
Muslim Politics| ಕಾಂಗ್ರೆಸ್‌ನ ಮುಸ್ಲಿಂ ರಾಜಕಾರಣ: ತಮ್ಮತ್ತ ಬಂದ ಬಾಣವನ್ನು ತಿರುಗುಬಾಣವಾಗಿಸಿದ ಸಿದ್ದರಾಮಯ್ಯ?
ಮುಸ್ಲಿಂ ಮುಖಂಡರ ವಿರುದ್ಧ ಕೈಗೊಂಡ ಶಿಸ್ತು ಕ್ರಮವು ಸಿದ್ದರಾಮಯ್ಯಗೆ ವ್ಯತಿರಿಕ್ತವಾಗಲಿದೆ ಎನ್ನಲಾಗಿತ್ತು. ಆದರೆ ಈಗಿನ ಬೆಳವಣಿಗೆಗಳು ಅವರಿಗೆ ಅನುಕೂಲಕರವಾಗಿವೆ ಎಂಬ ಮಾತುಗಳು ಕೇಳಿಬಂದಿವೆ.
ರಾಜ್ಯದ ಕಾಂಗ್ರೆಸ್‌ನಲ್ಲಿ ಮುಸ್ಲಿಂ ಮುಖಂಡರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮವು ರಾಜ್ಯ ರಾಜಕೀಯದಲ್ಲಿ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮತ್ತ ಬಂದ ಬಾಣವನ್ನು ವಿರೋಧಿ ಬಣದತ್ತ ತಿರುಗುಬಾಣವಾಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಫಲರಾದಂತೆ ಕಂಡುಬರುತ್ತಿದೆ!
ದಾವಣರೆಗೆ ಉಪಚುನಾವಣೆ ವೇಳೆ ಮುಸ್ಲಿಂ ನಾಯಕರ ವಿರುದ್ದ ಕೈಗೊಂಡ ಶಿಸ್ತು ಕ್ರಮವನ್ನು ವಾಪಸ್ ಪಡೆಯಲು ಕಾಂಗ್ರೆಸ್ ಹೈಕಮಾಂಡ್ ನಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ವರದಾನವಾಗುವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಕ್ಕೆ ಮುಜುಗರವನ್ನುಂಟು ಮಾಡುವ ಸಾಧ್ಯತೆಗಳು ಹೆಚ್ಚಿವೆ.
ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರು ಮತ್ತು ಧರ್ಮಗುರುಗಳ ಸತತ ಒತ್ತಡ ಹಾಗೂ ಪಕ್ಷದ ಮೇಲಾಗುವ ಚುನಾವಣಾ ಹಾನಿಯನ್ನು ತಪ್ಪಿಸಲು ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಬೆಳವಣಿಗೆಯು ಮುಸ್ಲಿಂ ಸಮುದಾಯದಲ್ಲಿ ಸಿದ್ದರಾಮಯ್ಯ ಹಿಡಿತವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳು ಹೆಚ್ಚಾದರೆ, ಮತ್ತೊಂದೆಡೆ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣಕ್ಕೆ ದೊಡ್ಡ ರಾಜಕೀಯ ಹಿನ್ನಡೆಯಾಗುವ ಮುನ್ಸೂಚನೆ ನೀಡಿದೆ.
ದಾವಣಗೆರೆ ಉಪಚುನಾವಣೆ ವೇಳೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ ಆರೋಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯದ ಕೆಲವು ಪ್ರಮುಖ ನಾಯಕರ ವಿರುದ್ಧ ಶಿಸ್ತು ಸಮಿತಿಯು ಕ್ರಮ ಕೈಗೊಂಡಿತ್ತು. ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಸಾಂಪ್ರದಾಯಿಕವಾಗಿ ಸಿದ್ದರಾಮಯ್ಯನವರ ದೊಡ್ಡ ಬೆಂಬಲ ಶಕ್ತಿಯಾಗಿದೆ. ಹೀಗಾಗಿ, ಅವರದೇ ಸರ್ಕಾರದ ಅವಧಿಯಲ್ಲಿ ಸಮುದಾಯದ ಮುಖಂಡರ ವಿರುದ್ಧ ಕ್ರಮ ಜರುಗಿಸಿದ್ದು, ಸಿದ್ದರಾಮಯ್ಯನವರ ಹಿಡಿತ ತಪ್ಪುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಮುಸ್ಲಿಂ ಸಮುದಾಯದ ಅಸಮಾಧಾನವು ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಭಾರಿ ಹೊಡೆತ ನೀಡಬಹುದು ಎಂಬ ಆತಂಕ ಕಾಂಗ್ರೆಸ್ ಪಾಳಯದಲ್ಲಿ ಮನೆಮಾಡಿತ್ತು.
ಮುಸ್ಲಿಂ ಸಮುದಾಯಕ್ಕೆ ಕೋಪಕ್ಕೆ ಕಾರಣ?
ಮುಸ್ಲಿಂ ಮುಖಂಡರಾದ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶಿಸ್ತು ಕ್ರಮ ಕೈಗೊಂಡಿತು. ದಾವಣಗೆರೆ ಉಪಚುನಾವಣೆಯಲ್ಲಿ ಪ್ರಚಾರದಿಂದ ದೂರ ಉಳಿದ ಕಾರಣ ಮುಸ್ಲಿಂ ಸಮುದಾಯದ ಹಲವು ಮತಗಳನ್ನು ಕಳೆದುಕೊಳ್ಳಬೇಕಾಗಿದೆ ಎಂಬ ಮಾಹಿತಿ ಮೇರೆಗೆ ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಯಿತು. ಇದು ಕಾಂಗ್ರೆಸ್ ಮುಸ್ಲಿಂ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಪಕ್ಷಕ್ಕಾಗಿ ದಶಕಗಳಿಂದ ದುಡಿದ ನಾಯಕರನ್ನು ಏಕಪಕ್ಷೀಯವಾಗಿ ಗುರಿ ಮಾಡಲಾಗುತ್ತಿದೆ ಎಂಬುದಾಗಿ ಟೀಕಿಸಲಾಯಿತು.
ಸಮುದಾಯದ ಒತ್ತಡ - ಹೈಕಮಾಂಡ್ ಮೆದು ಧೋರಣೆ
ಶಿಸ್ತುಕ್ರಮ ಜಾರಿಯಾದ ಬೆನ್ನಲ್ಲೇ ಮುಸ್ಲಿಂ ಸಮುದಾಯದ ಧರ್ಮಗುರುಗಳು, ಉಲಮಾಗಳು ಮತ್ತು ಪ್ರಭಾವಿ ಮುಖಂಡರು ಒಗ್ಗಟ್ಟಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರತೊಡಗಿದರು. ಹೈಕಮಾಂಡ್‌ಗೆ ಪತ್ರ ಬರೆದ ಧರ್ಮಗುರುಗಳು, ಪಕ್ಷಕ್ಕಾಗಿ ದಶಕಗಳಿಂದ ದುಡಿದ ಮುಖಂಡರನ್ನು ಸಣ್ಣ ಕಾರಣಗಳಿಗಾಗಿ ಗುರಿ ಮಾಡುವುದು ಸರಿಯಲ್ಲ. ಇದು ಸಮುದಾಯಕ್ಕೆ ನೀಡುತ್ತಿರುವ ತಪ್ಪು ಸಂದೇಶ ಎಂದು ಎಚ್ಚರಿಸಿದ್ದರು. ಶಿಸ್ತು ಕ್ರಮವು ಕೇವಲ ಒಂದು ಬಣವನ್ನು ತೃಪ್ತಿಪಡಿಸಲು ಕೈಗೊಂಡ ಏಕಪಕ್ಷೀಯ ನಿರ್ಧಾರ ಎಂಬ ಅಂಶವನ್ನು ಅವರು ಮನವರಿಕೆ ಮಾಡಿಕೊಟ್ಟರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸ್ಪಂದಿಸಿರುವ ಹೈಕಮಾಂಡ್, ಚುನಾವಣಾ ಫಲಿತಾಂಶದ ನಂತರ ಈ ಎಲ್ಲಾ ಶಿಸ್ತುಕ್ರಮಗಳನ್ನು ವಾಪಸ್ ಪಡೆಯುವ ಭರವಸೆ ನೀಡಿದೆ ಎಂಬ ಸುದ್ದಿ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಸಿದ್ದರಾಮಯ್ಯಗೆ ಸಕಾರಾತ್ಮಕ ತಿರುವು ಹೇಗೆ?
ಮುಸ್ಲಿಂ ಮುಖಂಡರ ವಿರುದ್ಧ ಕಾಂಗ್ರೆಸ್ ಕೈಗೊಂಡ ಶಿಸ್ತು ಕ್ರಮವು ಸಿದ್ದರಾಮಯ್ಯನವರಿಗೆ ವ್ಯತಿರಿಕ್ತವಾಗಲಿದೆ ಎನ್ನಲಾಗಿತ್ತು. ಆದರೆ ಈಗಿನ ಬೆಳವಣಿಗೆಗಳು ಅವರಿಗೆ ಅನುಕೂಲಕರವಾಗಿವೆ. ಶಿಸ್ತುಕ್ರಮ ವಾಪಸ್ ಪಡೆಯುವ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯನವರ ಹಸ್ತಕ್ಷೇಪ ಮತ್ತು ಹೈಕಮಾಂಡ್ ಮೇಲೆ ಅವರಿಗಿರುವ ಪ್ರಭಾವ ಸಾಬೀತಾದರೆ, ಮುಸ್ಲಿಂ ಸಮುದಾಯದಲ್ಲಿ ಅವರ ಸ್ಥಾನಮಾನ ಮತ್ತಷ್ಟು ಭದ್ರವಾಗಲಿದೆ. ಸಿದ್ದರಾಮಯ್ಯನವರು ಇದ್ದರೆ ನಮಗೆ ನ್ಯಾಯ ಸಿಗುತ್ತದೆ ಎಂಬ ಭಾವನೆ ಸಮುದಾಯದಲ್ಲಿ ಬಲಗೊಳ್ಳುತ್ತದೆ ಎನ್ನಲಾಗಿದೆ. ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯೇ ಅಹಿಂದ ಆಗಿದೆ. ಮುಸ್ಲಿಂ ನಾಯಕರನ್ನು ಮತ್ತೆ ಪಕ್ಷದ ಮುಖ್ಯವಾಹಿನಿಗೆ ತರುವ ಮೂಲಕ ಅವರು ತಮ್ಮ ಬೆಂಬಲಿತ ವರ್ಗಗಳನ್ನು ಒಟ್ಟಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದು ರಾಜಕೀಯವಾಗಿ ಕೇಳಿಬಂದಿರುವ ಮಾತಾಗಿವೆ.
ಡಿ.ಕೆ. ಶಿವಕುಮಾರ್ ಬಣಕ್ಕೆ ಹಿನ್ನಡೆಯೇ?
ಮುಸ್ಲಿಂ ಸಮುದಾಯದ ಮುಖಂಡರ ವಿರುದ್ಧ ಶಿಸ್ತುಕ್ರಮಗಳನ್ನು ಕೈಗೊಳ್ಳುವುದರ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದ ಪ್ರಭಾವ ಇತ್ತು ಎಂಬ ಆರೋಪಗಳಿವೆ. ಶಿಸ್ತು ಸಮಿತಿಯು ಕೈಗೊಂಡ ನಿರ್ಧಾರವನ್ನು ಹೈಕಮಾಂಡ್ ನೇರವಾಗಿ ವಾಪಸ್ ಪಡೆದರೆ, ಅದು ಕೆಪಿಸಿಸಿ ಅಧಿಕಾರಕ್ಕೆ ನೀಡುವ ಪರೋಕ್ಷ ಹೊಡೆತ ಎಂದೇ ವಿಶ್ಲೇಷಿಸಲಾಗುತ್ತದೆ. ಪಕ್ಷದ ಶಿಸ್ತು ಉಲ್ಲಂಘಿಸಿದವರನ್ನು ಶಿಕ್ಷಿಸುತ್ತೇನೆ ಎಂಬ ಸಂದೇಶ ರವಾನಿಸಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸಿದ್ದರು. ಆದರೆ, ಈಗ ಅವರ ನಿರ್ಧಾರವನ್ನು ಹೈಕಮಾಂಡ್ ಬದಲಿಸುತ್ತಿರುವುದು ಅವರ ಸಂಘಟನಾತ್ಮಕ ಹಿಡಿತಕ್ಕೆ ಸಣ್ಣ ಮಟ್ಟದ ಹಿನ್ನಡೆಯಾಗುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ, ಮುಸ್ಲಿಂ ಸಮುದಾಯವು ಸಿದ್ದರಾಮಯ್ಯನವರ ಪರವಾಗಿ ನಿಲ್ಲುವುದು ರಾಜಕೀಯವಾಗಿ ಸವಾಲಾಗಲಿದೆ.
ಕೆಲವು ಕಾಂಗ್ರೆಸ್ ನಾಯಕರ ವರದಿ ಏನು?
ಕಾಂಗ್ರೆಸ್‌ನ ಕೆಲವು ನಾಯಕರು ನೇರವಾಗಿ ಹೈಕಮಾಂಡ್‌ಗೆ ಪ್ರತ್ಯೇಕವಾಗಿ ವರದಿ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದಕ್ಕೆ ಮುಂದಿನ ದಿನದಲ್ಲಿ ಪಕ್ಷದ ಮೇಲೆ ಬೀರುವ ಪರಿಣಾಮದ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಶಾಸಕರ ಅಥವಾ ಸಚಿವರ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ದನಿ ಎತ್ತಿದ್ದನ್ನೇ ಪಕ್ಷ ವಿರೋಧಿ ಚಟುವಟಿಕೆ ಎಂದು ಬಿಂಬಿಸಲಾಗಿದೆ. ಮುಸ್ಲಿಂ ನಾಯಕತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂಬ ಭಾವನೆ ಜಿಲ್ಲಾ ಮಟ್ಟದಲ್ಲಿ ಹರಡುತ್ತಿದೆ. ಬಹಿರಂಗವಾಗಿ ಬಿಜೆಪಿ ಪರ ಕೆಲಸ ಮಾಡಿದ ಇತರ ಸಮುದಾಯದ ನಾಯಕರ ಮೇಲೆ ಕ್ರಮ ಜರುಗಿಸದ ಪಕ್ಷ, ಮುಸ್ಲಿಂ ನಾಯಕರನ್ನು ಮಾತ್ರ ಗುರಿ ಮಾಡುತ್ತಿದೆ ಎಂಬ ಅಸಮಾಧಾನ ಊಂಟಾಗಿದೆ ಎಂಬ ಅಂಶಗಳ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್, ಈಗ ಪಕ್ಷದ ಬಗ್ಗೆ ಮೂಡಿರುವ ಭಾವನೆಯನ್ನು ಸರಿದೂಗಿಸುವ ಕೆಲಸ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಹೈಕಮಾಂಡ್ ತಂತ್ರಗಾರಿಕೆ
ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರವನ್ನು ಪಂಚರಾಜ್ಯ ಚುನಾವಣೆ ಮತ್ತು ಉಪಚುನಾವಣೆಯ ಫಲಿತಾಂಶದ ಬಳಿಕ ಪ್ರಕಟಿಸಲು ನಿರ್ಧರಿಸಿರುವುದು ಒಂದು ತಂತ್ರಗಾರಿಕೆಯಾಗಿದೆ. ಚುನಾವಣಾ ಸಮಯದಲ್ಲಿ ಯಾವುದೇ ಗೊಂದಲ ಬೇಡ ಎಂಬ ಕಾರಣಕ್ಕೆ ಈಗ ಮೌನ ವಹಿಸಲಾಗಿದೆ. ಮುಸ್ಲಿಂ ಮತಗಳು ಚದುರಿಹೋಗಬಾರದು ಎಂಬ ಏಕೈಕ ಉದ್ದೇಶದಿಂದ ಹೈಕಮಾಂಡ್ ಮೆದು ಧೋರಣೆ ತಳೆದಿದೆ ಎನ್ನಲಾಗಿದೆ. ಒಂದು ಕಡೆ ಮುಖ್ಯಮಂತ್ರಿ ಬಣವನ್ನು ಸಮಾಧಾನಪಡಿಸುವುದು, ಇನ್ನೊಂದೆಡೆ ಸಮುದಾಯವನ್ನು ಉಳಿಸಿಕೊಳ್ಳುವುದು ಹೈಕಮಾಂಡ್ ಮುಂದಿರುವ ದಾರಿಯಾಗಿದೆ.

