Cyber Slavery Racket| ವಿದೇಶಿ ನೌಕರಿ ಆಸೆ: ಸೈಬರ್ ಜೀತದಾಳುಗಳಾಗಿ ಕರ್ನಾಟಕದ  800 ಯುವಕರು
x

ಎಐ ಆಧಾರಿತ ಚಿತ್ರ 

Cyber Slavery Racket| ವಿದೇಶಿ ನೌಕರಿ ಆಸೆ: ಸೈಬರ್ ಜೀತದಾಳುಗಳಾಗಿ ಕರ್ನಾಟಕದ 800 ಯುವಕರು

ಆಗ್ನೇಯ ಏಷ್ಯಾದ ದೇಶಗಳಲ್ಲಿ ಸಿಲುಕಿದ್ದವರ ಪೈಕಿ ಕಳೆದ ವರ್ಷ 4,300ಕ್ಕೂ ಹೆಚ್ಚು ಯುವಕರನ್ನು ರಕ್ಷಿಸಿದ್ದು, 800ರಷ್ಟು ಯುವಕರು ಕರ್ನಾಟಕದವರಾಗಿದ್ದಾರೆ ಎಂದು ಹೇಳಲಾಗಿದೆ.


Click the Play button to hear this message in audio format

ಹೆಚ್ಚಿನ ವೇತನ ಪಡೆದು ಉತ್ತಮ ಜೀವನ ನಡೆಸಲು ವಿದೇಶಕ್ಕೆ ಹೋಗುವ ಹಂಬಲ ಮಧ್ಯಮವರ್ಗದ ಪ್ರತಿ ಯುವಕರಿಗೂ ಸಹಜ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಅಂತಾರಾಷ್ಟ್ರೀಯ ಸೈಬರ್ ಕ್ರಿಮಿನಲ್ ಜಾಲಗಳು ಭಾರತೀಯ ಯುವಕರನ್ನು ಸೈಬರ್ ಜೀತದಾಳುಗಳಾಗಿ ಪರಿವರ್ತಿಸುತ್ತಿವೆ. ಕೇಂದ್ರ ಸರ್ಕಾರವು ಕಳೆದ ವರ್ಷ ವಂಚಕರಿಂದ ರಕ್ಷಿಸಿದವರ 4,300ಕ್ಕೂ ಹೆಚ್ಚು ಯುವಕರ ಪೈಕಿ 800ದಷ್ಟು ಯುವಕರು ಕರ್ನಾಟಕದವರಾಗಿದ್ದಾರೆ.

ಕರ್ನಾಟಕದಿಂದ ಕೆಲಸಕ್ಕಾಗಿ ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್‌, ಥೈಲ್ಯಾಂಡ್‌ನಂತಹ ಆಗ್ನೇಯ ಏಷ್ಯಾದ ದೇಶಗಳಿಗೆ ತೆರಳಿ, ಅಲ್ಲಿನ ಸೈಬರ್ ಕ್ರಿಮಿನಲ್ ಕೇಂದ್ರಗಳಲ್ಲಿ ಬಂಧಿಗಳಾಗಿ ನರಕಯಾತನೆ ಅನುಭವಿಸುತ್ತಿದ್ದ ಯುವಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಐಟಿ ಹಬ್ ಆಗಿರುವ ಬೆಂಗಳೂರು ಮತ್ತು ತಾಂತ್ರಿಕ ನೈಪುಣ್ಯತೆ ಹೊಂದಿರುವ ರಾಜ್ಯದ ಯುವಕರು ಈ ಮಾಫಿಯಾದ ಮೊದಲ ಗುರಿಯಾಗುತ್ತಿದ್ದಾರೆ.

ಕಂಪ್ಯೂಟರ್ ಜ್ಞಾನ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿರುವ ಯುವಕರನ್ನು ಡೇಟಾ ಎಂಟ್ರಿ ಅಥವಾ ಐಟಿ ಸಪೋರ್ಟ್ ಕೆಲಸದ ಹೆಸರಿನಲ್ಲಿ ಆಗ್ನೇಯ ಏಷ್ಯಾದ ದೇಶಗಳಿಗೆ ಕರೆಸಿಕೊಳ್ಳಲಾಗುತ್ತಿದೆ. ಅಲ್ಲಿಗೆ ಹೋದ ತಕ್ಷಣ ಅವರ ಪಾಸ್‌ಪೋರ್ಟ್‌ಗಳನ್ನು ಕಸಿದುಕೊಂಡು, ಗನ್ ತೋರಿಸಿ ಬೆದರಿಸಿ ಸೈಬರ್ ವಂಚನೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ.

ರಾಜ್ಯದವರ ರಕ್ಷಣೆ

ಕೇಂದ್ರ ವಿದೇಶಾಂಗ ಸಚಿವಾಲಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿಗಳ ಪ್ರಕಾರ ರಕ್ಷಣೆಗೊಳಗಾದವರ ಸಂಖ್ಯೆ 800ಕ್ಕೂ ಅಧಿಕ ಇದೆ. 2022ರಲ್ಲಿ 100ಕ್ಕೂ ಹೆಚ್ಚಾದರೆ, 2023ರಲ್ಲಿ 200ಕ್ಕೂ ಅಧಿಕ ಯುವಕರನ್ನು ರಕ್ಷಿಸಲಾಗಿದೆ. 2024ರಲ್ಲಿ 300ಕ್ಕೂ ಹೆಚ್ಚು ಯುವಕರು ಮತ್ತು 2025ರಲ್ಲಿ 120ಕ್ಕೂ ಹೆಚ್ಚು ಕನ್ನಡಿಗನ್ನು ರಕ್ಷಿಸಲಾಗಿದೆ. ಇವರೆಲ್ಲರನ್ನೂ ಮ್ಯಾನ್ಮಾರ್‌, ಕಾಂಬೋಡಿಯಾ, ಲಾವೋಸ್‌ನಿಂದ ಕರೆತರಲಾಗಿದೆ.

ಕೋವಿಡ್ ನಂತರದ ಉದ್ಯೋಗ ಬಿಕ್ಕಟ್ಟಿನ ಸಮಯದಲ್ಲಿ ಈ ದಂಧೆ ವೇಗ ಪಡೆಯಿತು. ಮ್ಯಾನ್ಮಾರ್‌ನ ಗಡಿ ಪ್ರದೇಶಗಳಲ್ಲಿ ಸೈಬರ್ ಕೇಂದ್ರಗಳು ತಲೆ ಎತ್ತಿದ್ದವು. ಆಗ ಸೈಬರ್ ಜೀತ ಎಂಬುದು ಜಗತ್ತಿಗೆ ಅಷ್ಟಾಗಿ ತಿಳಿದಿರಲಿಲ್ಲ. 2022ರ ವೇಳೆಗೆ ದಂಧೆಯ ವಿಸ್ತರಣೆ ಆರಂಭವಾಯಿತು. ಈ ವರ್ಷದಲ್ಲಿ ದಂಧೆಕೋರರು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ಗಡಿಗಳಿಗೆ ವಿಸ್ತರಿಸಿ ರಾಜ್ಯದ ಯುವಕರನ್ನು ಕರೆದೊಯ್ಯುವ ಪ್ರಕ್ರಿಯೆ ಆರಂಭಗೊಂಡಿತು. ನಂತರದ ವರ್ಷದಲ್ಲಿ ಈ ವಂಚನೆ ಹೆಚ್ಚಾಗುತ್ತಾ ಹೋಗುತ್ತಿದೆ ಎಂದು ಹೇಳಲಾಗಿದೆ.

ಬೆಂಗಳೂರಲ್ಲಿ ಪತ್ತೆಯಾದ ಜಾಲ

ರಾಜ್ಯದಿಂದಲೂ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರು ಸಂಖ್ಯೆ ಹೆಚ್ಚಿದೆ. ಕಳೆದ ವರ್ಷ ಸುಮಾರು 800ದಷ್ಟು ಯುವಕರನ್ನು ಕರೆತರಲಾಗಿದೆ. ಇತ್ತೀಚಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕದ 10 ರಿಂದ 15 ಯುವಕರನ್ನು ಕಾಂಬೋಡಿಯಾ ಮತ್ತು ವಿಯೆಟ್ನಾಂನಿಂದ ರಕ್ಷಿಸಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಯುವಕರು ಹೆಚ್ಚಾಗಿ ಸಿಲುಕಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರನ್ನು ವಂಚಕರು ಗುರಿಯಾಗಿಸಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ. ರಾಜಧಾನಿಯಿಂದ ಉದ್ಯೋಗಕ್ಕಾಗಿ ಹೋದ ಸಾಫ್ಟ್‌ವೇರ್ ಮತ್ತು ಡೇಟಾ ಎಂಟ್ರಿ ಅಭ್ಯರ್ಥಿಗಳು ಸಹ ವಂಚಕರ ಜಾಲಕ್ಕೆ ಸಿಲುಕಿದ್ದಾರೆ.

ಅಂತಾರಾಷ್ಟ್ರೀಯ ಮಾಫಿಯಾ ಕೇವಲ ವಿದೇಶದಲ್ಲಷ್ಟೇ ಅಲ್ಲ, ನಮ್ಮ ಬೆಂಗಳೂರಿನಲ್ಲೂ ಬೇರೂರಿದೆ. ಜಯನಗರದ 9ನೇ ಬ್ಲಾಕ್‌ನಲ್ಲಿ ಪತ್ತೆಯಾದ ನಕಲಿ ಕಾಲ್ ಸೆಂಟರ್ ಇದಕ್ಕೆ ಉತ್ತಮ ಉದಾಹರಣೆ. ಇಲ್ಲಿ ಸ್ಟಾಕ್ ಮಾರ್ಕೆಟ್ ಹೂಡಿಕೆಯ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸಲಾಗುತ್ತಿತ್ತು. ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಪದವೀಧರರನ್ನು ಕೆಲಸಕ್ಕೆ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿ ವಂಚನೆಗೆ ಬಳಸಿಕೊಳ್ಳಲಾಗುತ್ತಿತ್ತು. ನಕಲಿ ಕಾಲ್ ಸೆಂಟರ್ ನಡೆಸಿ ವಂಚಿಸುತ್ತಿದ್ದ ಜಾಲವನ್ನು ಸೈಬರ್ ಪೊಲೀಸರು ಇತ್ತೀಚೆಗೆ ಭೇದಿಸಿದ್ದಾರೆ. ಇಲ್ಲಿ 15ಕ್ಕೂ ಹೆಚ್ಚು ರಾಜ್ಯಗಳ ಯುವಕರನ್ನು ಕೆಲಸಕ್ಕೆ ಇರಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

ವಂಚಕರು ಅಭ್ಯರ್ಥಿಗಳನ್ನು ಸೆಳೆಯಲು ಅತ್ಯಂತ ವ್ಯವಸ್ಥಿತವಾದ ಮಾರ್ಗಗಳನ್ನು ಅನುಸರಿಸುತ್ತಾರೆ. ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಆಕರ್ಷಕ ಜಾಹೀರಾತುಗಳನ್ನು ನೀಡಲಾಗುತ್ತದೆ. ಡೇಟಾ ಎಂಟ್ರಿ ಕೆಲಸ, ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂಬಂತಹ ಸುಲಭ ಕೆಲಸಗಳಿಗೆ ಭಾರಿ ಮೊತ್ತದ ಸಂಬಳದ ಆಮಿಷ ಒಡ್ಡಲಾಗುತ್ತದೆ. ಪ್ರಯಾಣದ ವೆಚ್ಚ, ವೀಸಾ ಶುಲ್ಕ ಮತ್ತು ವಸತಿ ಸೌಲಭ್ಯಗಳನ್ನು ತಾವೇ ಭರಿಸುವುದಾಗಿ ನಂಬಿಸುತ್ತಾರೆ. ಇದು ಬಡ ಮತ್ತು ಮಧ್ಯಮ ವರ್ಗದ ನಿರುದ್ಯೋಗಿ ಯುವಕರನ್ನು ಬೇಗನೆ ಆಕರ್ಷಿಸುತ್ತದೆ. ಕೇಂದ್ರ ಸರ್ಕಾರದ ಇ-ಮೈಗ್ರೇಟ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳದ ಸುಮಾರು 3,505ಕ್ಕೂ ಹೆಚ್ಚು ನಕಲಿ ಏಜೆನ್ಸಿಗಳು ದೇಶಾದ್ಯಂತ ಸಕ್ರಿಯವಾಗಿವೆ ಎಂದು ಮೂಲಗಳು ಹೇಳಿವೆ.

ಸೈಬರ್ ಜೀತಪದ್ಧತಿ: ವಿದೇಶದಲ್ಲಿ ನರಕಯಾತನೆ

ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್‌ನಂತಹ ದೇಶಗಳಿಗೆ ತೆರಳಿ ಹೆಚ್ಚಾಗಿ ಸಿಲುಕಿರುವ ಬಗ್ಗೆ ವರದಿಯಾಗಿದೆ. ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆಯ ಜಾಲಕ್ಕೆ ಸಿಲುಕಿಸಲಾಗುತ್ತದೆ. ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಯುವಕರ ಪಾಸ್‌ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ಕಿತ್ತುಕೊಳ್ಳಲಾಗುತ್ತದೆ. ಇದರಿಂದ ಅವರು ಆ ದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಮಾಡಲಾಗುತ್ತದೆ. ಯುವಕರನ್ನು ದೊಡ್ಡ ಕಟ್ಟಡಗಳಲ್ಲಿ ಕೂಡಿ ಹಾಕಿ, ದಿನಕ್ಕೆ 15-18 ಗಂಟೆಗಳ ಕಾಲ ಸೈಬರ್ ವಂಚನೆ ಮಾಡುವಂತೆ ಒತ್ತಾಯಿಸಲಾಗುತ್ತದೆ. ಇವರ ಮೂಲಕವೇ ಭಾರತದಲ್ಲಿರುವ ಜನರಿಗೆ ಕರೆ ಮಾಡಿಸಿ ಹೂಡಿಕೆ ವಂಚನೆ ಅಥವಾ ಡೇಟಿಂಗ್ ಆಪ್‌ಗಳ ಮೂಲಕ ಹಣ ಲೂಟಿ ಮಾಡಿಸಲಾಗುತ್ತದೆ. ಆಯಾ ರಾಜ್ಯದವರನ್ನು ವಂಚಿಸಲು ಅದೇ ಭಾಷೆಯ ಯುವಕರನ್ನು ಬಳಸಿಕೊಳ್ಳುವುದು ಈ ಜಾಲದ ವಿಶೇಷತೆ ಎಂದು ಹೇಳಲಾಗಿದೆ.

ಅಂಕಿ-ಅಂಶಗಳ ವಿಶ್ಲೇಷಣೆ

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ವಿದೇಶದಲ್ಲಿ ಸಿಲುಕಿರುವ ಯುವಕರನ್ನು ರಕ್ಷಣೆ ಮಾಡಿರುವ ಸಂಖ್ಯೆಯು ಹೆಚ್ಚಳವಾಗುತ್ತಲೇ ಇದೆ. 2022ರ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಕಾಂಬೋಡಿಯಾದಿಂದ 2022ರಲ್ಲಿ 44, 2023ರಲ್ಲಿ 207, 2024ರಲ್ಲಿ 982 ಮತ್ತು 2025ರಲ್ಲಿ 1,300 ಯುವಕರನ್ನು ರಕ್ಷಣೆ ಮಾಡಲಾಗಿದೆ. ಲಾವೋಸ್‌ನಿಂದ 2022 ರಿಂದ 2025ರ ವರೆಗೆ ನಾಲ್ಕು ವರ್ಷದ ಅವಧಿಯಲ್ಲಿ 74, 244, 558, 1,421 ಯುವಕರನ್ನು ರಕ್ಷಣೆ ಮಾಡಲಾಗಿದೆ. ಇನ್ನು, ಮ್ಯಾನ್ಮಾರ್ ದೇಶದಿಂದ 338, 89, 147, 1,594 ಯುವಕರನ್ನು ದೇಶಕ್ಕೆ ಕರೆತರಲಾಗಿದೆ. ಒಟ್ಟಾರೆ 2022ರಲ್ಲಿ 456, 2023ರಲ್ಲಿ 540, 2024ರಲ್ಲಿ 1,687 ಮತ್ತು 2025ರಲ್ಲಿ 4,300 ರಕ್ಷಣೆ ಮಾಡಲಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ರಕ್ಷಿಸಲ್ಪಟ್ಟವರ ಸಂಖ್ಯೆ 456 ರಿಂದ 4,300ಕ್ಕೆ ಹೆಚ್ಚಳವಾಗಿರುವುದು ಜಾಲವು ಸಂಚಿನ ಕಾರ್ಯಾಚರಣೆಯನ್ನು ಬಿಂಬಿಸುತ್ತದೆ. ಮ್ಯಾನ್ಮಾರ್‌ನಲ್ಲಿ 2025ರಲ್ಲಿ ಅತಿ ಹೆಚ್ಚು ಅಂದರೆ 1,594 ಯುವಕರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಎನ್‌ಆರ್‌ಐ ಫೋರಂ ಅನ್ನು ಸಂಪರ್ಕಿಸಬಹುದು

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಅನಿವಾಸಿ ಭಾರತೀಯ ರವಿ ಮಹಾದೇವ, ವಿದೇಶಕ್ಕೆ ಉದ್ಯೋಗಿಗಳನ್ನು ಕಳುಹಿಸುವ ಯಾವುದೇ ಏಜೆಂಟ್ ಅಥವಾ ಸಂಸ್ಥೆಯು ಪ್ರೊಟೆಕ್ಟರ್ ಜನರಲ್ ಆಫ್ ಎಮಿಗ್ರಂಟ್ಸ್‌ನಿಂದ ಪರವಾನಗಿ ಪಡೆದಿರುವುದು ಕಡ್ಡಾಯವಾಗಿರಬೇಕು. ಅಭ್ಯರ್ಥಿಗಳು ವಿದೇಶಕ್ಕೆ ಹೋಗುವ ಮುನ್ನ ಕೇಂದ್ರ ಸರ್ಕಾರದ ಅಧಿಕೃತ www.emigrate.gov.in ಪೋರ್ಟಲ್ ಮೂಲಕವೇ ನೋಂದಾಯಿಸಿಕೊಳ್ಳಬೇಕು. ಇದು ನಿಮ್ಮ ಉದ್ಯೋಗ ಒಪ್ಪಂದದ ಸುರಕ್ಷತೆಗೆ ಸರ್ಕಾರ ನೀಡುವ ಗ್ಯಾರಂಟಿಯಾಗಿದೆ. ಉದ್ಯೋಗಾಕಾಂಕ್ಷಿಗಳ ಉದ್ಯೋಗದ ಬೇಡಿಕೆ ಮತ್ತು ಉದ್ಯೋಗ ಒಪ್ಪಂದ ಪೋರ್ಟಲ್‌ನಲ್ಲಿ ಅಧಿಕೃತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಪ್ಪಂದದಲ್ಲಿ ನಮೂದಿಸಲಾದ ವೇತನ, ಕೆಲಸದ ಅವಧಿ, ವಸತಿ ಮತ್ತು ವಿಮಾನ ಟಿಕೆಟ್ ಸೌಲಭ್ಯಗಳನ್ನು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು. ಪಾವತಿಸುವ ಪ್ರತಿಯೊಂದು ರೂಪಾಯಿಗೂ ಅಧಿಕೃತ ರಸೀದಿಯನ್ನು ಕೇಳಿ ಪಡೆಯಿರಿ. ನಗದು ವ್ಯವಹಾರಕ್ಕಿಂತ ಬ್ಯಾಂಕ್ ಮೂಲಕ ಹಣ ಪಾವತಿಸುವುದು ಉತ್ತಮ ಎಂದು ಹೇಳಿದರು.

ವಿದೇಶಕ್ಕೆ ತೆರಳಿದ ಬಳಿಕ ಸಂಕಷ್ಟಕ್ಕೆ ಸಿಲುಕುವವರ ನೆರವಿಗಾಗಿ ರಾಜ್ಯದಲ್ಲಿ ಎನ್‌ಆರ್‌ಐ ಫೋರಂ ಅನ್ನು ಸ್ಥಾಪಿಸಲಾಗಿದೆ. ಇದು ಕರ್ನಾಟಕ ಸರ್ಕಾರದ ಅಂಗಸಂಸ್ಥೆಯಾಗಿದೆ. ವಂಚನೆಗೊಳಗಾದ ವ್ಯಕ್ತಿಗಳು ಇಲ್ಲಿ ದೂರು ನೀಡಬಹುದು. ಒಂದು ವೇಳೆ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ನೆರವು ಕೋರಲು ಸಾಧ್ಯವಾಗದಿದ್ದರೆ ಅವರ ಕುಟುಂಬಸ್ಥರು ದೂರು ನೀಡಬಹುದು. ಆ ಮೂಲಕ ಸಹಾಯ ಪಡೆದುಕೊಳ್ಳಬಹುದು. ಅದಷ್ಟು ಯುವಜನಾಂಗದವರು ಏಜೆಂಟ್‌ಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ಪಡೆದುಕೊಂಡ ನಂತರವೇ ಮುಂದಿನ ಹೆಜ್ಜೆ ಇಡಬೇಕು. ಸಾಮಾನ್ಯವಾಗಿ ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಇಂತಹ ಸಮಸ್ಯೆಗಳು ಇರುವುದಿಲ್ಲ. ಸಣ್ಣ ಸಣ್ಣ ದೇಶಗಳಲ್ಲಿಯೇ ಇಂತಹ ಸಮಸ್ಯೆಗಳು ಹೆಚ್ಚಾಗಿವೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಯುವಕರು ಆಮಿಷೆಗಳಿಗೊಳಗಾಗಬಾರದು

ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಹಾಗೂ ವಿಧಾನ ಪರಿಷತ್‌ ಸದಸ್ಯೆ ಡಾ. ಆರತಿ ಕೃಷ್ಣ, ಇತ್ತೀಚೆಗೆ ಕರ್ನಾಟಕದ ಚಿಕ್ಕಮಗಳೂರು, ಕೋಲಾರದಂತಹ ಜಿಲ್ಲೆಗಳಿಂದ ಯುವಕರು ಇಂತಹ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಈ ಭಾಗದ 10-15 ಯುವಕರನ್ನು ಕಾಂಬೋಡಿಯಾ, ವಿಯೆಟ್ನಾಂನಿಂದ ರಕ್ಷಿಸಿ ತರಲಾಗಿದೆ. ಆದರೂ ಇನ್ನೂ ನೂರಾರು ಯುವಕರು ಅಲ್ಲಿ ಸಿಲುಕಿದ್ದಾರೆ. ಹೀಗಾಗಿ ಯುವಕರು ವಿದೇಶದಲ್ಲಿ ಕೆಲಸ ಕೊಡಿಸಲಾಗುತ್ತದೆ ಎಂಬ ಜಾಲದ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿದೇಶದಲ್ಲಿ ಕೆಲಸ ಕೊಡಿಸುವ ಏಜೆನ್ಸಿಗಳ ಬಗ್ಗೆ ಪರಾಮರ್ಶಿಸಬೇಕು. ಇಲ್ಲದಿದ್ದರೆ ಇಂತಹ ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇರುತ್ತದೆ.

ತಡೆಗಟ್ಟುವ ಕ್ರಮಗಳು ಹಾಗೂ ಜಾಗೃತಿ

ಸರ್ಕಾರ ಹಾಗೂ ಸಾರ್ವಜನಿಕರು ಈ ನಿಟ್ಟಿನಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಮುನ್ನ ಕೇಂದ್ರ ಸರ್ಕಾರದ e-migrate (www.emigrate.gov.in) ಪೋರ್ಟಲ್‌ನಲ್ಲಿ ಏಜೆನ್ಸಿಯ ಅಧಿಕೃತತೆಯನ್ನು ಪರಿಶೀಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅತಿ ಹೆಚ್ಚಿನ ವೇತನದ ಆಮಿಷಗಳಿಗೆ ಮರುಳಾಗಬಾರದು. ಕಂಪನಿಯ ವಿಳಾಸ, ಕೆಲಸದ ಸ್ವರೂಪ ಮತ್ತು ವೀಸಾದ ಬಗ್ಗೆ ಕೂಲಂಕಷವಾಗಿ ವಿಚಾರಿಸಬೇಕು. ಅನೇಕ ಬಾರಿ ವಂಚಕರು ಪ್ರವಾಸಿ ವೀಸಾದಲ್ಲಿ ಕರೆದೊಯ್ದು ಅಲ್ಲಿ ಉದ್ಯೋಗ ವೀಸಾಗೆ ಬದಲಾಯಿಸಿಕೊಡುವುದಾಗಿ ನಂಬಿಸುತ್ತಾರೆ. ಇದು ಕಾನೂನುಬಾಹಿರ ಮತ್ತು ಅಪಾಯಕಾರಿ. ಯಾವುದೇ ಅನುಮಾನ ಬಂದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ಸ್ಥಳೀಯ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು.

Read More
Next Story