
Manhole deaths| ಮಲಮೂತ್ರ ಸ್ವಚ್ಛಗೊಳಿಸುವ ಘಟನೆಗಳು ಇನ್ನೂ ಜೀವಂತ! ದಶಕ ಮೂರು, ರಾಜ್ಯದಲ್ಲಿ ಸಾವು ನೂರು!
ರಾಜ್ಯದಲ್ಲೇ ಮ್ಯಾನ್‌ಹೋಲ್ ಸಾವುಗಳು ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಹೆಚ್ಚಿವೆ. ಗುತ್ತಿಗೆದಾರರು ಹಣ ಉಳಿಸಲು ಯಂತ್ರಗಳ ಬದಲು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸುತ್ತಾರೆ!
ಮನುಷ್ಯರೇ ಮ್ಯಾನ್‌ಹೋಲ್‌ಗೆ ಇಳಿದು ಮಲ-ಮೂತ್ರ ಅಥವಾ ಕಲ್ಮಶವನ್ನು ಸ್ವಚ್ಛಗೊಳಿಸುವ ಕೈಯಿಂದ ಮಲ ಹೊರುವ ಪದ್ಧತಿ ಕರ್ನಾಟಕದಲ್ಲೂ ಜೀವಂತವಾಗಿದೆ! ಇಂದಿಗೂ ಕಾರ್ಮಿಕರು ಮ್ಯಾನ್‌ಹೋಲ್ ಶುಚಿ ಮಾಡಲು ತೆರಳಿ ವಿಷಗಾಳಿ ಸೇವಿಸಿ ಮೃತಪಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಷಯವಾಗಿದೆ.
ಇತ್ತೀಚೆಗೆ ಹರಿಯಾಣ ರಾಜ್ಯದ ನುಹ್ ಜಿಲ್ಲೆಯ ಫಿರೋಜ್‌ಪುರ್‌ದಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುವಾಗ ಇಬ್ಬರು ನೈರ್ಮಲ್ಯ ಕಾರ್ಮಿಕರು ವಿಷಕಾರಿ ಅನಿಲ ಉಸಿರಾಡಿ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ರಾಜ್ಯದಲ್ಲಿಯೂ ಇಂತಹ ಘಟನೆಗಳು ಚರ್ಚೆ ಮುನ್ನೆಲೆಗೆ ಬಂದಿದೆ. ಇದನ್ನು ಕೇಂದ್ರ ಸರ್ಕಾರ 1993ರಲ್ಲೇ ನಿಷೇಧಿಸಿತ್ತು. ನಂತರ 2013ರಲ್ಲಿ 'ಮ್ಯಾನ್‌ಹೋಲ್ ಕಾರ್ಮಿಕರ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆ'ಯನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಆದರೂ ಘಟನೆಗಳು ಮರುಕಳಿಸುತ್ತಲೇ ಇವೆ!
ರಾಜ್ಯದಲ್ಲಿ ಮ್ಯಾನ್‌ಹೋಲ್ ಸಾವುಗಳ ಅಂಕಿ-ಅಂಶಗಳು
ರಾಜ್ಯವು ಮುಂದುವರಿದ ರಾಜ್ಯ ಎಂದು ಪರಿಗಣಿಸಲ್ಪಟ್ಟಿದ್ದರೂ, ಮ್ಯಾನ್‌ಹೋಲ್ ಸಾವುಗಳ ಸಂಖ್ಯೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳ ಪೈಕಿ ಒಂದಾಗಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ವರದಿಗಳ ಆಧಾರದ ಮೇಲೆ 1993 ರಿಂದ 2025ರ ವರೆಗೆ ರಾಜ್ಯದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಮ್ಯಾನ್‌ಹೋಲ್ ಅಥವಾ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮೃತಪಟ್ಟಿದ್ದಾರೆ.
2018 - 2019ರ ಅವಧಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದಾರೆ. 2020-2021ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ರಾಜ್ಯದಲ್ಲಿ ಸುಮಾರು 8 ರಿಂದ 10 ಪ್ರಕರಣಗಳು ವರದಿಯಾಗಿವೆ. 2022 - 2023ರಲ್ಲಿ ರಾಮನಗರ, ಬೆಂಗಳೂರು ಮತ್ತು ಕಲ್ಬುರ್ಗಿಯಂತಹ ಜಿಲ್ಲೆಗಳಲ್ಲಿ ಘಟನೆಗಳು ನಡೆದು ಸುಮಾರು 12ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ ಎಂದು ಹೇಳಲಾಗಿದೆ.
2023ರಲ್ಲಿ ಮ್ಯಾನ್‌ಹೋಲ್ ಮತ್ತು ಸೆಪ್ಟಿಕ್ ಟ್ಯಾಂಕ್ ಸಾವುಗಳ ಸಂಖ್ಯೆ ಗಣನೀಯವಾಗಿತ್ತು. ರಾಮನಗರ ಜಿಲ್ಲೆಯ ಬಿಡದಿಯ ಕೈಗಾರಿಕಾ ಪ್ರದೇಶದ ಒಂದು ಖಾಸಗಿ ಕಾರ್ಖಾನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಕಾರ್ಮಿಕರು ವಿಷಗಾಳಿ ಸೇವಿಸಿ ಸ್ಥಳದಲ್ಲೇ ಸಾವನ್ನಪ್ಪಿದರು. ಸುರಕ್ಷತಾ ಕ್ರಮಗಳಿಲ್ಲದೆ ಅವರನ್ನು ಇಳಿಸಿದ್ದು ತನಿಖೆಯಲ್ಲಿ ದೃಢಪಟ್ಟಿತು. ಕಲ್ಬುರ್ಗಿಯಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಒಬ್ಬ ಕಾರ್ಮಿಕ ಸಾವನ್ನಪ್ಪಿದ ಘಟನೆ ವರದಿಯಾಗಿತ್ತು. ಬೆಂಗಳೂರಿನ ವರ್ತೂರು ಸಮೀಪದ ಖಾಸಗಿ ಲೇಔಟ್‌ನಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಹೋದ ಕಾರ್ಮಿಕ ಅಸುನೀಗಿದರು.
2024 ರಲ್ಲಿಯೂ ಸಹ ವಿಷಗಾಳಿ ಸೇವಿಸಿ ಕಾರ್ಮಿಕರು ಸಾವನ್ನಪ್ಪುವ ಸರಣಿ ಮುಂದುವರಿಯಿತು. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದವು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದರು. ಈ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಕಲಬುರಗಿಯ ಸಾರ್ವಜನಿಕ ಆಸ್ಪತ್ರೆಯೊಂದರ ಆವರಣದಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಇಳಿದ ಕಾರ್ಮಿಕ ಸಾವನ್ನಪ್ಪಿದರು. ಇದು ಸರ್ಕಾರಿ ಆವರಣದಲ್ಲೇ ನಡೆದಿದ್ದು ವ್ಯವಸ್ಥೆಯ ವೈಫಲ್ಯತೆಗೆ ಕೈಕನ್ನಡಿಯಾಗಿತ್ತು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಖಾಸಗಿ ಅಪಾರ್ಟ್‌ಮೆಂಟ್‌ನ ಒಳಚರಂಡಿ ಸ್ವಚ್ಛಗೊಳಿಸುವಾಗ ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿದ್ದರು. ದಾವಣಗೆರೆಯಲ್ಲಿಯೂ ಸಹ ಒಂದು ಪ್ರಕರಣ ವರದಿಯಾಗಿದ್ದು, ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
2025ರ ಆರಂಭದಲ್ಲಿ ಅಂದರೆ ಜನವರಿಯ ಮೊದಲ ವಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಖಾಸಗಿ ಗೋದಾಮಿನ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಇಳಿದ ಕಾರ್ಮಿಕ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ರಾಜ್ಯದ ವಿವಿಧೆಡೆ ಪೌರಕಾರ್ಮಿಕರ ಸಂಘಟನೆಗಳು ಸಂಪೂರ್ಣ ಯಾಂತ್ರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆಗಳು ಈಗಲೂ ಆಗಾಗ್ಗೆ ನಡೆಯುತ್ತಲೇ ಇರುತ್ತವೆ.
ನಗರ ಪ್ರದೇಶದಲ್ಲಿ ಹೆಚ್ಚು ವರದಿ
ಕರ್ನಾಟಕದಲ್ಲಿ ಮ್ಯಾನ್‌ಹೋಲ್ ಸಾವುಗಳು ಹೆಚ್ಚಾಗಿ ನಗರೀಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ವರದಿಯಾಗುತ್ತಿವೆ. ರಾಜ್ಯದಲ್ಲೇ ಅತಿ ಹೆಚ್ಚು ಮ್ಯಾನ್‌ಹೋಲ್ ಸಾವುಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಂಭವಿಸಿವೆ. ಇಲ್ಲಿನ ಬೃಹತ್ ಒಳಚರಂಡಿ ವ್ಯವಸ್ಥೆ ಮತ್ತು ಹಳೆಯದಾದ ಪೈಪ್‌ಲೈನ್‌ಗಳ ಕಾರಣದಿಂದ ಆಗಾಗ ದುರಸ್ತಿ ಕಾರ್ಯಗಳು ನಡೆಯುತ್ತಿರುತ್ತವೆ. ಗುತ್ತಿಗೆದಾರರು ಹಣ ಉಳಿಸುವ ಉದ್ದೇಶದಿಂದ ಕಾರ್ಮಿಕರನ್ನು ಯಂತ್ರಗಳ ಬದಲು ಮ್ಯಾನ್‌ಹೋಲ್‌ಗೆ ಇಳಿಸುತ್ತಾರೆ ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕದ ಭಾಗದಲ್ಲಿ ಸಾವುಗಳು ಹೆಚ್ಚಾಗಿ ಸಂಭವಿಸಿವೆ. ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಗಾಳಿ ಸೇವಿಸಿ ಕಾರ್ಮಿಕರು ಮೃತಪಟ್ಟ ಘಟನೆಗಳು ಹೆಚ್ಚಾಗಿ ನಡೆದಿವೆ. ಮೈಸೂರು ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿಯೂ ಸಹ ಮ್ಯಾನ್‌ಹೋಲ್ ಇಳಿದು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. ರಾಮನಗರ ಜಿಲ್ಲೆಯ ಬಿಡದಿಯಂತಹ ಕೈಗಾರಿಕಾ ಪ್ರದೇಶಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಹೋಗಿ ಕಾರ್ಮಿಕರು ಸಾವನ್ನಪ್ಪಿರುವುದು ದೊಡ್ಡ ಸುದ್ದಿಯಾಗಿತ್ತು. ಬೆಳಗಾವಿ, ತುಮಕೂರು ಮತ್ತು ಮಂಗಳೂರಿನಲ್ಲಿಯೂ ಸಹ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛಗೊಳಿಸುವಂತಹ ಪ್ರಕರಣಗಳು ವರದಿಯಾಗಿವೆ.
ಸಮೀಕ್ಷೆಗಳು ಸಮರ್ಪಕವಾಗಿ ನಡೆದಿಲ್ಲ
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿ, ಫಾಯಿ ಕರ್ಮಚಾರಿ ಆಯೋಗದ ಕಾವಲು ಸಮಿತಿಯ ಸದಸ್ಯರಾಗಿದ್ದ ಕನ್ನಮೇಡಿ ಭೀಮಪ್ಪ ಓಬಳೇಶ್, ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ನಿಖರವಾದ ಮಾಹಿತಿ ಸರ್ಕಾರದ ಬಳಿ ಇಲ್ಲವಾಗಿದೆ. ಈ ಹಿಂದೆ ಸಮೀಕ್ಷೆ ನಡೆಸಲಾಗಿದೆ. ಆದರೆ, ಸಮರ್ಪಕವಾಗಿ ನಡೆದಿಲ್ಲ. ಅವರಿಗೆ ನೀಡಬೇಕಾದ ಸವಲತ್ತುಗಳನ್ನು ಸಹ ಸರ್ಕಾರಗಳು ನೀಡುತ್ತಿಲ್ಲ. ಕೇವಲ ಕಾಗದ ಮೇಲೆ ಕ್ರಮಗಳ ಬಗ್ಗೆ ಇದೆಯೇ ಹೊರತು, ಯಾವುದೇ ರೀತಿಯಲ್ಲೂ ಅನುಷ್ಠಾನಕ್ಕೆ ಬಂದಿಲ್ಲ. ಈ ಬಗ್ಗೆ ಸೂಕ್ತ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳು ಸಣ್ಣ ಗಲ್ಲಿಗಳಿಗೂ ಹೋಗಬಲ್ಲ ರೋಬೋಟಿಕ್ ಸ್ಕ್ಯಾವೆಂಜರ್ ಯಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿದ ಗುತ್ತಿಗೆದಾರರನ್ನು ತಕ್ಷಣವೇ ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಅವರಿಗೆ ಕಠಿಣ ಜೈಲು ಶಿಕ್ಷೆಯಾಗಬೇಕು. ಕಾರ್ಮಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅಲ್ಲದೇ, ಯಾವುದೇ ಕಾರಣಕ್ಕೂ ನಾನು ಗುಂಡಿಗೆ ಇಳಿಯುವುದಿಲ್ಲ ಎಂಬ ಮನೋಭಾವ ಅವರಲ್ಲಿ ಬರಬೇಕು. ಈ ವೃತ್ತಿಯಲ್ಲಿರುವವರಿಗೆ ಪರ್ಯಾಯ ಉದ್ಯೋಗ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾಯ್ದೆ ಏನು ಹೇಳುತ್ತದೆ?
2013ರ ಕಾಯ್ದೆಯ ಪ್ರಕಾರ, ಯಾವುದೇ ವ್ಯಕ್ತಿಯನ್ನು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಇಳಿಸುವುದು ಅಪರಾಧ. ಸುಪ್ರೀಂ ಕೋರ್ಟ್ ಸಹ 2014ರಲ್ಲಿ ನೀಡಿದ ತೀರ್ಪಿನ ಪ್ರಕಾರ, ಮ್ಯಾನ್‌ಹೋಲ್‌ನಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಇನ್ನು ಮುಂದೆ ಮನುಷ್ಯರು ಮ್ಯಾನ್‌ಹೋಲ್‌ಗೆ ಇಳಿಯುವುದನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಆದೇಶಿಸಿದೆ. ಇತ್ತೀಚೆಗೆ 2023ರಲ್ಲಿ ಸುಪ್ರೀಂಕೋರ್ಟ್ ಈ ಪರಿಹಾರ ಮೊತ್ತವನ್ನು 30 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ.
ಸಾವುಗಳಿಗೆ ಮುಖ್ಯ ಕಾರಣಗಳು
ಮ್ಯಾನ್‌ಹೋಲ್‌ಗಳಲ್ಲಿ ಮಿಥೇನ್, ಹೈಡ್ರೋಜನ್ ಸಲ್ಫೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್‌ನಂತಹ ಮಾರಕ ಅನಿಲಗಳು ಸಂಗ್ರಹವಾಗಿರುತ್ತವೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಒಳಗೆ ಇಳಿದಾಗ ಕಾರ್ಮಿಕರು ಕ್ಷಣಾರ್ಧದಲ್ಲಿ ಪ್ರಜ್ಞೆ ತಪ್ಪಿ ಸಾವನ್ನಪ್ಪುತ್ತಾರೆ. ಸರ್ಕಾರಿ ಆದೇಶದ ಹೊರತಾಗಿಯೂ ಕಾರ್ಮಿಕರಿಗೆ ಮಾಸ್ಕ್, ಆಮ್ಲಜನಕ ಸಿಲಿಂಡರ್ ಅಥವಾ ಗ್ಲೌಸ್‌ಗಳನ್ನು ನೀಡುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
'ಜೆಟ್ಟಿಂಗ್' ಮತ್ತು 'ಸಕ್ಕಿಂಗ್' ಯಂತ್ರಗಳು ಲಭ್ಯವಿದ್ದರೂ, ಕಿರಿದಾದ ಗಲ್ಲಿಗಳಲ್ಲಿ ಈ ಯಂತ್ರಗಳು ಹೋಗಲು ಸಾಧ್ಯವಾಗದಿದ್ದಾಗ ಕಾರ್ಮಿಕರನ್ನು ಬಳಸಲಾಗುತ್ತದೆ. ಪೌರ ಕಾರ್ಮಿಕರನ್ನು ನೇರವಾಗಿ ನೇಮಿಸಿಕೊಳ್ಳುವ ಬದಲು ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಗುತ್ತಿಗೆದಾರರು ಲಾಭದ ಉದ್ದೇಶದಿಂದ ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುತ್ತಾರೆ. ಸಾವು ಸಂಭವಿಸಿದಾಗ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಈ ಕೆಲಸದಲ್ಲಿ ತೊಡಗಿರುವವರು ಬಹುತೇಕವಾಗಿ ದಲಿತ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಅವರ ಬಡತನ ಮತ್ತು ಅಸಹಾಯಕತೆಯನ್ನು ಬಂಡವಾಳ ಮಾಡಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
2023-25ರ ಅವಧಿಯಲ್ಲಿ ಕಂಡುಬಂದ ಪ್ರಮುಖ ಬದಲಾವಣೆಗಳು
2023ರ ಅಕ್ಟೋಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ, ಮ್ಯಾನ್‌ಹೋಲ್‌ನಲ್ಲಿ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಕ್ಕೆ ನೀಡಲಾಗುವ ಪರಿಹಾರವನ್ನು 10 ಲಕ್ಷ ರೂ.ನಿಂದ 30 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಇಂತಹ ಸಾವುಗಳನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗುತ್ತಿತ್ತು. ಆದರೆ ಈಗ 'ಮ್ಯಾನ್‌ಹೋಲ್ ಕಾರ್ಮಿಕರ ನೇಮಕಾತಿ ನಿಷೇಧ ಕಾಯ್ದೆ' ಅಡಿಯಲ್ಲಿ ನೇರವಾಗಿ ಗುತ್ತಿಗೆದಾರರು ಮತ್ತು ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ.

