Type 1 Diabetes| ರಾಜ್ಯದಲ್ಲಿ 7 ಸಾವಿರ ಮಕ್ಕಳಲ್ಲಿ  ಟೈಪ್-1 ಮಧುಮೇಹ; ಜೀವನ್ಮರಣ ಹೋರಾಟ ನಡೆಸುವ ಮಕ್ಕಳಿಗೆ ನೆರವಿಲ್ಲ!
x
ಟೈಪ್‌ -1 ಮಧುಮೇಹ

Type 1 Diabetes| ರಾಜ್ಯದಲ್ಲಿ 7 ಸಾವಿರ ಮಕ್ಕಳಲ್ಲಿ ಟೈಪ್-1 ಮಧುಮೇಹ; ಜೀವನ್ಮರಣ ಹೋರಾಟ ನಡೆಸುವ ಮಕ್ಕಳಿಗೆ ನೆರವಿಲ್ಲ!

18 ವರ್ಷದೊಳಗಿನ ಎಲ್ಲಾ ಟೈಪ್-1 ಮಧುಮೇಹಿ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಇನ್ಸುಲಿನ್ ಮತ್ತು ಗ್ಲುಕೋಮೀಟರ್ ಸ್ಟ್ರಿಪ್ ನೀಡಲು ಆರೋಗ್ಯ ಇಲಾಖೆ ವಿಪಲವಾಗಿದೆ.


ಆಡಿ ನಲಿಯಬೇಕಾದ ವಯಸ್ಸಿನಲ್ಲೇ ಸಿರೆಂಜ್‌, ಗ್ಲುಕೋ ಮೀಟರ್ ಜೊತೆಗೆ ಗೆಳೆತನ ಮಾಡಬೇಕಾದ ದುಸ್ಥಿತಿ ಎಳೆಯರಿಗೆ ಎದುರಾಗಿದೆ. ಕರ್ನಾಟಕದಲ್ಲಿ ಅಂದಾಜು 7 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಟೈಪ್-1 ಮಧುಮೇಹಕ್ಕೆ ತುತ್ತಾಗಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಇನ್ಸುಲಿನ್‌, ಗ್ಲುಕೋಮೀಟರ್‌ ಪರೀಕ್ಷೆಗಗೆಂದೇ ಸಾವಿರಾರು ರೂ. ಖರ್ಚು ಮಾಡಲು ಆಗದೇ ಹಲವು ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಟೈಪ್-1 ಡಯಾಬಿಟೀಸ್‌ ಏನು?

ಮೆದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆ ನಿಲ್ಲಿಸುವುದರಿಂದ ಟೈಪ್‌-1 ಮಧುಮೇಹ ಬರಲಿದೆ. ಈ ಕಾಯಿಲೆ ಆನುವಂಶಿಕ ಅಥವಾ ಹುಟ್ಟಿನಿಂದಲೂ ಕಾಣಿಸಿಕೊಳ್ಳಲಿದೆ. ಗಂಭೀರವಾದ ಈ ಕಾಯಿಲೆಗೆ ನಿತ್ಯ ದೇಹಕ್ಕೆ ಇನ್ಸುಲಿನ್ ತೆಗೆದುಕೊಳ್ಳುವುದೇ ಏಕೈಕ ಪರಿಹಾರ. ಒಂದು ಮಗುವಿಗೆ ಇನ್ಸುಲಿನ್, ಗ್ಲುಕೋಮೀಟರ್ ಸ್ಟ್ರಿಪ್ಸ್ ಮತ್ತು ಪೌಷ್ಟಿಕಾಂಶದ ಆಹಾರ ಒದಗಿಸಬೇಕಾದರೆ ಪೋಷಕರು ತಿಂಗಳಿಗೆ 3 ರಿಂದ 5 ಸಾವಿರ ರೂ. ಖರ್ಚು ಮಾಡಬೇಕಿದೆ. ವಾರ್ಷಿಕವಾಗಿ 40 ರಿಂದ 60 ಸಾವಿರ ರೂ. ವೆಚ್ಚವಾಗುವ ಹಿನ್ನೆಲೆ ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ ದುಬಾರಿಯಾಗಿದೆ.

ಉಚಿತ ಇನ್ಸುಲಿನ್‌ ನೀಡಲು ಸರ್ಕಾರದ ಮೇಲೆ ಒತ್ತಡ

ಕೇರಳ ಮತ್ತು ತಮಿಳುನಾಡು ಮಾದರಿಯಂತೆ ಕರ್ನಾಟಕದಲ್ಲಿ ಟೈಪ್-1 ಮಧುಮೇಹಿ ಮಕ್ಕಳಿಗೆ ಉಚಿತ ಇನ್ಸುಲಿನ್ ವಿತರಿಸಬೇಕೆಂಬ ಒತ್ತಾಯ ಜೋರಾಗಿ ಕೇಳಿ ಬರುತ್ತಿದೆ.

ಕರ್ನಾಟಕದಲ್ಲಿ 18 ವರ್ಷದೊಳಗಿನ ಎಲ್ಲಾ ಟೈಪ್-1 ಮಧುಮೇಹಿ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆ ಮೂಲಕವೇ ಉಚಿತ ಇನ್ಸುಲಿನ್ ಮತ್ತು ಗ್ಲುಕೋಮೀಟರ್ ಸ್ಟ್ರಿಪ್ ನೀಡುವುದಾಗಿ ಈ ಹಿಂದೆ ಆರೋಗ್ಯ ಇಲಾಖೆ ಹೇಳಿದ್ದರೂ ಈವರೆಗೂ ಅದು ಸಾಕಾರವಾಗಲಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಟೈಪ್‌-1 ಮಧುಮೇಹಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಉಚಿತ ಇನ್ಸುಲಿನ್‌ ಹಾಗೂ ಗ್ಲುಕೋಮೀಟರ್‌ ಸ್ಟ್ರಿಪ್‌ ಒದಗಿಸಬೇಕು ಎಂದು ಮಕ್ಕಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳುವುದೇನು?

ರಾಜ್ಯದಲ್ಲಿ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಸಾವಿರಾರು ಮಕ್ಕಳು ಇನ್ಸುಲಿನ್‌, ಸಿರೆಂಜ್‌ ಜೊತೆಯೇ ಬದುಕು ಸವೆಸಬೇಕಾಗಿದೆ. ಕೆಲ ಕುಟುಂಬಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಮಕ್ಕಳು ಜೀವನ್ಮರಣ ಹೋರಾಟ ನಡೆಸಬೇಕಾಗಿದೆ. ಟೈಪ್-1 ಮಧುಮೇಹಿ ಮಕ್ಕಳು ಪ್ರತಿದಿನ ಇನ್ಸುಲಿನ್ ಪಡೆಯಲೇಬೇಕು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆಯೂ ಅಗತ್ಯವಿದೆ. ಇನ್ಸುಲಿನ್ ಹಾಗೂ ಟೆಸ್ಟಿಂಗ್ ಸ್ಟ್ರಿಪ್‌ಗಳ ಮಾಸಿಕ ವೆಚ್ಚ ಭರಿಸುವುದೂ ಕೆಲ ಕುಟುಂಬಗಳಿಗೆ ಕಷ್ಟಕರವಾಗಿದೆ. ಈ ತುರ್ತು ಆರೋಗ್ಯ ಸಮಸ್ಯೆ ನಿವಾರಿಸಲು ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಬೇಕು ಎಂಬುದು ಮಕ್ಕಳ ರಕ್ಷಣಾ ಆಯೋಗದ ಒತ್ತಾಯವಾಗಿದೆ.

ಸಂವಿಧಾನದ ವಿಧಿ 21ರ ಅಡಿ ಪ್ರತಿಯೊಬ್ಬರಿಗೂ ಆರೋಗ್ಯ ಹಕ್ಕು ಮತ್ತು ಬದುಕುವ ಹಕ್ಕು ಖಾತ್ರಿಪಡಿಸಿದೆ. ವಿಕಲಚೇತನರ ಹಕ್ಕುಗಳ ಕಾಯಿದೆ 2016ರ ಸೆಕ್ಷನ್ 25ರ ಅನ್ವಯವೂ ಸರ್ಕಾರ ದೀರ್ಘಕಾಲದ ಕಾಯಿಲೆಗಳಿಂದ ಬಳಲುವವರಿಗೆ ಉಚಿತ ಚಿಕಿತ್ಸೆ ಮತ್ತು ಅಗತ್ಯ ಔಷಧ ಒದಗಿಸಬೇಕು ಎಂದು ಹೇಳುತ್ತದೆ.

ದೇಶದಲ್ಲಿ ಯಾವುದೇ ಮಗುವೂ ಹಣದ ಕೊರತೆಯಿಂದ ಜೀವ ಉಳಿಸುವ ಔಷಧದಿಂದ ವಂಚಿತವಾಗಬಾರದು ಎಂಬುದು ರಾಷ್ಟ್ರೀಯ ಆರೋಗ್ಯ ನೀತಿಯ ಉದ್ದೇಶವಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಸರ್ಕಾರಿ ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಟೈಪ್-1 ಮಧುಮೇಹಿ ಮಕ್ಕಳಿಗೆ ಉಚಿತ ಇನ್ಸುಲಿನ್ ಮತ್ತು ಗ್ಲುಕೋಮೀಟರ್ ಸ್ಟ್ರಿಪ್ ವಿತರಿಸಬೇಕು ಎಂದು ಕೆ.ಟಿ.ತಿಪ್ಪೇಸ್ವಾಮಿ ಒತ್ತಾಯಿಸಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಸಂಬಂಧ ಕ್ರಮ ಜರುಗಿಸಲು ಆಯುಕ್ತರಿಗೆ ಪ್ರಧಾನ ಕಾರ್ಯದರ್ಶಿಯವರು ಸೂಚಿಸಿದ್ದಾರೆ ಎನ್ನಲಾಗಿದೆ.

ಟೈಪ್-1 ಡಯಾಬಿಟೀಸ್ ಲಕ್ಷಣಗಳೇನು?

ಮಕ್ಕಳಲ್ಲಿ ಟೈಪ್ -1 ಮಧುಮೇಹ ಕಾಣಿಸಿಕೊಂಡಾಗ ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗಲಿದೆ.

ವ್ಯಾಯಾಮ ಮತ್ತು ಆಟವಾಡದೇ ಇದ್ದರೂ ಅತಿಯಾದ ಆಯಾಸವಾಗಲಿದೆ. ಅಸಹನೀಯವಾದ ಹಸಿವು ಕಾಣಿಸಿಕೊಳ್ಳಲಿದೆ. ಮಕ್ಕಳಲ್ಲಿ ಡಯಾಬಿಟಿಕ್ ಕೆಟೊ ಆಸಿಡೋಸಿನ್ ಎಂಬ ಸ್ಥಿತಿ ಬೆಳವಣಿಗೆ ಆಗಲಿದೆ. ಆಗ ರಕ್ತದಲ್ಲಿ ಕೀಟೋನ್‌ಗಳು (ದೇಹವು ಶಕ್ತಿಗಾಗಿ ಸಕ್ಕರೆ ಬದಲಿಗೆ ಕೊಬ್ಬನ್ನು ಬಳಸಿದಾಗ ಉತ್ಪತ್ತಿಯಾಗುವ ರಾಸಾಯನಿಕ) ನಿರ್ಮಾಣವಾಗಲಿವೆ. ಇದು ಮಕ್ಕಳನ್ನು ತೀವ್ರವಾಗಿ ಅಸ್ವಸ್ಥಗೊಳಿಸಲಿದೆ. ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳದಿದ್ದರೆ ಅಧಿಕ ರಕ್ತದೊತ್ತಡ, ದೃಷ್ಟಿ ಸಮಸ್ಯೆ ಅಥವಾ ಗಾಯ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇರಲಿದೆ.

ಟೈಪ್-1 ಮಧುಮೇಹ ಹೊಂದಿರುವ ಮಕ್ಕಳಿಗೆ ಆರೋಗ್ಯ ಇಲಾಖೆಯು ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ನಿಯಮಿತವಾಗಿ ಇನ್ಸುಲಿನ್ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ಕಳೆದ ವರ್ಷ ಆರೋಗು ಇಲಾಖೆ ಹೇಳಿತ್ತು. 25 ಕೋಟಿ ರೂ. ವೆಚ್ಚದಲ್ಲಿ ಇನ್ಸುಲಿನ್ ಖರೀದಿ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದರೂ ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ತಮಿಳುನಾಡು, ಕೇರಳ ಮಾದರಿ ಹೇಗಿದೆ?

ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಇನ್ಸುಲಿನ್ ಒದಗಿಸಬೇಕೆಂಬ ಆಗ್ರಹ ಜೋರಾಗಿದೆ. ಕೇರಳದಲ್ಲಿ ಮಿಠಾಯಿ ಯೋಜನೆ ಮೂಲಕ ಟೈಪ್-1 ಮಧುಮೇಹವಿರುವ ಮಕ್ಕಳಿಗಾಗಿ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಇನ್ಸುಲಿನ್ ಪೆನ್‌ಗಳು, ಗ್ಲುಕೋಮೀಟರ್ ಮತ್ತು ಪರೀಕ್ಷಾ ಸ್ಟ್ರಿಪ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಅವಶ್ಯವಿರುವ ಮಕ್ಕಳಿಗೆ ಇನ್ಸುಲಿನ್ ಪಂಪ್‌ಗಳು ಮತ್ತು ಕಂಟಿನ್ಯೂಯಸ್ ಗ್ಲುಕೋಸ್ ಮಾನಿಟರಿಂಗ್ ಸಾಧನಗಳನ್ನು ಒದಗಿಸಲಾಗುತ್ತಿದೆ. ಟೈಪ್‌-1 ಮಧುಮೇಹಿ ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ತಿರುವನಂತಪುರಂನಲ್ಲಿ ಮಿಠಾಯಿ ಕ್ಲಿನಿಕ್‌ಗಳನ್ನು ತೆರೆದು, ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ.

ಇನ್ನು ತಮಿಳುನಾಡಿನಲ್ಲಿ ಸರ್ಕಾರವು ಟೈಪ್-1 ಮಧುಮೇಹ ನಿರ್ವಹಣೆಗೆ ಬಲಿಷ್ಠ ವ್ಯವಸ್ಥೆ ರೂಪಿಸಿದೆ. ಕೊಯಮತ್ತೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಕ್ಕಳಿಗೆ ಇನ್ಸುಲಿನ್ ಪೆನ್, ಸಿರಿಂಜ್ ಮತ್ತು ಗ್ಲುಕೋಮೀಟರ್ ಒಳಗೊಂಡ ಉಚಿತ ಕಿಟ್‌ಗಳನ್ನು ಸರ್ಕಾರಿ ಆಸ್ಪತ್ರೆಗಳ ಮೂಲಕ ನೀಡಲಾಗುತ್ತಿದೆ. ಟೈಪ್-1 ರೋಗಿಗಳ ಪ್ರತ್ಯೇಕ ನೋಂದಣಿ ವ್ಯವಸ್ಥೆ ಕೂಡ ಆರಂಭಿಸಿದ್ದು, ಎಲ್ಲರಿಗೂ ಸಮರ್ಪಕ ಚಿಕಿತ್ಸೆ ತಲುಪಿಸುತ್ತಿದೆ.

ಟೈಪ್ -2 ಮಧುಮೇಹವೂ ಹೆಚ್ಚಳ

'ಟೈಪ್- 1 ಮಧುಮೇಹವು ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದೇ ರೀತಿ ಟೈಪ್ -2 ಮಧುಮೇಹ 30 ವರ್ಷದೊಳಗಿನವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆಹಾರ ಪದ್ಧತಿ, ಬದಲಾದ ಜೀವನಶೈಲಿ, ದೈಹಿಕ ಚಟುವಟಿಕೆ ಇಲ್ಲದಿರುವ ಕಾರಣ ಟೈಪ್ -2 ಮಧುಮೇಹಿಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಕರ್ನಾಟಕ ಎಂಡೋಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನದಿಂದ ತಿಳಿದುಬಂದಿದೆ.

ಕಂಪ್ಯೂಟರ್, ಟಿ.ವಿ, ಮೊಬೈಲ್‌ನಂತಹ ಸಾಧನಗಳ ಮುಂದೆ ಅಧಿಕ ಸಮಯ ಕಳೆಯುತ್ತಿರುವುದರಿಂದ 16-17 ವರ್ಷದವರಲ್ಲಿಯೂ ಟೈಪ್- 2 ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಎಂಡೋಕ್ರೈನಾಲಜಿ ಸಂಸ್ಥೆಯು 3600 ಯುವ ಮಧುಮೇಹಿಗಳ ಮೇಲೆ ಸಂಶೋಧನೆ ನಡೆಸಿತ್ತು. ಅವರಲ್ಲಿ ಶೇ 70 ರಷ್ಟು ಮಂದಿಗೆ ಟೈಪ್ -2 ಹಾಗೂ ಶೇ 30 ರಷ್ಟು ಮಂದಿಗೆ ಟೈಪ್ -1 ಮಧುಮೇಹ ಇರುವುದು ದೃಢವಾಗಿತ್ತು ಎಂದು ತಿಳಿದು ಬಂದಿದೆ.

ಆರೋಗ್ಯ ಇಲಾಖೆಯು ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ (ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್) ತಪಾಸಣೆ ನಡೆಸುತ್ತಿದೆ. ರಾಜ್ಯಾದ್ಯಂತ ಜಿಲ್ಲಾ ಹಂತದಲ್ಲಿ 30 ಎನ್‌ಸಿಡಿ ಕ್ಲಿನಿಕ್‌ಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಎಚ್.ಸಿ-ಎನ್.ಸಿ.ಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷ 90 ಸಾವಿರಕ್ಕೂ ಅಧಿಕ ಜನರಲ್ಲಿ ಮಧುಮೇಹ ಪತ್ತೆಯಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೆಲ ಪ್ರದೇಶಗಳಲ್ಲಿ ವಾಸವಿರುವ ಟೈಪ್‌-1 ಮಧುಮೇಹಿ ಮಕ್ಕಳು ನಿತ್ಯ ಆಸ್ಪತ್ರೆಗಳಿಗೆ ಹೋಗಿ ಇನ್ಸುಲಿನ್‌ ಪಡೆಯುವುದು ಕಷ್ಟವಾಗಲಿದೆ. ರಾಜ್ಯ ಸರ್ಕಾರವು ಆರೋಗ್ಯ ಸೇವೆಗಳ ವಿಲೇವಾರಿಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ಎಎನ್‌ಸಿ ಶುಶ್ರೂಷಕಿಯರನ್ನು ನಿಯೋಜಿಸಿದೆ. ಅವರ ಕಡೆಯಿಂದಲೇ ಟೈಪ್‌-1 ಮಧುಮೇಹಿಗಳಿಗೆ ನಿತ್ಯ ಇನ್ಸುಲಿನ್‌ ಕೊಡಿಸಬೇಕು. ಮಕ್ಕಳಿಗೆ ಕೇರಳ ಹಾಗೂ ತಮಿಳುನಾಡು ಮಾದರಿಯಲ್ಲಿ ಪ್ರತ್ಯೇಕ ಕಿಟ್‌ಗಳನ್ನು ವಿತರಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ಸಿಬಿಎಸ್ಇ 'ಶುಗರ್ ಬೋರ್ಡ್' ಕಡ್ಡಾಯ

ಮಕ್ಕಳಲ್ಲಿ ಹೆಚ್ಚುತ್ತಿರುವ ಟೈಪ್-2 ಮಧುಮೇಹ ಮತ್ತು ಬೊಜ್ಜು ತಡೆಗಟ್ಟಲು ಕೇಂದ್ರ ಸರ್ಕಾರವು ಕಳೆದ ಕೆಲ ತಿಂಗಳ ಹಿಂದೆಯೇ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರನ್ವಯ ಸಿಬಿಎಸ್ಇ ಮಂಡಳಿಯು ತನ್ನ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಶುಗರ್ ಬೋರ್ಡ್ ಅಳವಡಿಸಬೇಕು. ಇದರಲ್ಲಿ ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಹಾಕಬೇಕು ಎಂದು ಸೂಚನೆ ನೀಡಿತ್ತು.

Read More
Next Story