ಕೊಯಮತ್ತೂರು ಬಾಂಬ್‌ ಸ್ಫೋಟ ರೂವಾರಿಗೂ,  ಅಕ್ರಮ  ಬಾಂಗ್ಲಾ ವಲಸಿಗರಿಗೂ ಸಿಗುತ್ತೆ ಅಧಿಕೃತ ಆಧಾರ್!
x

ಕೊಯಮತ್ತೂರು ಬಾಂಬ್‌ ಸ್ಫೋಟ ರೂವಾರಿಗೂ, ಅಕ್ರಮ ಬಾಂಗ್ಲಾ ವಲಸಿಗರಿಗೂ ಸಿಗುತ್ತೆ ಅಧಿಕೃತ ಆಧಾರ್!

ಬಾಂಗ್ಲಾ ವಲಸಿಗರು, ಶಂಕಿತ ಉಗ್ರರಿಗೆ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುತ್ತಿರುವ ದಂಧೆ ಬಯಲಾಗಿದೆ. ಕೇವಲ 4 ಸಾವಿರಕ್ಕೆ ಆಧಾರ್, 15 ಸಾವಿರಕ್ಕೆ ಮರಣ ಪ್ರಮಾಣ ಪತ್ರ ಮಾರಾಟವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ.


Click the Play button to hear this message in audio format

1. ಶಂಕಿತ ಉಗ್ರನಿಗೆ ಆಧಾರ್..!

1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ಸಾದಿಕ್ ಅಲಿಯಾಸ್ ರಾಜಾ ಎಂಬಾತನಿಗೆ ಗದಗದಲ್ಲಿ ಆಧಾರ್ ಕಾರ್ಡ್ ಮಾಡಿಕೊಡಲಾಗಿದೆ. ಈತ 2012 ರಿಂದ 2020ರವರೆಗೆ ಅಲಮೇಲದಲ್ಲಿ ವಾಸವಿದ್ದು, ನಕಲಿ ಪ್ರಮಾಣ ಪತ್ರದ ಮೂಲಕ ಆಧಾರ್, ಪಾನ್ ಕಾರ್ಡ್, ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆದಿರುವುದು ಗೊತ್ತಾಗಿದೆ. ಇದು ದೇಶದ ಆಂತರಿಕ ಭದ್ರತೆಯಲ್ಲಿ ದೊಡ್ಡ ಲೋಪವಿರುವುದನ್ನು ಸಾಬೀತುಪಡಿಸುತ್ತದೆ.

2. ಬೆಂಗಳೂರಿನ ಬಾಂಗ್ಲಾ ವಲಸಿಗರ ಪ್ರಕರಣ

ಬೆಂಗಳೂರಿನ ಮಾರತಹಳ್ಳಿಯಲ್ಲಿ ಮಂಜುನಾಥ್ ಎಂಬಾತ ಬಾಂಗ್ಲಾ ಪ್ರಜೆಗಳಿಗೆ ನಕಲಿ ವಿಳಾಸ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಷ್ಪಾಂಜಲಿ ಎಂಬಾಕೆಯ ಸಹಾಯದಿಂದ ಈ ಅಕ್ರಮ ನಡೆಯುತ್ತಿತ್ತು. ಬಾಂಗ್ಲಾ ಪ್ರಜೆಗಳಾದ ಎಂ.ಡಿ. ರಫೀಕ್ ಉಲ್ಲಾ ಮತ್ತು ನೂರ್ ಜಹಾನ್ ಅವರ ಬಯೋಮೆಟ್ರಿಕ್ ಪಡೆದು ಕಾರ್ಡ್ ಸೃಷ್ಟಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

3. ಗಂಟೆಯಲ್ಲೇ ಮರಣ ಪ್ರಮಾಣ ಪತ್ರ

ಕೋಲಾರದಲ್ಲಿ ಜಬೀವುಲ್ಲಾ ಬೇಗ್ ಎಂಬಾತ ಕೇವಲ ನಾಲ್ಕು ಸಾವಿರ ರೂ. ಪಡೆದು ಒಂದು ಗಂಟೆಯಲ್ಲಿ ಆಧಾರ್ ಕಾರ್ಡ್ ನೀಡುತ್ತಿದ್ದ. ಅಲ್ಲದೆ, 15 ಸಾವಿರ ರೂ. ಪಡೆದು ನಕಲಿ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿತ್ತು. ಇದು ಆಸ್ತಿ ಪ್ರಕರಣಗಳು, ಕ್ರಿಮಿನಲ್ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಸುಲಭ ದಾರಿಯಾಗಿ ಬಳಕೆಯಾಗುತ್ತಿದೆ...

... ಈ ಮೇಲಿನ ಮೂರು ಪ್ರಕರಣಗಳನ್ನು ಗಮನಿಸಿದರೆ ದಂಧೆಯು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತದೆ ಎಂಬುದನ್ನು ಜಗಜ್ಜಾಹೀರು ಮಾಡುತ್ತದೆ. ಅಲ್ಲದೇ, ಸೈಬರ್ ಸೆಂಟರ್‌ಗಳ ಮಾಲೀಕರು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದು, ಕೇವಲ ಒಂದೇ ಗಂಟೆಯಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಡುತ್ತಿದ್ದಾರೆ. ಇದಕ್ಕೆ ಯಾವುದೇ ಅಧಿಕೃತ ದಾಖಲೆಗಳ ಅಗತ್ಯವಿಲ್ಲ. ಕೇವಲ ಹೆಸರು, ಫೋಟೋ ಮತ್ತು ವಯಸ್ಸಿನ ವಿವರ ನೀಡಿದರೆ ಸಾಕು, ಸ್ಥಳೀಯ ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿ ಕಾರ್ಡ್ ನೀಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ದೇಶದಲ್ಲಿ ಆಧಾರ್ ಕಾರ್ಡ್‌ ಕೇವಲ ಒಂದು ಗುರುತಿನ ಚೀಟಿಯಲ್ಲ, ಅದು ನಾಗರಿಕರ ಹಕ್ಕುಗಳಾಗಿವೆ. ಆದರೆ, ಗುರುತಿನ ಚೀಟಿಯನ್ನು ಸೈಬರ್‌ ಸೆಂಟರ್‌ಗಳು ಹಣಕ್ಕಾಗಿ ವಿದೇಶಿ ಅಕ್ರಮ ವಲಸಿಗರಿಗೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕಿತರಿಗೆ ಮಾರಾಟ ಮಾಡುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಬೆಂಗಳೂರು, ಗದಗ ಹಾಗೂ ಕೋಲಾರದಲ್ಲಿ ಪತ್ತೆಯಾದ ಪ್ರಕರಣಗಳು ರಾಜ್ಯದಲ್ಲಿನ ದಂಧೆಯ ಆಳ ಮತ್ತು ವಿಸ್ತಾರವನ್ನು ಬಿಂಬಿಸುತ್ತದೆ.

ಪ್ರತಿ ದಾಖಲೆಗೂ ಬೆಲೆ ನಿಗದಿ

ಅಕ್ರಮ ವ್ಯವಹಾರದಲ್ಲಿ ಪ್ರತಿಯೊಂದು ದಾಖಲೆಗೂ ಒಂದೊಂದು ಬೆಲೆ ನಿಗದಿಪಡಿಸಲಾಗಿದೆ. ಆಧಾರ್ ಕಾರ್ಡ್ ಪಡೆಯಲು 4 ಸಾವಿರ ರೂ., ಪಾನ್‌ ಕಾರ್ಡ್‌ಗಾಗಿ 1 ಸಾವಿರ ರೂ., ಜನನ ಪ್ರಮಾಣ ಪತ್ರ ಪಡೆಯಲು 1 ಸಾವಿರ ರೂ., ಮರಣ ಪ್ರಮಾಣ ಪತ್ರಕ್ಕಾಗಿ 15 ಸಾವಿರ ರೂ. ನಿಗದಿ ಮಾಡಲಾಗಿದೆ. ಮರಣ ಪ್ರಮಾಣ ಪತ್ರವು ಒಬ್ಬ ವ್ಯಕ್ತಿಯ ಅಸ್ತಿತ್ವವನ್ನೇ ಅಳಿಸಲು ಮತ್ತು ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಬಹುದು. ಹೀಗಾಗಿ ಇದಕ್ಕೆ ಹೆಚ್ಚಿನ ಹಣ ಪಡೆಯಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಈ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ಸೈಬರ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಆದರೆ, ಈ ದಂಧೆಯು ಕೇವಲ ಸೈಬರ್ ಸೆಂಟರ್‌ಗಳಿಗೆ ಸೀಮಿತವಾಗಿಲ್ಲ, ಸರ್ಕಾರಿ ಕಚೇರಿಗಳ ಕೆಳಮಟ್ಟದ ಸಿಬ್ಬಂದಿಗಳ ಸಹಕಾರವಿಲ್ಲದೆ ಇಂತಹ ಕೆಲಸಗಳು ಸಾಧ್ಯವಿಲ್ಲ. ಹೀಗಾಗಿ ಹಣಕ್ಕಾಗಿ ದೇಶದ ನಾಗರಿಕರೇ ಅಕ್ರಮ ಪ್ರಜೆಗಳಿಗೆ, ಶಂಕಿತ ಉಗ್ರರಿಗೆ ನೆರವು ನೀಡುತ್ತಿರುವುದು ದುರಾದೃಷ್ಟಕರ. ಆದರೂ, ಪೊಲೀಸ್‌ ಇಲಾಖೆ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿವೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು, ಅಕ್ರಮವಾಗಿ ಆಧಾರ್ ಪಡೆದ ವಿದೇಶಿಗರು ದೇಶದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಇಂತಹ ಘಟನೆಗಳು ದೇಶದ ಭದ್ರತೆಗೆ ಮಾರಕವಾಗಿರುತ್ತದೆ. ಪೊಲೀಸ್‌ ಇಲಾಖೆಯು ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೇ, ಅಕ್ರಮ ಪ್ರಜೆಗಳು ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆದುಕೊಂಡು ಇತರೆ ವ್ಯವಹಾರಗಳನ್ನು ನಡೆಸುತ್ತಾರೆ. ಅಲ್ಲದೇ, ಇವುಗಳನ್ನು ಬಳಸಿಕೊಂಡು ದೇಶದ್ರೋಹಿ ಚಟುವಟಿಕೆಗಳು, ಹಣ ವರ್ಗಾವಣೆ ಮತ್ತು ಸೈಬರ್ ಅಪರಾಧಗಳನ್ನು ಎಸಗಲು ಸುಲಭವಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು ಕಾರ್ಯಾಚರಣೆ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಕಟ್ಟುನಿಟ್ಟಿನ ಕ್ರಮ ಅಗತ್ಯ

ನಕಲಿ ದಾಖಲೆ ವಿತರಣೆ ಮಾಡುವ ಕ್ರಮಗಳಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿ ತೆಗೆದುಕೊಳ್ಳಬೇಕಿದೆ. ಆಧಾರ್ ಕಾರ್ಡ್ ನೀಡುವ ಮೊದಲು ವಿಳಾಸ ಮತ್ತು ದಾಖಲೆಗಳ ಭೌತಿಕ ಪರಿಶೀಲನೆ ಕಡ್ಡಾಯವಾಗಬೇಕಿದೆ. ಬಯೋಮೆಟ್ರಿಕ್ ಡೇಟಾ ಪಡೆಯುವ ಪ್ರಕ್ರಿಯೆಯಲ್ಲಿ ಸೈಬರ್ ಸೆಂಟರ್‌ಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಿ, ಕೇವಲ ಸರ್ಕಾರಿ ಸ್ವಾಮ್ಯದ ಕೇಂದ್ರಗಳಿಗೆ ಮಾತ್ರ ಈ ಜವಾಬ್ದಾರಿ ನೀಡಬೇಕು. ಇಂತಹ ಅಕ್ರಮಗಳಲ್ಲಿ ತೊಡಗುವ ಸೈಬರ್ ಸೆಂಟರ್ ಮಾಲೀಕರು ಮತ್ತು ಅವರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ನಕಲಿ ದಾಖಲೆಗಳನ್ನು ನೀಡುವುದು ಮತ್ತು ಪಡೆಯುವುದು ಅಪರಾಧ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸಂಶಯಾಸ್ಪದ ಪ್ರದೇಶಗಳಲ್ಲಿ ನೀಡಿರುವ ಆಧಾರ್ ಕಾರ್ಡ್‌ಗಳನ್ನು ಮರು-ಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಗಳು ಕೇಳಿಬಂದಿವೆ.

ಅಂತರಿಕ ಭದ್ರತಾ ವಿಭಾಗದಿಂದ ತನಿಖೆ

ಪ್ರಕರಣವು ಕೇವಲ ವಂಚನೆಯಾಗಿ ಉಳಿಯದೆ ದೇಶದ ಭದ್ರತೆಗೆ ಸಂಬಂಧಿಸಿರುವುದರಿಂದ, ಆಂತರಿಕ ಭದ್ರತಾ ವಿಭಾಗವು ನೇರವಾಗಿ ತನಿಖೆಯಲ್ಲಿ ತೊಡಗಿಸಿಕೊಂಡಿದೆ. ಅಕ್ರಮ ದಾಖಲೆಗಳು ಕೇವಲ ಹಣಕ್ಕಾಗಿ ಮಾಡಲಾಗುತ್ತಿದೆಯೇ ಅಥವಾ ಇದರ ಹಿಂದೆ ಯಾವುದಾದರೂ ಭಯೋತ್ಪಾದನಾ ಸಂಘಟನೆಗಳ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಕಲಿ ಆಧಾರ್ ಪಡೆದಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ಪೊಲೀಸರು ಸ್ಥಳೀಯ ಮಟ್ಟದಲ್ಲಿ 'ಡೋರ್-ಟು-ಡೋರ್' ಸಮೀಕ್ಷೆ ಮತ್ತು ದಾಖಲೆಗಳ ಮರು-ಪರಿಶೀಲನೆಯನ್ನು ಕೈಗೊಂಡಿದ್ದಾರೆ. ಪೊಲೀಸರು ಕೇವಲ ಆರೋಪಿಗಳನ್ನು ಬಂಧಿಸದೆ, ಅವರು ಬಳಸುತ್ತಿದ್ದ ತಂತ್ರಜ್ಞಾನದ ಮೂಲವನ್ನು ಸಹ ಶೋಧಿಸುತ್ತಿದ್ದಾರೆ. ವಶಪಡಿಸಿಕೊಂಡ ಕಂಪ್ಯೂಟರ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಬಯೋಮೆಟ್ರಿಕ್ ಸ್ಕ್ಯಾನರ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಧಿಕೃತ ಆಧಾರ್ ಪೋರ್ಟಲ್‌ಗಳನ್ನು ಈ ಅಕ್ರಮ ದಂಧೆಕೋರರು ಹೇಗೆ ಪ್ರವೇಶಿಸುತ್ತಿದ್ದಾರೆ? ಅವರಿಗೆ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಯಾರು ನೀಡುತ್ತಿದ್ದಾರೆ? ಎಂಬುದರ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಸರ್ಕಾರಿ ಇಲಾಖೆಯೊಂದಿಗೆ ಸಮನ್ವಯ ಅಗತ್ಯ

ನಕಲಿ ಗುರುತಿನ ಚೀಟಿಗಳನ್ನು ವಿದೇಶಿ ಪ್ರಜೆಗಳಿಗೆ ನೀಡುವುದು ದೇಶದ ಭದ್ರತೆಗೆ ಮಾರಕವಾಗಿದೆ. ಈಗಾಗಲೇ ಪಡೆದುಕೊಂಡಿರುವ ಪ್ರಮಾಣ ಪತ್ರಗಳನ್ನು, ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದುಕೊಳ್ಳಬೇಕು. ತಂತ್ರಜ್ಞಾನ ದುರುಪಯೋಗವಾಗಿರುವ ಕುರಿತು ತನಿಖೆ ನಡೆಸಬೇಕು ಮತ್ತು ಇದರಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ, ಪೊಲೀಸ್ ಇಲಾಖೆಯು ಯುಐಡಿಎಐ, ಕಂದಾಯ ಇಲಾಖೆ ಮತ್ತು ಪೌರಾಡಳಿತ ಇಲಾಖೆಯೊಂದಿಗೆ ಸಮನ್ವಯವನ್ನು ಸಮರ್ಪಕವಾಗಿ ಸಾಧಿಸಬೇಕಿದೆ. ದಾಖಲೆಗಳನ್ನು ಮಾಡಿಸಿಕೊಳ್ಳಲು ಕೇಂದ್ರಕ್ಕೆ ಬರುವ ಗ್ರಾಹಕರನ್ನು ಕಡ್ಡಾಯವಾಗಿ ನೊಂದಣಿ ಪುಸ್ತಕದಲ್ಲಿ ದಾಖಲಿಸಬೇಕಾಗಿದೆ. ಅಧಿಕೃತ ಪರವಾನಗಿ ಇಲ್ಲದೆ ಆಧಾರ್ ತಿದ್ದುಪಡಿ ಅಥವಾ ಹೊಸ ಆಧಾರ್ ನೋಂದಣಿ ಮಾಡುವಂತಿಲ್ಲ ಎಂಬ ಸೂಚನೆಯನ್ನು ನೀಡಬೇಕಿದೆ.

Read More
Next Story