
ಸಿದ್ದರಾಮಯ್ಯ ನಾಯಕತ್ವಕ್ಕೆ ‘ಸ್ವಪಕ್ಷೀಯ’ ಸವಾಲು: ಮುಳುವಾಗುತ್ತಿದೆಯೇ? ಅಹಿಂದ ಅಸ್ತ್ರ
ವಿವಿಧ ಆರೋಪದಡಿ ಶಿಸ್ತುಕ್ರಮಕ್ಕೊಳಗಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್ತರಾಗಿದ್ದಾರೆ. ನಾಗೇಂದ್ರ, ಕೆ.ಎನ್. ರಾಜಣ್ಣ, ಗೋವಿಂದರಾಜು, ನಸೀರ್ ಅಹಮದ್, ಅಬ್ದುಲ್ ಜಬ್ಬಾರ್ ಮೇಲೆ ಶಿಸ್ತು ಕ್ರಮವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆ ಮತ್ತು ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯದ ಹಿಂದೆ ಅಹಿಂದ ವರ್ಗದ ಒಗ್ಗಟ್ಟಿನ ಬೆಂಬಲ ಇದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಈ ಭದ್ರಕೋಟೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿವೆ. ಇದು ಸರ್ಕಾರದ ಸ್ಥಿರತೆ ಮತ್ತು ಪಕ್ಷದ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.
ಉಪಚುನಾವಣೆಯ ನಂತರ ರಾಜ್ಯದಲ್ಲಿ ನಡೆದ ಬೆಳವಣಿಗೆಗಳು ಈ ಆತಂಕವನ್ನು ಇಮ್ಮಡಿಗೊಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಅಲ್ಪಸಂಖ್ಯಾತ ಘಟಕದ ನಾಯಕರಾದ ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಅವರ ಮೇಲೆ ಕ್ರಮ ಕೈಗೊಂಡಿರುವುದು ಅಲ್ಪಸಂಖ್ಯಾತ ಸಮುದಾಯದಲ್ಲಿ "ನಮ್ಮನ್ನೇ ಗುರಿ ಮಾಡಲಾಗುತ್ತಿದೆಯೇ?" ಎಂಬ ಭಾವನೆ ಮೂಡಲು ಕಾರಣವಾಗಿದೆ. ಅಲ್ಲದೇ, ಎಸ್‌ಟಿ ಸಮುದಾಯದ ಮಾಜಿ ಸಚಿವರಾದ ಬಿ.ನಾಗೇಂದ್ರ ಮತ್ತು ಕೆ.ಎನ್.ರಾಜಣ್ಣ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ಸಹ ಕಾಂಗ್ರೆಸ್‌ನೊಳಗೆ ಅಸಮಾಧಾನ ಮೂಡಿಸಿದೆ. ಇದು ಕಾಂಗ್ರೆಸ್ ಅಭದ್ರತೆಕ್ಕೆ ಕಾರಣವಾಗಿದೆ.
ಅಹಿಂದ ವರ್ಗದ ನಾಯಕರಲ್ಲಿ ಮೂಡಿರುವ ಅಭದ್ರತೆ
ಕಾಂಗ್ರೆಸ್‌ನಲ್ಲಿರುವ ಅಹಿಂದ ವರ್ಗದ ನಾಯಕರು ಈಗ ತಮ್ಮನ್ನು ಗುರಿಯನ್ನಾಗಿ ಮಾಡಲಾಗಿದೆ ಎಂಬ ಭಾವಿಸುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರೇ ಹೆಚ್ಚಾಗಿ ಶಿಸ್ತುಕ್ರಮಕ್ಕೊಳಗಾಗಿದ್ದಾರೆ. ಕೆ.ಎನ್. ರಾಜಣ್ಣ, ಬಿ. ನಾಗೇಂದ್ರ ವಿರುದ್ಧದ ಕ್ರಮಗಳು ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ನಾಯಕರಲ್ಲಿ ಅಸಮಾಧಾನ ಮೂಡಿಸಿವೆ. ಅಲ್ಪಸಂಖ್ಯಾತ ನಾಯಕರಾದ ನಸೀರ್ ಅಹಮದ್, ಅಬ್ದುಲ್ ಜಬ್ಬಾರ್ ಮೇಲಿನ ಶಿಸ್ತು ಕ್ರಮವು, ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವನ್ನು ಕುಗ್ಗಿಸುವ ತಂತ್ರ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಅವರಂತಹ ಪ್ರಭಾವಿ ನಾಯಕರು ಹೈಕಮಾಂಡ್ ಅಥವಾ ಪಕ್ಷದ ರಾಜ್ಯ ನಾಯಕತ್ವದ ಜೊತೆ ನಡೆಸುತ್ತಿರುವ ಮಾತುಕತೆಗಳು, ಈ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನವಾಗಿ ಕಂಡರೂ, ಆಂತರಿಕವಾಗಿ ಬೇಗುದಿ ಹೆಚ್ಚಾಗುತ್ತಲೇ ಇದೆ.
ವಿವಿಧ ಆರೋಪಗಳಡಿ ಶಿಕ್ಷೆಗೊಳಗಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪ್ತರಾಗಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ, ಪಕ್ಷ ವಿರೋಧ ಹೇಳಿಕೆಯಿಂದ ಕೆ.ಎನ್. ರಾಜಣ್ಣ, ಐಪಿಎಲ್ ಗಲಾಟೆ ಬಳಿಕ ಗೋವಿಂದರಾಜು, ದಾವಣಗೆರೆ ಉಪ ಚುನಾವಣೆಯಲ್ಲಿ ನಸೀರ್ ಅಹಮ್ಮದ್, ಅಬ್ದುಲ್ ಜಬ್ಬಾರ್ ವಿರುದ್ಧ ಕ್ರಮ ಆಗಿದೆ. ಶಿಕ್ಷೆಗೊಳಗಾದವರೆಲ್ಲಾ ಅಹಿಂದ ಸಮುದಾಯವನ್ನು ಪ್ರತಿನಿಧಿಸುವವರಾಗಿದ್ದಾರೆ. ಸಚಿವರಾಗಿದ್ದ ರಾಜಣ್ಣ ಮತ್ತು ನಾಗೇಂದ್ರ ಅವರನ್ನು ಸಂಪುಟದಿಂದ ಹೊರ ಹಾಕಿದ್ದರಿಂದ ಎಸ್ಟಿ ಸಮುದಾಯವನ್ನು ಪಕ್ಷ ದೂರ ಇರಿಸಿದೆ ಎನ್ನುವ ದೂರು ಆ ಸಮುದಾಯದ ನಾಯಕರಿಂದ ಕೇಳಿ ಬಂದಿದೆ. ಅದೇರೀತಿ ದಾವಣಗೆರೆ ಉಪಚುನಾವಣೆಗೂ ಮುನ್ನ ನಸೀರ್ ಮತ್ತು ಜಬ್ಬರ್ ವಿರುದ್ಧ ಕ್ರಮದಿಂದ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಅಲಕ್ಷಿಸಿದೆ ಎನ್ನುವ ಆಕ್ರೋಶದ ಮಾತುಗಳು ಚರ್ಚೆಯಾಗುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ರಾಜ್ಯಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರು ಮತ್ತು ದಲಿತರ ವಿರುದ್ದ ಸದ್ಯಕ್ಕೆ ಯಾವುದೇ ಕ್ರಮ ಬೇಡ ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಯಾಕೆಂದರೆ, ಈಗಾಗಲೇ ರಾಜ್ಯ ಸರ್ಕಾರದೊಳಗೆ ಹೊತ್ತಿ ಉರಿಯುತ್ತಿರುವ ಒಳ ಮೀಸಲು ಸಮಸ್ಯೆ ದಿನದಿನಕ್ಕೂ ಬಿಗಡಾಯಿಸುತ್ತಿದೆ.
ಸಚಿವ ಜಮೀರ್ ಅಹ್ಮದ್ ವಿರುದ್ಧ ಸದ್ಯಕ್ಕೆ ಕ್ರಮ ಇಲ್ಲ?
ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮಕೈಗೊಳ್ಳದಿರಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ, ಸಂಪುಟ ಪುನಾರಚನೆ ವೇಳೆ ಜಮೀರ್ ಅಹ್ಮದ್‌ಗೆ ರಕ್ಷಣೆ ಸಿಗಲಿದೆಯೇ ಎಂಬುದನ್ನು ಹೇಳಲು ಕಷ್ಟಕರ. ಚುನಾವಣೆ ಫಲಿತಾಂಶದವರೆಗೂ ಯಾವುದೇ ಮಹತ್ವದ ಬದಲಾವಣೆ ನಡೆಯುವ ಸಾಧ್ಯತೆಗಳಿಲ್ಲ. ಜಮೀರ್ ಅಹಮದ್ ಅವರನ್ನು ಕೈಬಿಡಬೇಕೆಂಬ ಒತ್ತಡ ಪಕ್ಷದಲ್ಲಿಯೇ ಒಂದು ಕಡೆಯಿದ್ದರೆ, ಮತ್ತೊಂದೆಡೆ ಅವರು ಅಲ್ಪಸಂಖ್ಯಾತ ಮತಬ್ಯಾಂಕ್‌ನ ಪ್ರಮುಖ ಕೊಂಡಿಯಾಗಿರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಸಿದ್ದರಾಮಯ್ಯ ತಮ್ಮ ಆಪ್ತರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆಯೇ ಅಥವಾ ಅಸಹಾಯಕರಾಗಿದ್ದಾರೆಯೇ? ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಸಿದ್ದರಾಮಯ್ಯನವರ ನಾಯಕತ್ವಕ್ಕೆ ಎದುರಾಗಿರುವ ಸವಾಲು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವಾಗಲೂ ಅಹಿಂದ ನಾಯಕನೆಂದೇ ಗುರುತಿಸಿಕೊಂಡವರು. ಆದರೆ ಈಗ ಅವರದ್ದೇ ಸರ್ಕಾರದ ಅವಧಿಯಲ್ಲಿ ಅಹಿಂದ ನಾಯಕರು ಒಬ್ಬೊಬ್ಬರಾಗಿ ಸಂಕಷ್ಟಕ್ಕೆ ಸಿಲುಕುತ್ತಿರುವುದು ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದೆ. ಸಿದ್ದರಾಮಯ್ಯ ಅವರು ತಮ್ಮ ಆಪ್ತ ನಾಯಕರನ್ನು ಸುಲಭವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಅವರನ್ನು ಬಿಟ್ಟುಕೊಡಲೂ ಸಾಧ್ಯವಾಗುತ್ತಿಲ್ಲ. ಈ ದ್ವಂದ್ವವು ಪಕ್ಷದ ಒಳಗೆ ಅವರ ವರ್ಚಸ್ಸು ದುರ್ಬಲಗೊಳಿಸುತ್ತಿದೆ. ಉಪಚುನಾವಣೆಯ ಫಲಿತಾಂಶದವರೆಗೆ ಯಾವುದೇ ದೊಡ್ಡ ಬದಲಾವಣೆ ಮಾಡದಿರಲು ಪಕ್ಷ ನಿರ್ಧರಿಸಿದೆ. ಆದರೆ ಇದು ಕೇವಲ ಸಮಯ ಕಳೆಯುವ ತಂತ್ರವೇ ಹೊರತು ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ. ಜಮೀರ್ ಅಹಮದ್ ಅಥವಾ ರಾಜಣ್ಣ ಅವರಂತಹ ನಾಯಕರ ವಿರುದ್ಧ ಕ್ರಮ ಕೈಗೊಂಡರೆ ಅದು ಅಹಿಂದ ವೋಟ್ ಬ್ಯಾಂಕ್ ಮೇಲೆ ಬೀರುವ ಪರಿಣಾಮವನ್ನು ಅಂದಾಜಿಸಿಯೇ ಈ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎನ್ನಲಾಗಿದೆ.
ದಲಿತ - ಹಿಂದುಳಿದ ವರ್ಗಗಳ ಒಳಮೀಸಲಾತಿ ಕಿಚ್ಚು
ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ಸ್ಪಷ್ಟ ನಿಲುವು ಪ್ರಕಟವಾಗದಿರುವುದು ದಲಿತ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಹೊತ್ತಿ ಉರಿಯುತ್ತಿರುವ ಒಳ ಮೀಸಲಾತಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಇದು ದಲಿತ ಮತಗಳು ಕಾಂಗ್ರೆಸ್‌ನಿಂದ ದೂರವಾಗುವ ಆತಂಕವನ್ನು ಸೃಷ್ಟಿಸಿದೆ.
ಕಾಂಗ್ರೆಸ್ ಪಕ್ಷವು ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸುವ ಗುರಿ ಹೊಂದಿದೆ. ಆದರೆ ಅಹಿಂದ ವರ್ಗದ ಈ ಅಸಮಾಧಾನವು ಸರ್ಕಾರಕ್ಕೆ ಮುಳುವಾಗುವ ಸಾಧ್ಯತೆಯಿದೆ. ಅಹಿಂದ ಸಮುದಾಯದ ಗುರಿಯಾಗಿಸುವ ಆತಂಕದ ಮಾತುಗಳು ಶುರುವಾಗಿವೆ. ಇದು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಸರ್ಕಾರದ ದೈನಂದಿನ ಆಡಳಿತದ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ.
ವಿಶ್ವಾಸ ಮೂಡಿಸಬೇಕಿದೆ
ಅಹಿಂದ ನಾಯಕರಿಗೆ ತಾವು ಸುರಕ್ಷಿತವಾಗಿದ್ದೇವೆ ಎಂಬ ವಿಶ್ವಾಸವನ್ನು ನಾಯಕತ್ವ ನೀಡಬೇಕಿದೆ. ಹಗರಣಗಳ ತನಿಖೆ ನಿಷ್ಪಕ್ಷಪಾತವಾಗಿರಬೇಕು ಮತ್ತು ಅದು ಕೇವಲ ಒಂದು ವರ್ಗದ ನಾಯಕರನ್ನು ಗುರಿಯಾಗಿಸಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಹೊಂದಾಣಿಕೆಯು ಅಹಿಂದ ವರ್ಗದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ನಿರ್ಣಾಯಕವಾಗಲಿದೆ. ಒಟ್ಟಾರೆಯಾಗಿ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಪಕ್ಷದೊಳಗಿನ ಬೆಳವಣಿಗೆಗಳು ಬಿಂಬಿಸುತ್ತಿವೆ. ಅಹಿಂದ ವರ್ಗದ ಅಸಮಾಧಾನವನ್ನು ಶಮನಗೊಳಿಸದಿದ್ದರೆ, ಅದು ಪಕ್ಷದ ಒಳಗೆ ದೊಡ್ಡ ಮಟ್ಟದ ಬಂಡಾಯಕ್ಕೆ ದಾರಿಯಾಗಬಹುದು ಮತ್ತು ವಿರೋಧ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಬಹುದು ಎನ್ನಲಾಗಿದೆ.

