಯನ್ನು ಸಾಯಲು ಬಿಡುತ್ತಿರಲಿಲ್ಲ," ಎಂಬ ವಿವೇಕಾನಂದರ ಮಾತುಗಳಲ್ಲಿ ಮಡತಿಯನ್ನು ರಕ್ಷಿಸಲಾಗದ ಅಸಹಾಯಕತೆ ಎದ್ದು ಕಾಣುತ್ತಿತ್ತು.

ಶೂನ್ಯದಲ್ಲಿ ಬದುಕು

ಮಾರ್ಗದರ್ಶಿಯಾಗಿದ್ದ ಮಡತಿಯನ್ನು ಕಳೆದುಕೊಂಡ ವಿವೇಕಾನಂದರಿಗೆ ಈಗ ಜೀವನವೇ ಒಂದು ಪ್ರಶ್ನೆಯಾಗಿದೆ. "ನಾನು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುತ್ತಿದ್ದವಳು ಅವಳು. ಈಗ ಡಿಗ್ರಿ ಮುಗಿಸಿ ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ," ಎನ್ನುವ ಅವರ ಕಣ್ಣಲ್ಲಿ ಶೂನ್ಯತೆ ಆವರಿಸಿದೆ. ಆದರೂ, ಅವರು ಸೋಲೊಪ್ಪಲು ಸಿದ್ಧರಿಲ್ಲ. ತನ್ನ ಮಡತಿ ಮತ್ತು ಹುಟ್ಟದ ಮಗುವಿನ ಸಾವಿಗೆ ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ.


'ಇವ ನಮ್ಮವ ಇವ ನಮ್ಮವ' ವಿಧೇಯಕಕ್ಕೆ ಮುದ್ರೆ

ಮನ್ಯಾ ಪಾಟೀಲ್ ಅವರ ಬರ್ಬರ ಹತ್ಯೆಯ ಘಟನೆಯು ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿತ್ತು ಮತ್ತು ಸರ್ಕಾರದ ಮೇಲೆ ತಕ್ಷಣದ ಕಾನೂನು ಕ್ರಮಕ್ಕಾಗಿ ಭಾರೀ ಒತ್ತಡ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರವು 'ಇವ ನಮ್ಮವ' (Iva Nammava Bill, 2026) ಎಂಬ ಮಹತ್ವದ ಕಾಯ್ದೆ ಜಾರಿಗೆ ತರಲು ಮುಂದಾಯಿತು.

ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಎತ್ತಿಹಿಡಿಯಲು ಮತ್ತು ಮರ್ಯಾದೆ ಹೆಸರಿನಲ್ಲಿ ನಡೆಯುವ ಅಮಾನವೀಯ ಕೃತ್ಯಗಳಿಗೆ ಕಡಿವಾಣ ಹಾಕಲು ಉದ್ದೇಶಿಸಿರುವ 'ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ-2026'ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಮುದ್ರೆ ಬಿದ್ದಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಮಂಡಿಸಿದ ಈ ವಿಧೇಯಕದ ಮೇಲೆ ಸುಮಾರು ಐದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ನಂತರ, ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆದ್ರೆ ಜನರ ಮನಸ್ಥಿತಿ ಬದಲಾಗದೇ ಕೇವಲ ಕಾನೂನು ಬದಲಾದರೆ ಪರಿಸ್ಥಿತಿ ಎಂದಿಗೂ ಬದಲಾಗುವುದಿಲ್ಲ.

ಒಂದು ಮಗು ಜಗತ್ತನ್ನು ನೋಡುವ ಮುನ್ನವೇ, ಒಂದು ಪ್ರೀತಿಯ ಗೂಡು ಕಟ್ಟುವ ಮುನ್ನವೇ ಹರಿದು ಹೋದ ಈ ಕಥೆ, 'ಮರ್ಯಾದೆ ಗೇಡು ಹತ್ಯೆ' ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ನಾವು ಇನ್ನೆಷ್ಟು ಹೋರಾಡಬೇಕಿದೆ ಎಂಬುದನ್ನು ನೆನಪಿಸುತ್ತದೆ.

ತಂತ್ರಜ್ಞಾನ ಬೆಳೆದಿದೆ, ಜಗತ್ತು 21ನೇ ಶತಮಾನಕ್ಕೆ ಕಾಲಿಟ್ಟಿದೆ. ಆದರೆ ಮನುಷ್ಯನ ಮನಸ್ಸು ಮಾತ್ರ ಇಂದಿಗೂ ಜಾತಿ ಎಂಬ ಸಂಕೋಲೆಯಲ್ಲಿ ಬಂಧಿಯಾಗಿದೆ. ವಿವೇಕಾನಂದರ ಈ ಕಥೆ ಕೇವಲ ಒಂದು ವೈಯಕ್ತಿಕ ದುರಂತವಲ್ಲ; ಇದು ನಮ್ಮ ಸಮಾಜದ ಸತ್ತು ಹೋದ ಆತ್ಮಸಾಕ್ಷಿಯ ಪ್ರತಿಬಿಂಬ. ನ್ಯಾಯಾಂಗ ಮತ್ತು ಸರ್ಕಾರ ವಿವೇಕಾನಂದರಿಗೆ ಬೆನ್ನೆಲುಬಾಗಿ ನಿಂತು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಮಾನ್ಯಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ.


Read More
Next Story