
Farmers Issue| ಹೊಲ ಎಷ್ಟಿದೆಯೋ ಅಷ್ಟೇ ರಸಗೊಬ್ಬರ: ಎಫ್‌ಐಡಿ ಕಡ್ಡಾಯ
ಕೃಷಿ ಬಳಕೆಗೆ ನೀಡುವ ರಿಯಾಯಿತಿ ದರದ ಯೂರಿಯಾವನ್ನುಅಕ್ರಮವಾಗಿ ಸಾಗಿಸುವ ಜಾಲ ಸಕ್ರಿಯವಾಗಿದೆ. ಎಫ್‌ಐಡಿ ವ್ಯವಸ್ಥೆಯಿಂದಾಗಿ ಪ್ರತಿ ಚೀಲ ಗೊಬ್ಬರದ ಹರಿವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಕಾಳಸಂತೆಯಲ್ಲಿ ಮಾರಾಟದಿಂದಾಗಿ ಕೃಷಿಗೆ ಬೇಕಿರುವ ರಸಗೊಬ್ಬರ ಕೊರತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರವು ಎಫ್‌ಐಡಿಯನ್ನು (ರೈತರ ಗುರುತಿನ ಸಂಖ್ಯೆ) ಸರ್ಕಾರವು ಕಡ್ಡಾಯಗೊಳಿಸಿದೆ.
ಈ ಮೂಲಕ ರಸಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ರೈತರು ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯಗೊಳಿಸಿರುವುದು ಕೇವಲ ಒಂದು ನಿಯಮವಲ್ಲ, ಅದೊಂದು ದತ್ತಾಂಶ ಆಧಾರಿತ ಕೃಷಿ ನಿರ್ವಹಣಾ ವ್ಯವಸ್ಥೆಯಾಗಿದೆ.
ಈ ಹಿಂದೆ ರೈತರು ತಮಗೆ ಬೇಕಾದಷ್ಟು ಪ್ರಮಾಣದ ಗೊಬ್ಬರವನ್ನು ಖರೀದಿಸಬಹುದಿತ್ತು. ಇದು ಕಾಳಸಂತೆಕೋರರಿಗೆ ವರದಾನವಾಗಿತ್ತು. ಆದರೆ ಈಗ, ಎಫ್‌ಐಡಿ ಮೂಲಕ ರೈತನ ಹೆಸರಿನಲ್ಲಿರುವ ಆರ್‌ಟಿಸಿ ಅಥವಾ ಪಹಣಿಯನ್ನು ಲಿಂಕ್ ಮಾಡಲಾಗುತ್ತದೆ. ಇದರಿಂದ ಆ ರೈತನಿಗೆ ಎಷ್ಟು ಎಕರೆ ಜಮೀನಿದೆ ಮತ್ತು ಆ ಜಮೀನಿಗೆ ವೈಜ್ಞಾನಿಕವಾಗಿ ಎಷ್ಟು ಗೊಬ್ಬರ ಬೇಕು ಎಂಬುದನ್ನು ಸಾಫ್ಟ್‌ವೇರ್ ತೀರ್ಮಾನಿಸುತ್ತದೆ. ರೈತರು ಗೊಬ್ಬರ ಪಡೆಯುವಾಗ ಹೆಬ್ಬೆಟ್ಟು ಒತ್ತುವುದು ಕಡ್ಡಾಯ. ಇದರಿಂದ ಒಬ್ಬರ ಹೆಸರಿನಲ್ಲಿ ಮತ್ತೊಬ್ಬರು ಗೊಬ್ಬರ ಪಡೆಯುವುದು ಅಥವಾ ನಕಲಿ ದಾಖಲೆ ಸೃಷ್ಟಿಸಿ ಗೊಬ್ಬರ ಲೂಟಿ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ.
ಎಫ್‌ಐಡಿ ಅಥವಾ ರೈತರ ದತ್ತಾಂಶ ಎನ್ನುವುದು ರೈತರ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಒಂದು ಡಿಜಿಟಲ್ ಗುರುತಿನ ಸಂಖ್ಯೆ. ರಾಜ್ಯ ಸರ್ಕಾರವು 'ಫ್ರೂಟ್ಸ್' ತಂತ್ರಾಂಶದ ಮೂಲಕ ಇದನ್ನು ನಿರ್ವಹಿಸುತ್ತದೆ. ಅರ್ಹ ರೈತರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ಮತ್ತು ರಸಗೊಬ್ಬರ ತಲುಪುವಂತೆ ಮಾಡುವುದು ಹಾಗೂ ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಭೂಮಿಯ ದಾಖಲೆಗಳನ್ನು (ಪಹಣಿ/ಆರ್‌ಟಿಸಿ) ನೀಡಿ ಈ ಐಡಿ ಪಡೆಯಬೇಕು. ಇದು ರಸಗೊಬ್ಬರ ಖರೀದಿಯನ್ನು ಭೂಮಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಯಂತ್ರಿಸುತ್ತದೆ.
ಕಾಳಸಂತೆ - ದುರ್ಬಳಕೆ ತಡೆಯಲು ಸಹಕಾರಿ
ಯೂರಿಯಾ ರಸಗೊಬ್ಬರಕ್ಕೆ ಸರ್ಕಾರವು ಸಬ್ಸಿಡಿ ನೀಡುತ್ತದೆ. ಕೃಷಿ ಬಳಕೆಗೆ ನೀಡುವ ಈ ರಿಯಾಯಿತಿ ದರದ ಯೂರಿಯಾವನ್ನು ಪ್ಲೈವುಡ್ ಕಾರ್ಖಾನೆಗಳು, ಅಂಟು ತಯಾರಿಕಾ ಘಟಕಗಳು ಮತ್ತು ಇತರ ಕೈಗಾರಿಕೆಗಳಿಗೆ ಅಕ್ರಮವಾಗಿ ಸಾಗಿಸುವ ಜಾಲ ಸಕ್ರಿಯವಾಗಿದೆ. ಎಫ್‌ಐಡಿ ವ್ಯವಸ್ಥೆಯಿಂದಾಗಿ ಪ್ರತಿ ಚೀಲ ಗೊಬ್ಬರದ ಹರಿವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಕೃಷಿ ಜಮೀನು ಇಲ್ಲದವರು ಅಥವಾ ಮಿತಿ ಮೀರಿದ ಗೊಬ್ಬರ ಖರೀದಿಸುವವರನ್ನು ಸುಲಭವಾಗಿ ಗುರುತಿಸಬಹುದು. ಅಲ್ಲದೇ, ಬಿತ್ತನೆ ಸಮಯದಲ್ಲಿ ವ್ಯಾಪಾರಿಗಳು ಗೊಬ್ಬರವನ್ನು ದಾಸ್ತಾನು ಮಾಡಿ, ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ 'ಕೃತಕ ಅಭಾವ' ಸೃಷ್ಟಿಸುತ್ತಿದ್ದರು. ಎಫ್‌ಐಡಿ ಮೂಲಕ ದಾಸ್ತಾನು ಹಾಗೂ ಮಾರಾಟದ ಮಾಹಿತಿ ಲಭ್ಯವಿರುವುದರಿಂದ ಜಿಲ್ಲಾಡಳಿತಗಳು ಇಂತಹ ಅಕ್ರಮಗಳನ್ನು ತಡೆಯಲು ಸಾಧ್ಯವಾಗಿದೆ.
ಈವರೆಗೆ ರಸಗೊಬ್ಬರ ಮಾರಾಟದಲ್ಲಿ ಆಧಾರ್ ಆಧಾರಿತ ದೃಢೀಕರಣ ಇತ್ತಾದರೂ, ಯಾರು ಎಷ್ಟು ಗೊಬ್ಬರ ಖರೀದಿಸಬಹುದು ಎಂಬ ಕಟ್ಟುನಿಟ್ಟಿನ ನಿಯಮವಿರಲಿಲ್ಲ. ಇದರಿಂದಾಗಿ ದೊಡ್ಡ ವ್ಯಾಪಾರಿಗಳು ರೈತರ ಹೆಸರಿನಲ್ಲಿ ಗೊಬ್ಬರ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಈಗ ತಂತ್ರಾಂಶದ ಮೂಲಕ ಮಾರಾಟ ಮಾಡುವುದರಿಂದ, ರೈತನ ಭೂಮಿಯ ವಿಸ್ತೀರ್ಣ ಮತ್ತು ಆತ ಬೆಳೆಯುವ ಬೆಳೆಗೆ ಎಷ್ಟು ಗೊಬ್ಬರ ಬೇಕು ಎಂಬ ಆಧಾರದ ಮೇಲೆ ಮಾತ್ರ ಗೊಬ್ಬರ ನೀಡಲಾಗುತ್ತದೆ. ಇದು ಅಕ್ರಮ ದಾಸ್ತಾನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ
ರಸಗೊಬ್ಬರ ಹಂಚಿಕೆಯ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಪ-ಪ್ರತ್ಯಾರೋಪಗಳು ನಿರಂತರವಾಗಿವೆ. ಇದು ಕೃಷಿ ರಾಜಕಾರಣದ ಒಂದು ಭಾಗವಾಗಿಯೂ ಮಾರ್ಪಟ್ಟಿದೆ. ರಾಜ್ಯ ಸರ್ಕಾರವು ಪ್ರತಿ ವರ್ಷ ಬಿತ್ತನೆ ಆರಂಭಕ್ಕೂ ಮುನ್ನ ಇಂತಿಷ್ಟು ಲಕ್ಷ ಟನ್ ಗೊಬ್ಬರ ಬೇಕೆಂದು ಬೇಡಿಕೆ ಸಲ್ಲಿಸುತ್ತದೆ. ಆದರೆ, ಕೇಂದ್ರವು ನಿಗದಿತ ಪ್ರಮಾಣದಲ್ಲಿ ಗೊಬ್ಬರ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ರೈತರು ಬೀದಿಗಿಳಿದು ಪ್ರತಿಭಟಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ರಾಜ್ಯದ ಪ್ರಮುಖ ಆರೋಪವಾಗಿದೆ. ಕೇಂದ್ರ ಸರ್ಕಾರದ ಪ್ರಕಾರ, ರಸಗೊಬ್ಬರವು ಕೇವಲ ದೇಶದ ಉತ್ಪಾದನೆಯ ಮೇಲೆ ಅವಲಂಬಿತವಾಗಿಲ್ಲ, ಜಾಗತಿಕ ಆಮದಿನ ಮೇಲೂ ಅವಲಂಬಿತವಾಗಿದೆ. ಲಭ್ಯವಿರುವ ಸ್ಟಾಕ್ ಅನ್ನು ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಹಂಚಲಾಗುತ್ತದೆ. ರಾಜ್ಯ ಸರ್ಕಾರಗಳು ಸಕಾಲದಲ್ಲಿ ಗೋದಾಮುಗಳಲ್ಲಿ ದಾಸ್ತಾನು ಮಾಡಿಕೊಳ್ಳದೆ, ಬಿತ್ತನೆ ಸಮಯದಲ್ಲಿ ತುರ್ತಾಗಿ ಗೊಬ್ಬರ ಕೇಳುವುದು ವ್ಯವಸ್ಥಿತ ನಿರ್ವಹಣೆಯ ಕೊರತೆಯನ್ನು ತೋರಿಸುತ್ತದೆ ಎಂಬುದು ಕೇಂದ್ರದ ತಿರುಗೇಟು ಆಗಿದೆ.
ಜಾಗತಿಕ ಬಿಕ್ಕಟ್ಟು, ರಸಗೊಬ್ಬರ ಕೊರತೆಯ ಸಂಬಂಧ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ರಸಗೊಬ್ಬರ ಪೂರೈಕೆಯ ಮೇಲೆ ನೇರ ಪರಿಣಾಮ ಬೀರಿದೆ. ರಸಗೊಬ್ಬರ ತಯಾರಿಕೆಗೆ ಬೇಕಾದ ರಂಜಕ , ಪೊಟ್ಯಾಶ್ ಮತ್ತು ನೈಸರ್ಗಿಕ ಅನಿಲವನ್ನು ಭಾರತವು ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಮಧ್ಯಪ್ರಾಚ್ಯದ ದೇಶಗಳು ಈ ಕಚ್ಚಾ ಸಾಮಗ್ರಿಗಳ ಪ್ರಮುಖ ಮೂಲಗಳಾಗಿವೆ. ಯುದ್ಧದ ಕಾರಣದಿಂದ ಹಡಗುಗಳ ಸಂಚಾರಕ್ಕೆ ಅಡ್ಡಿ ಮತ್ತು ಸಾರಿಗೆ ವೆಚ್ಚದ ಏರಿಕೆಯು ಗೊಬ್ಬರದ ಬೆಲೆ ಏರಿಕೆ ಅಥವಾ ಕೊರತೆಗೆ ಕಾರಣವಾಗುವ ಸಾಧ್ಯತೆಯಿದೆ. ಈ ಆತಂಕದ ಹಿನ್ನೆಲೆಯಲ್ಲಿ, ಲಭ್ಯವಿರುವ ಗೊಬ್ಬರವನ್ನು ನ್ಯಾಯೋಚಿತವಾಗಿ ವಿತರಿಸಲು ಸರ್ಕಾರ ಎಫ್‌ಐಡಿ ಮೊರೆ ಹೋಗಿದೆ.
ದತ್ತಾಂಶ ನಿರ್ವಹಣೆ
ಎಫ್‌ಐಡಿ ವ್ಯವಸ್ಥೆಯ ದೊಡ್ಡ ಲಾಭವೆಂದರೆ 'ನಿಖರವಾದ ಅಂಕಿ-ಅಂಶ' ಲಭ್ಯವಾಗಲಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ರೈತರಿದ್ದಾರೆ? ಯಾವ ಬೆಳೆ ಬೆಳೆಯಲಾಗುತ್ತಿದೆ? ಪ್ರಸಕ್ತ ಋತುವಿನಲ್ಲಿ ಆ ಜಿಲ್ಲೆಗೆ ಎಷ್ಟು ಟನ್ ಯೂರಿಯಾ, ಡಿಎಪಿ ಅಗತ್ಯವಿದೆ? ಈ ಎಲ್ಲ ಪ್ರಶ್ನೆಗಳಿಗೆ ಎಫ್‌ಐಡಿ ಮೂಲಕ ಉತ್ತರ ಸಿಗಲಿದೆ. ಈ ದತ್ತಾಂಶವನ್ನು ಬಳಸಿಕೊಂಡು ರಾಜ್ಯ ಸರ್ಕಾರವು ಕೇಂದ್ರಕ್ಕೆ ಹೆಚ್ಚು ವ್ಯವಸ್ಥಿತವಾಗಿ ಬೇಡಿಕೆ ಸಲ್ಲಿಸಬಹುದು. ಅತಿಯಾದ ಬೇಡಿಕೆ ಅಥವಾ ಕಡಿಮೆ ಬೇಡಿಕೆಯ ಗೊಂದಲಗಳನ್ನು ಇದು ನಿವಾರಿಸುತ್ತದೆ.
ಸರ್ವರ್‌ಗಳ ಸಮಸ್ಯೆಯಿಂದಾಗಿ ರೈತರಿಗೆ ಸಂಕಷ್ಟ
ರೈತರಿಗೆ ಎಫ್‌ಐಡಿ ನೀಡುವ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ರೈತ ಮುಖಂಡ ಚಂದ್ರೇಗೌಡ, ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆ ಮತ್ತು ಸರ್ವರ್ ಸಮಸ್ಯೆಗಳಿಂದಾಗಿ ರೈತರು ಗಂಟೆಗಟ್ಟಲೆ ರಸಗೊಬ್ಬರ ಕೇಂದ್ರಗಳ ಮುಂದೆ ಕಾಯಬೇಕಾದ ಪರಿಸ್ಥಿತಿ ಇದೆ. ಅನೇಕ ರೈತರಿಗೆ ತಮ್ಮ ಹೆಸರಿನಲ್ಲಿರುವ ಎಲ್ಲಾ ಆರ್‌ಟಿಸಿಗಳನ್ನು ಎಫ್‌ಐಡಿಗೆ ಲಿಂಕ್ ಮಾಡುವುದು ದೊಡ್ಡ ಸವಾಲಾಗಿದೆ. ವಯಸ್ಸಾದ ರೈತರಿಗೆ ಮತ್ತು ಅಶಿಕ್ಷಿತರಿಗೆ ಈ ತಾಂತ್ರಿಕ ಪ್ರಕ್ರಿಯೆ ಹೊರೆಯಾಗಿ ಪರಿಣಮಿಸಿದೆ. ಕುಟುಂಬದ ಆಸ್ತಿ ಹಂಚಿಕೆಯಾಗದ ಜಮೀನುಗಳಲ್ಲಿ ಯಾರ ಹೆಸರಿನಲ್ಲಿ ಗೊಬ್ಬರ ಪಡೆಯಬೇಕು ಎಂಬ ಗೊಂದಲಗಳು ಉಂಟಾಗುತ್ತಿವೆ ಎಂದು ಹೇಳಿದರು.
ಯೂರಿಯಾ ಸೇರಿದಂತೆ ಯಾವುದೇ ಗೊಬ್ಬರ ಮಾರಾಟ ಮಾಡುವಾಗ ರೈತರ ಎಫ್‌ಐಡಿ ಪಡೆಯಲೇಬೇಕು. ದಾಸ್ತಾನು ವಿವರ ಮತ್ತು ಮಾರಾಟದ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಡೇಟ್ ಮಾಡಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಎಫ್‌ಐಡಿ ಇಲ್ಲದೆ ಮಾರಾಟ ಮಾಡಿದರೆ ಕಾನೂನು ಪ್ರಕಾರ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ರೈತ ಮಹಿಪಾಲ ಮಾತನಾಡಿ, ರೈತರು ರಸಗೊಬ್ಬರ ಪಡೆಯಲು ಎಫ್‌ಐಡಿ ಮಾಡಿಸುವುದು ಒಳ್ಳೆಯ ಕಾರ್ಯ. ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಎಫ್‌ಐಡಿ ಮಾಡಿಸಿಕೊಳ್ಳಬೇಕು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಅದಕ್ಕೆ ಲಿಂಕ್ ಮಾಡಿಸಬೇಕು. ಇನ್ನು ಮುಂದೆ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಲದು, ಎಫ್‌ಐಡಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಮಾಡಿರುವುದು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಸಾಧ್ಯವಿದೆ. ಆದರೆ, ಸಮಸ್ಯೆಗಳನ್ನು ಸರ್ಕಾರಗಳು ಬಗೆಹರಿಸುವುದು ಬಹಳ ಮುಖ್ಯವಾಗಿದೆ ಎಂದರು.

