
ಹೊಸ ಕನಿಷ್ಠ ವೇತನ| ವೈಜ್ಞಾನಿಕ ಪರಿಷ್ಕರಣೆ ಒತ್ತಡ, 24 ಸಾವಿರ ರೂ. ನೀಡಲು ಸರ್ಕಾರ ಸಮ್ಮತಿ
ಕರ್ನಾಟಕದಲ್ಲಿ ಸರಾಸರಿ ಮಾಸಿಕ ಕನಿಷ್ಠ ವೇತನ ಈವರೆಗೆ 19 ಸಾವಿರ ರೂ. ಇದೆ. ಕೇಂದ್ರ ಸರ್ಕಾರವು ವೇತನ ಮಿತಿಯನ್ನು 18 ಸಾವಿರದಿಂದ 24 ಸಾವಿರಕ್ಕೆ ಏರಿಸಿದೆ.
ರಾಜ್ಯದ ವಿವಿಧ ವಲಯಗಳ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡುವ ಸಂಬಂಧ ಕಾರ್ಮಿಕ ಸಂಘಟನೆಗಳು ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬೀಳುವ ಸಮಯ ಬಂದಿದೆ.
ಕನಿಷ್ಠ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಆಹಾರ, ಬಟ್ಟೆ ಮತ್ತು ವಸತಿಯಂತಹ ಮೂಲಭೂತ ಅಗತ್ಯಗಳ ಆಧಾರದ ಮೇಲೆ ವೇತನ ಪರಿಷ್ಕರಿಸಲು ಮುಂದಾಗಿದೆ. 2022ರಲ್ಲಿ ಕನಿಷ್ಠ ವೇತನ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದರೂ ಕಾರ್ಮಿಕ ಸಂಘಟನೆ ಎಐಟಿಯುಸಿ, ವೈಜ್ಞಾನಿಕ ಪರಿಷ್ಕರಣೆಗೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಪರಿಣಾಮ ಕರಡು ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಮಾಡಿತ್ತು.
"ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಕುರಿತಂತೆ ಅಧ್ಯಯನ ನಡೆಸಿ, 24 ಸಾವಿರ ರೂ.ನಿಗದಿ ಮಾಡಿದೆ. ಆದರೆ, ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ವೈಜ್ಞಾನಿಕವಾಗಿ ವೇತನ ಪ್ರತಿಷ್ಕರಣೆ ಮಾಡಬೇಕು ಎಂಬುದು ನಮ್ಮ ಆಗ್ರಹ. 2022ರಿಂದ ಕನಿಷ್ಠ ವೇತನ ಕಾಯ್ದೆ ಪರಿಷ್ಕರಿಸಬೇಕಾಗಿತ್ತು. ಎಐಟಿಯುಸಿ ವಿರೋಧದ ಹಿನ್ನೆಲೆ ಅಧಿಸೂಚನೆಯನ್ನು ಸರ್ಕಾರವೇ ವಾಪಸ್ ಪಡೆದಿದೆ. ಹೀಗಿರುವಾಗ 2022ರಿಂದ ಅನ್ವಯವಾಗುವಂತೆ ವೇತನವನ್ನು ಸರ್ಕಾರ ಪರಿಷ್ಕರಿಸಬೇಕು. ನಾವು ಕನಿಷ್ಠ ವೇತನವನ್ನು 31,556 ರೂ. ಪಾವತಿಸುವಂತೆ ಕೇಳಿದ್ದೇವೆ. ಇದೇ ವಿಚಾರ ಗೊಂದಲದಲ್ಲಿದ್ದು, ಈಗ ಸರ್ಕಾರ ಕನಿಷ್ಠ ವೇತನ ಕಾಯ್ದೆ ಅನುಷ್ಠಾನ ಮಾಡಲಿ, ಆ ಬಳಿಕ ಲೋಪಗಳ ಕುರಿತು ಚರ್ಚಿಸಿ ಮರು ಪರಿಶೀಲಿಸಬಹುದು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪ್ರಸ್ತುತ, ಬಹುತೇಕ ಉದ್ಯೋಗದಾತರು 2016 ರ ಕಾಯ್ದೆಯಂತೆಯೇ ಕನಿಷ್ಠ ವೇತನ ಪಾವತಿಸುತ್ತಿದ್ದಾರೆ. ಹಾಗಾಗಿ, ತುರ್ತಾಗಿ ವೇತನ ಪರಿಷ್ಕರಿಸುವ ಅನಿವಾರ್ಯತೆ ಸರ್ಕಾರದ ಮುಂದಿದೆ. ನಾವೂ ಕೂಡ ಅದೇ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
2025 ರ ಅಧಿಸೂಚನೆಯಲ್ಲಿ ಏನಿತ್ತು?
2025-26 ರಲ್ಲಿ ಕರ್ನಾಟಕ ಸರ್ಕಾರವು ಕನಿಷ್ಠ ವೇತನ ಕಾಯ್ದೆ 1984ರ ಕಲಂ 5(1) (ಎ) ಹಾಗೂ 5(1) ಬಿ ರಡಿ 81 ಅಧಿಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿತ್ತು. ಶೌಚಾಲಯ, ಸ್ನಾನಗೃಹಗಳು, ಒಳ ಚರಂಡಿ ಶುಚಿ ಮಾಡುವ ಕೆಲಸಗಾರರಿಗೆ ದಿನಕ್ಕೆ 989 ರೂ, ತಿಂಗಳಿಗೆ 21,251.30 ರೂ. ನಿಗದಿ ಮಾಡಿತ್ತು. ಅದೇ ರೀತಿ ಕುಶಲ, ಅರೆ ಕುಶಲ, ಹೆಚ್ಚಿನ ಕೌಶಲ್ಯ ಹೊಂದಿರುವ ಕಾರ್ಮಿಕರಿಗೆ ಪ್ರತ್ಯೇಕ ದರಗಳನ್ನು ನಿಗಡಿಪಡಿಸಿತ್ತು.
ವೇತನ ಪರಿಷ್ಕರಣೆ ಹೇಗೆ ನಡೆಯುತ್ತದೆ?
ಕನಿಷ್ಠ ವೇತನ ಕಾಯ್ದೆ1948ರ ಪ್ರಕಾರ ಪ್ರತಿ 5 ವರ್ಷಕ್ಕೊಮ್ಮೆ ಕಡ್ಡಾಯವಾಗಿ ವೇತನ ಪರಿಷ್ಕರಣೆ ಆಗಬೇಕು. ಕೇಂದ್ರ ಸರ್ಕಾರವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದ್ದು, ಇದರಡಿ ಫ್ಲೋರ್ ವೇಜ್ ಎಂಬ ಹೊಸ ಪರಿಕಲ್ಪನೆ ಪರಿಚಯಿಸಲಾಗಿದೆ.
ಕರ್ನಾಟಕದಲ್ಲಿ ಸರಾಸರಿ ಮಾಸಿಕ ಕನಿಷ್ಠ ವೇತನ ಈವರೆಗೆ 19 ಸಾವಿರ ರೂ. ಇದೆ. ಕೇಂದ್ರ ಸರ್ಕಾರವು ವೇತನ ಮಿತಿಯನ್ನು 18 ಸಾವಿರದಿಂದ 24 ಸಾವಿರಕ್ಕೆ ಏರಿಸಿದೆ. ಈ ಹಿನ್ನೆಲೆ ರಾಜ್ಯದಲ್ಲೂ ಕನಿಷ್ಠ ವೇತನ ಪರಿಷ್ಕರಿಸಿ, ಕಾರ್ಮಿಕರಿಗೆ ಅದರ ಪ್ರಯೋಜನ ತಲುಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
"ಕಾರ್ಮಿಕರ ಬೆವರಿನ ಬೆಲೆಗೆ ನ್ಯಾಯ ಒದಗಿಸುವುದು ಸರ್ಕಾರದ ಗುರಿ. ಆಹಾರ, ವಸತಿ ಅಗತ್ಯಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ವೇತನ ನಿಗದಿಪಡಿಸಲಾಗುವುದು." ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಳ್ಳಾರಿಯಲ್ಲಿ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಮಾರ್ಗಸೂಚಿಗಳೇನು?
ಕನಿಷ್ಠ ವೇತನವನ್ನು ಸಂವಿಧಾನದ 23ನೇ ವಿಧಿ ಮತ್ತು 21ನೇ ವಿಧಿಯು ಕಾರ್ಮಿಕರ ಮೂಲಭೂತ ಹಕ್ಕಾಗಿದೆ. ಕನಿಷ್ಠ ವೇತನವು ಕೇವಲ ಅನ್ನಕ್ಕೆ ಸೀಮಿತವಾಗದೇ ಕಾರ್ಮಿಕರು ಮತ್ತು ಅವರ ಕುಟುಂಬದವರ ಯೋಗ್ಯ ಜೀವನ, ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಭದ್ರತೆ ಖಾತರಿಪಡಿಸುವಂತೆ ಇರಬೇಕು. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
ವೇತನವನ್ನು ಕೇವಲ ಶೈಕ್ಷಣಿಕ ವಿದ್ಯಾರ್ಹತೆ ಮೇಲೆ ನಿರ್ಧರಿಸದೇ ಕೆಲಸದ ಸ್ವರೂಪದ ಮೇಲೆ ನಿಗದಿಪಡಿಸಬೇಕು ಎಂದಿತ್ತು. ಆದರೆ, ಗೃಹ ಕಾರ್ಮಿಕರ ಕನಿಷ್ಠ ವೇತನ ನಿಗದಿಗೆ ಸಂಬಂಧಿಸಿದಂತೆ ಇದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ನಿರ್ದಿಷ್ಟ ನಿರ್ದೇಶನ ನೀಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿತ್ತು.
ಮೂಲಭೂತ ಅಗತ್ಯತೆ ಏನು?
ಕನಿಷ್ಠ ವೇತನ ನಿಗದಿಪಡಿಸುವ ಸಂಬಂಧ ಸುಪ್ರೀಂಕೋರ್ಟ್ ಹಲವು ಪ್ರಮುಖ ತೀರ್ಪುಗಳ ಮೂಲಕ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಿದೆ. 1992 ರ ರೆಪ್ಟಾಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದ ತೀರ್ಪಿನ ಪ್ರಕಾರ, ಐದು ಮೂಲಭೂತ ಅವಶ್ಯಕತೆಗಳನ್ನು ಆಧರಿಸಿ ಕನಿಷ್ಠ ವೇತನ ನಿಗದಿ ಮಾಡಬೇಕು ಎಂದು ಹೇಳಿತ್ತು.
ಒಬ್ಬ ವಯಸ್ಕ ಕಾರ್ಮಿಕನಿಗೆ ದಿನಕ್ಕೆ ಕನಿಷ್ಠ 2700 ಕ್ಯಾಲೊರಿ ಆಹಾರ ಸಿಗಬೇಕು. ವರ್ಷಕ್ಕೆ ಕನಿಷ್ಠ 18 ಗಜಗಳಷ್ಟು (72 ಮೀಟರ್) ಬಟ್ಟೆ ಪ್ರತಿ ಕುಟುಂಬಕ್ಕೆ ಲಭ್ಯವಿರಬೇಕು. ಸರ್ಕಾರಿ ಗೃಹ ಯೋಜನೆಯಡಿ ಒದಗಿಸಲಾದ ಕನಿಷ್ಠ ಬಾಡಿಗೆ ಆಧರಿಸಿದ ವಸತಿ ಸೌಕರ್ಯ ಇರಬೇಕು. ಒಟ್ಟು ಕನಿಷ್ಠ ವೇತನದ ಶೇ. 20ರಷ್ಟು ಭಾಗವನ್ನು ಇಂಧನ, ಬೆಳಕು ಮತ್ತು ಇತರೆ ಚಿಲ್ಲರೆ ಖರ್ಚುಗಳಿಗೆ ಮೀಸಲಿಡಬೇಕು. ಶೇ. 25ರಷ್ಟು ಮೊತ್ತವನ್ನು ಮಕ್ಕಳ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಹಬ್ಬಗಳಂತಹ ಸಾಮಾಜಿಕ ಅಗತ್ಯಗಳಿಗಾಗಿ ಮೀಸಲಿಡಬೇಕು. ಈ ಎಲ್ಲಾ ಕಾರಣಗಳಿಂದ ಉದ್ಯೋಗದಾತರು ಕನಿಷ್ಠ ವೇತನಕ್ಕಿಂತ ಕಡಿಮೆ ಪಾವತಿಸುವಂತಿಲ್ಲ. ಒಂದು ವೇಳೆ ಕನಿಷ್ಠ ವೇತನ ನೀಡಲಾಗದಿದ್ದರೆ ಅಂತಹ ಉದ್ಯಮ ಮುಂದುವರಿಯುವ ಹಕ್ಕು ಹೊಂದಿರುವುದಿಲ್ಲ ಎಂದು ನ್ಯಾಯಾಲಯವು ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಹೇಳಿದೆ.

