
Mining Controversy| ಸಂಡೂರು ದೇವʼದಾರಿʼಗೆ ಕೇಂದ್ರ ಪ್ರವೇಶ: ರಾಜ್ಯ ಸರ್ಕಾರಕ್ಕೆ ಪೀಕಲಾಟ
ಪರಿಸರ ಹೋರಾಟ ಮತ್ತು ಸ್ಥಳೀಯರ ವಿರೋಧವನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ. ಸುಮಾರು 99 ಸಾವಿರ ಮರ ಕಡಿಯುವ ಪ್ರಸ್ತಾವನೆ ಪರಿಸರದ ಮೇಲಿನ ಪರಿಣಾಮದ ಕುರಿತು ಸರ್ಕಾರಕ್ಕೆ ಒತ್ತಡವಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಸಂಬಂಧ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಿಯಮಿತದ (ಕೆಐಒಸಿಎಲ್) ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ.
ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಶೀತಲ ಸಮರಕ್ಕೆ ಎಡೆಮಾಡಿಕೊಟ್ಟಿದ್ದು, ಕೈಗಾರಿಕಾ ಅಸ್ತಿತ್ವ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಜಟಾಪಟಿಯನ್ನು ತೀವ್ರಗೊಳಿಸಿದೆ.
ಕೇಂದ್ರ ಗಣಿ ಸಚಿವಾಲಯವು ದೇವದಾರಿ ವ್ಯಾಪ್ತಿಯ 470.4 ಹೆಕ್ಟೇರ್ ಪ್ರದೇಶವನ್ನು ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ತೆಗೆಯಲು 2016ರ ಡಿ.5ರಂದೇ ಕಾಯ್ದಿರಿಸಲಾಗಿತ್ತು. 2023ರ ಜ.2 ರಂದು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಸೆಕ್ಷನ್ 4A(4) ರ ಪ್ರಕಾರ, ಗುತ್ತಿಗೆ ಪಡೆದ ಎರಡು ವರ್ಷದೊಳಗೆ ಉತ್ಪಾದನೆ ಆರಂಭಿಸಬೇಕಿತ್ತು. ರಾಜ್ಯ ಸರ್ಕಾರವು ಈಗಾಗಲೇ ಇದನ್ನು ಒಂದು ವರ್ಷ ವಿಸ್ತರಿಸಿ ಜ.1ಕ್ಕೆ ನಿಗದಿಪಡಿಸಿತ್ತು. ಈಗ ಕೇಂದ್ರ ಸರ್ಕಾರವು ಸೆಕ್ಷನ್ 20A ಅಡಿಯಲ್ಲಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿ, ಈ ಗಡುವನ್ನು ಮತ್ತೆರಡು ವರ್ಷಗಳ ಕಾಲ, ಅಂದರೆ 2028ರ ಜ.1ರವರೆಗೆ ವಿಸ್ತರಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಖನಿಜ ಸಂಪನ್ಮೂಲಗಳ ಸುಸ್ಥಿರ ಬಳಕೆಯ ಹೆಸರಿನಲ್ಲಿ ಮಾಡಲಾದ ಆದೇಶವಾಗಿದೆ.
ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ
ಈ ಯೋಜನೆಯು ಕೇವಲ ಒಂದು ಗಣಿಗಾರಿಕೆ ಯೋಜನೆಯಾಗಿ ಉಳಿಯದೆ, ಒಕ್ಕೂಟ ವ್ಯವಸ್ಥೆಯ ನಡುವಿನ ತಿಕ್ಕಾಟವಾಗಿ ಬದಲಾಗಿದೆ. ಕೆಐಒಸಿಎಲ್ ಒಂದು ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಯಾಗಿದ್ದು, ಕುದುರೆಮುಖದಲ್ಲಿ ಗಣಿಗಾರಿಕೆ ನಿಂತ ನಂತರ ಅದಕ್ಕೆ ಸ್ವಂತ ಅದಿರಿನ ಮೂಲವಿಲ್ಲದಂತಾಗಿದೆ. ಸಂಸ್ಥೆಯ ಉಳಿವಿಗಾಗಿ ದೇವದಾರಿ ಯೋಜನೆ ಅತ್ಯಗತ್ಯ. ರಾಜ್ಯ ಸರ್ಕಾರವು ರಾಜಕೀಯ ಕಾರಣಗಳಿಗಾಗಿ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರವು ಆರೋಪಿಸಿದೆ.
ಕುದುರೆಮುಖ ಗಣಿಗಳಿಗೆ ಸಂಬಂಧಿಸಿದ ಹಳೆಯ ವಿವಾದಗಳನ್ನು ನೆಪವಾಗಿಟ್ಟುಕೊಂಡು ಕರ್ನಾಟಕ ಸರ್ಕಾರವು ದೇವದಾರಿ ಯೋಜನೆಗೆ ನೀಡಬೇಕಾದ ಅಂತಿಮ ಅನುಮತಿಗಳನ್ನು ಬಾಕಿ ಉಳಿಸಿಕೊಂಡಿದೆ ಎಂದು ಕೇಂದ್ರವು ದೂರಿದೆ. ಅರಣ್ಯ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿತ್ತು. ಹೈಕೋರ್ಟ್ ನಿರ್ದೇಶನ ನೀಡಿದ ನಂತರವಷ್ಟೇ, ಅರಣ್ಯ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಿಂದಾಗಿ ಕೆಐಒಸಿಎಲ್‌ಗೆ ಕೆಲಸ ಆರಂಭಿಸಲು ಕೇವಲ ಮೂರು ತಿಂಗಳ ಕಾಲಾವಕಾಶ ಮಾತ್ರ ಉಳಿದಂತಾಗಿತ್ತು. ಮರಗಳ ಎಣಿಕೆ, ಮರ ಕಡಿಯುವಿಕೆ, ರಸ್ತೆ ತಿರುವು ಮತ್ತು ಅರಣ್ಯ ಭೂಮಿಯ ತಾತ್ಕಾಲಿಕ ಬಳಕೆಗಾಗಿ ಕೆಐಒಸಿಎಲ್ ಸಲ್ಲಿಸಿರುವ ಪ್ರಸ್ತಾವನೆಗಳು ಇನ್ನೂ ರಾಜ್ಯ ಸರ್ಕಾರದ ಕಡತಗಳಲ್ಲಿ ಧೂಳು ಹಿಡಿಯುತ್ತಿವೆ.
ರಾಜ್ಯ ಸರ್ಕಾರವು ಪರಿಸರ ಪ್ರೇಮಿಗಳ ಹೋರಾಟ ಮತ್ತು ಸ್ಥಳೀಯರ ವಿರೋಧವನ್ನು ಎದುರಿಸುತ್ತಿದೆ. ಅಲ್ಲದೆ, ಸುಮಾರು 99 ಸಾವಿರ ಮರಗಳನ್ನು ಕಡಿಯುವ ಪ್ರಸ್ತಾವನೆ ಇರುವುದರಿಂದ, ಇದು ಪರಿಸರದ ಮೇಲೆ ಬೀರಲಿರುವ ಅಗಾಧ ಪರಿಣಾಮಗಳ ಕುರಿತು ರಾಜ್ಯ ಸರ್ಕಾರ ಜಾಗರೂಕವಾಗಿದೆ. ಅರಣ್ಯ ಇಲಾಖೆಯ ಕೆಲವು ತಾಂತ್ರಿಕ ವರದಿಗಳು ಸಹ ಯೋಜನೆಗೆ ಪೂರಕವಾಗಿಲ್ಲ ಎಂಬುದು ಗಮನಾರ್ಹ ಎಂದು ರಾಜ್ಯ ಸರ್ಕಾರ ಹೇಳಿದೆ.
ಪರಿಸರದ ಮೇಲಾಗುವ ದುಷ್ಪರಿಣಾಮಗಳು
ಸಂಡೂರಿನ ದೇವದಾರಿ ಬೆಟ್ಟಗಳು ಜೈವಿಕ ವೈವಿಧ್ಯತೆಯ ಕಣಜಗಳಾಗಿವೆ. ಗಣಿಗಾರಿಕೆಯಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಲಿದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ. ಈ ಯೋಜನೆಗಾಗಿ ಸುಮಾರು 99 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಇದು ಸಂಡೂರಿನ ಮೈಕ್ರೋ-ಕ್ಲೈಮೇಟ್ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಅರಣ್ಯ ಪ್ರದೇಶವು ಕರಡಿಗಳು, ಚಿರತೆಗಳು ಮತ್ತು ಅನೇಕ ಅಪರೂಪದ ಪಕ್ಷಿ ಸಂಕುಲಗಳ ಆವಾಸಸ್ಥಾನವಾಗಿದೆ. ಗಣಿಗಾರಿಕೆಯಿಂದ ಈ ಪ್ರಾಣಿಗಳು ನಾಡಿಗೆ ನುಗ್ಗುವ ಸಂಭವ ಹೆಚ್ಚಿದೆ. ದೇವದಾರಿ ಬೆಟ್ಟಗಳು ನೂರಾರು ವರ್ಷಗಳಿಂದ ನೀರಿನ ಸೆಲೆಗಳನ್ನು ಕಾಪಾಡಿಕೊಂಡು ಬಂದಿವೆ. ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುವುದಲ್ಲದೆ, ಸ್ಥಳೀಯ ಕೃಷಿ ಭೂಮಿಗೆ ಹರಿಯುವ ನೀರಿನ ಮಾರ್ಗಗಳು ಕಲುಷಿತಗೊಳ್ಳುತ್ತವೆ. ಸಂಡೂರಿನ ಪ್ರಸಿದ್ಧ ಕುಮಾರಸ್ವಾಮಿ ದೇವಾಲಯ ಮತ್ತು ಪಾರ್ವತಿ ದೇವಾಲಯಗಳು ಈ ಗಣಿಗಾರಿಕೆ ಪ್ರದೇಶದ ಹತ್ತಿರದಲ್ಲೇ ಇವೆ. ಸ್ಫೋಟಗಳ ಕಂಪನದಿಂದ ಈ ಪುರಾತನ ಸ್ಮಾರಕಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸ್ಥಳೀಯರ ಹಾಗೂ ಪರಿಸರ ಪ್ರೇಮಿಗಳ ಹೋರಾಟ
"ಸಂಡೂರು ಉಳಿಸಿ" ಅಭಿಯಾನದ ಅಡಿಯಲ್ಲಿ ಸ್ಥಳೀಯ ನಾಗರಿಕರು, ಪರಿಸರ ಕಾರ್ಯಕರ್ತರು ಮತ್ತು ಸ್ವಯಂಸೇವಾ ಸಂಸ್ಥೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿವೆ. 2000ರ ದಶಕದಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದ ಸಂಡೂರು ಈಗಾಗಲೇ ಸಾಕಷ್ಟು ಹಾನಿ ಅನುಭವಿಸಿದೆ. ಲೋಕಾಯುಕ್ತ ವರದಿಗಳಲ್ಲಿ ದಾಖಲಾಗಿರುವಂತೆ, ಗಣಿಗಾರಿಕೆಯು ಈ ಭಾಗದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಮತ್ತೊಮ್ಮೆ ಅಂತಹದ್ದೇ ಬೃಹತ್ ಗಣಿಗಾರಿಕೆಗೆ ಅವಕಾಶ ನೀಡುವುದು ಆತ್ಮಹತ್ಯಾಕಾರಿ ಎಂದು ಹೋರಾಟಗಾರರು ವಾದಿಸುತ್ತಿದ್ದಾರೆ.
ಮತ್ತೊಂದೆಡೆ, ಕೆಐಒಸಿಎಲ್ ಸಂಸ್ಥೆಯ ದೃಷ್ಟಿಕೋನವನ್ನೂ ಗಮನಿಸಬೇಕಿದೆ. ಮಂಗಳೂರಿನಲ್ಲಿರುವ ಈ ಸಂಸ್ಥೆಯ ಪೆಲೆಟ್ ಪ್ಲಾಂಟ್ ಅದಿರಿನ ಪೂರೈಕೆಯ ಮೇಲೆ ಅವಲಂಬಿತವಾಗಿದೆ. ಕುದುರೆಮುಖದಲ್ಲಿ ಪರಿಸರ ಕಾರಣಗಳಿಗಾಗಿಯೇ ಗಣಿಗಾರಿಕೆ ನಿಂತ ನಂತರ, ಸಂಸ್ಥೆಯು ಸಾವಿರಾರು ಕಾರ್ಮಿಕರ ಹಿತದೃಷ್ಟಿಯಿಂದ ಮತ್ತು ತನ್ನ ಅಸ್ತಿತ್ವಕ್ಕಾಗಿ ಹೊಸ ಗಣಿಗಳನ್ನು ಹುಡುಕುತ್ತಿದೆ. ದೇವದಾರಿ ಯೋಜನೆಯಿಂದ ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬುದು ಸಂಸ್ಥೆಯ ವಾದವಾಗಿದೆ.

