
ಎತ್ತಿನಹೊಳೆ; ಬಯಲುಸೀಮೆಗೆ ಇಲ್ಲದ ನೀರು ‘ಕ್ವಿನ್ ಸಿಟಿ’ಗೆ ಹರಿಯುವುದು ಸಾಧ್ಯವೇ?
ಕಾಂಕ್ರೀಟ್ನ 'ಕ್ವಿನ್ ಸಿಟಿ'ಗೆ ಎತ್ತಿನಹೊಳೆ ನೀರು ನೀಡುವುದಾಗಿ ಸರಕಾರ ಡಿಪಿಆರ್ ನಲ್ಲಿ ಹೇಳಿದೆ. ಆದರೆ, ದಶಕಗಳಿಂದಲೂ ಪೂರ್ಣಗೊಳ್ಳದ ಎತ್ತಿನಹೊಳೆ ಕಾಮಗಾರಿಯಿಂದ ಕ್ವಿನ್ ಸೀಟಿಗೆ ನೀರು ಹರಿಯಲು ಸಾಧ್ಯವೇ?
ರಾಜ್ಯದ ಬಯಲುಸೀಮೆಯ ಜಿಲ್ಲೆಗಳ ಪಾಲಿಗೆ ದಶಕಗಳಿಂದಲೂ ಆಶಾಕಿರಣವಾಗಿದ್ದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳ್ಳದೆ ಕುಂಟುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಬೆಂಗಳೂರು ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುಮಾರು 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ದಾಬಸ್ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ನಿರ್ಮಾಣವಾಗಲಿರುವ 'ಕ್ವಿನ್ ಸಿಟಿ'ಗೆ (KWIN City) ಎತ್ತಿನಹೊಳೆ ನೀರನ್ನು ಹರಿಸಲಾಗುವುದು ಎಂಬ ಸರ್ಕಾರದ ಘೋಷಣೆಯು ಈಗ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯು ಭವಿಷ್ಯದ ಬೃಹತ್ ನಗರಕ್ಕೆ ನೀರುಣಿಸುವ ಭರವಸೆ ನೀಡುತ್ತಿದ್ದರೂ, ವಾಸ್ತವದಲ್ಲಿ ಇದು ಕೇವಲ ಕಾಗದದ ಮೇಲಿನ ಯೋಜನೆಯಂತೆ ಕಾಣುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ನೀರಿನ ಮೂಲದ ಯಕ್ಷಪ್ರಶ್ನೆ
ಬೆಂಗಳೂರು ಗ್ರಾಮಾಂತರದ 5,800 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ನವನಗರವು ಅಂದಾಜು ಒಂದು ಲಕ್ಷ ಜನರಿಗೆ ಉದ್ಯೋಗಾವಕಾಶ ನೀಡುವ ನಿರೀಕ್ಷೆಯಿದೆ. ಆದರೆ, ಈ ಬೃಹತ್ ಜನಸಂಖ್ಯೆಗೆ ವರ್ಷವಿಡೀ ನೀರು ಒದಗಿಸುವ ಜವಾಬ್ದಾರಿಯನ್ನು ಸರ್ಕಾರ ಎತ್ತಿನಹೊಳೆ ಯೋಜನೆಯ ಹೆಗಲಿಗೆ ಹಾಕಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಹತ್ತು ವರ್ಷ ಕಳೆದರೂ ಎತ್ತಿನಹೊಳೆ ನೀರು ಹರಿಸಲು ಸಾಧ್ಯವಾಗಿಲ್ಲ. ಯೋಜನೆಯ ವ್ಯಾಪ್ತಿಯಲ್ಲೇ ಈ ನಗರ ನಿರ್ಮಾಣವಾಗುತ್ತಿದೆ ಎಂಬ ತಾಂತ್ರಿಕ ಕಾರಣವನ್ನು ಸರ್ಕಾರ ನೀಡುತ್ತಿದ್ದರೂ, ಮೂಲ ಉದ್ದೇಶಿತ ಫಲಾನುಭವಿಗಳಿಗೆ ನೀರು ತಲುಪುವ ಮೊದಲೇ ಕೈಗಾರಿಕಾ ಆಧಾರಿತ ನಗರಕ್ಕೆ ನೀರು ಹಂಚುವುದು ಎಷ್ಟು ನ್ಯಾಯ ಎಂಬ ಪ್ರಶ್ನೆಯನ್ನು ಸ್ಥಳೀಯರು ಮತ್ತು ರೈತ ಸಂಘಟನೆಗಳು ಆಕ್ರೋಶದಿಂದ ಮುಂದಿಟ್ಟಿವೆ.
ಈ ಬಗ್ಗೆ ಖಾಸಗಿ ಉದ್ಯೋಗಿ ವಿವೇಕ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಈಗಿರುವ ಬೆಂಗಳೂರಿಗೆ ಕುಡಿಯುವ ನೀರಿಲ್ಲ. ಬೇಸಿಗೆಯಲ್ಲಿ ಟ್ಯಾಂಕರ್ಗಳ ಮೂಲಕವೇ ನೀರನ್ನು ಆಶ್ರಯಿಸಬೇಕು. ಮೊದಲು ನೀರಿನ ಹಾಹಾಕಾರ ನೀಗಿಸಲು ಸರಕಾರ ಮುಂದಾಗಲಿ. ಇಲ್ಲಿರುವ ಜನರಿಗೆ ಸರ್ಮಪಕ ನೀರು ನೀಡದವರು, ಕಾಮಗಾರಿಯೇ ಪೂರ್ಣಗೊಳ್ಳದ ಎತ್ತಿನಹೊಳೆ ಮೂಲಕ ನಿರ್ಮಾಣವಾಗದ ಕ್ವಿನ್ ಸಿಟಿಗೆ ಹೇಗೆ ನೀರು ನೀಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಅನುಷ್ಠಾನದ ಅಡೆತಡೆಗಳು
ಎತ್ತಿನಹೊಳೆ ಯೋಜನೆಯ ಪ್ರಾಯೋಗಿಕ ಚಾಲನೆಯು ಮೊದಲ ಹಂತದಲ್ಲಿ ನಡೆದಿದೆಯಾದರೂ, ಪೈಪ್ಲೈನ್ ಅಳವಡಿಕೆ, ಕಾಲುವೆ ನಿರ್ಮಾಣ ಮತ್ತು ಪಂಪಿಂಗ್ ಸ್ಟೇಷನ್ಗಳ ಅಂತಿಮ ಕೆಲಸಗಳು ಇಂದಿಗೂ ಬಾಕಿ ಇವೆ. ಆರಂಭದಲ್ಲಿ ಸರ್ಕಾರ ನಿರೀಕ್ಷಿಸಿದ್ದ 24.01 ಟಿಸಿಎಂ ನೀರಿನ ಪ್ರಮಾಣವು ಈಗ ಗಣನೀಯವಾಗಿ ಇಳಿಕೆಯಾಗಿದ್ದು, ಮಳೆಗಾಲದ ಕೆಲವು ದಿನಗಳಲ್ಲಿ ಕೇವಲ 8 ಟಿಎಂಸಿ ನೀರು ದೊರಕುವುದೇ ದೊಡ್ಡ ಸವಾಲಾಗಿದೆ. ಇಂತಹ ಅನಿಶ್ಚಿತತೆಯ ನಡುವೆ, ಲಕ್ಷಾಂತರ ಜನರು ವಾಸಿಸುವ ಕ್ವಿನ್ ನಗರಕ್ಕೆ ನಿರಂತರ ನೀರು ಪೂರೈಕೆ ಮಾಡುವುದು ಅಸಾಧ್ಯದ ಮಾತು ಎಂಬುದು ನೀರಾವರಿ ತಜ್ಞರ ಅಭಿಪ್ರಾಯ. ಮಳೆಗಾಲದಲ್ಲಿ ಮಾತ್ರ ಲಭ್ಯವಿರುವ ನೀರನ್ನು ನಂಬಿ ಇಡೀ ನಗರದ ನೀರಿನ ಅವಶ್ಯಕತೆಯನ್ನು ಪೂರೈಸುವುದು ಸರ್ಕಾರದ ಪಾಲಿಗೆ ಮರೀಚಿಕೆಯಾಗುವ ಸಾಧ್ಯತೆಗಳೇ ಹೆಚ್ಚಿವೆ.
ಕಾವೇರಿ ಮೂಲದ ಪೂರೈಕೆಯೂ ಅಸಾಧ್ಯದ ಮಾತು
ಎತ್ತಿನಹೊಳೆ ಯೋಜನೆಯ ಬಿಕ್ಕಟ್ಟಿನ ನಡುವೆ, ಕ್ವಿನ್ ಸಿಟಿಗೆ ಆರಂಭಿಕ ಹಂತದಲ್ಲಿ ಕಾವೇರಿ ನೀರನ್ನು ಹರಿಸುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಆದರೆ ಬೆಂಗಳೂರು ನಗರದ ವಾಸ್ತವ ಚಿತ್ರಣವೇ ಬೇರೆಯಾಗಿದೆ. 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಅನೇಕ ವಾರ್ಡ್ಗಳಿಗೆ ಇಂದಿಗೂ ಸಂಪೂರ್ಣವಾಗಿ ಕಾವೇರಿ ನೀರು ಹರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರಸ್ತುತ ಬೆಂಗಳೂರು ನಗರಕ್ಕೆ ನಿತ್ಯ ಸುಮಾರು 2,600 ರಿಂದ 2,800 ಎಂಎಲ್ಡಿ ನೀರಿನ ಅವಶ್ಯಕತೆ ಇದ್ದು, ಸದ್ಯಕ್ಕೆ 600 ಎಂಎಲ್ಡಿ ನೀರಿನ ತೀವ್ರ ಅಭಾವವಿದೆ. 2030ರ ವೇಳೆಗೆ ಈ ಬೇಡಿಕೆ ಸುಮಾರು 3,400 ಎಂಎಲ್ಡಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಸಂಕಷ್ಟದ ನಡುವೆ ಕಾವೇರಿ ಮೂಲದಿಂದ ಕ್ವಿನ್ ಸಿಟಿಗೆ ನೀರು ಹರಿಸುವುದು ಕೇವಲ ಭರವಸೆಯಾಗಿಯೇ ಉಳಿಯುವ ಸಾಧ್ಯತೆಯಿದೆ.
ಸ್ಮಾರ್ಟ್ ವಾಟರ್ ಸಿಟಿ ಮತ್ತು ಅಧಿಕಾರಿಗಳ ಲೆಕ್ಕಾಚಾರ
ಸರ್ಕಾರವು ಎತ್ತಿನಹೊಳೆ ನೀರನ್ನಷ್ಟೇ ನಂಬಿಕೊಳ್ಳದೆ ಕ್ವಿನ್ ಸಿಟಿಯನ್ನು 'ಸ್ಮಾರ್ಟ್ ವಾಟರ್ ಸಿಟಿ'ಯನ್ನಾಗಿ ರೂಪಿಸಲು ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆನೀರು ಕೊಯ್ಲು ಮೂಲಕ ಪ್ರತಿ ಕಟ್ಟಡದಲ್ಲಿ ನೀರು ಸಂಗ್ರಹಿಸುವುದು ಮತ್ತು ಬಳಸಿದ ನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ಮರುಬಳಕೆ ಮಾಡುವುದು ಈ ಯೋಜನೆಯ ಭಾಗವಾಗಿದೆ. ಅಲ್ಲದೆ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳ ಜಲಾನಯನ ಪ್ರದೇಶದ ಕೆರೆಗಳಿಗೆ ಎತ್ತಿನಹೊಳೆ ನೀರನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶವನ್ನೂ ಹೊಂದಲಾಗಿದೆ. ಆದರೂ, ದಾಬಸ್ಪೇಟೆ ಭಾಗದಲ್ಲಿ ಈಗಾಗಲೇ ಅಂತರ್ಜಲ ಮಟ್ಟ 1,500 ಅಡಿಗಿಂತ ಕೆಳಕ್ಕೆ ಕುಸಿದಿರುವುದು ಮತ್ತು ಯೋಜನೆಯ ವೆಚ್ಚವು 12 ಸಾವಿರ ಕೋಟಿಯಿಂದ 23 ಸಾವಿರ ಕೋಟಿ ರೂ.ಗೆ ಏರಿಕೆಯಾಗಿರುವುದು ಯೋಜನೆಯ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ.
ಸಮಸ್ಯೆಗಳು ಇವೆ
ವೆಚ್ಚದ ಏರಿಕೆ (Cost Escalation): ಎತ್ತಿನಯೊಳೆ ಯೋಜನೆಗೆ 2012ರಲ್ಲಿ 12,912 ಕೋಟಿ ರೂ,ಗಳಿದ್ದ ಅಂದಾಜು ಮೊತ್ತ, ಈಗ 23,251 ಕೋಟಿ ರೂ., ದಾಟಿದೆ. ಈಗ ಕ್ವಿನ್ ಸಿಟಿ ಮೂಲಕ ಎತ್ತಿನಯೊಳೆ ಯೋಜನೆಗೆ ಹೊಸ ಮಾರ್ಗ ನಿರ್ನಮಿಸಿದರೆ, ಯೋಜನಾ ಗಾತ್ರ ಇನ್ನಷ್ಟು ಏರಿಕೆಯಾಗಲಿದೆ.
ತಾಂತ್ರಿಕ ಮಿತಿಗಳು (Power Requirement): ಎತ್ತಿನಹೊಳೆ ನೀರನ್ನು ಎತ್ತಿ ಹರಿಸಲು (Lift) ಸುಮಾರು 370 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆಯಿದೆ. ವರ್ಷವಿಡೀ ಈ ಪ್ರಮಾಣದ ವಿದ್ಯುತ್ ಒದಗಿಸುವುದು ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಸರಿದೂಗಿಸಿ, ಕ್ವಿನ್ ಸಿಟಿಯಂತಹ ಬೃಹತ್ ನಗರಕ್ಕೆ ನೀರು ನೀಡುವುದು ಇನ್ನಷ್ಟು ದುಬಾರಿಯಾಗಲಿದೆ.
ಅಂತರ್ಜಲ ಕುಸಿತದ ಆತಂಕ: ದಾಬಸ್ಪೇಟೆ ಮತ್ತು ದೊಡ್ಡಬಳ್ಳಾಪುರ ಭಾಗದಲ್ಲಿ ಈಗಾಗಲೇ ಅಂತರ್ಜಲ ಮಟ್ಟ 1,200 ರಿಂದ 1,500 ಅಡಿ ದಾಟಿದೆ. ಎತ್ತಿನಹೊಳೆ ನೀರು ಕೆರೆಗಳಿಗೆ ತುಂಬಿಸುವ ಮೊದಲೇ ನಗರ ನಿರ್ಮಾಣವಾದರೆ, ಅಲ್ಲಿನ ಸಾವಿರಾರು ಬೋರ್ವೆಲ್ಗಳು ಅಂತರ್ಜಲವನ್ನು ಇನ್ನಷ್ಟು ಬತ್ತಬಹುದು.

