ಇನಾಂ ಮಂಜೂರಾತಿಯ ಜಟಿಲ ಜಾಲ : ಕಾಗದದಲ್ಲಿ ಕ್ರಾಂತಿ, ವಾಸ್ತವದಲ್ಲಿ ಭ್ರಾಂತಿ!
x

ಎಐ ಆಧಾರಿತ ಚಿತ್ರ 

ಇನಾಂ ಮಂಜೂರಾತಿಯ ಜಟಿಲ ಜಾಲ : ಕಾಗದದಲ್ಲಿ ಕ್ರಾಂತಿ, ವಾಸ್ತವದಲ್ಲಿ ಭ್ರಾಂತಿ!

ಸಲ್ಲಿಕೆಯಾಗಿರುವ 79,946 ಅರ್ಜಿಗಳ ಪೈಕಿ 31,266 ಅರ್ಜಿಗಳು ಇತ್ಯರ್ಥವಾಗಿರುವುದು, ಸುಮಾರು 16,800 ಅರ್ಜಿಗಳು ಇನ್ನೂ ಬಾಕಿ ಉಳಿದಿರುವುದು ವ್ಯವಸ್ಥೆಯೊಳಗಿನ ಸಂಕೀರ್ಣತೆಯನ್ನು ಬಿಂಬಿಸುತ್ತದೆ.


Click the Play button to hear this message in audio format

ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಜಾರಿಗೆ ಬಂದ ಅತ್ಯಂತ ಪ್ರಮುಖ ಕಾನೂನು ಸುಧಾರಣೆಗಳಲ್ಲಿ ಭೂ ಸುಧಾರಣೆಗಳು ಮೊದಲ ಸಾಲಿನಲ್ಲಿವೆ. ಆದರೆ, ಇನಾಂ ಮಂಜೂರಾತಿ ಎಂಬುದು ಇನ್ನೂ ಜಟಿಲತೆಯಿಂದ ಕೂಡಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ 79,946 ಅರ್ಜಿಗಳ ಪೈಕಿ ಕೇವಲ 31,266 ಅರ್ಜಿಗಳು ಇತ್ಯರ್ಥವಾಗಿರುವುದು ಹಾಗೂ ಸುಮಾರು 16,800 ಅರ್ಜಿಗಳು ಇನ್ನೂ ಬಾಕಿ ಉಳಿದಿರುವುದು ವ್ಯವಸ್ಥೆಯೊಳಗಿನ ಸಂಕೀರ್ಣತೆಯನ್ನು ಬಿಂಬಿಸುತ್ತದೆ.

ಒಟ್ಟು ಅರ್ಜಿಗಳಲ್ಲಿ ಸುಮಾರು ಶೇ.39 ರಷ್ಟು ಮಾತ್ರ ಮಂಜೂರಾಗಿರುವುದು, ಪ್ರಕ್ರಿಯೆಯು ಆಮೆಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದಾಗಿದೆ. 16,800 ಅರ್ಜಿಗಳು ಇತ್ಯರ್ಥವಾಗದೆ ಉಳಿದಿರುವುದು, ಕಂದಾಯ ಇಲಾಖೆಯ ಮೇಲೆ ಇರುವ ಒತ್ತಡವನ್ನು ಮತ್ತು ಕಾನೂನು ತೊಡಕುಗಳನ್ನು ಪ್ರತಿಬಿಂಬಿಸುತ್ತದೆ. ದಾಖಲೆಗಳ ಕೊರತೆ, ವಾರಸುದಾರರ ವಿವಾದ ಮತ್ತು ನ್ಯಾಯಾಲಯದ ಮೊರೆ ಹೋಗುವ ಪ್ರಕರಣಗಳು ಈ ವಿಳಂಬಕ್ಕೆ ಕಾರಣವಾಗಿವೆ ಎನ್ನಲಾಗಿದೆ.

"ಉಳುವವನೇ ಭೂಮಿಯ ಒಡೆಯ" ಎಂಬ ಘೋಷವಾಕ್ಯದಡಿ ಕರ್ನಾಟಕದಲ್ಲಿ ನಡೆದ ಬದಲಾವಣೆಗಳು ಲಕ್ಷಾಂತರ ಕೃಷಿಕರ ಬದುಕಿನಲ್ಲಿ ಬೆಳಕು ಚೆಲ್ಲಿವೆ. ಈ ಸುಧಾರಣಾ ಪ್ರಕ್ರಿಯೆಯ ಪ್ರಮುಖ ಅಂಗವಾಗಿ 'ಇನಾಂ ರದ್ದತಿ'ಯನ್ನು ಪರಿಗಣಿಸಲಾಗುತ್ತದೆ. ಬ್ರಿಟಿಷರು, ರಾಜ-ಮಹಾರಾಜರು ಅಥವಾ ಹಿಂದಿನ ಆಡಳಿತಗಾರರು ಧಾರ್ಮಿಕ ಸಂಸ್ಥೆಗಳಿಗೆ, ವಿದ್ವಾಂಸರಿಗೆ ಅಥವಾ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಗೌರವಾರ್ಥವಾಗಿ, ವಿಶೇಷ ಸೇವೆಗಳಿಗಾಗಿ ನೀಡುತ್ತಿದ್ದ ಉಚಿತ ಭೂಮಿಯಾಗಿದೆ. ಆದರೆ ಕಾಲಕ್ರಮೇಣ ಈ ಪದ್ಧತಿಯು ಶೋಷಣೆಯ ಸಾಧನವಾಗಿ ಮಾರ್ಪಟ್ಟಿತು. ಇನಾಂದಾರರು ಕೇವಲ ಭೂಮಿಯ ಮಾಲೀಕರಾಗಿ ಉಳಿಯದೆ, ರೈತರನ್ನು ಕೇವಲ ಗೇಣಿದಾರರನ್ನಾಗಿ ಅಥವಾ ಬಡ ಕೂಲಿಗಳನ್ನಾಗಿ ಕಾಣಲಾರಂಭಿಸಿದರು. ಇದು ಅಸಮಾನತೆಗೆ ಎಡೆಮಾಡಿಕೊಟ್ಟಿತು. ಈ ಸಂಬಂಧ ಇನಾಂ ರದ್ಧತಿ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು.

ಸರ್ಕಾರವು ಇನಾಂ ಪದ್ಧತಿಯನ್ನು ರದ್ದುಗೊಳಿಸಲು ಮುಂದಾದಾಗ ಕೆಲವೊಂದು ಉದ್ದೇಶಗಳನ್ನು ಹೊಂದಲಾಗಿತ್ತು. ಇನಾಂದಾರರು ಮತ್ತು ರೈತರ ನಡುವೆ ಇದ್ದ ಅನಗತ್ಯ ಮಧ್ಯವರ್ತಿಗಳನ್ನು ತೆಗೆದುಹಾಕುವುದು, ತಲೆಮಾರುಗಳಿಂದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ನಿಜವಾದ ರೈತರಿಗೆ ಹಕ್ಕು ಪತ್ರ ನೀಡುವುದು. ಭೂಮಿಯ ಕೇಂದ್ರೀಕರಣವನ್ನು ತಡೆದು, ಎಲ್ಲರಿಗೂ ಬದುಕುವ ಅವಕಾಶ ಕಲ್ಪಿಸುವುದು ಪ್ರಮುಖ ಉದ್ದೇಶವಾಗಿತ್ತು. ಈ ಉದ್ದೇಶವೂ ರಾಜ್ಯದಲ್ಲಿ ಈವರೆವಿಗೂ ಸಂಪೂರ್ಣವಾಗಿ ಈಡೇರಿಲ್ಲ.

ಇನಾಂ ರದ್ದತಿಯಲ್ಲಿನ ಅಡೆತಡೆಗಳು

ಭೂ ಸುಧಾರಣೆಗಳು ಕೇವಲ ಕಾನೂನಿನಿಂದ ಜಾರಿಯಾಗುವುದಿಲ್ಲ, ಅದಕ್ಕೆ ದೃಢ ರಾಜಕೀಯ ಇಚ್ಛಾಶಕ್ತಿಯೂ ಬೇಕು. ಈ ಪ್ರಕ್ರಿಯೆಯಲ್ಲಿ ಹಲವು ಸವಾಲುಗಳು ಎದುರಾಗಿವೆ. ಹಳೆಯ ಕಾಲದ ಮ್ಯಾನುವಲ್ ರೆಕಾರ್ಡ್‌ಗಳಲ್ಲಿನ ಹೆಸರು, ಸರ್ವೆ ನಂಬರ್ ಮತ್ತು ವಿಸ್ತೀರ್ಣದಲ್ಲಿನ ವ್ಯತ್ಯಾಸಗಳು, ಇನಾಂದಾರರು ತಮ್ಮ ಹಕ್ಕು ಕಳೆದುಕೊಳ್ಳುವುದನ್ನು ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ಮತ್ತು ಬಹಳಷ್ಟು ರೈತರಿಗೆ ಕಾನೂನಿನ ಅರಿವಿಲ್ಲದ ಕಾರಣ, ಅರ್ಜಿಯನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ದಾಖಲೆಗಳೊಂದಿಗೆ ಸಲ್ಲಿಸಲು ಸಾಧ್ಯವಾಗದಿರುವುದಾಗಿದೆ.

ಇನಾಂ ರದ್ದತಿಯು ಗ್ರಾಮೀಣ ಆರ್ಥಿಕತೆಯನ್ನು ಬದಲಿಸಿದೆ. ಭೂಮಿಯ ಒಡೆತನ ಸಿಕ್ಕಿದ ನಂತರ ರೈತರು ಕೃಷಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮುಂದಾದರು. 'ಉಳುವವನೇ ಒಡೆಯ' ಆದಾಗ ಸಹಜವಾಗಿ ಭೂಮಿಯ ಉತ್ಪಾದಕತೆ ಹೆಚ್ಚಾಯಿತು. ಇದುವರೆಗೆ ಜೀತದಾಳುಗಳಂತಿದ್ದ ರೈತರಿಗೆ ಸ್ವತಂತ್ರ ವ್ಯಕ್ತಿತ್ವ ಮತ್ತು ಗೌರವ ದೊರೆಯಿತು ಎಂಬ ಮಾತುಗಳು ಕೇಳಿಬಂದಿವೆ.

ತಹಸೀಲ್ದಾರ್ ಕಚೇರಿಗಳಲ್ಲಿ ಇನಾಂ ಪ್ರಕರಣಗಳನ್ನು ನಿರ್ವಹಿಸಲು ಪ್ರತ್ಯೇಕ ಸಿಬ್ಬಂದಿ ಇಲ್ಲದಿರುವುದು. ದೈನಂದಿನ ಕಂದಾಯ ಕೆಲಸಗಳ ನಡುವೆ ಈ ಪ್ರಕರಣಗಳಿಗೆ ಹೆಚ್ಚಿನ ಒತ್ತು ಸಿಗುತ್ತಿಲ್ಲ. ಪ್ರಭಾವಿ ಇನಾಂದಾರರ ವಾರಸುದಾರರು ಅಥವಾ ಮಾಲೀಕರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ಈ ಅರ್ಜಿಗಳ ಇತ್ಯರ್ಥಕ್ಕೆ ದೊಡ್ಡ ಅಡಚಣೆಯಾಗಿದೆ. ಇನಾಂದಾರರು ಮೃತಪಟ್ಟ ನಂತರ ಅವರ ವಾರಸುದಾರರ ಬಗ್ಗೆ ವಿವಾದವಿದ್ದಾಗ, ಯಾರಿಗೆ ನೋಟಿಸ್ ನೀಡಬೇಕು ಎಂಬ ಗೊಂದಲ ಅಧಿಕಾರಿಗಳಿಗಿದೆ.

ಇನಾಂ ಭೂಮಿಗೆ ಸಂಬಂಧಿಸಿದಂತಹ ಕಾಯ್ದೆಗಳು

ರಾಜ್ಯದಲ್ಲಿ ಇನಾಂ ರದ್ದತಿ ಮತ್ತು ಆ ಭೂಮಿಯನ್ನು ಗೇಣಿದಾರರಿಗೆ ಅಥವಾ ಸಾಗುವಳಿದಾರರಿಗೆ ವರ್ಗಾಯಿಸುವ ಪ್ರಕ್ರಿಯೆಯು ವಿವಿಧ ಕಾನೂನುಗಳ ಅಡಿಯಲ್ಲಿ ನಡೆಯುತ್ತದೆ. ಮೈಸೂರು (ವೈಯಕ್ತಿಕ) ಇನಾಂ ರದ್ದತಿ ಕಾಯ್ದೆ, 1955ರ ಕಾಯ್ದೆಯು ಇನಾಂ ಪದ್ಧತಿಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ಅತ್ಯಂತ ಪ್ರಮುಖ ಕಾನೂನುಗಳಲ್ಲಿ ಒಂದಾಗಿದೆ. ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ಇದ್ದ ಎಲ್ಲಾ ವೈಯಕ್ತಿಕ ಇನಾಂಗಳನ್ನು ರದ್ದುಪಡಿಸುವುದು. ಈ ಕಾಯ್ದೆಯ ಅಡಿಯಲ್ಲಿ, ಇನಾಂ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಸಾಗುವಳಿದಾರರು ತಾವು ಆ ಭೂಮಿಯನ್ನು ಸ್ವಾಧೀನದಲ್ಲಿಟ್ಟುಕೊಳ್ಳಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕಿತ್ತು. ಇನಾಂದಾರರ ಹಕ್ಕನ್ನು ರದ್ದುಗೊಳಿಸಿ, ರೈತರಿಗೆ ಒಡೆತನ ನೀಡುವುದು ಇದರ ಮುಖ್ಯ ಗುರಿಯಾಗಿತ್ತು.

ಮೈಸೂರು ಧಾರ್ಮಿಕ ಮತ್ತು ದತ್ತಿ ಇನಾಂ ರದ್ದತಿ ಕಾಯ್ದೆ, 1955ರ ಕಾಯ್ದೆಯು ದೇವಾಲಯಗಳು, ಮಸೀದಿಗಳು, ದರ್ಗಾಗಳು ಮತ್ತು ಮಠಗಳಿಗೆ ನೀಡಲಾಗಿದ್ದ ಭೂಮಿಗೆ ಸಂಬಂಧಿಸಿದ ಕಾಯ್ದೆಯಾಗಿದೆ. ಈ ಕಾಯ್ದೆಯು ಧಾರ್ಮಿಕ ದತ್ತಿಗಳಿಗೆ ನೀಡಲಾದ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು, ಅದರ ನಿರ್ವಹಣೆಯನ್ನು ಸರಳೀಕರಿಸಿತು. ಇಲ್ಲಿನ ಸಾಗುವಳಿದಾರರಿಗೂ ಭೂ ಒಡೆತನ ಪಡೆಯಲು ಅವಕಾಶ ಕಲ್ಪಿಸಲಾಯಿತು. ಇಂತಹ ಭೂಮಿಗಳ ವಿಷಯದಲ್ಲಿ ಸರ್ಕಾರದ ಭೂ ಮಂಜೂರಾತಿ ಪ್ರಾಧಿಕಾರಗಳು ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತವೆ. ಏಕೆಂದರೆ ಇವುಗಳಿಗೆ ಸಂಬಂಧಿಸಿದಂತೆ ಅಕ್ರಮ ವರ್ಗಾವಣೆ ಮತ್ತು ಧಾರ್ಮಿಕ ಸಂಸ್ಥೆಗಳ ಹಿತಾಸಕ್ತಿಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ.

ಕರ್ನಾಟಕ ಗ್ರಾಮ ಸೇವಾ ಇನಾಂ ರದ್ದತಿ ಕಾಯ್ದೆ, 1961ರ ಕಾಯ್ದೆಯು ಹಿಂದಿನ ಕಾಲದಲ್ಲಿ ಗ್ರಾಮದ ಕುಂಬಾರ, ಬಡಗಿ, ಅಗಸ ಅಥವಾ ಪಟೇಲ್, ಶ್ಯಾನುಭೋಗರಂತಹ ಗ್ರಾಮ ಸೇವೆಗಳನ್ನು ಮಾಡುತ್ತಿದ್ದವರಿಗೆ ಪ್ರತಿಫಲವಾಗಿ ಭೂಮಿಯನ್ನು ನೀಡಲಾಗುತ್ತಿತ್ತು. ಇದನ್ನು ಗ್ರಾಮ ಸೇವಾ ಇನಾಂ ಎನ್ನಲಾಗುತ್ತದೆ. ಗ್ರಾಮ ಸೇವೆಗಳು ಕಡ್ಡಾಯವಾಗಿರದೆ ವೇತನ ಆಧಾರಿತವಾದ ನಂತರ, ಆ ಸೇವೆಗಾಗಿ ನೀಡಿದ್ದ ಭೂಮಿಯನ್ನು ಇನಾಂದಾರರಿಂದ ಬಿಡಿಸಿ, ನಿಜವಾದ ಸಾಗುವಳಿದಾರರಿಗೆ ಅಥವಾ ಸರ್ಕಾರಕ್ಕೆ ಅಧೀನಗೊಳಿಸುವುದಾಗಿದೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ, 1961ರ ಕಾಯ್ದೆಯು ಇನಾಂ ರದ್ದತಿಗೆ ಪೂರಕವಾಗಿ ನಿಲ್ಲುವ ದೇಶದ ಅತ್ಯಂತ ಪ್ರಬಲ ಕಾಯ್ದೆಯಾಗಿದೆ. ಸೆಕ್ಷನ್ 44ರ ವಿಭಾಗದ ಅಡಿಯಲ್ಲಿ, ಎಲ್ಲಾ ಇನಾಂ ಭೂಮಿಗಳು ಮತ್ತು ಗೇಣಿ ಭೂಮಿಗಳು ಸರ್ಕಾರದ ವಶಕ್ಕೆ ಬರುತ್ತವೆ. ಸೆಕ್ಷನ್ 45ರ ಅಡಿಯಲ್ಲಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಗೇಣಿದಾರನು ಭೂ ಮಾಲೀಕತ್ವ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ. ಇದುವರೆಗೆ ಇನಾಂ ಭೂಮಿಗಳ ಇತ್ಯರ್ಥಕ್ಕೆ ಈ ಕಾಯ್ದೆಯೇ ಮೂಲಾಧಾರವಾಗಿದೆ.

ಕರ್ನಾಟಕ ಇನಾಂ ರದ್ದತಿ (ತಿದ್ದುಪಡಿ) ಕಾಯ್ದೆಗಳು ಕಾಲಕಾಲಕ್ಕೆ ಸರ್ಕಾರದ ದಾಖಲೆಗಳಲ್ಲಿರುವ ಗೊಂದಲಗಳನ್ನು ನಿವಾರಿಸಲು ಮತ್ತು ಬಾಕಿ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಸರ್ಕಾರವು ಹಲವಾರು ತಿದ್ದುಪಡಿಗಳನ್ನು ತಂದಿದೆ. ಹಲವು ರೈತರು ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕಾರಣ, ಸರ್ಕಾರವು ಹಲವು ಬಾರಿ ಅರ್ಜಿ ಸಲ್ಲಿಕೆಗೆ ಕಾಲಮಿತಿಯನ್ನು ವಿಸ್ತರಿಸುತ್ತಾ ಬಂದಿದೆ. ಭೂ ನ್ಯಾಯ ಮಂಡಳಿ ಕಾಯ್ದೆಗಳ ಅಡಿಯಲ್ಲಿ ಭೂಮಿಯನ್ನು ಮಂಜೂರು ಮಾಡುವ ಅಧಿಕಾರವನ್ನು ಭೂ ನ್ಯಾಯ ಮಂಡಳಿಗೆ ನೀಡಲಾಗಿದೆ. ಇದು ಸ್ಥಳೀಯ ಮಟ್ಟದಲ್ಲಿ ರೈತರ ಹಕ್ಕುಗಳನ್ನು ನಿರ್ಧರಿಸುವ ಪ್ರಜಾಸತ್ತಾತ್ಮಕ ವೇದಿಕೆಯಾಗಿದೆ.

ಎದುರಾಗುವ ಪ್ರಮುಖ ಸಮಸ್ಯೆಗಳು

ಇನಾಂ ಪದ್ಧತಿಯು ಬಹಳ ಹಳೆಯದಾದ್ದರಿಂದ, 1950ರ ದಶಕದ ಪೂರ್ವದ ಪಹಣಿ ಅಥವಾ ಆರ್‌ಟಿಸಿ ದಾಖಲೆಗಳು ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಇನಾಂದಾರರ ವಾರಸುದಾರರು ಮತ್ತು ಸಾಗುವಳಿದಾರರ ನಡುವೆ ಭೂಮಿಯ ಮಾಲೀಕತ್ವಕ್ಕಾಗಿ ದಶಕಗಳ ಕಾಲ ನ್ಯಾಯಾಲಯದಲ್ಲಿ ವ್ಯಾಜ್ಯಗಳು ನಡೆಯುತ್ತಿವೆ. ಕೆಲವೊಮ್ಮೆ ಕಂದಾಯ ಇಲಾಖೆಯು ಈ ಭೂಮಿಯನ್ನು ಸರ್ಕಾರಿ ಜಮೀನು ಎಂದು ವರ್ಗೀಕರಿಸಿದಾಗ, ರೈತರು ತಾವು ದಶಕಗಳಿಂದ ಮಾಡುತ್ತಿದ್ದ ಸಾಗುವಳಿಯ ಹಕ್ಕನ್ನು ಸಾಬೀತುಪಡಿಸಲು ಕಷ್ಟಪಡಬೇಕಾಗುತ್ತದೆ. ಇನಾಂ ಭೂಮಿಗಳನ್ನು ಅನುಭೋಗಿಗಳು ಕಾನೂನುಬಾಹಿರವಾಗಿ ಮಾರಾಟ ಮಾಡಿರುವ ಪ್ರಕರಣಗಳು ಹೆಚ್ಚಿದ್ದು, ಇದು ಹಕ್ಕು ಮಂಜೂರಾತಿ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿದೆ.

Read More
Next Story