Notification for the post of agriculture officers without internal reservation; Various organizations outraged against the government
x

ಸಾಂದರ್ಭಿಕ ಚಿತ್ರ

ಒಳ ಮೀಸಲು ಇಲ್ಲದೇ ಕೃಷಿ ಅಧಿಕಾರಿಗಳ ಹುದ್ದೆಗೆ ನೇಮಕ; ಸರ್ಕಾರದ ವಿರುದ್ಧ ಸಂಘಟನೆಗಳ ಆಕ್ರೋಶ

ನೇಮಕ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ವಿಳಂಬ ಮಾಡುತ್ತದೆ ಎಂಬ ಕಾರಣಕ್ಕೆ ಈ ಅಧಿಸೂಚನೆಯನ್ನು ಕೆಇಎಗೆ ವರ್ಗಾಯಿಸಲಾಗಿತ್ತು. ಆದರೆ ಇದೀಗ ಒಳಮೀಸಲಾತಿ ಅನ್ವಯಿಸದೇ ಅಧಿಸೂಚನೆ ಹೊರಡಿಸಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.


Click the Play button to hear this message in audio format

ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಳ ಮೀಸಲಾತಿ ಅಳವಡಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ಗೊಂದಲ ಮತ್ತು ವಿಳಂಬ ನೀತಿ ಮುಂದುವರಿದಿದ್ದು, ಇದು ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಸಭೆಗಳು ಹಾಗೂ ವಿಶೇಷ ಸಂಪುಟ ಸಭೆಗಳನ್ನು ನಡೆಸಿದ್ದರೂ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಒಳ ಮೀಸಲಾತಿಯ ನೆಪವೊಡ್ಡಿ ನೇಮಕಾತಿಗಳನ್ನು ಸ್ಥಗಿತಗೊಳಿಸಿದ್ದ ಸರ್ಕಾರ, ಇದೀಗ ಏಕಾಏಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಒಳ ಮೀಸಲಾತಿಯನ್ನು ಅನ್ವಯಿಸದೆ ಕೃಷಿ ಇಲಾಖೆಯ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದೆ.

ಕಳೆದ ಮೂರು ವರ್ಷಗಳಿಂದ ಒಳ ಮೀಸಲಾತಿಯನ್ನು ಮುಂದಿಟ್ಟುಕೊಂಡು ಸರ್ಕಾರ ಯಾವುದೇ ಅಧಿಸೂಚನೆಯನ್ನು ಹೊರಡಿಸಿರಲಿಲ್ಲ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರು ಒಳ ಮೀಸಲಾತಿ ವರದಿ ನೀಡಿದ್ದರೂ, ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಅನುಷ್ಠಾನ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಒಳ ಮೀಸಲಾತಿ ಇಲ್ಲದೆಯೇ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿತ್ತು. ದಲಿತ ಹಾಗೂ ವಿದ್ಯಾರ್ಥಿ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಅಧಿಸೂಚನೆ ರದ್ದುಪಡಿಸಿ, ಹೊಸ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿತ್ತು. ನೇಮಕಾತಿ ಪ್ರಕ್ರಿಯೆ ನಡೆಸಿ ಫಲಿತಾಂಶ ನೀಡುವಲ್ಲಿ ಕೆಪಿಎಸ್‌ಸಿ ವಿಳಂಬ ಮಾಡುತ್ತದೆ ಎಂಬ ಕಾರಣಕ್ಕೆ ಈ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವರ್ಗಾಯಿಸಲಾಗಿತ್ತು. ಆದರೆ, ಇದೀಗ ಇಲ್ಲಿಯೂ ಒಳ ಮೀಸಲಾತಿ ಅನ್ವಯಿಸದೆ ಅಧಿಸೂಚನೆ ಹೊರಡಿಸಿರುವುದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಕಾಂಗ್ರೆಸ್‌ಗೆ ತಕ್ಕ ಪಾಠ

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಕೇಶವಮೂರ್ತಿ 'ದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡಿ, "ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತು ಭರವಸೆಯ ಮಾತುಗಳನ್ನಾಡುತ್ತದೆ. ಆದರೆ ಇದುವರೆಗೂ ರೋಸ್ಟರ್‌ ಪದ್ಧತಿಯಲ್ಲಿನ ಗೊಂದಲಗಳನ್ನು ಬಗೆಹರಿಸದೆ ಜೀವಂತವಾಗಿರಿಸಿಕೊಂಡಿದೆ. ಒಳ ಮೀಸಲಾತಿಯನ್ನು ಆದಷ್ಟು ಶೀಘ್ರವಾಗಿ ಹಾಗೂ ವೈಜ್ಞಾನಿಕವಾಗಿ ಜಾರಿಗೊಳಿಸಬೇಕೆಂಬುದು ದಲಿತ ಸಂಘಟನೆಗಳ ಆಗ್ರಹವಾಗಿದೆ. ಯಾವುದೇ ನೇಮಕಾತಿಗಳು ನಡೆದರೂ ಒಳ ಮೀಸಲಾತಿ ಅಳವಡಿಸಿಕೊಂಡೇ ಪ್ರಕ್ರಿಯೆ ಮುಂದುವರಿಸಬೇಕು" ಎಂದರು.

ಮುಂದುವರಿದು, "ಈ ಕುರಿತು ಮುಖ್ಯಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರದಲ್ಲೇ ಮನವಿ ನೀಡಲಾಗುವುದು. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಈಗಾಗಲೇ ಕಾಂಗ್ರೆಸ್‌ಗೆ ಉತ್ತರ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತಷ್ಟು ವಿಳಂಬ ಮಾಡಿದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 150 ಕ್ಷೇತ್ರಗಳಲ್ಲಿ ನಮ್ಮ ಶಕ್ತಿ ತೋರಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಸರ್ಕಾರದ ವಿಳಂಬದಿಂದ ಎಲ್ಲಾ ವರ್ಗಕ್ಕೂ ಅನ್ಯಾಯ

ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಆರ್‌. ಕಾಂತಕುಮಾರ್‌ ಮಾತನಾಡಿ, "ರಾಜ್ಯ ಸರ್ಕಾರ ಒಳ ಮೀಸಲಾತಿ ನೀಡದೆ ಯಾವುದೇ ಅಧಿಸೂಚನೆ ಹೊರಡಿಸಬಾರದು. ಸಿಎಂ ಸಿದ್ದರಾಮಯ್ಯನವರು ಶೀಘ್ರವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಎಲ್ಲಾ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ಪಡೆದು ನಿರ್ಧಾರ ಮಾಡಬೇಕು. ವಿದ್ಯಾರ್ಥಿ ಸಂಘಟನೆಗಳ ನಾಯಕರನ್ನು ಕರೆದು ಅಭ್ಯರ್ಥಿಗಳ ಸಮಸ್ಯೆಯನ್ನು ಆಲಿಸಬೇಕು. ಸರ್ಕಾರದ ವಿಳಂಬ ನೀತಿಯಿಂದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಕೇವಲ ಪರಿಶಿಷ್ಟ ವರ್ಗಕ್ಕೆ ಮಾತ್ರವಲ್ಲದೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ" ಎಂದು ತಿಳಿಸಿದರು.

"ಮಧ್ಯಪ್ರದೇಶದಲ್ಲಿಯೂ ಮೀಸಲಾತಿ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಆದರೆ ಅಲ್ಲಿನ ಸರ್ಕಾರ ಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟು ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಸಿವಿಲ್‌ ನ್ಯಾಯಾಧೀಶರ ನೇಮಕಾತಿಯೂ ಹೈಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟು ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರವೂ ಇದೇ ಮಾದರಿಯಲ್ಲಿ ಎಲ್ಲಾ ಅಧಿಸೂಚನೆಗಳನ್ನು ಹೊರಡಿಸಬೇಕು. ಇದರಿಂದ ಅಲೆಮಾರಿ ಸಮುದಾಯ ಸೇರಿದಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿದೆ. ಸರ್ಕಾರ ಮತ್ತಷ್ಟು ವಿಳಂಬ ಮಾಡಿದರೆ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ" ಎಂದು ಅಭಿಪ್ರಾಯಪಟ್ಟರು.

ಒಳ ಮೀಸಲಾತಿ ಅನ್ವಯವಾಗಿಯೇ ನೇಮಕಾತಿಯಾಗಲಿ

"ಕೃಷಿ ಇಲಾಖೆಯ ಹುದ್ದೆಗಳನ್ನು ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ಭರ್ತಿ ಮಾಡುವ ಉದ್ದೇಶದಿಂದ ಅಧಿಸೂಚನೆಯನ್ನು ಕೆಪಿಎಸ್‌ಸಿಯಿಂದ ಕೆಇಎಗೆ ವರ್ಗಾಯಿಸಿರುವುದು ಸರ್ಕಾರದ ಉತ್ತಮ ನಿರ್ಧಾರ. ಆದರೆ, ಏಪ್ರಿಲ್ 18ರಂದು ಕೆಇಎ ಒಳ ಮೀಸಲಾತಿ ಇಲ್ಲದೆ ಕೃಷಿ ಇಲಾಖೆಯ 890 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಕಾಂಗ್ರೆಸ್‌ ಸರ್ಕಾರ ಸದಾ ಸಾಮಾಜಿಕ ನ್ಯಾಯದ ಪರ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು, ದಲಿತ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಮುದಾಯದ ಹೋರಾಟಕ್ಕೆ ಮಾಡುತ್ತಿರುವ ಅವಮಾನವಿದು" ಎಂದು ಕೃಷಿ ಅಧಿಕಾರಿ ಆಕಾಂಕ್ಷಿ ಅಂಕೇಶ್ ಬೇಸರ ವ್ಯಕ್ತಪಡಿಸಿದರು.

"ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಳ ಮೀಸಲಾತಿಯನ್ನು ಯಾವುದೇ ಗೊಂದಲವಿಲ್ಲದೆ ಜಾರಿಗೊಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ಸಚಿವರ ನಡುವೆ ಸಮನ್ವಯತೆ ಇಲ್ಲದ ಕಾರಣ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಯಾಗಬೇಕೆಂದು ಕಳೆದ ಮೂರು ವರ್ಷಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಲಕ್ಷಾಂತರ ಅಭ್ಯರ್ಥಿಗಳು ಧಾರವಾಡ, ಬೆಂಗಳೂರು, ರಾಯಚೂರು ಸೇರಿದಂತೆ ವಿವಿಧೆಡೆ ತರಬೇತಿ ಪಡೆಯುತ್ತಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಯಾವುದೇ ಅಧಿಸೂಚನೆ ಹೊರಡಿಸಿರಲಿಲ್ಲ. ಸರ್ಕಾರ ಆದಷ್ಟು ಶೀಘ್ರವಾಗಿ ಒಳ ಮೀಸಲಾತಿ ಅನ್ವಯಿಸಿ ಅಧಿಸೂಚನೆ ಹೊರಡಿಸಬೇಕು" ಎಂದು ತಿಳಿಸಿದರು.

ಮೂರನೇ ಬಾರಿ ಅಧಿಸೂಚನೆ

ಕೆಪಿಎಸ್‌ಸಿ 2024ರ ಸೆಪ್ಟೆಂಬರ್ 20ರಂದು ಕೃಷಿ ಇಲಾಖೆಯಲ್ಲಿ ಖಾಲಿ ಇದ್ದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ ಕ್ರೀಡಾಪಟುಗಳ ಮೀಸಲಾತಿ ಸೇರಿಸಿ ತಿದ್ದುಪಡಿ ಮಾಡಿ, 2024ರ ಡಿಸೆಂಬರ್‌ 31ರಂದು ಮರು ಅಧಿಸೂಚನೆ ಹೊರಡಿಸಿ ಪರೀಕ್ಷೆಗೆ ಸಿದ್ಧತೆ ನಡೆಸಿತ್ತು. ಆದರೆ, ಒಳ ಮೀಸಲಾತಿ ಅನ್ವಯಿಸಿ ಅಧಿಸೂಚನೆ ಹೊರಡಿಸಬೇಕು ಎಂಬ ಒತ್ತಡ ಬಂದ ಕಾರಣ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ತದನಂತರ ಸರ್ಕಾರ ಕೆಪಿಎಸ್‌ಸಿಯಿಂದ ಅಧಿಸೂಚನೆಯನ್ನು ಕೆಇಎಗೆ ವರ್ಗಾಯಿಸಿತ್ತು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18ರಂದು ಅಧಿಸೂಚನೆ ಹೊರಡಿಸಿದ್ದು, ಈ ಮೂಲಕ ಒಂದೇ ನೇಮಕಾತಿ ಪ್ರಕ್ರಿಯೆಗೆ ಮೂರನೇ ಬಾರಿ ಅಧಿಸೂಚನೆ ಹೊರಡಿಸಿದಂತಾಗಿದೆ.

Read More
Next Story