
West Bengal Elections| ಪ. ಬಂಗಾಲ:ಜಂಗಲ್ ಮಹಲ್‌ನಲ್ಲಿ ಶಾಂತಿ ಮರಳಿದೆ, ಆದರೆ ಅಭಿವೃದ್ಧಿ ಮರೀಚಿಕೆ!
Ground Report| ದಶಕ ಕಾಲದ ಮಾವೋವಾದಿ ದಂಗೆಯಿಂದ ತತ್ತರಿಸಿದ್ದ ಪ.ಬಂಗಾಲದ ಜಂಗಲ್ ಮಹಲ್ ಪ್ರದೇಶ ಶಾಂತಿಯತ್ತ ಮರಳಿದೆ. ಆದರೆ ಅಭಿವೃದ್ಧಿ ಪರ್ವ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ…
ಆತನ , ವಯಸ್ಸಾದ ಮತ್ತು ಬಲಹೀನ ಹೆಗಲ ಮೇಲೆ ಮರದ ನೇಗಿಲು ಭಾರವಾಗಿ ಕುಳಿತಿತ್ತು. ಮತ್ತೊಂದು ದಿನದ ಕಠಿಣ ಪರಿಶ್ರಮದ ಮುಗಿದಿತ್ತು. ಅದು 65 ವರ್ಷ ವಯಸ್ಸಿನ ಶಂಭು ಸೊರೆನ್ ಹೊಲದಿಂದ ಹಿಂದಿರುಗುತ್ತಿರುವ ಹೊತ್ತು.
ಪಶ್ಚಿಮ ಬಂಗಾಳದ ನೈಋತ್ಯ ಭಾಗದ ಜಂಗಲ್ ಮಹಲ್ ಪ್ರದೇಶ ಮಳೆಯನ್ನೇ ನಂಬಿಕೊಂಡಿದೆ. ಅಲ್ಲಿನ ಕೃಷಿ ಭೂಮಿಯ ವ್ಯವಸಾಯವು ಇಂದಿಗೂ ಸಂಪೂರ್ಣ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಭಾರವಾದ ನೇಗಿಲು ಹೊತ್ತು ಹೊಲದತ್ತ ಸಾಗುವುದು, ದಿನವಿಡೀ ರಟ್ಟೆ ಸೋಲುವಷ್ಟೂ ದುಡಿಯುವುದು…. ಕಳೆದ ಹಲವು ವರ್ಷಗಳಿಂದ ಇದು ಅವರ ನಿತ್ಯದ ಕಾಯಕ.
ನಮ್ಮ ಬದುಕು ಬದಲಾಗಿದೆಯೇ?
ಕಳೆದ ಅನೇಕ ವರುಷಗಳಲ್ಲಿ ಸರ್ಕಾರಗಳು ಬಂದಿವೆ ಮತ್ತು ಹೋಗಿವೆ, ಭರವಸೆಗಳನ್ನು ನೀಡಲಾಗಿದೆ ಮತ್ತು ಮರೆತುಹೋಗಿದ್ದಾರೆ. ಆದರೆ ಝಾರ್ಗ್ರಾಮ್ ಜಿಲ್ಲೆಯ ಕಲಾಬಾನಿ ಗ್ರಾಮದ ರೈತ ಶಂಭು ಅವರ ಜೀವನದಲ್ಲಿ ಬದಲಾಗಿದ್ದಾದರೂ ಏನು? ತೀರಾ ಅಲ್ಪ "ಹೌದು, ಶಾಂತಿ ನೆಲೆಸಿದೆ, ಆದರೆ ನಮ್ಮ ಬದುಕು ಬದಲಾಗಿದೆಯೇ?" ಎಂದು ಅವರು ಹಣೆಯ ಮೇಲಿನ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಾ ಪ್ರಶ್ನೆ ಮಾಡುತ್ತಾರೆ.
ಈ ತಿಂಗಳು ಬಂಗಾಳವು ಮತ್ತೊಂದು ವಿಧಾನಸಭಾ ಚುನಾವಣೆಯತ್ತ ಮುಖ ಮಾಡಿರುವಾಗ, ಪುರುಲಿಯಾ, ಝಾರ್ಗ್ರಾಮ್, ಬಂಕುರಾ ಮತ್ತು ಪಶ್ಚಿಮ ಮಿಡ್ನಾಪುರದ ಕೆಲವು ಭಾಗಗಳನ್ನು ಒಳಗೊಂಡಿರುವ ಈ ಕೆಂಪು ಮಣ್ಣಿನ ಭೂಪ್ರದೇಶದ ಉದ್ದಕ್ಕೂ ಇದೇ ಪ್ರಶ್ನೆ ಈಗ ಪ್ರತಿಧ್ವನಿಸುತ್ತಿದೆ.
ರಾಜಕೀಯ ಪಲ್ಲಟಗಳು
ಸುಮಾರು 40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಒಂದು ಕಾಲದಲ್ಲಿ ಜೀವನವನ್ನು ಥರಗುಟ್ಟುವಂತೆ ಮಾಡುವ ಭಯದ ವಾತಾವರಣವಿತ್ತು. ಕತ್ತಲು ಕವಿಯುತ್ತಿದ್ದಂತೆ ಹಳ್ಳಿಗಳು ಮೌನಕ್ಕೆ ಶರಣಾಗುತ್ತಿದ್ದವು. ರಾತ್ರಿ ದಟ್ಟವಾಗುತ್ತಿದ್ದಂತೆ ಬೂಟುಗಳ ಸದ್ದು ಅಥವಾ ಗುಂಡಿನ ಚಕಮಕಿಯ ಶಬ್ದ ಮೊಳಗುವುದು ಸಾಮಾನ್ಯವಿತ್ತು. ತೀವ್ರ ಬಡತನ, ಅಸಮಾಧಾನ ಮತ್ತು ಅಭಿವೃದ್ಧಿಯ ಕೊರತೆಯಿಂದಾಗಿ ಮಾವೋವಾದಿ ದಂಗೆಯು ಈ ವಲಯದ ಬಹುತೇಕ ಭಾಗಗಳನ್ನು ಸಂಘರ್ಷದ ವಲಯವಾಗಿ ಮಾರ್ಪಡಿಸಿತ್ತು.
"ನಾವು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದೆವು," ಎಂದು ರಾಮೇಶ್ವರ್ ಕಿಸ್ಕು ನೆನಪಿಸಿಕೊಳ್ಳುತ್ತಾರೆ. 2003ರಲ್ಲಿ ಬಾಂಧ್ವಾನ್ ಪೊಲೀಸ್ ಠಾಣೆಯ ಮೇಲೆ ನಡೆದ ಮಾವೋವಾದಿಗಳ ದಾಳಿಗೆ ಸಂಬಂಧಿಸಿದಂತೆ ಕಿಸ್ಕು, ಅವರ ಪತ್ನಿ ಮತ್ತು ನೆರೆಹೊರೆಯವರನ್ನು ಬಂಧಿಸಲಾಗಿತ್ತು. ಆ ದಾಳಿಯಲ್ಲಿ ಬಾಂಧ್ವಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಹತ್ಯೆ ಮಾಡಲಾಗಿತ್ತು.
"ಮಾವೋವಾದಿಗಳು ರಾತ್ರಿಯ ಹೊತ್ತು ಬಂದು ಗನ್ ತೋರಿಸಿ ಆಹಾರ ಮತ್ತು ಆಶ್ರಯ ಕೇಳುತ್ತಿದ್ದರು. ಬೆಳಕು ಹರಿಯುತ್ತಲೇ ಪೊಲೀಸರು ಬಂದು ನಮ್ಮನ್ನು ಮಾವೋವಾದಿಗಳು ಅಥವಾ ಅವರ ಬೆಂಬಲಿಗರು ಎಂದು ಹಣೆಪಟ್ಟಿ ಹಚ್ಚುತ್ತಿದ್ದರು. ನಮಗೆ ಹೋಗಲು ಬೇರೆ ದಾರಿಯೇ ಇರಲಿಲ್ಲ," ಎನ್ನುತ್ತಾರೆ ಕಿಸ್ಕು.
ಪಶ್ಚಿಮ ಬಂಗಾಳದ ಜಂಗಲ್ ಮಹಲ್ ಪ್ರದೇಶದ ಝಾರ್ಗ್ರಾಮ್ ಜಿಲ್ಲೆಯ ಕಲಾಬಾನಿ ಗ್ರಾಮದ ರೈತ ಶಂಭು ಸೊರೆನ್, ಶಾಂತಿಯು ತಮ್ಮಂತಹ ಜನರ ಜೀವನವನ್ನು ಉತ್ತಮವಾಗಿ ಬದಲಾಗಿಸಿದೆ ಎನ್ನುತ್ತಾರೆ. ಫೋಟೋ: ಅಭಿಷೇಕ್ ಶರ್ಮಾ
2011ರಲ್ಲಿ ತೃಣಮೂಲ ಕಾಂಗ್ರೆಸ್ (TMC) ಅಧಿಕಾರಕ್ಕೆ ಬಂದ ನಂತರ ರಾಜಕೀಯ ತಿರುವು ಉಂಟಾಯಿತು. ಪಕ್ಷದ ನಾಯಕರು ವಿವರಿಸುವಂತೆ "ದ್ವಿಮುಖ ಮಾರ್ಗ"ವನ್ನು ಅಳವಡಿಸಿಕೊಳ್ಳಲಾಯಿತು. ಇದು ಭದ್ರತಾ ಕ್ರಮಗಳ ಜೊತೆಗೆ ಜನಸಂಪರ್ಕ, ಕಲ್ಯಾಣ ಯೋಜನೆಗಳ ವಿತರಣೆ ಮತ್ತು ಸ್ಥಳೀಯ ಸಮುದಾಯಗಳಿಂದ ಬಂಡುಕೋರರನ್ನು ಪ್ರತ್ಯೇಕಿಸುವ ಸಂವಾದಗಳನ್ನು ಒಳಗೊಂಡಿತ್ತು.
"ಮಾವೋವಾದಿ ನಾಯಕರಿಗೆ ಉದ್ಯೋಗ ನೀಡಲಾಯಿತು. ನಮ್ಮ ಭಾಗದ ಅನೇಕರಿಗೆ ಪೊಲೀಸ್ ಕೆಲಸವನ್ನು ನೀಡಲಾಯಿತು. ಆದರೆ ನನ್ನನ್ನು ನೋಡಿ, ನಾವು ನಿರಪರಾಧಿಗಳಾಗಿದ್ದರೂ ನನ್ನ ಮೇಲಿರುವ ಪ್ರಕರಣವನ್ನು ಇನ್ನೂ ಹಿಂತೆಗೆದುಕೊಂಡಿಲ್ಲ," ಎಂದು ಹೇಳುತ್ತಾನೆ ಕಿಸ್ಕು. ಆತನ ಮಾತಿನ ದಾಟಿಯಲ್ಲಿ ವ್ಯಂಗ್ಯ ತುಂಬಿತ್ತು.
ಟಿಎಂಸಿ ಸರ್ಕಾರದ ದೊಡ್ಡ ಸಾಧನೆ
ಆದರೆ, ಕಿಸ್ಕು ಅವರಂತಹ ಗ್ರಾಮಸ್ಥರು ಈಗ ಭಯ ರಹಿತವಾಗಿ ಬದುಕು ನಡೆಸುತ್ತಿದ್ದಾರೆ ಮತ್ತು ಮಾವೋವಾದ ಎಂಬುದು ಮುಗಿದ ಅಧ್ಯಾಯ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.
"ಇದು ನಮ್ಮ 15 ವರ್ಷಗಳ ಆಡಳಿತದ ಬಹು ದೊಡ್ಡ ಸಾಧನೆಗಳಲ್ಲಿ ಒಂದು. ಜಂಗಲ್ ಮಹಲ್ ಈಗ ನಗುತ್ತಿದೆ ಏಕೆಂದರೆ ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಖಂಡಿತವಾಗಿಯೂ ಸುಸ್ಥಿತಿಯಲ್ಲಿದೆ," ಎಂದು ಝಾರ್ಗ್ರಾಮ್ನ ಟಿಎಂಸಿ ಅಭ್ಯರ್ಥಿ ಮಂಗಲ್ ಸೊರೆನ್ 'ದಿ ಫೆಡರಲ್'ಗೆ ತಿಳಿಸಿದರು.
ಆಡಳಿತಾರೂಢ ಪಕ್ಷವು ಶಾಂತಿಯ ಮರುಸ್ಥಾಪನೆಯನ್ನು ತನ್ನ ಪ್ರಮುಖ ಯಶಸ್ಸು ಎಂದು ಪ್ರತಿಪಾದಿಸುತ್ತಿದ್ದರೂ, ತಳಮಟ್ಟದಲ್ಲಿ ಹೆಚ್ಚು ಸಂಕೀರ್ಣವಾದ ಮೌನ ಆಕ್ರೋಶ ಮಡುಗಟ್ಟಿದೆ. ಅದು ಹೆಚ್ಚುತ್ತಿರುವ ನಿರೀಕ್ಷೆಗಳು ಮತ್ತು ಬೆಳೆಯುತ್ತಿರುವ ಅಸಮಾಧಾನದ ಕಥೆಯಾಗಿದೆ.
ದಶಕದ ಹಿಂದೆ ಹಿಂಸಾಚಾರ ಕೊನೆಗೊಂಡದ್ದು, ಇಷ್ಟು ವರ್ಷಗಳಲ್ಲಿ ಸುಸ್ಥಿರ ಆರ್ಥಿಕ ಬದಲಾವಣೆಗೆ ಕಾರಣವಾಗಬೇಕಿತ್ತು ಎಂಬುದು ಅನೇಕ ನಿವಾಸಿಗಳ ಅಭಿಪ್ರಾಯ. ಆದರೆ, ಕೊನೆಗೊಂಡ ಹಿಂಸಾಚಾರ ಮತ್ತು ಪ್ರಗತಿ ಅಸಮಾನವಾಗಿದೆ ಎಂದು ಅವರು ಹೇಳುತ್ತಾರೆ.
"ಹೌದು, ಹೆಚ್ಚಿನ ಹಳ್ಳಿಗಳಲ್ಲಿ ರಸ್ತೆಗಳಿವೆ. ಕೆಲವು ಯೋಜನೆಗಳೂ ನಮ್ಮಮ ಕೈ ಹಿಡಿದಿವೆ ಎಂಬುದು ಸತ್ಯ. ಆದರೆ ಉದ್ಯೋಗ, ಕೈಗಾರಿಕೆ ಮತ್ತು ನೀರಾವರಿ ಸೌಲಭ್ಯಗಳು ಇಂದಿಗೂ ಮರೀಚಿಕೆಯಾಗಿಯೇ ಇವೆ,” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮತ್ತು ಕಲಾಬಾನಿ ಗ್ರಾಮದ ಸಾಂಪ್ರದಾಯಿಕ ಮುಖ್ಯಸ್ಥರಾದ ದೇಬೇನ್ ಸೊರೆನ್
ಕಳವಳಗಳು ಕರಗಿಲ್ಲ ಇನ್ನೂ...
ಹಳ್ಳಿಗಳ ಉದ್ದಗಲಕ್ಕೂ ಮೂರು ಪ್ರಮುಖ ಸಮಸ್ಯೆಗಳು ಪದೇ ಪದೇ ಕೇಳಿಬರುತ್ತಿವೆ: ನಿರುದ್ಯೋಗ, ನೀರಾವರಿ ಕೊರತೆ ಮತ್ತು ಕಲ್ಯಾಣ ಯೋಜನೆಗಳ ವಿತರಣೆಯಲ್ಲಿನ ಭ್ರಷ್ಟಾಚಾರದ ಆರೋಪಗಳು.
ಈ ಭಾಗದ ಬೆನ್ನೆಲುಬಾದ ಕೃಷಿಯು ಇಂದಿಗೂ ಹೆಚ್ಚಾಗಿ ಮಳೆಯನ್ನೇ ಅವಲಂಬಿಸಿದೆ. ಸಮರ್ಪಕ ನೀರಾವರಿ ಮೂಲಸೌಕರ್ಯಗಳಿಲ್ಲದ ಕಾರಣ, ಒಣ ಹವೆಯ ತಿಂಗಳುಗಳಲ್ಲಿ ವಿಶಾಲವಾದ ಕೃಷಿ ಭೂಮಿಗಳು ಪಾಳುಬಿದ್ದಿರುತ್ತವೆ.
ಪಶ್ಚಿಮ ಬಂಗಾಳದ ಜಂಗಲ್ ಮಹಲ್ ಪ್ರದೇಶದ ಝಾರ್ಗ್ರಾಮ್ ಜಿಲ್ಲೆಯ ಕಲಾಬಾನಿ ಗ್ರಾಮದ ರೈತ ಶಂಭು ಸೊರೆನ್, ಶಾಂತಿಯು ತಮ್ಮಂತಹ ಜನರ ಜೀವನವನ್ನು ಉತ್ತಮವಾಗಿ ಬದಲಾಗಿಸಿದೆ ಎನ್ನುತ್ತಾರೆ. ಫೋಟೋ: ಅಭಿಷೇಕ್ ಶರ್ಮಾ
"ಮಳೆ ಚೆನ್ನಾಗಿ ಬಂದರೆ ಒಂದು ಬೆಳೆ ಸಿಗುತ್ತದೆ. ಇಲ್ಲದಿದ್ದರೆ ಏನೇನೂ ಇಲ್ಲ." ಎಂದು ಶಂಭು ಸೊರೆನ್ ಹೇಳುತ್ತಾರೆ.
ಅಂತರ್ಜಲದ ತೀವ್ರ ಕೊರತೆ ಇರುವ ಈ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕೇವಲ ನೀರಾವರಿ ಮಾತ್ರವಲ್ಲ, ಕುಡಿಯುವ ನೀರೂ ಸಹ ಸಮರ್ಪಕವಾಗಿ ಲಭ್ಯವಿಲ್ಲ.
"ಇಲ್ಲಿ ನೀರಿನ ತೀವ್ರ ಸಮಸ್ಯೆಯಿದೆ. ನೀರು ತರಲು ನಾವು ಬಹಳ ದೂರ ನಡೆಯಬೇಕು. ಮತ್ತು ಮಹಿಳೆಯರಾದ ನಮಗೆ ರಸ್ತೆ ಬದಿಯ ಬಯಲಲ್ಲೇ ಸ್ನಾನ ಮಾಡುವುದು ಬಿಟ್ಟು ಬೇರೆ ದಾರಿಯೇ ಇಲ್ಲ. ಇದು ಅವಮಾನಕರ ಸಂಗತಿ," ಎಂದು ಮಿಡ್ನಾಪುರದ ದಕ್ಷಿಣ ಸೋಲ್ ಗ್ರಾಮದ ನಿವಾಸಿ ನಯನ್ ಮನ್ನಾ ಅಳಲು ತೋಡಿಕೊಂಡರು.
ಏಪ್ರಿಲ್ 23 ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಸಿದ್ಧರಾಗುತ್ತಿರುವ ಇಲ್ಲಿನ ಮತದಾರರನ್ನು ಕಾಡುತ್ತಿರುವ ಮತ್ತೊಂದು ಪ್ರಮುಖ ವಿಷಯವೆಂದರೆ ಸ್ಥಳೀಯ ಉದ್ಯೋಗದ ಕೊರತೆ. ನಿರುದ್ಯೋಗವು ಇಲ್ಲಿ ದೊಡ್ಡ ಪ್ರಮಾಣದ ವಲಸೆಗೆ ಕಾರಣವಾಗಿದೆ, ಅದರಲ್ಲೂ ವಿಶೇಷವಾಗಿ ಯುವಕರ ದಂಡು ದಂಡೇ ವಲಸೆ ಹೋಗುತ್ತಿದೆ.
ಕೃಷಿ ಹಂಗಾಮಿನ ನಂತರ ಕೆಲಸವಿಲ್ಲ
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಹೊರವಲಸೆ ನಡೆಯುವ ಪ್ರದೇಶಗಳಲ್ಲಿ ಮುರ್ಷಿದಾಬಾದ್, ಮಾಲ್ಡಾ ಮತ್ತು ಕೂಚ್ ಬೆಹಾರ್ ಜಿಲ್ಲೆಗಳ ನಂತರ ಈಗ ಪ್ರಮುಖ ಸ್ಥಾನದಲ್ಲಿದೆ. ಇಲ್ಲಿನ ಕಾರ್ಮಿಕರು ನಿರ್ಮಾಣ ಮತ್ತು ಕಾರ್ಖಾನೆ ಕೆಲಸಗಳ ಹುಡುಕಾಟದಲ್ಲಿ ದೆಹಲಿ, ಮಹಾರಾಷ್ಟ್ರ ಮತ್ತು ದಕ್ಷಿಣದ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.
ಊರಿನಲ್ಲೇ ಉಳಿದುಕೊಂಡವರು ಹೆಚ್ಚಾಗಿ ಅನಿಶ್ಚಿತ ದಿನಗೂಲಿ ಕೆಲಸ ಅಥವಾ ಸರ್ಕಾರಿ ಯೋಜನೆಗಳನ್ನು ಅವಲಂಬಿಸಿದ್ದಾರೆ. "ಕೃಷಿ ಹಂಗಾಮು ಮುಗಿದ ನಂತರ ಇಲ್ಲಿ ಯಾವುದೇ ಕೆಲಸ ಇರುವುದಿಲ್ಲ," ಎಂದು ಕಲಾಬಾನಿಯ 34 ವರ್ಷದ ಶ್ರೀಮಂತ ಸೊರೆನ್ ಹೇಳುತ್ತಾರೆ. ಇವರು ಪದವಿ ಮತ್ತು ದೈಹಿಕ ಶಿಕ್ಷಣದಲ್ಲಿ ಡಿಪ್ಲೊಮಾ ಹೊಂದಿದ್ದರೂ ಈಗಲೂ ಅವರ ಬದುಕು ನಡೆಯುತ್ತಿರುವುದು ದಿನಗೂಲಿಐ ಮೂಲಕ.
"ನನ್ನ ಗ್ರಾಮವೊಂದರಲ್ಲೇ ನನ್ನಂತಹವರು ಅನೇಕರಿದ್ದಾರೆ. ಬಹಳಷ್ಟು ಮಂದಿ ಅನಿವಾರ್ಯವಾಗಿ ವಲಸೆ ಹೋಗಿದ್ದಾರೆ," ಎನ್ನುವ ಅವರು ತಮ್ಮ ಇಡೀ ಪ್ರದೇಶದ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತಾರೆ.
“ಇಲ್ಲಿ ದಿನಗೂಲಿ ಕೇವಲ 300 ರೂ.ಗಳಷ್ಟಿದ್ದು, ಅದೂ ಸಹ ನಿಯಮಿತವಾಗಿ ಸಿಗುವುದಿಲ್ಲ. ನಮಗೆ ತಿಂಗಳಲ್ಲಿ 15 ದಿನ ಕೆಲಸ ಸಿಗುವುದೇ ಕಷ್ಟ," ಎನ್ನುತ್ತಾರೆ ಸೊರೆನ್.
2022ರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ ಪಶ್ಚಿಮ ಬಂಗಾಳಕ್ಕೆ ಬರಬೇಕಿದ್ದ ಹಣವನ್ನು ಕೇಂದ್ರ ಸರ್ಕಾರವು ತಡೆಹಿಡಿದಿರುವುದು ಗ್ರಾಮೀಣ ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಆಡಳಿತಾರೂಢ ಪಕ್ಷವು ಈ ಹಣ ತಡೆಹಿಡಿಯುವ ಕೆಲಸವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಉದ್ದೇಶಪೂರ್ವಕ ರಾಜಕೀಯ ತಂತ್ರ ಎಂದು ಪರಿಗಣಿಸಿದೆ. ಬಂಗಾಳದ ಜನರಿಗೆ ತೊಂದರೆಯಾದರೂ ಪರವಾಗಿಲ್ಲ ಎಂಬ ಧೋರಣೆ ಇದಾಗಿದೆ ಎಂದು ಅದು ಆರೋಪಿಸಿದೆ. "ಪಶ್ಚಿಮ ಬಂಗಾಳದ ವಿರುದ್ಧದ ಈ ಮಲತಾಯಿ ಧೋರಣೆ ಜನರಿಗೆ ನೋವುಂಟು ಮಾಡಿದೆ. ಹಣವಿಲ್ಲದೆ ನಾವು ಅಭಿವೃದ್ಧಿಯನ್ನು ಹೇಗೆ ಖಚಿತಪಡಿಸಿಕೊಳ್ಳಲು ಸಾಧ್ಯ?" ಎಂದು ಮಂಗಲ್ ಸೊರೆನ್ ಪ್ರಶ್ನಿಸಿದರು.
ಅಭಿವೃದ್ಧಿ ಕೊರತೆಯ ಆರೋಪ
ಇನ್ನೊಂದೆಡೆ, ವಿರೋಧ ಪಕ್ಷಗಳು ನಿರುದ್ಯೋಗ ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನೇ ಅಸ್ತ್ರವಾಗಿಸ ಮಾಡಿಕೊಂಡು ಆಡಳಿತಾರೂಢ ಪಕ್ಷದ ಮೇಲೆ ಮುಗಿಬಿದ್ದಿವೆ. ಜಂಗಲ್ ಮಹಲ್ ಪ್ರದೇಶದಲ್ಲಿ ಶಾಂತಿಯನ್ನು ಸುಸ್ಥಿರ ಅಭಿವೃದ್ಧಿಯನ್ನಾಗಿ ಪರಿವರ್ತಿಸಲು ಸರ್ಕಾರ ವಿಫಲವಾಗಿದೆ ಎಂದು ಅವು ಆರೋಪಿಸುತ್ತಿವೆ.
"ಜನರಿಗೆ ಏನೂ ಸಿಕ್ಕಿಲ್ಲ. ಉದ್ಯೋಗ ಎಲ್ಲಿದೆ? ಸಾಲ್ಬೋನಿಯಲ್ಲಿ (ಪಶ್ಚಿಮ ಮಿಡ್ನಾಪುರ ಜಿಲ್ಲೆ) ಕೈಗಾರಿಕೆಗಳ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದವು, ಆದರೆ ಅವು ನೆಲಮಟ್ಟದಲ್ಲಿ ಎಲ್ಲಿವೆ? ಇಂದು ಎಂ.ಎ, ಬಿ.ಎ, ಎಂ.ಕಾಂ, ಬಿ.ಟೆಕ್ ಮತ್ತು ಡಾಕ್ಟರೇಟ್ ಪದವಿಗಳನ್ನು ಪಡೆದ ಸುಶಿಕ್ಷಿತ ನಿರುದ್ಯೋಗಿ ಯುವಕರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ," ಎಂದು ಮಿಡ್ನಾಪುರದ ಬಿಜೆಪಿ ಅಭ್ಯರ್ಥಿ ಶಂಕರ್ ಕುಮಾರ್ ಗುಚ್ಛೈತ್ ಆರೋಪಿಸುತ್ತಾರೆ.
"ಈ ಯುವಕರು ಉತ್ತರ ಪ್ರದೇಶ, ಗುಜರಾತ್ ಮತ್ತು ಮುಂಬೈಗೆ ಹೋಗುತ್ತಿದ್ದಾರೆ. ಇಲ್ಲಿ ಕೆಲಸ ಎಲ್ಲಿದೆ? ಸಾಲ್ಬೋನಿಯಲ್ಲಾಗಲಿ ಅಥವಾ ಗರ್ಬೆಟಾದಲ್ಲಾಗಲಿ (ಪಶ್ಚಿಮ ಮಿಡ್ನಾಪುರ ಜಿಲ್ಲೆ) ಯಾವುದೇ ಕೈಗಾರಿಕೆಗಳು ಬಂದಿಲ್ಲ. ಜಂಗಲ್‌ಮಹಲ್‌ನಲ್ಲಿ ನೈಜವಾದ ಕೆಲಸ ಯಾವುದೂ ನಡೆದಿಲ್ಲ. ಮುಖ್ಯಮಂತ್ರಿಯವರು ಯಾವುದಾದರೂ ಒಂದು ಕೈಗಾರಿಕಾ ಕಾರ್ಖಾನೆಯನ್ನು ಉದ್ಘಾಟಿಸಿದ ಒಂದು ಉದಾಹರಣೆಯನ್ನಾದರೂ ನನಗೆ ತೋರಿಸಿ," ಎಂದು ಅವರು ಸವಾಲು ಹಾಕಿದರು.
ಟಿಎಂಸಿ ಸರ್ಕಾರ ಮಾಡಿದ್ದೇನು?
ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳು ತಳಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದಲ್ಲ. ಆದರೆ, ಅವು ಜನರ ಅಗತ್ಯಗಳಿಗೆ ಪೂರ್ಣ ಪ್ರಮಾಣದಲ್ಲಿ ಸಾಕಾಗುತ್ತಿಲ್ಲ ಎಂಬುದು ದಿಟ.
ಮಹಿಳೆಯರಿಗಾಗಿ ಜಾರಿಗೆ ತಂದ 'ಲಕ್ಷ್ಮೀ ಭಂಡಾರ್' ನಗದು ವರ್ಗಾವಣೆ ಯೋಜನೆ, ವೃದ್ಧಾಪ್ಯ ವೇತನ ಮತ್ತು ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ 'ಸಬೂಜ್ ಸತಿ'ಯಂತಹ ಯೋಜನೆಗಳ ಪ್ರಯೋಜನವನ್ನು ಫಲಾನುಭವಿಗಳು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ.
"ನನಗೆ ಯಾವುದಾದರೂ ಸೌಲಭ್ಯ ಸಿಕ್ಕಿದ್ದರೆ, ನಾನು ಅದನ್ನು ಇಲ್ಲ ಎನ್ನುವುದಿಲ್ಲ. ನನಗೆ ಲಕ್ಷ್ಮೀ ಭಂಡಾರ್ ಹಣ ಸಿಗುತ್ತಿದೆ ಮತ್ತು ಮನೆ ಕಟ್ಟಲು ಹಣ ಸಿಕ್ಕಿದೆ. ಆದರೆ ಮನೆ ಪೂರ್ಣಗೊಳಿಸಲು ಆ ಹಣ ಸಾಕಾಗಲಿಲ್ಲ," ಎಂದು ತಮ್ಮ ಗ್ರಾಮದ ನೀರಿನ ಸಮಸ್ಯೆಯ ಬಗ್ಗೆಯೂ ಮಾತನಾಡಿದ್ದ ನಯನ್ ಮನ್ನಾ ಹೇಳಿದರು. ಇದು ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.
"ಕೇವಲ ಕಲ್ಯಾಣ ಯೋಜನೆಗಳು ಈಗಿನ ಜನರನ್ನು ತೃಪ್ತಿಪಡಿಸುತ್ತಿಲ್ಲ. ಸಂಪರ್ಕ ಕ್ರಾಂತಿ ಮತ್ತು ಆಧುನಿಕ ಜಗತ್ತಿನ ಅರಿವು ಹೆಚ್ಚಾದಂತೆ ಅವರ ಆಕಾಂಕ್ಷೆಗಳೂ ಬೆಳೆದಿವೆ. ಜನರಿಗೆ ಈಗ ಕೇವಲ ಯೋಜನೆಗಳಲ್ಲ, ಸ್ಥಿರವಾದ ಆದಾಯ ಬೇಕು," ಎಂದು ಬುಡಕಟ್ಟು ಹಕ್ಕುಗಳ ಸಂಘಟನೆಯಾದ 'ಆದಿವಾಸಿ ಸೆಂಗಲ್ ಅಭಿಯಾನ'ದ ಬುದ್ಧೇಶ್ವರ್ ಮುರ್ಮು ಅಭಿಪ್ರಾಯಪಟ್ಟರು.
2026ರ ವಿಧಾನಸಭಾ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಮಿಡ್ನಾಪುರ ವಿಧಾನಸಭಾ ಕ್ಷೇತ್ರದ ಎಸ್ಯುಸಿಐ (ಕಮ್ಯುನಿಸ್ಟ್) ಅಭ್ಯರ್ಥಿ ಸುಶ್ರಿತಾ ಸೊರೆನ್ ಅವರ ಚುನಾವಣಾ ಪ್ರಚಾರ. ಫೋಟೋ: ಅಭಿಷೇಕ್ ಶರ್ಮಾ
ಭ್ರಷ್ಟಾಚಾರದ ಆರೋಪಗಳು
ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಮತ್ತೊಂದು ನಿರಂತರ ದೂರು ಕೇಳಿಬರುತ್ತಿದೆ. ಫಲಾನುಭವಿಗಳ ಆಯ್ಕೆಯಲ್ಲಿನ ಪಕ್ಷಪಾತದಿಂದ ಹಿಡಿದು, ಮಧ್ಯವರ್ತಿಗಳು ಕೇಳುವ ಕಮಿಷನ್ವರೆಗೆ ಅನೇಕ ಆರೋಪಗಳು ಕೇಳಿಬರುತ್ತಿವೆ.
ವಸತಿ ಯೋಜನೆಯು ಇಲ್ಲಿ ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. 'ಬಾಂಗ್ಲಾ ಆವಾಸ್ ಯೋಜನೆ'ಯಡಿ ಫಲಾನುಭವಿಗಳಿಗೆ ಮನೆ ಕಟ್ಟಲು ಆರ್ಥಿಕ ನೆರವು ನೀಡಲಾಗುತ್ತದೆ. ಆದರೆ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಾದ ಕಾರಣ ಮಂಜೂರಾದ 1.20 ಲಕ್ಷ ರೂಪಾಯಿಗಳು ಸಾಕಾಗುತ್ತಿಲ್ಲ ಎಂಬುದು ಗ್ರಾಮಸ್ಥರ ದೂರು.
"ಈ ಹಣದಲ್ಲಿ ಸುಸಜ್ಜಿತವಾದ ಮನೆಯನ್ನು ಕಟ್ಟಲು ಸಾಧ್ಯವಿಲ್ಲ. ನಾವು ಸಾಲ ಮಾಡಬೇಕು ಇಲ್ಲವೇ ಮನೆಯನ್ನು ಅರ್ಧಕ್ಕೇ ಬಿಡಬೇಕು," ಎಂದು ಝಾರ್ಗ್ರಾಮ್ ಜಿಲ್ಲೆಯ ಆಮ್ಲಸೋಲ್ ಗ್ರಾಮದ ನಿವಾಸಿ ಲೂಲೂ ಮಂಡಿ ಅಳಲು ತೋಡಿಕೊಂಡರು.
ಅರ್ಹ ಕುಟುಂಬಗಳನ್ನೇ ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿದ್ದು, ಇದು ಸ್ಥಳೀಯ ಮಟ್ಟದಲ್ಲಿ ಅಸಮಾಧಾನದ ಬೆಂಕಿಗೆ ತುಪ್ಪ ಸುರಿಯುತ್ತಿದೆ.
ಆಡಳಿತಾರೂಢ ಪಕ್ಷದ ಒಳಗಿನವರೇ ವೈಯಕ್ತಿಕವಾಗಿ ಈ ಸಮಸ್ಯೆಯನ್ನು ಒಪ್ಪಿಕೊಳ್ಳುತ್ತಾರೆ. "ಹಣ ಮಂಜೂರಾಗುತ್ತದೆ, ಆದರೆ ಎಲ್ಲವೂ ಕೆಳಮಟ್ಟಕ್ಕೆ ತಲುಪುವುದಿಲ್ಲ, ಅಲ್ಲಿ ಸೋರಿಕೆಗಳಿವೆ ಎಂಬುದು ನಿಜ." ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ಟಿಎಂಸಿ ನಾಯಕರೊಬ್ಬರು ಒಪ್ಪಿಕೊಂಡರು.
2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಈ ಪ್ರದೇಶದ 40 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಜಂಗಲ್‌ಮಹಲ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಆದರೆ ಐದು ವರ್ಷಗಳ ನಂತರ, ಈಗ ಅನಿಶ್ಚಿತ ಚುನಾವಣಾ ವಾತಾವರಣ ನೆಲೆಸಿದೆ ಎಂದು ಪಕ್ಷದ ಆಪ್ತರು ಒಪ್ಪಿಕೊಳ್ಳುತ್ತಿದ್ದಾರೆ.
"ನಮ್ಮ ವಿರುದ್ಧ ಯಾವುದೇ ಅಲೆ ಇಲ್ಲ," ಎಂದು ಹೇಳುವ ಮತ್ತೊಬ್ಬ ಟಿಎಂಸಿ ಪದಾಧಿಕಾರಿ, "ಆದರೆ ಆಡಳಿತ ವಿರೋಧಿ ಅಲೆ ಖಂಡಿತವಾಗಿಯೂ ಸ್ವಲ್ಪ ಮಟ್ಟಿಗೆ ಇದೆ." ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ.
ಅಸ್ಮಿತೆಯ ರಾಜಕೀಯದ ಸವಾಲು
ಈ ಪ್ರದೇಶದ ಜನಸಂಖ್ಯಾ ವೈವಿಧ್ಯತೆಯು ರಾಜಕೀಯ ಸ್ಪರ್ಧೆಗೆ ಮತ್ತೊಂದು ಆಯಾಮವನ್ನು ನೀಡಿದೆ. ದೊಡ್ಡ ಪ್ರಮಾಣದ ಬುಡಕಟ್ಟು ಮತ್ತು ಕುರ್ಮಿ ಸಮುದಾಯದ ಜನಸಂಖ್ಯೆಯನ್ನು ಹೊಂದಿರುವ ಇಲ್ಲಿ, ಅಸ್ಮಿತೆಯ ರಾಜಕೀಯ ಇಂದಿಗೂ ಪ್ರಮುಖ ಪಾತ್ರ ವಹಿಸುತ್ತಿದೆ.
ಪ್ರಭಾವಿ ಕುರ್ಮಿ ಸಂಘಟನೆಯೊಂದು ಆಡಳಿತಾರೂಢ ಪಕ್ಷದ ವಿರುದ್ಧ "ವೋಟ್ ಹಾಕದಿರಿ" ಎಂಬ ಅಭಿಯಾನಕ್ಕೆ ಕರೆ ನೀಡಿದೆ. ಇದು ಸಮುದಾಯದ ಕೆಲವು ವರ್ಗಗಳಲ್ಲಿ ಮಡುಗಟ್ಟಿರುವ ಅಸಮಾಧಾನಕ್ಕೆ ಕನ್ನಡಿ ಹಿಡಿಯುತ್ತದೆ.
ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಈ ಅಸಮಾಧಾನಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದರ ಪ್ರಚಾರವು ನಿರುದ್ಯೋಗ, ಭ್ರಷ್ಟಾಚಾರದ ಆರೋಪಗಳು, ಭೂಮಿಯ ಹಕ್ಕಿನ ಸಮಸ್ಯೆಗಳು ಮತ್ತು ಬುಡಕಟ್ಟು ಅಸ್ಮಿತೆಗೆ ಸಂಬಂಧಿಸಿದ ಬೇಡಿಕೆಗಳ ಮೇಲೆ ಕೇಂದ್ರೀಕೃತವಾಗಿದೆ.
ನಂಬಿಕೆ ಗಳಿಕೆ ಸುಲಭವಲ್ಲ
ಆದಾಗ್ಯೂ, ಬಿಜೆಪಿ ಕೂಡ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ. ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪ ಮತ್ತು ಅರಣ್ಯ ಭೂಮಿ ನಿಯಮಾವಳಿಗಳಂತಹ ನೀತಿಗಳ ಬಗ್ಗೆ ಬುಡಕಟ್ಟು ಮತದಾರರಲ್ಲಿ ಆತಂಕವಿದ್ದು, ಅವರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
"ಅಲ್ಲಿ ಒಂದು ರೀತಿಯ ಹಿಂಜರಿಕೆ ಇದೆ. ಬಿಜೆಪಿ ಕೆಲವು ಪ್ರದೇಶಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸುತ್ತಿದೆ, ಆದರೆ ಬುಡಕಟ್ಟು ಸಮುದಾಯಗಳಲ್ಲಿ ನಂಬಿಕೆ ಗಳಿಸುವುದು ಅಷ್ಟು ಸುಲಭವಲ್ಲ." ಎಂದು ಹೇಳುತ್ತಾರೆ ಬುದ್ಧೇಶ್ವರ್.
ಅದೇ ಸಮಯದಲ್ಲಿ, ಸ್ಥಳೀಯ ಧಾರ್ಮಿಕ ಅಸ್ಮಿತೆಯ ಸುತ್ತ ನಡೆಯುತ್ತಿರುವ ಜನಮತ ಸಂಗ್ರಹಣೆ—ವಿಶೇಷವಾಗಿ 'ಸರನಾ' ಅಥವಾ ಸಾಂಪ್ರದಾಯಿಕ ಬುಡಕಟ್ಟು ನಂಬಿಕೆಗಳನ್ನು ಎತ್ತಿ ಹಿಡಿಯುವ 'ಆದಿವಾಸಿ ಸೆಂಗಲ್ ಅಭಿಯಾನ'ದ ಪ್ರಚಾರಗಳು—ಹೊಸ ಆಯಾಮವನ್ನು ಸೃಷ್ಟಿಸಿವೆ. ಇದು ಬಿಜೆಪಿಯ ಹಿಂದುತ್ವ ಕೇಂದ್ರಿತ ಪ್ರಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.
ವಿಮರ್ಶೆಗಳ ನಡುವೆಯೂ, ಜಂಗಲ್ ಮಹಲ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳುವುದು ಸರಿಯಲ್ಲ.
ಕಳೆದೊಂದು ದಶಕದಲ್ಲಿ ಮೂಲಸೌಕರ್ಯವು ಗಮನಾರ್ಹವಾಗಿ ಸುಧಾರಿಸಿದೆ. ರಸ್ತೆಗಳು, ಸೇತುವೆಗಳು, ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳು ವಿಸ್ತರಣೆಯಾಗಿವೆ. ಪ್ರವಾಸೋದ್ಯಮವು ಚಿಗುರೊಡೆಯಲು ಪ್ರಾರಂಭಿಸಿದೆ; ಝಾರ್ಗ್ರಾಮ್ ಜಿಲ್ಲೆಯ ಬೆಲ್ಪಹಾರಿಯಲ್ಲೇ ಸುಮಾರು 70 ಹೋಂಸ್ಟೇಗಳಿದ್ದು, ಹೊಸದಾದ ಆದರೆ ಸೀಮಿತ ಅವಕಾಶಗಳನ್ನು ಸೃಷ್ಟಿಸಿವೆ.
ಆದರೆ ಬದಲಾವಣೆಯ ವೇಗವು ಜನರ ಹೆಚ್ಚುತ್ತಿರುವ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲ. "ಹಿಂದೆ ಜನರಿಗೆ ಶಾಂತಿ ಬೇಕಿತ್ತು. ಈಗ ಅವರಿಗೆ ಸಮೃದ್ಧಿ ಬೇಕಿದೆ." ಎನ್ನುತ್ತಾರೆ ದೇಬೇನ್.
ಚುನಾವಣೆ ಹತ್ತಿರವಾಗುತ್ತಿರುವಂತೆ, ಜಂಗಲ್ಮಹಲ್ನಲ್ಲಿರುವ ಪ್ರಮುಖ ಪ್ರಶ್ನೆ ಈಗ ಭದ್ರತೆಯ ಬಗ್ಗೆಯಲ್ಲ, ಬದಲಿಗೆ ಅಭಿವೃದ್ಧಿಯ ಸಮರ್ಪಕ ವಿತರಣೆ ಆಗಬೇಕು ಎಂಬುದು.

