Internal Reservation: ರೋಸ್ಟರ್ ಬಿಂದುಗಳ ಸಂಕೋಲೆಯಲ್ಲಿ 3ಎ, 3ಬಿ ಸಮುದಾಯ: 100 ರಿಂದ 400ಕ್ಕೆ ಏರಿಕೆ?
x

Internal Reservation: ರೋಸ್ಟರ್ ಬಿಂದುಗಳ ಸಂಕೋಲೆಯಲ್ಲಿ 3ಎ, 3ಬಿ ಸಮುದಾಯ: 100 ರಿಂದ 400ಕ್ಕೆ ಏರಿಕೆ?

ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ.5.25, ಸ್ಪರ್ಶ ಸಮುದಾಯ ಸೇರಿ ಅಲೆಮಾರಿ ಸಮುದಾಯಕ್ಕೆ ಶೇ.4.5ರಷ್ಟು ಪಾಲು ನೀಡುತ್ತಿರುವುದರಿಂದ ರೋಸ್ಟರ್ ಬಿಂದುವನ್ನು 100ರಿಂದ 400ಕ್ಕೆ ಹೆಚ್ಚಿಸುವುದು ಅನಿವಾರ್ಯವಾಗಿದೆ.


Click the Play button to hear this message in audio format

ಇತ್ತೀಚೆಗೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದರೂ, ಅದರ ಜಾರಿ ಪ್ರಕ್ರಿಯೆಯು ಹೊಸ ಸವಾಲುಗಳನ್ನು ಸೃಷ್ಟಿಸಿದೆ. ರೋಸ್ಟರ್ ಬಿಂದುಗಳನ್ನು 100 ರಿಂದ 400ಕ್ಕೆ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ.

ಈ ನಡುವೆ, ಈ ಹಿಂದಿನಂತೆ ನೇಮಕಾತಿ ಪ್ರಕ್ರಿಯೆ ನಡೆಯುವುದರಿಂದ ಹಿಂದುಳಿದ ವರ್ಗಗಳಾದ 3ಎ ಮತ್ತು 3ಬಿ ಸಮುದಾಯಗಳಿಗೆ ಅನ್ಯಾಯದ ಕುರಿತು ದೊಡ್ಡ ಚರ್ಚೆ ಪ್ರಾರಂಭವಾಗಿದೆ.

ರೋಸ್ಟರ್ ಬಿಂದು ಎನ್ನುವುದು ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವ ಒಂದು ಕ್ರಮವಾಗಿದೆ. ಈವರೆಗೆ ರಾಜ್ಯದಲ್ಲಿ 100 ಬಿಂದುಗಳ ರೋಸ್ಟರ್ ಚಾಲ್ತಿಯಲ್ಲಿದೆ. 100 ಹುದ್ದೆಗಳಿಗೆ ಇಂತಿಷ್ಟು ಹುದ್ದೆಗಳು ಇಂತಿಷ್ಟು ಸಮುದಾಯಗಳಿಗೆ ನಿಗದಿ ಮಾಡಲಾಗುತ್ತದೆ. 1995ರಿಂದ ಪಾಲಿಸಿಕೊಂಡು ಬಂದಿರುವ ಪರಿಶಿಷ್ಟ ಜಾತಿಗಳಿಗೆ ಶೇ.15ರಷ್ಟು ಮೀಸಲಾತಿ ನೀತಿಯನ್ನು ಮತ್ತೊಮ್ಮೆ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಪರಿಶಿಷ್ಟ ಜಾತಿ ಎಡಗೈ ಹಾಗೂ ಬಲಗೈ ಸಮುದಾಯಗಳಿಗೆ ತಲಾ ಶೇ.5.25 ಹಾಗೂ ಸ್ಪರ್ಶ ಸಮುದಾಯ ಸೇರಿ ಅಲೆಮಾರಿ ಸಮುದಾಯಕ್ಕೆ ಶೇ.4.5ರಷ್ಟು ಪಾಲು ನೀಡುತ್ತಿರುವುದರಿಂದ ರೋಸ್ಟರ್ ಬಿಂದುಗಳನ್ನು 100ರಿಂದ 400ಕ್ಕೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

ಇಲ್ಲಿ ಶೇ. 5.25 ಎನ್ನುವುದು ಪೂರ್ಣ ಸಂಖ್ಯೆಯಲ್ಲ. 100 ಹುದ್ದೆಗಳ ನೇಮಕಾತಿಯಲ್ಲಿ ಶೇ.5.25 ಹುದ್ದೆಗಳನ್ನು ನೀಡಲು ಸಾಧ್ಯವಿಲ್ಲ. ಪ್ರತಿ ಬಾರಿ ನೇಮಕಾತಿ ನಡೆದಾಗ ಈ ಶೇ.0.25 ರಷ್ಟು ಭಾಗ ಉಳಿಯುತ್ತಾ ಹೋಗುತ್ತದೆ. ನಾಲ್ಕು ಬಾರಿ ನೇಮಕಾತಿ ನಡೆದಾಗ ಮಾತ್ರ ಅದು ಒಂದು ಪೂರ್ಣ ಹುದ್ದೆಯಾಗುತ್ತದೆ (0.25 x4 = 1). ಈ ಗಣಿತದ ಬಿಕ್ಕಟ್ಟನ್ನು ನೀಗಿಸಲು ರೋಸ್ಟರ್ ಬಿಂದುಗಳನ್ನು 400ಕ್ಕೆ ಹೆಚ್ಚಿಸುವುದು ಅನಿವಾರ್ಯವಾಗಿದೆ. 400ರ ರೋಸ್ಟರ್‌ನಲ್ಲಿ ಶೇ. 5.25 ಎಂದರೆ ನಿಖರವಾಗಿ 21 ಹುದ್ದೆಗಳಾಗುತ್ತವೆ ಎಂದು ಮೂಲಗಳು ಹೇಳಿವೆ.

3ಎ, 3ಬಿ ಸಮುದಾಯಗಳಿಗೆ ತಾರತಮ್ಯ?

ಇನ್ನು, ಕಳೆದ 3 ದಶಕಗಳಿಂದ ಸತತ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿರುವ 3ಎ ಮತ್ತು 3ಬಿ ಸಮುದಾಯಗಳಿಗೆ ಹಳೆಯ ತಾರತಮ್ಯ ಮತ್ತೆ ಮುಂದುವರಿಯುವುದು ಬಹುತೇಕ ಖಚಿತ. ಏಕೆಂದರೆ ಸಚಿವ ಸಂಪುಟ ಸಭೆಯಲ್ಲಿ ಹಿಂದಿನ ನೇಮಕಾತಿ ನಿಯಮವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ. ಒಂದು ಇಲಾಖೆಯಲ್ಲಿ 15 ಕ್ಕಿಂತ ಕಡಿಮೆ ಹುದ್ದೆಗಳು ಖಾಲಿ ಇದ್ದರೆ ಅಲ್ಲಿ ಒಳಮೀಸಲಾತಿ ಅನ್ವಯವಾಗುವುದಿಲ್ಲ ಮತ್ತು ಹಳೆಯ ನೇಮಕಾತಿ ನಿಯಮಗಳೇ ಮುಂದುವರಿಯುತ್ತವೆ. ಮೇಲ್ನೋಟಕ್ಕೆ ಇದು ಸರಳವಾಗಿ ಕಂಡರೂ, ಇದರ ಒಳಗೆ 3ಎ ಮತ್ತು 3ಬಿ ಸಮುದಾಯಗಳನ್ನು ಉದ್ಯೋಗದಿಂದ ಹೊರಗುಳಿಯುವ ಆತಂಕ ಇದೆ.

ರೋಸ್ಟರ್ ಪಟ್ಟಿಯಲ್ಲಿ 3ಎ ಸಮುದಾಯದ ಬಿಂದು 17ನೇ ಸ್ಥಾನದಲ್ಲಿದೆ ಮತ್ತು 3ಬಿ ಸಮುದಾಯದ ಬಿಂದು 19ನೇ ಸ್ಥಾನದಲ್ಲಿದೆ. ಸರ್ಕಾರವು 15 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದರೆ, ರೋಸ್ಟರ್ ಬಿಂದು 15ರವರೆಗೆ ಮಾತ್ರ ಮುಕ್ತಾಯವಾಗುತ್ತದೆ. 17 ಮತ್ತು 19ನೇ ಕ್ರಮಾಂಕದಲ್ಲಿರುವ 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಆ ನೇಮಕಾತಿ ಪಟ್ಟಿಯಲ್ಲಿ ಸ್ಥಾನವೇ ಸಿಗುವುದಿಲ್ಲ. ರಾಜ್ಯದ ಹೆಚ್ಚಿನ ಇಲಾಖೆಗಳಲ್ಲಿ ಜಿಲ್ಲಾವಾರು ನೇಮಕಾತಿ ನಡೆಯುವುದರಿಂದ, ಪ್ರತಿ ಬಾರಿಯೂ ಹುದ್ದೆಗಳ ಸಂಖ್ಯೆ 15-20ರ ಆಸುಪಾಸಿನಲ್ಲೇ ಇರುತ್ತದೆ. ಇದರಿಂದಾಗಿ ಈ ಎರಡು ಸಮುದಾಯದ ಯುವಕರು ಅರ್ಹತೆ ಹೊಂದಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ದಶಕಗಳಿಂದ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಲಾಗಿದೆ.

ಮೂರು ದಶಕಗಳ ನಿರಂತರ ಅನ್ಯಾಯ

ಕಳೆದ 30 ವರ್ಷಗಳಿಂದ ರಾಜ್ಯದ ಮೀಸಲಾತಿ ಇತಿಹಾಸವನ್ನು ಗಮನಿಸಿದರೆ, ಪ್ರಬಲ ಸಮುದಾಯಗಳೆಂದು ಹಣೆಪಟ್ಟಿ ಹಚ್ಚಲಾದ 3ಎ ಮತ್ತು 3ಬಿ ವರ್ಗಗಳಿಗೆ ಬಜೆಟ್ ಹಂಚಿಕೆಯಲ್ಲಿ ಮತ್ತು ಉದ್ಯೋಗದ ರೋಸ್ಟರ್ ಪಟ್ಟಿಯಲ್ಲಿ ಕೆಳಸ್ಥಾನವನ್ನೇ ನೀಡಲಾಗುತ್ತಿದೆ. 100 ಬಿಂದುಗಳ ರೋಸ್ಟರ್ ಇದ್ದಾಗಲೂ ಈ ಸಮುದಾಯಗಳು ಪಟ್ಟಿಯ ಅಂತ್ಯದಲ್ಲೇ ಇದ್ದವು. ಈಗ 400 ಬಿಂದುಗಳಿಗೆ ಏರಿಸಿದರೆ ಈ ಸಮುದಾಯಗಳ ಸ್ಥಾನವನ್ನು ಮೊದಲ 10 ಬಿಂದುಗಳೊಳಗೆ ತರುವ ಪ್ರಯತ್ನ ನಡೆಯುವುದೇ ಎಂಬ ಅನುಮಾನ ಇದೆ. ಈ ಸಮುದಾಯಗಳ ಬಹುಪಾಲು ಅಭ್ಯರ್ಥಿಗಳು ಗ್ರಾಮೀಣ ಭಾಗದ ಕೃಷಿಕ ಕುಟುಂಬದವರಾಗಿದ್ದಾರೆ. ಇವರಿಗೆ ಸರ್ಕಾರಿ ನೌಕರಿ ಎಂಬುದು ಕೇವಲ ಜೀವನೋಪಾಯವಲ್ಲ, ಅದು ಸಾಮಾಜಿಕ ಗೌರವದ ಸಂಕೇತ. ಆದರೆ, ದಶಕಗಳಿಂದ ವ್ಯವಸ್ಥಿತವಾಗಿ ರೂಪಿಸಲಾದ ರೋಸ್ಟರ್ ಬಿಂದುಗಳು ಇವರನ್ನು ಸ್ಪರ್ಧೆಯಿಂದಲೇ ಹೊರಗಿಡುತ್ತಿವೆ ಎಂಬ ಮಾತುಗಳು ಕೇಳಿವೆ.

ಮೂಲ ಸಮಸ್ಯೆ

ಸಾಮಾನ್ಯವಾಗಿ ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಜಿಲ್ಲಾವಾರು ನೇಮಕಾತಿ ನಡೆಯುತ್ತದೆ. ಹಲವು ಬಾರಿ ಒಂದು ಜಿಲ್ಲೆಯಲ್ಲಿ ಅಥವಾ ಒಂದು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಹೊಸ ರೋಸ್ಟರ್ ಪ್ರಕಾರ, ಮೊದಲ 15 ಹುದ್ದೆಗಳು ಬೇರೆ ಬೇರೆ ವರ್ಗಗಳಿಗೆ ಹಂಚಿಹೋಗುತ್ತವೆ. ರೋಸ್ಟರ್ ಪಟ್ಟಿಯಲ್ಲಿ 3ಎ ವರ್ಗವು 17ನೇ ಸ್ಥಾನದಲ್ಲೂ, 3ಬಿ ವರ್ಗವು 19ನೇ ಸ್ಥಾನದಲ್ಲೂ ಬರುತ್ತದೆ ಎಂದು ವರದಿ ಹೇಳುತ್ತದೆ. ಯಾವಾಗ ನೇಮಕಾತಿ ಪ್ರಕ್ರಿಯೆಯಲ್ಲಿ ಕೇವಲ 15 ಹುದ್ದೆಗಳು ಇರುತ್ತವೆಯೋ, ಆಗ 17 ಮತ್ತು 19ನೇ ಸ್ಥಾನದಲ್ಲಿರುವ 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಆ ನೇಮಕಾತಿಯಲ್ಲಿ ಸ್ಥಾನವೇ ಸಿಗುವುದಿಲ್ಲ ಎನ್ನಲಾಗಿದೆ.

ರಾಜ್ಯಮಟ್ಟದ ನೇಮಕಾತಿ

ಜಿಲ್ಲಾವಾರು ನೇಮಕಾತಿಯನ್ನು ರದ್ದುಪಡಿಸಿ ರಾಜ್ಯಮಟ್ಟದ ನೇಮಕಾತಿ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜಿಲ್ಲಾವಾರು ನೇಮಕಾತಿ ಮಾಡಿದಾಗ ಹುದ್ದೆಗಳ ಸಂಖ್ಯೆ ಕಡಿಮೆ ಇರುತ್ತದೆ, ಇದರಿಂದ ರೋಸ್ಟರ್‌ನ ಕೆಳಗಿನ ಕ್ರಮಾಂಕದಲ್ಲಿರುವವರಿಗೆ ಅನ್ಯಾಯವಾಗುತ್ತದೆ. ಅದೇ ರಾಜ್ಯಮಟ್ಟದಲ್ಲಿ ಒಟ್ಟಾಗಿ ನೇಮಕಾತಿ ಮಾಡಿದರೆ, ಹುದ್ದೆಗಳ ಸಂಖ್ಯೆ ಹೆಚ್ಚಿರುತ್ತದೆ. ಆಗ ರೋಸ್ಟರ್‌ನ ೪೦೦ ಬಿಂದುಗಳೂ ಪೂರ್ಣಗೊಳ್ಳುತ್ತವೆ ಮತ್ತು ಎಲ್ಲಾ ವರ್ಗದವರಿಗೂ ಅವರ ಮೀಸಲಾತಿ ಅನುಪಾತದಂತೆ ಹುದ್ದೆಗಳು ಸಿಗುತ್ತವೆ ಎಂದು ಹೇಳಲಾಗಿದೆ.

ರೋಸ್ಟರ್ ಬಿಂದುವಿನ ಮೂಲ ಪರಿಕಲ್ಪನೆ

ಸರ್ಕಾರದಲ್ಲಿ ಒಂದು ನಿರ್ದಿಷ್ಟ ಸಂಖ್ಯೆಯ ಹುದ್ದೆಗಳು ಖಾಲಿ ಇವೆ ಎಂದರೆ ಆ ಹುದ್ದೆಗಳನ್ನು ಭರ್ತಿ ಮಾಡುವಾಗ ಯಾವ ಹುದ್ದೆಯನ್ನು ಯಾವ ವರ್ಗದವರಿಗೆ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಸಾಮಾನ್ಯ ವರ್ಗ) ನೀಡಬೇಕು ಎಂದು ನಿರ್ಧರಿಸುವ ಒಂದು ಕ್ರಮಾನುಗತ ಪಟ್ಟಿಯನ್ನು ರೋಸ್ಟರ್ ಎಂದು ಕರೆಯಲಾಗುತ್ತದೆ.ಒಂದು ಸಾಲಿನಲ್ಲಿ ೧೦೦ ಕುರ್ಚಿಗಳಿವೆ ಎಂದು ಕಲ್ಪಿಸಿಕೊಂಡರೆ ಪ್ರತಿಯೊಂದು ಕುರ್ಚಿಗೂ ಒಂದು ಸಂಖ್ಯೆ (ಬಿಂದು) ನೀಡಲಾಗಿರುತ್ತದೆ. ಹೀಗೆ ಪ್ರತಿಯೊಂದು ಸಂಖ್ಯೆಯ ಕುರ್ಚಿಯನ್ನು ಒಂದು ನಿರ್ದಿಷ್ಟ ಮೀಸಲಾತಿ ವರ್ಗಕ್ಕೆ ಮೊದಲೇ ನಿಗದಿಪಡಿಸಿರುವುದೇ ರೋಸ್ಟರ್ ಬಿಂದು ಆಗಿದೆ.

ಸರ್ಕಾರವು ಸಂವಿಧಾನದ ಪ್ರಕಾರ ವಿವಿಧ ವರ್ಗಗಳಿಗೆ ಶೇಕಡಾವಾರು ಮೀಸಲಾತಿಯನ್ನು ನಿಗದಿಪಡಿಸಿದೆ. ಈ ಶೇಕಡಾವಾರನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ರೋಸ್ಟರ್ ಬಿಂದುಗಳನ್ನು ಬಳಸಲಾಗುತ್ತದೆ. ಯಾವುದೇ ಇಲಾಖೆಯಲ್ಲಿ ನೇಮಕಾತಿ ನಡೆದಾಗ, ಮೊದಲ ಹುದ್ದೆಯನ್ನು 1ನೇ ಬಿಂದುವಿನ ವರ್ಗದವರಿಗೆ, ಎರಡನೇ ಹುದ್ದೆಯನ್ನು 2ನೇ ಬಿಂದುವಿನ ವರ್ಗದವರಿಗೆ ನೀಡುತ್ತಾ ಹೋಗಲಾಗುತ್ತದೆ. ಈ ಪಟ್ಟಿ 100ಕ್ಕೆ ತಲುಪಿದ ನಂತರ, ಮತ್ತೆ 1ರಿಂದಲೇ ಆರಂಭವಾಗುತ್ತದೆ.

Read More
Next Story