ಲೋಕಾಯುಕ್ತ ಸಂಸ್ಥೆಯ ಘನತೆ, ಕುಸಿತ, ಪುನರುತ್ಥಾನ: 40 ವರ್ಷಗಳ ಏರಿಳಿತದ ಹಾದಿ
x

ಲೋಕಾಯುಕ್ತ ಸಂಸ್ಥೆಯ ಘನತೆ, ಕುಸಿತ, ಪುನರುತ್ಥಾನ: 40 ವರ್ಷಗಳ ಏರಿಳಿತದ ಹಾದಿ

ದೇಶದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸಂಸ್ಥೆ ಪ್ರಾರಂಭವಾಗಿ ನಾಲ್ಕು ದಶಕಗಳು ಕಳೆದಿದ್ದು, ಹಲವು ಏಳು-ಬೀಳುಗಳನ್ನು ಕಂಡಿವೆ.


Click the Play button to hear this message in audio format

ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ರೂಪಿಸಲಾದ ಪ್ರಬಲ ಸಂಸ್ಥೆಯೇ ಲೋಕಾಯುಕ್ತ ಪ್ರಾರಂಭವಾಗಿ ನಾಲ್ಕು ದಶಕಗಳು ಕಳೆದಿವೆ.

ಈ 40 ವರ್ಷಗಳ ಅವಧಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡಿವೆ. ಲೋಕಾಯುಕ್ತ ನ್ಯಾ. ವೈ. ಭಾಸ್ಕರ್‌ ರಾವ್‌ ಪುತ್ರ ಅಶ್ವಿನ್‌ರಾವ್‌ ನಡೆಸಿದ ಭ್ರಷ್ಟಾಚಾರದಿಂದಾಗಿ ಲೋಕಾಯುಕ್ತ ಸಂಸ್ಥೆಗೆ ಕಳಂಕ ತಂದಿತ್ತು. ಅದನ್ನು ಹೊರತುಪಡಿಸಿದರೆ ಇನ್ನುಳಿದ ಲೋಕಾಯುಕ್ತರು ಸಂಸ್ಥೆಯ ಘನತೆಯನ್ನು ಹೆಚ್ಚಿಸುವಂತೆ ಮಾಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯು 1984ರ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತಂದಿತು. 1986ರ ಜ.15 ರಂದು ಕರ್ನಾಟಕ ಲೋಕಾಯುಕ್ತ ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ರಾಜ್ಯದ ಆಡಳಿತ ಯಂತ್ರದಲ್ಲಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಿಳಂಬ ಧೋರಣೆಯನ್ನು ಹೋಗಲಾಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ನ್ಯಾಯಮೂರ್ತಿ ಎ.ಡಿ. ಕೌಶಲ್ ಅವರು ಕರ್ನಾಟಕದ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡರು.

ಸಂಸ್ಥೆಯ ಮಹತ್ವ ಜನತೆಗೆ ಗೊತ್ತಾಗಿದ್ದು ಯಾವಾಗ?

ಲೋಕಾಯುಕ್ತ ಸಂಸ್ಥೆ ಆರಂಭವಾದ ಮೊದಲ ಒಂದೂವರೆ ದಶಕದಲ್ಲಿ ಅದು ಅಷ್ಟಾಗಿ ಜನಪ್ರಿಯವಾಗಿರಲಿಲ್ಲ. ಅದು ಕೇವಲ ಕಾಗದದ ಮೇಲಿನ ಸಂಸ್ಥೆಯಾಗಿ ಉಳಿದಿತ್ತು. ಆದರೆ, 21ನೇ ಶತಮಾನದ ಆರಂಭದಲ್ಲಿ ಈ ಸಂಸ್ಥೆಯ ಮಹತ್ವ ಜನಸಾಮಾನ್ಯರಿಗೆ ತಿಳಿಯಲು ಪ್ರಾರಂಭವಾಯಿತು. ಮುಖ್ಯವಾಗಿ ನ್ಯಾ. ಎನ್. ವೆಂಕಟಾಚಲ ಅವರ ಆಗಮನದ ನಂತರ ಲೋಕಾಯುಕ್ತ ಎಂಬುದು ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಯಿತು. ಜನಸಾಮಾನ್ಯರ ದೂರುಗಳಿಗೆ ತಕ್ಷಣ ಸ್ಪಂದಿಸುವುದು, ಸರ್ಕಾರಿ ಕಚೇರಿಗಳ ಮೇಲೆ ದಿಢೀರ್ ದಾಳಿ ಮಾಡುವುದು ಮತ್ತು ಲಂಚ ಪಡೆಯುತ್ತಿದ್ದ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಮೂಲಕ ಲೋಕಾಯುಕ್ತ ಸಂಸ್ಥೆಯು ಸಾರ್ವಜನಿಕರ ವಿಶ್ವಾಸವನ್ನು ಗಳಿಸಿತು.

ವಿವಿಧ ಲೋಕಾಯುಕ್ತರ ಕಾಲಾವಧಿ ಹಾಗೂ ಮಹತ್ವದ ಘಟನೆಗಳು

ನ್ಯಾ. ಎನ್. ವೆಂಕಟಾಚಲ (2001-2006)

ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದವರು ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರಾಗಿದ್ದಾರೆ. ಅವರು ಕೇವಲ ಕಚೇರಿಯಲ್ಲಿ ಕೂರದೆ, ಸ್ವತಃ ಆಸ್ಪತ್ರೆಗಳು, ತಹಶೀಲ್ದಾರ್ ಕಚೇರಿಗಳು ಮತ್ತು ನಗರಪಾಲಿಕೆಗಳಿಗೆ ದಾಳಿ ನಡೆಸುತ್ತಿದ್ದರು. ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದ ವೈದ್ಯರನ್ನು, ಲಂಚ ಕೇಳುವ ಸಿಬ್ಬಂದಿಯನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇವರ ಕಾಲದಲ್ಲಿ ಲೋಕಾಯುಕ್ತವು ಜನಸಾಮಾನ್ಯರ ನ್ಯಾಯಾಲಯ ಎಂದು ಖ್ಯಾತಿ ಪಡೆಯಿತು.

ನ್ಯಾ. ಎನ್. ಸಂತೋಷ್ ಹೆಗ್ಡೆ (2006-2011)

ಲೋಕಾಯುಕ್ತ ನ್ಯಾ. ಎನ್‌. ಸಂತೋಷ್ ಹೆಗ್ಡೆ ಅವರ ಕಾಲಾವಧಿಯು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಸಂಚಲನ ಮೂಡಿಸಿದ ಕಾಲ. ಇವರು ಅಧಿಕಾರದಲ್ಲಿದ್ದಾಗ ನಡೆದ ಅಕ್ರಮ ಗಣಿಗಾರಿಕೆಯ ತನಿಖೆಯು ಇಡೀ ದೇಶದ ಗಮನ ಸೆಳೆಯಿತು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಕುರಿತ ಇವರ ವರದಿಯು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತೆ ಮಾಡಿತು. ರಾಜಕಾರಣಿಗಳು ಹಾಗೂ ಪ್ರಭಾವಿ ಅಧಿಕಾರಿಗಳು ಕೂಡ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡಿದರು. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತಕ್ಕೆ ಇದ್ದ ತನಿಖಾ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡರು.

ಯಡಿಯೂರಪ್ಪ ರಾಜೀನಾಮೆ

ರಾಜ್ಯ ರಾಜಕೀಯ ಇತಿಹಾಸದಲ್ಲಿ 2011ರ ಅ.15 ಮರೆಯಲಾಗದ ದಿನ. ಅಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲು ಸೇರಿದರು. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರೇಯಸ್ಸು ಹೊಂದಿದ್ದ ನಾಯಕ ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದದ್ದು, ಇಡೀ ದೇಶದ ಗಮನ ಸೆಳೆದಿತ್ತು.

2011ರಲ್ಲಿ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಅವರು ರಾಜ್ಯದಲ್ಲಿ ನಡೆದಿದ್ದ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಗಣಿಗಾರಿಕೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಈ ವರದಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಉಲ್ಲೇಖವಾಗಿತ್ತು. ಗಣಿ ಕಂಪನಿಗಳಿಂದ ಯಡಿಯೂರಪ್ಪ ಅವರ ಕುಟುಂಬಕ್ಕೆ ಸೇರಿದ ಟ್ರಸ್ಟ್‌ಗಳಿಗೆ ದೇಣಿಗೆ ರೂಪದಲ್ಲಿ ಹಣ ಸಂದಾಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಸೂಚನೆಯಂತೆ 2011ರ ಜು.31 ರಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಂಧನಕ್ಕೆ ಕಾರಣವಾದ ಡಿ-ನೋಟಿಫಿಕೇಷನ್‌ ಪ್ರಕರಣ

ಯಡಿಯೂರಪ್ಪ ಅವರು ಕೇವಲ ಗಣಿ ಹಗರಣದ ಕಾರಣಕ್ಕೆ ಜೈಲಿಗೆ ಹೋಗಲಿಲ್ಲ. ಅವರ ಬಂಧನಕ್ಕೆ ಮುಖ್ಯ ಕಾರಣವಾಗಿದ್ದು ಭೂ ಡಿ-ನೋಟಿಫಿಕೇಷನ್ ಹಗರಣ. ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಭೂಮಿಯನ್ನು ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಿದ ಆರೋಪದ ಮೇಲೆ ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ.ಎನ್. ಬಲರಾಜ್ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು 2011ರ ಅ.15ರಂದು ಯಡಿಯೂರಪ್ಪ ಅವರಿಗೆ ಜಾಮೀನು ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ನ್ಯಾಯಾಲಯ ಬಂಧನಕ್ಕೆ ಆದೇಶ ನೀಡಿದ ಕೂಡಲೇ ಬಿ.ಎಸ್. ಯಡಿಯೂರಪ್ಪ ಅವರು ಶರಣಾದರು. ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋದ ಮೊದಲ ಘಟನೆ ಇದಾಗಿತ್ತು.

25 ದಿನಗಳ ಜೈಲು ವಾಸ

ಬಿ.ಎಸ್. ಯಡಿಯೂರಪ್ಪ ಅವರು ಒಟ್ಟು 25 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ವಿಚಾರಣಾಧೀನ ಕೈದಿಯಾಗಿ ಕಾಲ ಕಳೆದರು. ಈ ಅವಧಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟಾಯಿತು. ಅವರ ಅನುಪಸ್ಥಿತಿಯಲ್ಲಿ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2011ರ ನ.8 ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತು. ಜೈಲಿನಿಂದ ಬಿಡುಗಡೆಯಾದಾಗ ಅವರ ಬೆಂಬಲಿಗರು ಭವ್ಯ ಸ್ವಾಗತ ನೀಡಿದರು, ಆದರೆ ಆ ಹೊತ್ತಿಗೆ ಅವರ ರಾಜಕೀಯ ಜೀವನಕ್ಕೆ ದೊಡ್ಡ ಕಪ್ಪುಚುಕ್ಕೆ ತಗುಲಿತ್ತು.

ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ, 2016ರ ಅಕ್ಟೋಬರ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಮೇಲಿದ್ದ 40 ಕೋಟಿ ರೂಪಾಯಿಗಳ ಲಂಚದ ಆರೋಪವನ್ನು ವಜಾಗೊಳಿಸಿತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರು ಈ ಪ್ರಕರಣದಲ್ಲಿ ಖುಲಾಸೆಗೊಂಡರು.

ನ್ಯಾ. ಶಿವರಾಜ್ ಪಾಟೀಲ್ (ಆ.3, 2011– ಸೆ. 19, 2011)

ನ್ಯಾ.ಸಂತೋಷ್ ಹೆಗ್ಡೆ ನಂತರ ಅಧಿಕಾರ ವಹಿಸಿಕೊಂಡ ಇವರು, ಭೂ ಹಂಚಿಕೆಯ ವಿವಾದವೊಂದಕ್ಕೆ ಸಂಬಂಧಿಸಿದಂತೆ ಕೇವಲ ಕೆಲವೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಸಂಸ್ಥೆಗೆ ಒಂದು ಸಣ್ಣ ಹಿನ್ನಡೆಯನ್ನುಂಟು ಮಾಡಿತು.

ನ್ಯಾ. ವೈ. ಭಾಸ್ಕರ್ ರಾವ್ - ಸಂಸ್ಥೆಗೆ ಕಪ್ಪು ಚುಕ್ಕೆ

"ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?" ಎಂಬ ಗಾದೆ ಮಾತು ಲೋಕಾಯುಕ್ತ ಸಂಸ್ಥೆಯ ಇತಿಹಾಸದಲ್ಲಿ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಕಾಲಾವಧಿಗೆ ಅಕ್ಷರಶಃ ಅನ್ವಯಿಸುತ್ತದೆ. ಭ್ರಷ್ಟಾಚಾರವನ್ನು ಕಿತ್ತೊಗೆಯಲು ಇರುವ ಸಂಸ್ಥೆಯೊಳಗೆ ಭ್ರಷ್ಟಾಚಾರದ ಜಾಲ ಕಾರ್ಯ ನಿರ್ವಹಿಸಿದ್ದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಲೋಕಾಯುಕ್ತರ ಪುತ್ರ ಅಶ್ವಿನ್‌ ರಾವ್‌ ಈ ಜಾಲದ ರೂವಾರಿಯಾಗಿದ್ದು ಸಂಸ್ಥೆಯ ಘನತೆಗೆ ತೀವ್ರ ಧಕ್ಕೆ ತಂದಿತು. ನ್ಯಾ. ವೈ. ಭಾಸ್ಕರ್ ರಾವ್ ಅವರು ಫೆಬ್ರವರಿ 2013ರಲ್ಲಿ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯು ಆರಂಭದಲ್ಲಿ ಸಾಧಾರಣವಾಗಿದ್ದರೂ, 2015ರ ಮೇ ತಿಂಗಳಲ್ಲಿ ಬಯಲಾದ ಒಂದು ಘಟನೆ ಲೋಕಾಯುಕ್ತ ಕಚೇರಿಯೊಳಗಿದ್ದ ಕರಾಳ ಮುಖವನ್ನು ಅನಾವರಣಗೊಳಿಸಿತು.

ಹಗರಣ ಬಯಲಾದದ್ದು ಹೇಗೆ?

ಬೆಂಗಳೂರು ಜಿಲ್ಲಾ ಪಂಚಾಯತ್‌ನ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಎಂ.ಎನ್. ಕೃಷ್ಣಮೂರ್ತಿ ಎಂಬುವವರು ನೀಡಿದ ದೂರು ಈ ಮಹಾ ಹಗರಣಕ್ಕೆ ನಾಂದಿಯಾಯಿತು. ಮೇ 2015ರಲ್ಲಿ ಕೃಷ್ಣಮೂರ್ತಿ ಅವರು ಲೋಕಾಯುಕ್ತ ಎಸ್‌ಪಿಯಾಗಿದ್ದ ಸೋನಿಯಾ ನಾರಂಗ್ ಅವರಿಗೆ ದೂರು ನೀಡಿ, ಲೋಕಾಯುಕ್ತ ಕಚೇರಿಯಲ್ಲೇ ಇರುವ ವ್ಯಕ್ತಿಯೊಬ್ಬರು ನನ್ನನ್ನು ಕರೆಯಿಸಿ, ನಿಮ್ಮ ಮೇಲೆ ಲೋಕಾಯುಕ್ತ ದಾಳಿ ನಡೆಯದಂತೆ ತಡೆಯಲು 1 ಕೋಟಿ ರೂ. ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು. ಈ ದೂರು ದಾಖಲಾದ ತಕ್ಷಣ ಎಸ್‌ಪಿ ಸೋನಿಯಾ ನಾರಂಗ್ ಅವರು ತನಿಖೆಗೆ ಆದೇಶಿಸಿದರು. ಈ ತನಿಖೆಯು ಲೋಕಾಯುಕ್ತರ ಅಧಿಕೃತ ನಿವಾಸ ಮತ್ತು ಕಚೇರಿಯತ್ತ ಬೆರಳು ಮಾಡಿತು.

ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್ ಸುಲಿಗೆ ಜಾಲದ ರೂವಾರಿ

ತನಿಖೆಯ ವೇಳೆ ಬಯಲಾದ ಸತ್ಯಗಳು ಆಘಾತಕಾರಿಯಾಗಿದ್ದವು. ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಅವರ ಪುತ್ರ ವೈ. ಅಶ್ವಿನ್ ರಾವ್ ಈ ಸುಲಿಗೆ ಜಾಲದ ಕಿಂಗ್‌ಪಿನ್ ಆಗಿದ್ದರು. ಇವರೊಂದಿಗೆ ಸಂಸ್ಥೆಯ ಪಿಆರ್‌ಒ ರಿಯಾಜ್, ಅಶೋಕ್ ಕುಮಾರ್ ಮತ್ತು ಕೃಷ್ಣ ರಾವ್ ಎಂಬ ಮಧ್ಯವರ್ತಿಗಳು ಸೇರಿಕೊಂಡು ಒಂದು ದೊಡ್ಡ ತಂಡವನ್ನೇ ಕಟ್ಟಿದ್ದರು. ಸರ್ಕಾರಿ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, ನಿಮ್ಮ ಆಸ್ತಿಯ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ ಎಂದು ಅವರಿಗೆ ಫೋನ್ ಮಾಡಲಾಗುತ್ತಿತ್ತು. ಅಧಿಕಾರಿಗಳನ್ನು ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಅಥವಾ ಕಚೇರಿಗೇ ಕರೆಸಿಕೊಂಡು ಲಂಚಕ್ಕೆ ಬೇಡಿಕೆ ಇಡಲಾಗುತ್ತಿತ್ತು. ಲಂಚದ ಹಣವನ್ನು ಪಡೆಯಲು ಮಧ್ಯವರ್ತಿಗಳನ್ನು ಬಳಸಲಾಗುತ್ತಿತ್ತು. ಲೋಕಾಯುಕ್ತ ಸಂಸ್ಥೆಯ ಅಧಿಕೃತ ದೂರವಾಣಿ ಸಂಖ್ಯೆಗಳು ಮತ್ತು ಲಾಂಛನಗಳನ್ನು ಅಧಿಕಾರಿಗಳನ್ನು ಹೆದರಿಸಲು ಬಳಸಲಾಗುತ್ತಿತ್ತು.

ಈ ಹಗರಣದಲ್ಲಿ ತಮ್ಮ ಮಗನ ಹೆಸರು ಕೇಳಿಬಂದರೂ ಭಾಸ್ಕರ್ ರಾವ್ ಅವರು ರಾಜೀನಾಮೆ ನೀಡಲು ನಿರಾಕರಿಸಿದರು. ಇದು ಸಾರ್ವಜನಿಕರು ಮತ್ತು ವಕೀಲರ ಸಂಘದ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ರಾಜ್ಯಾದ್ಯಂತ ಲೋಕಾಯುಕ್ತರ ವಿರುದ್ಧ ಪ್ರತಿಭಟನೆಗಳು ನಡೆದವು. ಜನರ ಒತ್ತಡಕ್ಕೆ ಮಣಿದ ಸರ್ಕಾರ, ಈ ಪ್ರಕರಣದ ತನಿಖೆಗಾಗಿ ನಿವೃತ್ತ ಪೊಲೀಸ್‌ ಅಧಿಕಾರಿ ಕಮಲ್ ಪಂತ್ ನೇತೃತ್ವದಲ್ಲಿ ವಿಶೇಷ ತನಿಖಾ ದಳ ರಚಿಸಿತು. ಎಸ್‌ಐಟಿ ತನಿಖೆಯು ಅಶ್ವಿನ್ ರಾವ್ ಅವರ ಪಾತ್ರವನ್ನು ಸಾಕ್ಷ್ಯ ಸಮೇತ ನಿರೂಪಿಸಿತು. ಜುಲೈ 2015ರಲ್ಲಿ ಅಶ್ವಿನ್ ರಾವ್ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಯಿತು. ಇದು ರಾಜ್ಯದ ಇತಿಹಾಸದಲ್ಲೇ ಲೋಕಾಯುಕ್ತರೊಬ್ಬರ ಪುತ್ರ ಭ್ರಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾದ ಮೊದಲ ಪ್ರಕರಣವಾಗಿದೆ. ಭಾಸ್ಕರ್ ರಾವ್ ಅವರು ರಾಜೀನಾಮೆ ನೀಡದಿದ್ದಾಗ, ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಿಧಾನಸಭೆಯಲ್ಲಿ ಪದಚ್ಯುತಿ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ರಾಜ್ಯದ ಇತಿಹಾಸದಲ್ಲಿ ಲೋಕಾಯುಕ್ತರೊಬ್ಬರ ವಿರುದ್ಧ ಈ ಕ್ರಮ ಕೈಗೊಂಡಿದ್ದು ಇದೇ ಮೊದಲು. ಕೊನೆಗೆ, ಡಿಸೆಂಬರ್ 2015ರಲ್ಲಿ ಭಾಸ್ಕರ್ ರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಎಸಿಬಿ ರಚನೆ ಹಾಗೂ ಲೋಕಾಯುಕ್ತದ ಅಧಿಕಾರ ಕಡಿತ

2015-16ರ ಅವಧಿಯಲ್ಲಿ ಅಂದಿನ ಲೋಕಾಯುಕ್ತ ನ್ಯಾ. ವೈ. ಭಾಸ್ಕರ್ ರಾವ್ ಪುತ್ರನ ಭ್ರಷ್ಟಾಚಾರ ಪ್ರಕರಣ ಬಯಲಾದಾಗ, ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, 2016ರ ಮಾ.14ರಂದು ಒಂದು ಕಾರ್ಯಕಾರಿ ಆದೇಶದ ಮೂಲಕ ಎಸಿಬಿಯನ್ನು ರಚಿಸಿತು. ಲೋಕಾಯುಕ್ತ ಸಂಸ್ಥೆಯ ಪೊಲೀಸ್‌ ವಿಭಾಗಕ್ಕೆ ಇದ್ದ ಭ್ರಷ್ಟಾಚಾರ ತಡೆ ಕಾಯ್ದೆಯಡಿಯ ತನಿಖಾ ಅಧಿಕಾರವನ್ನು ಎಸಿಬಿಗೆ ವರ್ಗಾಯಿಸಲಾಯಿತು. ಇದರಿಂದ ಲೋಕಾಯುಕ್ತ ಪೊಲೀಸ್‌ ವಿಭಾಗವು ಕೇವಲ ಶಿಫಾರಸು ಮಾಡುವ ಸಂಸ್ಥೆಯಾಗಿ ಬದಲಾಯಿತು. ಲೋಕಾಯುಕ್ತವು ಸ್ವತಂತ್ರ ಸಂಸ್ಥೆಯಾಗಿದ್ದರೆ, ಎಸಿಬಿಯು ನೇರವಾಗಿ ಸರ್ಕಾರದ ಅಧೀನದಲ್ಲಿತ್ತು. ಒಬ್ಬ ಶಾಸಕ ಅಥವಾ ಮಂತ್ರಿಯ ವಿರುದ್ಧ ತನಿಖೆ ನಡೆಸಬೇಕಾದರೆ ಎಸಿಬಿಯು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಇದು ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸುವ ತಂತ್ರ ಎಂದು ಸಾರ್ವಜನಿಕರು ಟೀಕಿಸಿದರು. ಎಸಿಬಿ ರಚನೆಯಾದ ನಂತರ ಲೋಕಾಯುಕ್ತ ಸಂಸ್ಥೆಯ ಪೊಲೀಸ್‌ ವಿಭಾಗವನ್ನು "ಹಲ್ಲು ಕಿತ್ತ ಹಾವು" ಎಂದು ಬಣ್ಣಿಸಲಾಯಿತು.

ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಎಸಿಬಿ ರಚನೆಯನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಮತ್ತು ಸಮಾಜ ಪರಿವರ್ತನಾ ಸಮುದಾಯದಂತಹ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವು. ಎಸಿಬಿ ರಚನೆಯು ಕಾನೂನುಬಾಹಿರ ಮತ್ತು ಇದು ಲೋಕಾಯುಕ್ತ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿದೆ ಎಂದು ವಾದಿಸಲಾಯಿತು. ಸುಮಾರು ಆರು ವರ್ಷಗಳ ಸುದೀರ್ಘ ವಿಚಾರಣೆಯ ನಂತರ, ನ್ಯಾ.ಬಿ. ವೀರಪ್ಪ ಮತ್ತು ನ್ಯಾ. ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಐತಿಹಾಸಿಕ ತೀರ್ಪನ್ನು ನೀಡಿತು. ರಾಜ್ಯ ಸರ್ಕಾರವು ಎಸಿಬಿ ರಚಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿತು. ಎಸಿಬಿಗೆ ಇದ್ದ ಎಲ್ಲಾ ತನಿಖಾ ಅಧಿಕಾರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತೆ ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಹಸ್ತಾಂತರಿಸಲಾಯಿತು. ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯದಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗವು ಮತ್ತೆ ಸಕ್ರಿಯವಾಗಿದೆ.

ಲೋಕಾಯುಕ್ತರಿಗೆ ಚಾಕು ಇರಿತ

ಲೋಕಾಯುಕ್ತ ಸಂಸ್ಥೆಯ ಇತಿಹಾಸದಲ್ಲಿ 2018ರ ಮಾ.7ರಂದು ನಡೆದ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಭದ್ರತಾ ವಲಯದಲ್ಲಿರುವ ಲೋಕಾಯುಕ್ತ ಕಚೇರಿಯೊಳಗೆ ನುಗ್ಗಿದ ವ್ಯಕ್ತಿಯೊಬ್ಬರು, ಅಂದಿನ ಲೋಕಾಯುಕ್ತರಾಗಿದ್ದ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಮೇಲೆ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದರು. ನ್ಯಾ. ವಿಶ್ವನಾಥ ಶೆಟ್ಟಿ ತಮ್ಮ ಚೇಂಬರ್‌ನಲ್ಲಿ ಸಾರ್ವಜನಿಕರ ದೂರುಗಳನ್ನು ಆಲಿಸುತ್ತಿದ್ದ ವೇಳೆ ದೂರುದಾರನ ಸೋಗಿನಲ್ಲಿ ಬಂದ ತೇಜಸ್ ಶರ್ಮಾ ಎಂಬ ವ್ಯಕ್ತಿ, ಲೋಕಾಯುಕ್ತರ ಮೇಲೆ ಇದ್ದಕ್ಕಿದ್ದಂತೆ ಚಾಕುವಿನಿಂದ ಮೂರು ಬಾರಿ ಇರಿದ ಕಾರಣ ಲೋಕಾಯುಕ್ತರ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ತೀವ್ರ ಗಾಯಗಳಾದವು. ಅವರು ರಕ್ತದ ಮಡುವಿನಲ್ಲಿ ಕುಸಿದು ಬಿದ್ದರು. ತಕ್ಷಣವೇ ಅಲ್ಲಿದ್ದ ಸಿಬ್ಬಂದಿ ದಾಳಿಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ನ್ಯಾಯಮೂರ್ತಿಗಳನ್ನು ಮಲ್ಲಯ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲ ದಿನಗಳ ಬಳಿಕ ಗುಣಮುಖರಾದರೂ, ಲೋಕಾಯುಕ್ತ ಇತಿಹಾಸದಲ್ಲಿ ಈ ಘಟನೆ ಕಪ್ಪುಚುಕ್ಕೆಯಾಗಿ ಉಳಿಯಿತು.

ಒಟ್ಟಾರೆ ಲೋಕಾಯುಕ್ತ ಸಂಸ್ಥೆಯು ಕೇವಲ ಒಂದು ಸರ್ಕಾರಿ ಸಂಸ್ಥೆಯಲ್ಲ, ಅದು ಸಾರ್ವಜನಿಕರ ಆಶೋತ್ತರಗಳ ಪ್ರತಿಬಿಂಬವಾಗಿದೆ. ನ್ಯಾ. ಎನ್. ವೆಂಕಟಾಚಲ, ನ್ಯಾ. ಎನ್‌. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿ ಸಂಸ್ಥೆಯನ್ನು ಜನಸಾಮಾನ್ಯರಿಗೆ ತಲುಪಿಸಿದರು. ಅಧಿಕಾರಗಳ ಏರಿಳಿತಗಳ ನಡುವೆಯೂ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇಂದಿಗೂ ಲೋಕಾಯುಕ್ತವು ಅತ್ಯಂತ ಶಕ್ತಿಯುತವಾದ ಮಾರ್ಗವಾಗಿದೆ.

Read More
Next Story