Delimitation bill|ಲೋಕಸಭೆ ಸೀಟುಗಳ ಸಂಖ್ಯೆ 816ಕ್ಕೆ ಏರಿದರೆ ಕುಗ್ಗಲಿದೆ ಕರ್ನಾಟಕದ ಧ್ವನಿ!
x

Delimitation bill|ಲೋಕಸಭೆ ಸೀಟುಗಳ ಸಂಖ್ಯೆ 816ಕ್ಕೆ ಏರಿದರೆ ಕುಗ್ಗಲಿದೆ ಕರ್ನಾಟಕದ ಧ್ವನಿ!

ದಕ್ಷಿಣದ ಇತರ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದೊಂದಿಗೆ ಸೇರಿ ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಶಿಕ್ಷೆ ನೀಡಬೇಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ.


Click the Play button to hear this message in audio format

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು "ಕ್ಷೇತ್ರ ಪುನರ್‌ವಿಂಗಡಣೆ" ಎಂಬ ಬ್ರಹ್ಮಾಸ್ತ್ರವನ್ನು ಕೈಗೆತ್ತಿಕೊಂಡಿದೆ. 2029ರ ಚುನಾವಣೆಯ ವೇಳೆಗೆ 543 ಲೋಕಸಭಾ ಸ್ಥಾನಗಳನ್ನು 816ಕ್ಕೆ ಹೆಚ್ಚಿಸುವ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯು ಕರ್ನಾಟಕದ ಮಟ್ಟಿಗೆ ಅತ್ಯಂತ ಕಳವಳಕಾರಿ ವಿಷಯವಾಗಿದೆ.

ದಕ್ಷಿಣ ಭಾರತದ ಇತರ ರಾಜ್ಯಗಳಂತೆ ಕರ್ನಾಟಕವೂ ಕೂಡ ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಇದೇ ಸಾಧನೆಯೇ ಈಗ ರಾಜ್ಯಕ್ಕೆ ರಾಜಕೀಯವಾಗಿ ಮುಳುವಾಗುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಪ್ರಸ್ತುತ 28 ಲೋಕಸಭಾ ಕ್ಷೇತ್ರಗಳಿವೆ. ಹೊಸ ಪ್ರಸ್ತಾಪದ ಅನ್ವಯ 38ರಿಂದ42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ರಾಜ್ಯಕ್ಕೆ ಹೆಚ್ಚುವರಿ ಕ್ಷೇತ್ರಗಳು ಲಭ್ಯವಾಗಲಿವೆಯಾದರೂ ಸಂಸತ್‌ನಲ್ಲಿ ರಾಜ್ಯದ ಧ್ವನಿಯ ಪಾಲು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ತಮಿಳುನಾಡಿನಲ್ಲಿ 39 ರಿಂದ 59, ಆಂಧ್ರಪ್ರದೇಶದಲ್ಲಿ 25 ರಿಂದ 38, ತೆಲಂಗಾಣದಲ್ಲಿ 17 ರಿಂದ 26 ಹಾಗೂ ಕೇರಳದಲ್ಲಿ 20 ರಿಂದ 30 ಸೀಟುಗಳನ್ನು ಪಡೆಯಲಿವೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡುವುದರಿಂದ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಉತ್ತರ ಪ್ರದೇಶದ ಸೀಟುಗಳು 80 ರಿಂದ 140 ದಾಟುವ ನಿರೀಕ್ಷೆಯಿದೆ ಎನ್ನಲಾಗಿದೆ.

ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ ವಿಂಗಡಣೆ ನಡುವಿನ ಸಂಬಂಧ

ಮಹಿಳಾ ಮೀಸಲಾತಿ ಕಾಯ್ದೆಯು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡಲು ಉದ್ದೇಶಿಸಿದೆ. ಆದರೆ, ಈ ಕಾಯ್ದೆಯ ಜಾರಿಗೆ ಕ್ಷೇತ್ರ ಪುನರ್‌ವಿಂಗಡಣೆ ಅತ್ಯಗತ್ಯ ಎಂಬ ನಿಬಂಧನೆಯನ್ನು ಸರ್ಕಾರ ವಿಧಿಸಿದೆ. ಪ್ರಸ್ತುತ ಇರುವ ಸೀಟುಗಳ ಸಂಖ್ಯೆಯಲ್ಲೇ ಮೀಸಲಾತಿ ನೀಡಿದರೆ, ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳಿಗೆ ಅವಕಾಶಗಳು ಕಡಿಮೆಯಾಗುತ್ತವೆ ಎಂಬ ಆತಂಕ ರಾಜಕೀಯ ವಲಯದಲ್ಲಿದೆ. ಇದನ್ನು ಸರಿದೂಗಿಸಲು ಒಟ್ಟು ಸೀಟುಗಳ ಸಂಖ್ಯೆಯನ್ನೇ ಹೆಚ್ಚಿಸಿ, ಅದರಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವುದು ಸರ್ಕಾರದ ತಂತ್ರವಾಗಿದೆ. 816 ಸೀಟುಗಳಲ್ಲಿ ಸುಮಾರು 272 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಆಯೋಗವನ್ನು ರಚನೆ ಮಾಡಲಾಗುತ್ತದೆ. ಇದು ಸ್ವತಂತ್ರ ಸಂಸ್ಥೆಯಾಗಿದ್ದು, ಇದರ ನಿರ್ಧಾರಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ದಕ್ಷಿಣ ಭಾರತದ ರಾಜ್ಯಗಳ ಆತಂಕ

ಕ್ಷೇತ್ರ ಪುನರ್‌ವಿಂಗಡಣೆಯ ವಿಚಾರದಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಕಳೆದ ನಾಲ್ಕು ದಶಕಗಳಲ್ಲಿ ಕೇಂದ್ರ ಸರ್ಕಾರದ ಕುಟುಂಬ ಯೋಜನಾ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದಿವೆ. ಇದರಿಂದಾಗಿ ಇಲ್ಲಿನ ಜನಸಂಖ್ಯೆ ಸ್ಥಿರವಾಗಿದೆ. ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನಸಂಖ್ಯೆಯನ್ನೇ ಮಾನದಂಡವಾಗಿ ಇಟ್ಟುಕೊಳ್ಳುವುದರಿಂದ ಜನಸಂಖ್ಯೆಯನ್ನು ನಿಯಂತ್ರಿಸಿದ ದಕ್ಷಿಣದ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತವೆ. ಉತ್ತರ ಭಾರತದ ರಾಜ್ಯಗಳು ಕೇವಲ ಜನಸಂಖ್ಯೆಯ ಬಲದಿಂದ ದೇಶದ ರಾಜಕಾರಣವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಶಕ್ತಿ ಪಡೆಯುತ್ತವೆ. ಅಲ್ಲದೇ, ಲೋಕಸಭಾ ಸೀಟುಗಳ ಸಂಖ್ಯೆಯು ಹಣಕಾಸು ಆಯೋಗದ ಅನುದಾನ ಹಂಚಿಕೆಯ ಮೇಲೂ ಪ್ರಭಾವ ಬೀರುತ್ತದೆ. ಪ್ರಾತಿನಿಧ್ಯ ಕಡಿಮೆಯಾದಷ್ಟೂ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಸಿಗುವ ತೆರಿಗೆ ಪಾಲೂ ಕಡಿಮೆಯಾಗುವ ಭೀತಿಯಿದೆ.

ಸೀಟು ಹೆಚ್ಚಳವಾದರೂ ಪ್ರಭಾವ ಕುಸಿತ

ಸದ್ಯಕ್ಕೆ ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಕ್ಷೇತ್ರಗಳ ಪುನರ್‌ವಿಂಗಡಣೆ ಬಳಿಕ ಕರ್ನಾಟಕದ ಸೀಟುಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಅಂದಾಜು 36-42ಕ್ಕೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಲೋಕಸಭೆಯ ಒಟ್ಟು ಸೀಟುಗಳ ಸಂಖ್ಯೆ 543 ರಿಂದ 848ಕ್ಕೆ ಏರಿಕೆಯಾದರೆ ಒಟ್ಟಾರೆ ಸಂಸತ್ತಿನಲ್ಲಿ ರಾಜ್ಯದ ಧ್ವನಿಯ ಪಾಲು ಕಡಿಮೆಯಾಗುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಕರ್ನಾಟಕದ ಪಾಲು ಸುಮಾರು ಶೇ.5.15ರಷ್ಟು ಇದೆ. ಪುನರ್ ವಿಂಗಡಣೆಯ ನಂತರ ಇದು ಶೇ.4.2 ಅಥವಾ ಅದಕ್ಕಿಂತ ಕೆಳಕ್ಕೆ ಇಳಿಯುವ ಸಾಧ್ಯತೆಯಿದೆ. ಅಂದರೆ, ಸೀಟುಗಳ ಸಂಖ್ಯೆ ಹೆಚ್ಚಾದರೂ ಪ್ರಭಾವ ಕುಸಿಯಲಿದೆ. ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಕರ್ನಾಟಕದಂತಹ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತಿದ್ದವು. ಆದರೆ, ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾದಾಗ ರಾಷ್ಟ್ರೀಯ ಪಕ್ಷಗಳು ಕರ್ನಾಟಕ ಅಥವಾ ದಕ್ಷಿಣದ ರಾಜ್ಯಗಳ ಬೆಂಬಲವಿಲ್ಲದೆಯೇ ಕೇಂದ್ರದಲ್ಲಿ ಅಧಿಕಾರ ಹಿಡಿಯಬಹುದು. ಇದರಿಂದ ಕೇಂದ್ರ ಸರ್ಕಾರವು ಕರ್ನಾಟಕದ ಬೇಡಿಕೆಗಳಿಗೆ ಹೆಚ್ಚಿನ ಮನ್ನಣೆ ನೀಡುವ ಅನಿವಾರ್ಯತೆ ಇರುವುದಿಲ್ಲ ಎಂದು ಹೇಳಲಾಗಿದೆ.

ನದಿ ನೀರು ಹಂಚಿಕೆ - ಪ್ರಾದೇಶಿಕ ಸಮಸ್ಯೆಗಳಿಗೆ ದನಿ ಇಲ್ಲದಂತಾಗಲಿದೆ

ರಾಜ್ಯವು ತನ್ನದೇ ಆದ ಭಾಷಾ ಪ್ರೇಮ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದೆ. ಸಂಸತ್ತಿನಲ್ಲಿ ಹಿಂದಿ ಭಾಷಿಕ ರಾಜ್ಯಗಳ ಸಂಸದರ ಸಂಖ್ಯೆ ಹೆಚ್ಚಾದಾಗ, ದಕ್ಷಿಣದ ಭಾಷೆಗಳ ಮೇಲೆ ಹಿಂದಿ ಹೇರಿಕೆಯಂತಹ ನೀತಿಗಳು ಸುಲಭವಾಗಿ ಜಾರಿಯಾಗುವ ಆತಂಕವಿದೆ. ಕನ್ನಡದ ಅಸ್ಮಿತೆ ಮತ್ತು ಪ್ರಾದೇಶಿಕ ಹಿತಾಸಕ್ತಿಗಳನ್ನು ಕಾಪಾಡಲು ಸಂಸತ್ತಿನಲ್ಲಿ ಸಮರ್ಥವಾದ ಸಂಖ್ಯಾಬಲದ ಕೊರತೆ ಎದುರಾಗಬಹುದು. ಸಂಸತ್ತಿನಲ್ಲಿ ಸಂಖ್ಯೆ ಕಡಿಮೆ ಇದ್ದಾಗ, ದಕ್ಷಿಣ ಭಾರತದ ಭಾಷೆ, ಸಂಸ್ಕೃತಿ, ಕಾವೇರಿ-ಕೃಷ್ಣಾ ನದಿ ನೀರು ಹಂಚಿಕೆ ಅಥವಾ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ದನಿ ಎತ್ತಿದರೂ ಅದಕ್ಕೆ ಬೆಲೆ ಇಲ್ಲದಂತಾಗುತ್ತದೆ. ಬಹುಮತವಿರುವ ಉತ್ತರ ಭಾರತದ ಸಂಸದರು ದಕ್ಷಿಣದ ಹಿತಾಸಕ್ತಿಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಇರುತ್ತದೆ. ಇದಲ್ಲದೇ, ಕ್ಷೇತ್ರ ಪುನರ್ ವಿಂಗಡಣೆಯಿಂದ ಬೆಂಗಳೂರು ನಗರಕ್ಕೆ ಹೆಚ್ಚಿನ ಸೀಟುಗಳು ಸಿಗಬಹುದು, ಆದರೆ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗಗಳ ಪ್ರಾತಿನಿಧ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಇದು ರಾಜ್ಯದ ಒಳಗೂ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಬಹುದು.

ಆರ್ಥಿಕ ಅಸಮಾನತೆ

ಕ್ಷೇತ್ರ ಪುನರ್ ವಿಂಗಡಣೆಯು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಇದು ಹಣಕಾಸು ಹಂಚಿಕೆಯ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೇ 15ನೇ ಹಣಕಾಸು ಆಯೋಗವು ಜನಸಂಖ್ಯೆಯನ್ನು ಮಾನದಂಡವಾಗಿ ಬಳಸಿದ್ದರಿಂದ ದಕ್ಷಿಣದ ರಾಜ್ಯಗಳಿಗೆ ಕೇಂದ್ರದಿಂದ ಬರುವ ತೆರಿಗೆ ಪಾಲು ಕಡಿಮೆಯಾಗಿದೆ ಎಂಬ ದೂರುಗಳಿವೆ. ಕ್ಷೇತ್ರಗಳ ಸಂಖ್ಯೆ ಕಡಿಮೆಯಾದರೆ, ಕೇಂದ್ರದ ಅನುದಾನಗಳಲ್ಲಿ ಮತ್ತಷ್ಟು ಕಡಿತವಾಗುವ ಭೀತಿಯಿದೆ. ಕರ್ನಾಟಕವು ದೇಶದ ಜಿಡಿಪಿಗೆ ಮತ್ತು ಜಿಎಸ್‌ಟಿ ಸಂಗ್ರಹಕ್ಕೆ ಅತಿ ಹೆಚ್ಚು ಕೊಡುಗೆ ನೀಡುತ್ತವೆ. ಆದರೆ ಪ್ರತಿಯಾಗಿ ಸಿಗುವ ರಾಜಕೀಯ ಪ್ರಾತಿನಿಧ್ಯ ಮತ್ತು ಆರ್ಥಿಕ ನೆರವು ಕುಸಿಯುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ವೇಳೆ ದೇಶದ ಅಧಿಕಾರವು ಕೇವಲ ಒಂದು ಭಾಗಕ್ಕೆ ಕೇಂದ್ರೀಕೃತವಾದರೆ, ಉಳಿದ ಭಾಗಗಳಲ್ಲಿ ಪ್ರತ್ಯೇಕತೆಯ ಭಾವನೆ ಮೂಡಬಹುದು. ಇದು ದೇಶದ ಐಕ್ಯತೆಗೆ ಧಕ್ಕೆ ತರಬಹುದು.

ಕರ್ನಾಟಕದ ಮುಂದಿರುವ ಪರ್ಯಾಯ ಮಾರ್ಗಗಳು

ದಕ್ಷಿಣದ ಇತರ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದೊಂದಿಗೆ ಸೇರಿ ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಶಿಕ್ಷೆ ನೀಡಬೇಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಸೀಟು ಹಂಚಿಕೆಗೆ ಕೇವಲ ಜನಸಂಖ್ಯೆಯನ್ನು ಮಾನದಂಡವನ್ನಾಗಿ ಮಾಡದೆ, ರಾಜ್ಯದ ಆರ್ಥಿಕ ಕೊಡುಗೆ, ಸಾಕ್ಷರತೆ ಮತ್ತು ಅಭಿವೃದ್ಧಿ ಸೂಚ್ಯಂಕಗಳನ್ನು ಪರಿಗಣಿಸಲು ಒತ್ತಾಯಿಸುವುದು. ಕರ್ನಾಟಕದ ಹಿತಾಸಕ್ತಿ ಕಾಪಾಡಲು ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಸಮಾನ ಅಥವಾ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಆಗ್ರಹಿಸಬೇಕಿದೆ.

Read More
Next Story