
ರಾಜ್ಯದಲ್ಲಿವೆ ಇಂದಿಗೂ 48.53 ಲಕ್ಷ ಪಹಣಿಗಳು ಮೃತ ವ್ಯಕ್ತಿಗಳ ಹೆಸರಲ್ಲಿ..!
ಮೃತ ಖಾತೆದಾರರ ಪತ್ತೆಯಾದ ನಂತರ, ಸರ್ಕಾರವು ಕೇವಲ ನೋಟಿಸ್ ನೀಡುವುದಕ್ಕೆ ಸೀಮಿತವಾಗದೆ, 'ಇ-ಪೌತಿ' ಆಂದೋಲನದ ಮೂಲಕ ಪರಿಹಾರಕ್ಕೆ ಮುಂದಾಗಿದೆ. 6.47 ಲಕ್ಷ ಸರ್ವೇ ನಂಬರ್‌ಗಳ ಪಹಣಿಗಳನ್ನು ವಾರಸುದಾರರ ಹೆಸರಿಗೆ ವರ್ಗಾಯಿಸಲಾಗಿದೆ.
ಕಂದಾಯ ಇಲಾಖೆಯು ಕೈಗೊಂಡ ಪಹಣಿ ಹಾಗೂ ಆಧಾರ್ ಜೋಡಣೆ ಪ್ರಕ್ರಿಯೆಯು ರಾಜ್ಯದ ಭೂ ಆಡಳಿತ ವ್ಯವಸ್ಥೆಯಲ್ಲಿದ್ದ ದಶಕಗಳ ಹಳೆಯ ಸಮಸ್ಯೆಯನ್ನು ಅನಾವರಣಗೊಳಿಸಿದೆ. ರಾಜ್ಯಾದ್ಯಂತ ಸುಮಾರು 48,53,332 ಭೂ ಪಹಣಿಗಳು ಇಂದಿಗೂ ಮೃತ ವ್ಯಕ್ತಿಗಳ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು 'ಇ-ಪೌತಿ' ಆಂದೋಲನವನ್ನು ತೀವ್ರಗೊಳಿಸಿದ್ದು, ಇದು ಕೇವಲ ದಾಖಲೆಗಳ ನವೀಕರಣವಲ್ಲದೆ, ಗ್ರಾಮೀಣ ಆರ್ಥಿಕತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಂದು ಮೈಲಿಗಲ್ಲಾಗಿದೆ.
ಸಮಾಜದಲ್ಲಿ ಭೂಮಿ ಎಂಬುದು ಕೇವಲ ಆಸ್ತಿಯಲ್ಲ, ಅದು ಭಾವನಾತ್ಮಕ ಮತ್ತು ಆರ್ಥಿಕ ಭದ್ರತೆಯ ಸಂಕೇತ. ಆದರೆ, ಮನೆಯ ಹಿರಿಯರು ಮೃತಪಟ್ಟಾಗ ಅವರ ಹೆಸರಿನಲ್ಲಿದ್ದ ಭೂಮಿಯನ್ನು ವಾರಸುದಾರರ ಹೆಸರಿಗೆ ವರ್ಗಾಯಿಸುವ (ಪೌತಿ ವಾರಸು) ಪ್ರಕ್ರಿಯೆಯು ಅತ್ಯಂತ ಜಟಿಲವಾಗಿತ್ತು. ಗ್ರಾಮೀಣ ಭಾಗದಲ್ಲಿ ಕಾನೂನು ಪ್ರಕ್ರಿಯೆಗಳ ಬಗ್ಗೆ ಇರುವ ಅರಿವಿನ ಕೊರತೆ ಮತ್ತು ಕಂದಾಯ ಕಚೇರಿಗಳಿಗೆ ಅಲೆಯುವ ಭೀತಿಯಿಂದಾಗಿ ಲಕ್ಷಾಂತರ ಕುಟುಂಬಗಳು ದಶಕಗಳಿಂದ ಪಹಣಿಯನ್ನು ನವೀಕರಿಸಿರಲಿಲ್ಲ. ಈ ಮೊದಲು ವಂಶವೃಕ್ಷ ಪಡೆಯಲು ತಹಶೀಲ್ದಾರ್ ಕಚೇರಿಗಳಲ್ಲಿ ನಡೆಯುತ್ತಿದ್ದ ವಿಳಂಬ ನೀತಿಯೂ ಇದಕ್ಕೆ ಕಾರಣವಾಗಿತ್ತು.
ಆಧಾರ್ ದತ್ತಾಂಶ ಮತ್ತು ಮರಣ ನೋಂದಣಿ ದಾಖಲೆಗಳನ್ನು ಕಂದಾಯ ಇಲಾಖೆಯ ಸಾಫ್ಟ್‌ವೇರ್‌ನೊಂದಿಗೆ ತಾಳೆ ಹಾಕಿದಾಗ, 48.53 ಲಕ್ಷಕ್ಕೂ ಅಧಿಕ ದಾಖಲೆಗಳಲ್ಲಿ ಮೃತಪಟ್ಟವರ ಹೆಸರೇ ಮುಂದುವರಿಯುತ್ತಿರುವುದು ಪತ್ತೆಯಾಯಿತು. ಇದು ಒಟ್ಟು ಪಹಣಿಗಳ ಗಮನಾರ್ಹ ಭಾಗವಾಗಿದೆ.
ಮೃತ ಖಾತೆಗಳು ಉಳಿಯಲು ಕಾರಣವೇನು?
ಈ ಹಿಂದೆ ವಾರಸುದಾರರು ಪೌತಿ ಬದಲಾವಣೆ ಮಾಡಲು ವಂಶವೃಕ್ಷ ಪಡೆಯಲು, ನೋಟಿಸ್ ನೀಡಲು ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿತ್ತು. ಮನೆಯ ಹಿರಿಯರು ತೀರಿಕೊಂಡ ನಂತರ ಅಣ್ಣ-ತಮ್ಮಂದಿರ ನಡುವೆ ಆಸ್ತಿ ಹಂಚಿಕೆ ಸರಿಯಾಗಿ ಆಗದಿದ್ದಾಗ, ವಿವಾದಕ್ಕೆ ಹೆದರಿ ಯಾರೂ ಪಹಣಿ ಬದಲಿಸಲು ಮುಂದಾಗುತ್ತಿರಲಿಲ್ಲ. ಪಹಣಿಯಲ್ಲಿ ಹೆಸರು ಬದಲಿಸದಿದ್ದರೆ ಮುಂದೆ ಸಾಲ ಪಡೆಯಲು ಅಥವಾ ಮಾರಾಟ ಮಾಡಲು ಕಷ್ಟವಾಗುತ್ತದೆ ಎಂಬ ಅರಿವು ಗ್ರಾಮೀಣ ಭಾಗದಲ್ಲಿ ಕಡಿಮೆ ಇತ್ತು.
ಆಧಾರ್-ಪಹಣಿ ಜೋಡಣೆ
ಸರ್ಕಾರವು ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದ್ದರ ಹಿಂದೆ ದ್ವಿಮುಖ ಉದ್ದೇಶವಿದೆ. ಕಂದಾಯ ಇಲಾಖೆಯ ಮೂಲಗಳ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಬೇನಾಮಿ ಆಸ್ತಿಗಳು ಇರುವುದನ್ನು ತಡೆಯುವುದು ಮತ್ತು ಒಬ್ಬರೇ ವ್ಯಕ್ತಿ ಹಲವು ಕಡೆಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಆಧಾರ್ ಸಂಖ್ಯೆಯು ವ್ಯಕ್ತಿಯ ಜೀವಂತಿಕೆ ಅಥವಾ ಮರಣದ ಮಾಹಿತಿಯನ್ನು ಮರಣ ನೋಂದಣಿ ಇಲಾಖೆಯೊಂದಿಗೆ ಸಂಯೋಜಿಸಲು ಸಹಾಯ ಮಾಡಿತು. ಈ ತಾಂತ್ರಿಕ ಹಸ್ತಕ್ಷೇಪವಿಲ್ಲದಿದ್ದರೆ, ಈ 48 ಲಕ್ಷ ಮೃತ ಖಾತೆಗಳನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು ಎಂದು ತಿಳಿಸಲಾಗಿದೆ.
'ಇ-ಪೌತಿ' ಆಂದೋಲನ - ಪರಿಹಾರದ ಹಾದಿ
ಮೃತ ಖಾತೆದಾರರ ಪತ್ತೆಯಾದ ನಂತರ, ಸರ್ಕಾರವು ಕೇವಲ ನೋಟಿಸ್ ನೀಡುವುದಕ್ಕೆ ಸೀಮಿತವಾಗದೆ, 'ಇ-ಪೌತಿ' ಆಂದೋಲನದ ಮೂಲಕ ಪರಿಹಾರಕ್ಕೆ ಮುಂದಾಗಿದೆ. ಈ ಹಿಂದೆ ವಾರಸುದಾರರು ಪೌತಿ ಖಾತೆ ಮಾಡಲು ತಿಂಗಳುಗಟ್ಟಲೆ ಕಾಯಬೇಕಿತ್ತು. ಈಗ ಇ-ಪೌತಿ ತಂತ್ರಾಂಶದ ಮೂಲಕ ಮರಣ ಪ್ರಮಾಣಪತ್ರ ಲಭ್ಯವಿದ್ದಲ್ಲಿ, ವಾರಸುದಾರರ ವಿವರಗಳನ್ನು ಸುಲಭವಾಗಿ ದಾಖಲಿಸಬಹುದು. ಗ್ರಾಮ ಆಡಳಿತಾಧಿಕಾರಿಗಳು ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ, ವಾರಸುದಾರರಿಂದ ಮಾಹಿತಿ ಪಡೆದು ಸ್ಥಳದಲ್ಲೇ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ 48.53 ಲಕ್ಷ ಗುರುತಿಸಲಾದ ಖಾತೆಗಳ ಪೈಕಿ 6.47 ಲಕ್ಷ ಸರ್ವೇ ನಂಬರ್‌ಗಳ ಪಹಣಿಗಳನ್ನು ಯಶಸ್ವಿಯಾಗಿ ವಾರಸುದಾರರ ಹೆಸರಿಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.
ವಾರಸುದಾರರಿಗೆ ಎದುರಾಗುತ್ತಿದ್ದ ಸಂಕಷ್ಟಗಳು
ಪಹಣಿಯಲ್ಲಿ ಮೃತಪಟ್ಟವರ ಹೆಸರೇ ಮುಂದುವರಿಯುವುದರಿಂದ ನಿಜವಾದ ವಾರಸುದಾರರು ಅನುಭವಿಸುತ್ತಿದ್ದ ತೊಂದರೆಗಳು ಅಪಾರವಾಗಿವೆ. ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ಸಾಲ ಪಡೆಯಲು ಪಹಣಿ ಕಡ್ಡಾಯ. ಮೃತ ವ್ಯಕ್ತಿಯ ಹೆಸರಿನಲ್ಲಿ ಪಹಣಿ ಇದ್ದರೆ ಬ್ಯಾಂಕುಗಳು ಸಾಲ ನೀಡುವುದಿಲ್ಲ. ಇದರಿಂದ ರೈತರು ಖಾಸಗಿ ಲೇವಾದೇವಿದಾರರ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಪಿಎಂ-ಕಿಸಾನ್ ಯೋಜನೆಯಡಿ ಹಣ ಪಡೆಯಲು ಅಥವಾ ಬೆಳೆ ಹಾನಿ ಪರಿಹಾರ ಪಡೆಯಲು ಮಾಲೀಕನ ಹೆಸರಿನಲ್ಲಿ ಪಹಣಿ ಇರಬೇಕು. ಇದರಿಂದ ಲಕ್ಷಾಂತರ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಮೃತ ವ್ಯಕ್ತಿಯ ಹೆಸರಿನಲ್ಲಿ ಭೂಮಿ ಉಳಿದಾಗ, ದಾಯಾದಿಗಳ ನಡುವೆ ಹಕ್ಕು ವರ್ಗಾವಣೆಯ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿ, ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಆಸ್ತಿಯನ್ನು ತುರ್ತು ಸಂದರ್ಭಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳು
ಈ ಅಭಿಯಾನವು ರಾಜ್ಯದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಸಕಾಲದಲ್ಲಿ ಪೌತಿ ಖಾತೆಯಾಗಿ ಪಹಣಿ ವಾರಸುದಾರರ ಕೈ ಸೇರಿದರೆ, ಅವರು ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯಡಿ ಸಾಲ ಪಡೆದು ಕೃಷಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಸರಿಯಾದ ವಾರಸುದಾರರ ಹೆಸರಿಗೆ ದಾಖಲೆಗಳು ಬಂದಾಗ, ಆಸ್ತಿ ನೋಂದಣಿ, ಭೂ ಪರಿವರ್ತನೆ ಮುಂತಾದ ಪ್ರಕ್ರಿಯೆಗಳು ಸರಾಗವಾಗಿ ನಡೆದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಮುದ್ರಾಂಕ ಶುಲ್ಕ ಹರಿದು ಬರಲಿದೆ. ಕುಟುಂಬದ ಹಿರಿಯರು ತೀರಿಕೊಂಡ ನಂತರ ಆಸ್ತಿ ಹಂಚಿಕೆಯಾಗದೆ ಉಳಿಯುವ ಸಮಸ್ಯೆಗಳು ಬಗೆಹರಿದು, ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಸೌಹಾರ್ದತೆ ಹೆಚ್ಚಲು ಇದು ಸಹಕಾರಿಯಾಗಿದೆ.
ಸರ್ಕಾರದ ಮುಂದಿರುವ ಸವಾಲುಗಳು
ಸರ್ಕಾರದ ಈ ಕ್ರಮ ಶ್ಲಾಘನೀಯವಾದರೂ, ಕೆಲವು ಸವಾಲುಗಳು ಇನ್ನೂ ಇವೆ. ಕುಟುಂಬದಲ್ಲಿ ಹತ್ತಾರು ವಾರಸುದಾರರಿದ್ದಾಗ, ಯಾರ ಹೆಸರಿಗೆ ಖಾತೆ ಮಾಡಬೇಕು ಎಂಬ ಗೊಂದಲವಿದ್ದರೆ ಇ-ಪೌತಿ ಪ್ರಕ್ರಿಯೆ ವಿಳಂಬವಾಗಬಹುದು. ಇಂತಹ ಸಂದರ್ಭಗಳಲ್ಲಿ ಕಂದಾಯ ನ್ಯಾಯಾಲಯಗಳ ಪಾತ್ರ ಮುಖ್ಯವಾಗುತ್ತದೆ. ಸರ್ವರ್ ಸಮಸ್ಯೆಗಳು ಮತ್ತು ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಕೊರತೆಯಿಂದಾಗಿ ಆಧಾರ್ ಜೋಡಣೆ ಪ್ರಕ್ರಿಯೆ ನಿಧಾನವಾಗುತ್ತಿದೆ. ಬಹಳ ಹಳೆಯ ಮರಣಗಳ ಸಂದರ್ಭದಲ್ಲಿ ಮರಣ ಪ್ರಮಾಣಪತ್ರ ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕಿದೆ ಎನ್ನಲಾಗಿದೆ.
ಆಂದೋಲನದ ಮಾರ್ಗಸೂಚಿಗಳು
ಇ-ಪೌತಿ ಆಂದೋಲನ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ಕೃಷಿ ಜಮೀನಿನ ಮಾಲೀಕರು ಮರಣಹೊಂದಿದ ನಂತರ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದರೆ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲಸೌಕರ್ಯಗಳು ದೊರೆಯುವುದಿಲ್ಲ. ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲುನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ಪರಿಹಾರದ ಮೊತ್ತ ಪಡೆಯುವುದು ಕಷ್ಟಕರವಾಗಲಿದೆ. ಹೀಗಾಗಿ ಪರಿಹಾರ ಕಲ್ಪಿಸಲು ಖಾತೆ ಆಂದೋಲನವನ್ನು ಇ-ಪೌತಿ ತಂತ್ರಾಂಶದ ಮೂಲಕವೇ ನಡೆಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಹೇಳಿದರು.
ಪಹಣಿಯೊಂದಿಗೆ ಆಧಾರ್ ಜೋಡಣೆ ಸಮಯದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಲೀಕರು ಮೃತ ಹೊಂದಿದ್ದು, ಆಧಾರ್ ಜೋಡಣೆ ಮಾಡಲು ಸಾಧವಾಗದೆ, ಪೌತಿ ಎಂದು ಗುರುತಿಸಲಾಗಿರುತ್ತದೆ. ಹೀಗೆ ಗುರುತಿಸಿರುವ ಮೃತ ಹೊಂದಿದ ಮಾಲೀಕರ ಮಾಹಿತಿಯನ್ನು ಇ-ಪೌತಿ ತಂತ್ರಾಂಶದಲ್ಲಿ ಅಳವಡಿಸಿ, ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳ ಲಾಗಿನ್‌ಗೆ ವರ್ಗಾಯಿಸಲಾಗುತ್ತದೆ. ಮೃತ ಖಾತೆದಾರನ ಕುಟುಂಬದ ವಂಶವೃಕ್ಷ ಲಭವಿಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿಯವರ ಸಮಕ್ಷಮ ಸಹಿ ಮಾಡಿ, ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಮನವಿ ದಾಖಲಿಸಿ, ವಂಶವೃಕ್ಷವನ್ನು ಪಡೆಯಬಹುದು. ಹೀಗೆ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಪಡೆದ ವಂಶವೃಕ್ಷದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳು ಪೌತಿಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಒಂದು ವೇಳೆ ಮೃತ ಖಾತೆದಾರನ ಮರಣ ಪ್ರಮಾಣಪತ್ರ ಇಲ್ಲದಿದ್ದರೆ ಆಧಾರ್ ಹಾಗೂ ಪಡಿತರ ಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮ ಆಡಳಿತಾಧಿಕಾರಿಗಳು ಮಹಜರ್ ಮಾಡಿ, ಮೃತ ಖಾತೆದಾರರು ಮರಣ ಹೊಂದಿರುವ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್ ಅನ್ನು ಪಡೆದು, ಅವರುಗಳ ಪಡಿತರಚೀಟಿ ಮತ್ತು ಆಧಾರ್ ದಾಖಲೆಯೊಂದಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದು. ಈ ಸಂಬಂಧ ವೀಡಿಯೋ ಮಹಜರನ್ನು ಮಾಡಿ ಕಡ್ಡಾಯವಾಗಿ ಇ-ಪೌತಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಬೇಕಾಗುತ್ತದೆ. ಮೃತ ಖಾತೆದಾರನ ಮರಣ ಪ್ರಮಾಣಪತ್ರ ಆಧಾರ್ ಮತ್ತು ಪಡಿತರ ಚೀಟಿಯು ಸಹ ಇಲ್ಲದಿದ್ದರೆ ಆಧಾರ್ ಮತ್ತು ಪಡಿತರ ಚೀಟಿ ಇಲ್ಲದಿದ್ದಲ್ಲಿ ಗ್ರಾಮಸ್ಥರ ಮಹಜರ್‌ನೊಂದಿಗೆ ಹಾಗೂ ಕುಟುಂಬ ಸದಸ್ಯರ ನೋಟರಿ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್ ಪಡೆದು ಪೌತಿ ಖಾತೆಗೆ ಕ್ರಮವಹಿಸಲಾಗುತ್ತದೆ ಎಂದರು.
ಪೌತಿ ಖಾತೆಯ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆ
ಇ-ಪೌತಿ ತಂತ್ರಾಂಶದಲ್ಲಿ ನಮೂದಿಸಿದ ಅರ್ಜಿಗಳ ಕುರಿತು ಹಕ್ಕು ಬದಲಾವಣೆಯ ಪ್ರಕರಣಗಳಲ್ಲಿ ನಮೂನೆ-12 ಮತ್ತು ನಮೂನೆ-21 ಗಳನ್ನು ಹೊರಡಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಮ್ಯುಟೇಶನ್ ವಿಲೇವಾರಿಗೆ 15 ದಿನಗಳಕಾಲಾವಕಾಶ ಇರುತ್ತದೆ. ಇಂತಹ ಪ್ರಕರಣಗಳಲ್ಲಿ ಆಸಕ್ತರು ತಕರಾರುಗಳನ್ನು ತಹಶೀಲ್ದಾರರ ಕಚೇರಿಗೆ ಸಲ್ಲಿಸಬಹುದು. ತಕರಾರುಗಳು ಬಂದರೆ, ವಹಿವಾಟು ವಿವಾದಾಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲಾಗುತ್ತದೆ. ಒಂದು ವೇಳೆ ಮೃತ ಖಾತೆದಾರರ ಎಲ್ಲಾ ವಾರಸುದಾರರು ಆಧಾರ್ ಇ-ಕೆವೈಸಿ ನೀಡುವ ಮೂಲಕ ಪೌತಿ ಖಾತೆಗೆ ಒಪ್ಪಿಗೆ ನೀಡಿ, 15 ದಿನಗಳ ನೋಟೀಸು ಅವಧಿಯೊಳಗೆ ಯಾವುದೇ ತಕರಾರು ಸ್ವೀಕೃತವಾಗದಿದ್ದರೆ ಇಂತಹ ಪ್ರಕರಣವನ್ನು ಭೂಮಿ ತಂತ್ರಾಂಶದಲ್ಲಿ ಮ್ಯುಟೇಶನ್ ಮೂಲಕ ಹೊಸ ವಾರಸುದಾರರನ್ನು ಪಹಣಿಯಲ್ಲಿ ನಮೂದಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

