ಸರ್ಕಾರಿ ಶಾಲೆಗಳಲ್ಲಿ  ಎಐ ಡಿಜಿಟಲ್ʼ ಶಿಕ್ಷಕ!  12.28 ಲಕ್ಷ ವಿದ್ಯಾರ್ಥಿಗಳಿಗೆ ಆಗಲಿದೆ ವರದಾನ!
x

ಸರ್ಕಾರಿ ಶಾಲೆಗಳಲ್ಲಿ 'ಎಐ ಡಿಜಿಟಲ್ʼ ಶಿಕ್ಷಕ! 12.28 ಲಕ್ಷ ವಿದ್ಯಾರ್ಥಿಗಳಿಗೆ ಆಗಲಿದೆ ವರದಾನ!

8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಅವರಿಗೆ ಶಾಲೆಯಲ್ಲಿ ಒಬ್ಬ ಖಾಸಗಿ ಶಿಕ್ಷಕನಂತೆ ಮಾರ್ಗದರ್ಶನ ನೀಡುವ ತಂತ್ರಜ್ಞಾನವನ್ನು ಒದಗಿಸುವುದು ಡಿಜಿಟಲ್ ಟ್ಯೂಟರ್ ಮೂಲ ಉದ್ದೇಶವಾಗಿದೆ.


Click the Play button to hear this message in audio format

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಹಲವು ಕಾರಣಗಳಿಂದ ಸವಾಲಿನ ಕೆಲಸವಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಆಧುನಿಕ ಶಿಕ್ಷಣದ ಫಲಗಳನ್ನು ತಲುಪಿಸುವ ಹೆಜ್ಜೆಯನ್ನಿಟ್ಟಿದೆ.

ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟ್ಯೂಟರ್' ಯೋಜನೆಯು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗಿದೆ.

ಶಿಕ್ಷಕರ ಕೊರತೆ, ವೈಯಕ್ತಿಕ ಮಾರ್ಗದರ್ಶನದ ಕೊರತೆ ನೀಗಿಸಲು ಸರ್ಕಾರವು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಿದೆ. 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಅವರಿಗೆ ಶಾಲೆಯಲ್ಲಿ ಒಬ್ಬ ಖಾಸಗಿ ಶಿಕ್ಷಕನಂತೆ ಮಾರ್ಗದರ್ಶನ ನೀಡುವ ತಂತ್ರಜ್ಞಾನವನ್ನು ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಐಐಟಿ ಧಾರವಾಡದೊಂದಿಗೆ ತಾಂತ್ರಿಕ ಸಹಯೋಗ

ಯಾವುದೇ ತಂತ್ರಜ್ಞಾನ ಆಧಾರಿತ ಯೋಜನೆ ಯಶಸ್ವಿಯಾಗಲು ಅದರ ತಾಂತ್ರಿಕ ಗುಣಮಟ್ಟ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡದೊಂದಿಗೆ ಕೈಜೋಡಿಸಿದೆ. ಐಐಟಿ ಧಾರವಾಡದ ತಂತ್ರಜ್ಞರು ಮತ್ತು ಶಿಕ್ಷಣ ತಜ್ಞರು ಜಂಟಿಯಾಗಿ ಈ ಎಐ ಟ್ಯೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಕೇವಲ ಜಾಗತಿಕ ತಂತ್ರಜ್ಞಾನವನ್ನು ಬಳಸುವುದಷ್ಟೇ ಅಲ್ಲದೆ, ರಾಜ್ಯದ ಪಠ್ಯಕ್ರಮಕ್ಕೆ ಅನುಗುಣವಾಗಿ ಮತ್ತು ಕನ್ನಡ ಭಾಷಾ ಮಾಧ್ಯಮದ ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ಇದನ್ನು ರೂಪಿಸಲಾಗುತ್ತಿದೆ. ಐಐಟಿ ಅಭಿವೃದ್ಧಿಪಡಿಸುವ ಈ ತಂತ್ರಜ್ಞಾನವು ವಿದ್ಯಾರ್ಥಿಯ ಪ್ರತಿಯೊಂದು ನಡೆಯನ್ನು ವಿಶ್ಲೇಷಿಸುತ್ತದೆ. ಒಂದು ವಿಷಯವು ವಿದ್ಯಾರ್ಥಿಗೆ ಕಠಿಣವೆನಿಸಿದರೆ, ಎಐ ಟ್ಯೂಟರ್ ಅದನ್ನು ಇನ್ನಷ್ಟು ಸರಳವಾಗಿ ವಿವರಿಸುತ್ತದೆ.

ಡಿಜಿಟಲ್ ಟ್ಯೂಟರ್‌ನ ಪ್ರಮುಖ ವೈಶಿಷ್ಟ್ಯಗಳು

ಈ ಎಐ ಆಧಾರಿತ ಡಿಜಿಟಲ್ ಟ್ಯೂಟರ್ ಕೇವಲ ಒಂದು ವಿಡಿಯೋ ಪಾಠಗಳ ಸಂಗ್ರಹವಲ್ಲ. ಇದರಲ್ಲಿ ಹಲವಾರು ಮುಂದುವರಿದ ತಾಂತ್ರಿಕ ಗುಣಲಕ್ಷಣಗಳಿವೆ. ಪ್ರತಿಯೊಂದು ಮಗುವಿನ ಗ್ರಹಿಕಾ ಶಕ್ತಿ ಒಂದೇ ರೀತಿ ಇರುವುದಿಲ್ಲ. ಡಿಜಿಟಲ್ ಟ್ಯೂಟರ್ ವಿದ್ಯಾರ್ಥಿಯ ವೇಗಕ್ಕೆ ತಕ್ಕಂತೆ ಬೋಧಿಸುತ್ತದೆ. ಮಗು ವೇಗವಾಗಿ ಕಲಿಯುತ್ತಿದ್ದರೆ ಮುಂದುವರಿದ ಪಾಠಗಳನ್ನು ನೀಡುತ್ತದೆ, ಮಗು ಹಿಂದುಳಿದಿದ್ದರೆ ಮೂಲಭೂತ ವಿಷಯಗಳನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಡುತ್ತದೆ.

ಶಾಲಾ ಸಮಯದ ನಂತರವೂ ವಿದ್ಯಾರ್ಥಿಗಳು ತಮಗೆ ಬೇಕಾದ ಸಮಯದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಇದು ಮನೆಯಲ್ಲಿ ಓದಿಕೊಳ್ಳುವಾಗ ಎದುರಾಗುವ ಸಂಶಯಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ. ವಿದ್ಯಾರ್ಥಿಯು ಒಂದು ಪಾಠ ಮುಗಿಸಿದ ತಕ್ಷಣ ರಸಪ್ರಶ್ನೆ ಅಥವಾ ಕಿರು ಪರೀಕ್ಷೆಯನ್ನು ಎದುರಿಸಬಹುದು. ಎಐ ತಂತ್ರಜ್ಞಾನವು ಕೂಡಲೇ ಫಲಿತಾಂಶ ನೀಡುವುದಲ್ಲದೆ, ಮಗು ಯಾವ ಭಾಗದಲ್ಲಿ ಸುಧಾರಿಸಿಕೊಳ್ಳಬೇಕು ಎಂಬ ವಿಶ್ಲೇಷಣೆಯನ್ನು ನೀಡುತ್ತದೆ. ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಗಳನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ವಿಷಯದ ಮೇಲೆ ಪ್ರಭುತ್ವ ಸಾಧಿಸಬಹುದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

12.28 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳು!

ರಾಜ್ಯಾದ್ಯಂತ 8ನೇ ತರಗತಿಯಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಸುಮಾರು 12.28 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಇದರ ನೇರ ಫಲಾನುಭವಿಗಳಾಗಲಿದ್ದಾರೆ. ಯೋಜನೆಗಾಗಿ ಸರ್ಕಾರವು ಪ್ರಾಥಮಿಕ ಹಂತದಲ್ಲಿ ಅಂದಾಜು 5 ಕೋಟಿ ರೂಪಾಯಿಗಳ ವೆಚ್ಚವನ್ನು ಭರಿಸಲು ನಿರ್ಧರಿಸಿದೆ. ತಂತ್ರಜ್ಞಾನ ಅಭಿವೃದ್ಧಿ ಮತ್ತು ಅದರ ಪ್ರಾಯೋಗಿಕ ಅನುಷ್ಠಾನಕ್ಕೆ ಈ ಮೊತ್ತವನ್ನು ಬಳಸಲಾಗುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ನಂತಹ ವಿಷಯಗಳಿಗೆ ತಜ್ಞ ಶಿಕ್ಷಕರ ಕೊರತೆ ಎದುರಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಈ ಡಿಜಿಟಲ್ ಟ್ಯೂಟರ್ ‘ಪೂರಕ ಶಿಕ್ಷಕ’ನಂತೆ ಕೆಲಸ ಮಾಡಲಿದೆ.

ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲಿ ಅಡಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಅನುಷ್ಠಾನದ ಮೇಲೆ ಯಶಸ್ವಿ ಅವಲಂಬಿತ

ಸರ್ಕಾರದ ಡಿಜಿಟಲ್‌ ಟ್ಯೂಟರ್‌ ಯೋಜನೆಯ ಕುರಿತು ದ ಫೆರಡಲ್‌ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ, ಸರ್ಕಾರದ ಈ ನಿರ್ಧಾರವು ಶಿಕ್ಷಣ ಕ್ಷೇತ್ರದಲ್ಲಿ ಕಾಲಾನುಗುಣವಾದ ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

"8ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಎಐ, ರೋಬೋಟಿಕ್ಸ್ ಮುಂತಾದ ಹೊಸ ತಂತ್ರಜ್ಞಾನಗಳ ಪರಿಚಯ ಮಾಡಿಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದ ಜ್ಞಾನಾಧಾರಿತ ಆರ್ಥಿಕತೆಗೆ ತಯಾರಾಗಲು ಸಹಾಯಕವಾಗುತ್ತದೆ. ಅದೇ ವೇಳೆ ಡಿಜಿಟಲ್ ಕಲಿಕಾ ಪಠ್ಯಕ್ರಮಗಳನ್ನು ಜಾರಿಗೆ ತರುವಾಗ ಮಕ್ಕಳ ಸುರಕ್ಷತೆ, ಸಮಾನ ಅವಕಾಶ ಹಾಗೂ ಗ್ರಾಮೀಣ ಮತ್ತು ಹಿಂದುಳಿದ ಭಾಗಗಳ ಮಕ್ಕಳಿಗೂ ತಂತ್ರಜ್ಞಾನ ಸೌಲಭ್ಯ ಸಮಾನವಾಗಿ ದೊರೆಯುವಂತೆ ಸರ್ಕಾರ ಗಮನ ಹರಿಸುವುದು ಅತ್ಯಂತ ಅಗತ್ಯ. ಮಕ್ಕಳ ಕಲಿಕೆಯನ್ನು ಉತ್ತೇಜಿಸುವ ಈ ರೀತಿಯ ನವೀನ ಕ್ರಮಗಳು ಸರಿಯಾದ ಮಾರ್ಗದರ್ಶನದೊಂದಿಗೆ ಜಾರಿಗೆ ಬಂದರೆ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಬಲ ನೀಡಲಿವೆ," ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ನುಗ್ಗಲಿ ಮಾತನಾಡಿ, "ಯೋಜನೆಯು ಸರ್ಕಾರ ಯಾವ ರೀತಿಯಲ್ಲಿ ಅನುಷ್ಠಾನ ಮಾಡಲಿದೆ ಎಂಬುದರ ಮೇಲೆ ಯಶಸ್ವಿ ಅವಲಂಬಿತವಾಗಿರುತ್ತದೆ. ಶಿಕ್ಷಕರು ಹೇಳಿಕೊಡುವಂತೆ ಯಂತ್ರಗಳು ಹೇಳಿಕೊಡುತ್ತವೆ ಎಂಬುದು ಹೇಗೆ ಸಾಧ್ಯ? ಶಿಕ್ಷಕರ ಕೊರತೆಯನ್ನು ಸರ್ಕಾರ ನೀಗಿಸಿದರೆ ಯಂತ್ರಗಳ ಅಗತ್ಯ ಇರುವುದಿಲ್ಲ. ಟ್ಯೂಟರ್‌ ಯೋಜನೆಯನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂಬುದನ್ನು ಕಾದು ನೋಡಲಾಗುತ್ತದೆ,ʼ ಎಂದು ಹೇಳಿದರು.

ಬೆಂಗಳೂರು ನಗರದ ಪೋಷಕರಾದ ಶೈಲಜಾ ಮಾತನಾಡಿ, "ಮೊಬೈಲ್‌ ಬಳಕೆಯಿಂದ ಮಕ್ಕಳು ಹೆಚ್ಚಾಗಿ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವುದು ಕಡಿಮೆಯಾಗಿದೆ. ಡಿಜಿಟಲ್ ಟ್ಯೂಟರ್ ಯೋಜನೆಯು ಸಹ ಇದರ ಮುಂದುವರಿದ ಭಾಗವಾದರೆ ಮಕ್ಕಳ ಸ್ವಾಭಾವಿಕ ವ್ಯಕ್ತಿತ್ವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬುದರ ಕುರಿತು ಸರ್ಕಾರ ಅಧ್ಯಯನ ಮಾಡಬೇಕು. ಆಧುನಿಕ ತಂತ್ರಜ್ಞಾನವು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿದ್ದರೆ ಒಳ್ಳೆಯದು. ಆದರೆ ಅದು ಭವಿಷ್ಯಕ್ಕೆ ಮಾರಕವಾಗಬಾರದು," ಎಂದು ತಿಳಿಸಿದರು.

ಅನುಷ್ಠಾನದ ಸವಾಲುಗಳು

ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಜಾರಿಗೆ ತರುವಾಗ ಕೆಲವು ಸವಾಲುಗಳು ಎದುರಾಗುವುದು ಸಹಜ.

ಡಿಜಿಟಲ್ ಉಪಕರಣಗಳ ಲಭ್ಯತೆ: ಎಲ್ಲ ವಿದ್ಯಾರ್ಥಿಗಳಿಗೂ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಲಭ್ಯವಿರುವಂತೆ ನೋಡಿಕೊಳ್ಳುವುದು. ಇದಕ್ಕಾಗಿ ಸರ್ಕಾರವು ಶಾಲಾ ಸ್ಮಾರ್ಟ್ ಕ್ಲಾಸ್ ರೂಮ್‌ಗಳನ್ನು ಬಳಸಿಕೊಳ್ಳುವ ಯೋಜನೆಯನ್ನೂ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಮಸ್ಯೆಯನ್ನು ನೀಗಿಸಲು 'ಆಫ್‌ಲೈನ್ ಕಲಿಕಾ ಮಾದರಿ'ಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಈ ತಂತ್ರಜ್ಞಾನವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಲುಪಿಸಲು ಅನುವಾಗುವಂತೆ ಅವರಿಗೆ ವಿಶೇಷ ತರಬೇತಿ ನೀಡುವ ಅಗತ್ಯವಿದೆ.

ಜಾಗತಿಕ ಮಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಐ ತಂತ್ರಜ್ಞಾನವನ್ನು ಈಗಾಗಲೇ ಬಳಸುತ್ತಿವೆ. ಆದರೆ, ಸರ್ಕಾರಿ ಶಾಲೆಯ ಕಟ್ಟಕಡೆಯ ವಿದ್ಯಾರ್ಥಿಗೂ ಇಂತಹ ಸೌಲಭ್ಯ ನೀಡುವುದು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಇದು ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ಮತ್ತು ಸ್ವಯಂ-ಕಲಿಕೆಯ ಹವ್ಯಾಸವನ್ನು ಬೆಳೆಸುತ್ತದೆ. ಪರೀಕ್ಷೆಗಳಿಗಾಗಿ ಕೇವಲ ಬಾಯಿಪಾಠ ಮಾಡುವ ಪದ್ಧತಿಯನ್ನು ಕೈಬಿಟ್ಟು, ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳಲು ಇದು ಪ್ರೇರೇಪಿಸುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

Read More
Next Story