
ಕಾಂಗ್ರೆಸ್‌ಗೆ ಕಗ್ಗಂಟಾದ ಒಳಮೀಸಲಾತಿ: ಎಡ-ಬಲ ಸಂಘರ್ಷದ ನಡುವೆ ಅಹಿಂದ ನಾಯಕತ್ವಕ್ಕೆ ಸವಾಲು
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲೇ ಒಳಮೀಸಲಾತಿ ಕುರಿತು ಒಮ್ಮತವಿಲ್ಲ. ಇದು ಶುಕ್ರವಾರದ ಸಭೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಬಹುದು. ಸರ್ಕಾರದ ರಾಜಕೀಯ ಅಸ್ತಿತ್ವದ ದೃಷ್ಟಿಯಿಂದ ಸಭೆ ಮಹತ್ವದ್ದಾಗಿದೆ.
ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಎಸ್‌ಸಿ/ಎಸ್‌ಟಿ ಮೀಸಲಾತಿಯಲ್ಲಿ ಒಳವರ್ಗೀಕರಣ ಮಾಡಲು ಅವಕಾಶ ನೀಡಿದ ನಂತರ, ಈ ವಿವಾದವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಒಂದು ಕಡೆ ದಲಿತರ ದಶಕಗಳ ಬೇಡಿಕೆಯನ್ನು ಈಡೇರಿಸುವ ಹೊಣೆಗಾರಿಕೆ ಇದ್ದರೆ, ಇನ್ನೊಂದೆಡೆ ತನ್ನದೇ ಪಕ್ಷದೊಳಗಿರುವ ವಿವಿಧ ಉಪಜಾತಿಗಳ ಹಿತಾಸಕ್ತಿಗಳನ್ನು ಕಾಪಾಡುವ ಅನಿವಾರ್ಯತೆ ಎದುರಾಗಿದೆ.
ಒಳಮೀಸಲಾತಿ ಕುರಿತು ಚರ್ಚಿಸಲು ರಾಜ್ಯ ಸರ್ಕಾರವು ಶುಕ್ರವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದಿದೆ. ಸುಪ್ರೀಂಕೋರ್ಟ್ ರಾಜ್ಯಗಳಿಗೆ ಒಳ ವರ್ಗೀಕರಣದ ಅಧಿಕಾರ ನೀಡಿದ ನಂತರ, ಈ ಸಭೆಯು ರಾಜ್ಯದ ದಲಿತ ಸಮುದಾಯಗಳ ಭವಿಷ್ಯ ಮತ್ತು ಕಾಂಗ್ರೆಸ್ ಸರ್ಕಾರದ ರಾಜಕೀಯ ಅಸ್ತಿತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಸುಪ್ರೀಂಕೋರ್ಟ್ ಒಳಮೀಸಲಾತಿ ನೀಡಲು ರಾಜ್ಯಗಳಿಗೆ ಅನುಮತಿ ನೀಡಿದ್ದರೂ, ಷರತ್ತು ವಿಧಿಸಿದೆ. ಯಾವುದೇ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಮೊದಲು ಆ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಬಗ್ಗೆ ವೈಜ್ಞಾನಿಕ ಮತ್ತು ಪ್ರಾಯೋಗಿಕ ದತ್ತಾಂಶ ಇರಬೇಕು ಎಂದು ನ್ಯಾಯಾಲಯ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲೇ ಒಳಮೀಸಲಾತಿ ಕುರಿತು ಒಮ್ಮತವಿಲ್ಲ. ಇದು ಶುಕ್ರವಾರದ ಸಭೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಬಹುದು. ಒಳಮೀಸಲಾತಿ ಕೇವಲ ಒಂದು ಸಾಮಾಜಿಕ ನ್ಯಾಯದ ಬೇಡಿಕೆಯಾಗಿ ಉಳಿಯದೆ, ರಾಜಕೀಯ ಪಕ್ಷಗಳ ಅಸ್ತಿತ್ವ ಮತ್ತು ಮತಬ್ಯಾಂಕ್‌ಗಳ ಮೇಲೆ ನೇರ ಪರಿಣಾಮ ಬೀರುವ ಶಕ್ತಿಯಾಗಿ ಬೆಳೆದಿದೆ. ಹೀಗಾಗಿ ಶುಕ್ರವಾರದ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ನಾಯಕರಲ್ಲಿಯೇ ಈ ವಿಷಯದಲ್ಲಿ ಒಮ್ಮತವಿಲ್ಲ. ಸಚಿವರಾದ ಡಾ. ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಬಲಗೈ ಸಮುದಾಯದ ಸಚಿವರು ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದರೆ, ಸಚಿವರಾದ ಕೆ.ಎಚ್. ಮುನಿಯಪ್ಪ, ತಿಮ್ಮಾಪುರ ಅವರಂತಹ ನಾಯಕರು ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಆಂತರಿಕ ಸಂಘರ್ಷವು ಸಚಿವ ಸಂಪುಟದ ಸಭೆಯಲ್ಲಿಯೂ ಪ್ರತಿಧ್ವನಿಸಲಿದೆ.
ದಲಿತ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ
ಪರಿಶಿಷ್ಟ ಜಾತಿಯಲ್ಲಿರುವ ಸುಮಾರು 101 ಉಪಜಾತಿಗಳನ್ನು ಪ್ರಮುಖವಾಗಿ ಮೂರು ಗುಂಪುಗಳಾಗಿ ನೋಡಲಾಗುತ್ತದೆ. ಎಡಗೈ (ಮಾದಿಗ), ಬಲಗೈ (ಹೊಲೆಯ) ಮತ್ತು ಸ್ಪರ್ಶ್ಯ ದಲಿತರು (ಲಂಬಾಣಿ, ಭೋವಿ, ಕೊರಚ, ಕೊರಮ) ಎಂಬುದಾಗಿ ಗಮನಿಸಲಾಗುತ್ತದೆ. ಒಳಮೀಸಲಾತಿ ಜಾರಿಗೊಳಿಸಿದರೆ ಎಡಗೈ ಸಮುದಾಯಕ್ಕೆ ಅನುಕೂಲವಾಗುತ್ತದೆ ಎಂಬುದು ಬಲಗೈ ಮತ್ತು ಸ್ಪರ್ಶ್ಯ ಸಮುದಾಯಗಳ ಆತಂಕ. ಇದರಿಂದ ದಲಿತ ಮತದಾರರು ಒಗ್ಗಟ್ಟಾಗಿ ಒಂದು ಪಕ್ಷವನ್ನು ಬೆಂಬಲಿಸುವ ಬದಲಿಗೆ, ಗುಂಪುಗಳಾಗಿ ವಿಭಜನೆಗೊಳ್ಳುತ್ತಾರೆ. ಇದು ಯಾವುದೇ ರಾಜಕೀಯ ಪಕ್ಷಕ್ಕೆ ದೊಡ್ಡ ನಷ್ಟ ಉಂಟುಮಾಡಬಹುದು. ಸಿದ್ದರಾಮಯ್ಯನವರ ಅಹಿಂದ ರಾಜಕಾರಣಕ್ಕೆ ಒಳಮೀಸಲಾತಿ ದೊಡ್ಡ ಸವಾಲಾಗಿದೆ. ದಲಿತ ಸಮುದಾಯದ ಒಂದು ವರ್ಗವು (ಸ್ಪರ್ಶ್ಯ ದಲಿತರು) ಅಸಮಾಧಾನಗೊಂಡರೆ, ಅದು ಇಡೀ ಅಹಿಂದ ಒಕ್ಕೂಟದ ಬಲವನ್ನು ಕುಗ್ಗಿಸುತ್ತದೆ. ಕಾಂಗ್ರೆಸ್‌ಗೆ ಇದು ತನ್ನ ಭದ್ರಕೋಟೆಯನ್ನೇ ಕಳೆದುಕೊಳ್ಳುವ ಭೀತಿಯನ್ನು ಹುಟ್ಟುಹಾಕಿದೆ.
ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳು ಕಾಂಗ್ರೆಸ್ ಪಕ್ಷದ ಪ್ರಬಲ ಬೆಂಬಲಿಗರು. ಒಳಮೀಸಲಾತಿ ಜಾರಿಯಾದರೆ ತಮಗೆ ಅನ್ಯಾಯವಾಗುತ್ತದೆ ಎಂಬುದು ಇವರ ಬಲವಾದ ನಂಬಿಕೆ. ಈ ಹಿಂದೆ ಬಿಜೆಪಿ ಸರ್ಕಾರ ಒಳಮೀಸಲಾತಿ ಘೋಷಿಸಿದಾಗ ಲಂಬಾಣಿ ಸಮುದಾಯವು ತೀವ್ರ ಪ್ರತಿಭಟನೆ ನಡೆಸಿತ್ತು ಈಗ ಕಾಂಗ್ರೆಸ್ ಸರ್ಕಾರವೂ ಅದೇ ಹಾದಿ ಹಿಡಿದರೆ ಈ ಸಮುದಾಯಗಳು ಪಕ್ಷದಿಂದ ದೂರವಾಗಬಹುದು ಎಂಬ ಆತಂಕ ಕಾಂಗ್ರೆಸ್ ಸರ್ಕಾರಕ್ಕೆ ಇದೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿಕೆ
ಮೀಸಲಾತಿಯಲ್ಲಿ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಆರೋಪಿಸಿ, ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಎಡಗೈ ಸಮುದಾಯಗಳು, ಮಾದಿಗ ಮತ್ತು ಇತರ ಉಪ-ಜಾತಿಗಳು ಒತ್ತಾಯಿಸುತ್ತಿವೆ. ಈ ನಿಟ್ಟಿನಲ್ಲಿ ಹೋರಾಟ, ಚಳವಳಿಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಈ ಹಿಂದೆ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿತ್ತು. ಆದರೆ ದಾವಣಗೆರೆ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿತ್ತು. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15 ರಿಂದ 17 ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ. ಎಸ್ ಟಿ ಮೀಸಲಾತಿಯನ್ನು ಶೇ 3 ರಿಂದ 7 ಕ್ಕೆ ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 50 ರಿಂದ 56ಕ್ಕೆ ಏರಿಕೆಯಾಗಿದೆ. ಹೆಚ್ಚಳ ಮಾಡಿದ ಪ್ರಮಾಣಕ್ಕೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಲು ಮಸೂದೆಯನ್ನು ರೂಪಿಸಲಾಗಿದೆ. ಇದಕ್ಕೆ ರಾಜ್ಯಪಾಲರು ಕೂಡಾ ಸಹಿ ಹಾಕಿದ್ದಾರೆ. ಈ ನಡುವೆ, ಇದಕ್ಕೂ ತಾಂತ್ರಿಕ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಶೇ.17 ಮೀಸಲಾತಿಯಲ್ಲಿ 6:6:5ರಂತೆ ಸರ್ವಸಮ್ಮತದಿಂದ ಒಳಮೀಸಲಾತಿ ಅಳವಡಿಸುವ ಬಗ್ಗೆ ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಒಟ್ಟು ಶೇ.50 ಮೀಸಲಾತಿ ಮಿತಿಯಲ್ಲಿ ಶೇ.15 ಎಸ್‌ಸಿ ಮೀಸಲಾತಿಯಲ್ಲೇ ಒಳಮೀಸಲಾತಿಯನ್ನು ನೀಡುವ ಬಗ್ಗೆ ಚರ್ಚೆ ನಡೆದಿದೆ. ಎ, ಬಿ, ಸಿ ಒಳಮೀಸಲಾತಿ ವರ್ಗೀಕರಣಕ್ಕೆ ಎಷ್ಟು ಪ್ರಮಾಣದಲ್ಲಿ ಒಳಮೀಸಲಾತಿ ಕಲ್ಪಿಸಬೇಕೆಂಬ ಬಗ್ಗೆ ಚರ್ಚಿಸಿ ತೀರ್ಮಾನಿಸಬೇಕಿದೆ. ಈ ನಿಟ್ಟಿನಲ್ಲಿ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ ಎಂದು ಮೂಲಗಳು ಹೇಳಿವೆ.
ಅಹಿಂದಕ್ಕೆ ಧಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡಿದ್ದಾರೆ. ಒಂದು ವೇಳೆ ಒಳಮೀಸಲಾತಿ ಜಾರಿಗೆ ವಿಳಂಬ ಮಾಡಿದರೆ ಅವರ ಅಹಿಂದ ನಾಯಕತ್ವಕ್ಕೆ ಧಕ್ಕೆಯಾಗಬಹುದು. ಪ್ರತಿಪಕ್ಷ ಬಿಜೆಪಿ ಈಗಾಗಲೇ ಕಾಂಗ್ರೆಸ್ ಸರ್ಕಾರ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಒಳಮೀಸಲಾತಿ ನೀಡಲು ಇಚ್ಛಾಶಕ್ತಿ ಇಲ್ಲ ಎಂದು ಟೀಕಿಸುತ್ತಿದೆ. ಶುಕ್ರವಾರದ ಸಭೆಯಲ್ಲಿ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳದಿದ್ದರೆ, ವಿರೋಧ ಪಕ್ಷಗಳಿಗೆ ಇದು ದೊಡ್ಡ ಅಸ್ತ್ರವಾಗಲಿದೆ.

