
Caste Census|ಜಾತಿ ಗಣತಿ ಮಾರ್ಚ್‌ಗೆ ಸಿದ್ಧ, ಆದರೆ ಮೀಸಲು ಪ್ರಮಾಣ ಹೊಂದಿಸಲು ಸರ್ಕಸ್
ಮೀಸಲಾತಿ ಹೆಚ್ಚಳಕ್ಕೆ (ಶೇ 56) ಹೈಕೋರ್ಟ್ ತಡೆ ನೀಡಿರುವುದರಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಅಥವಾ ಜಾತಿಗಣತಿ ವರದಿಗೆ ಗ್ರಹಣ ಹಿಡಿದಂತಾಗಿದೆ.
ಕರ್ನಾಟಕದಲ್ಲಿ ಮೀಸಲಾತಿ ಕಗ್ಗಂಟು ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೂ ತೊಡಕಾಗಿ ಪರಿಣಮಿಸಿದೆ.
ಮೀಸಲಾತಿ ಹೆಚ್ಚಳಕ್ಕೆ (ಶೇ 56) ಹೈಕೋರ್ಟ್ ತಡೆ ನೀಡಿರುವುದರಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಅಥವಾ ಜಾತಿಗಣತಿ ವರದಿಗೆ ಗ್ರಹಣ ಹಿಡಿದಂತಾಗಿದೆ.
ಶೈಕ್ಷಣಿಕ ಹಾಗೂ ಉದ್ಯೋಗ ವಲಯದಲ್ಲಿ ಹಿಂದುಳಿದವರು ಹಾಗೂ ಪರಿಶಿಷ್ಟರಿಗೆ ನೀಡುವ ಮೀಸಲಾತಿ ಪ್ರಮಾಣ ಶೇ ೫೦ ಮಿತಿ ದಾಟಬಾರದೆಂದು ಇಂದ್ರ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಜಾತಿಗಣತಿಯ ವರದಿಯ ಮೇಲೂ ಪರಿಣಾಮ ಬೀರಿದೆ. ಹಾಗಾಗಿಯೇ, ವರದಿಯು ಕಾನೂನು ಬಿಕ್ಕಟ್ಟು ಎದುರಿಸುವಂತಾಗಿದೆ.
ಜಾತಿಗಣತಿಯಲ್ಲಿ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಲಾಗಿದೆ. ಆದರೆ, ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಳಕ್ಕೆ ತಡೆ ಇರುವುದರಿಂದ ಹಳೆಯ ಮೀಸಲಾತಿಯನ್ನೇ ಮುಂದುವರಿಸುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ, ಜಾತಿಗಣತಿ ವರದಿಯನ್ನು ಹೊಸ ಮೀಸಲಾತಿಗೆ ( ಮೀಸಲಾತಿ ಹೆಚ್ಚಳ) ಹೊಂದಿಸಬೇಕೋ, ಹಳೆಯ ಮೀಸಲಾತಿಗೆ ಹೊಂದಿಸಬೇಕೋ ಎಂಬ ಜಿಜ್ಞಾಸೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವಿದೆ. ನ್ಯಾಯಾಲಯದಲ್ಲಿ ಮೀಸಲಾತಿ ವಿವಾದ ಇತ್ಯರ್ಥವಾಗುವವರೆಗೂ ಜಾತಿಗಣತಿ ವರದಿ ಸಲ್ಲಿಕೆ, ಅನುಷ್ಟಾನ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ಇನ್ನು ಮೀಸಲಾತಿ ವಿಚಾರದಲ್ಲಿ ಸರ್ಕಾರಗಳು ಕೂಡ ಯಾವುದೇ ದಿಟ್ಟ, ಸಮರ್ಪಕ ನಿರ್ಧಾರ ಕೈಗೊಳ್ಳದಿರುವುದು ಕೂಡ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈಗಾಗಲೇ ಮೀಸಲಾತಿ ಬಿಕ್ಕಟ್ಟಿನಿಂದಾಗಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಶೇ 50 ರಷ್ಟು ಮೀಸಲಾತಿ ಆಧಾರದಲ್ಲೇ ನೇಮಕಾತಿ ನಡೆಸಬೇಕೆಂಬ ನ್ಯಾಯಾಲಯದ ಆದೇಶ ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಹಿನ್ನಡೆ ತಂದೊಡ್ಡಿದೆ.
ಕರ್ನಾಟಕದಲ್ಲಿ ಮೀಸಲಾತಿ ವಿವಾದ
ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ 50 ರಷ್ಟಿದ್ದ ಮೀಸಲಾತಿಯನ್ನು ಬಿಜೆಪಿ ಅವಧಿಯಲ್ಲಿ ಶೇ 56ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಇದು ಸುಪ್ರೀಂಕೋರ್ಟ್‌ನ ಶೇ 50 ರಷ್ಟು ಮೀಸಲಾತಿ ಮಿತಿ ದಾಟಿದೆ ಎಂಬುದು ಸದ್ಯಕ್ಕೆ ವಿವಾದಕ್ಕೆ ಕಾರಣವಾಗಿರುವ ಅಂಶ.
ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ, ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3ರಿಂದ ಶೇ 7 ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 32 ರಷ್ಟು ಇತ್ತು. ಪರಿಶಿಷ್ಟ ಜಾತಿಗಳ ಮೀಸಲಾತಿ ಏರಿಕೆಯ ಆಧಾರದ ಮೇಲೆಯೇ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಒಳ ಮೀಸಲಾತಿ ವರದಿ ಜಾರಿ ಮಾಡಲಾಗಿತ್ತು. ಈಗ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ಎರಡಕ್ಕೂ ಹೈಕೋರ್ಟ್ ತಡೆ ನೀಡಿದೆ.
ಶಿಫಾರಸು ಕೊಡಬೇಕೆ ಎಂಬ ಬಗ್ಗೆ ನಡೆದಿದೆ ಚರ್ಚೆ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿ ಅಂತಿಮ ಹಂತಕ್ಕೆ ಬಂದಿದ್ದು, ಮಾರ್ಚ್ ಮಧ್ಯವಾರದಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್. ನಾಯ್ಕ್ 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆ ನಡೆಯುತ್ತಿದ್ದು, ವರದಿಗೆ ಅಂತಿಮ ರೂಪ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಸಮೀಕ್ಷೆಯ ದತ್ತಾಂಶಗಳನ್ನು ಯಾವ ಮೀಸಲಾತಿಗೆ ಅನ್ವಯಿಸಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲಾಗುತ್ತಿದೆ. ಈ ಮುಂಚೆ ಕಾಂತರಾಜು ಸಮೀಕ್ಷೆ ನಡೆಸಿ 15 ವರ್ಷ ಮೇಲಾಗಿದೆ. ಇದೇ ರೀತಿ ಬೇರೆ ಬೇರೆ ವರದಿಗಳು ಕೂಡ ಇವೆ. ಪ್ರಸ್ತುತ, ಜನಸಂಖ್ಯೆ ಸೇರಿದಂತೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಂಶಗಳು ಏರುಪೇರಾಗಿವೆ. ಶೇ. 50 ರಷ್ಟು ಮೀಸಲಾತಿ ದಾಟಬೇಕಾ, ಬೇಡವಾ ಎಂಬುದು ಆಯೋಗದ ಮುಂದಿರುವ ಸವಾಲಾಗಿದೆ.
ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯೂ ಬಂದಿದೆ. ಸಂವಿಧಾನಕ್ಕೆ ತಿದ್ದುಪಡಿಯಾದ ನಂತರ ರಾಜ್ಯದಲ್ಲಿ ಆರ್ಥಿಕ ದುರ್ಬಲ ವರ್ಗದ ಸಂಬಂಧಿಸಿದಂತೆ ಮೀಸಲಾತಿ ಅನುಷ್ಠಾನ ಮಾಡಲು ಆಗಿಲ್ಲ. ಯಾಕೆಂದರೆ ಅದಕ್ಕೆ ಬೇಕಾದ ವೈಜ್ಞಾನಿಕ ಅಂಕಿ ಅಂಶಗಳಿಲ್ಲ.
ಸಾಮಾಜಿಕ ಹಾಗು ಶೈಕ್ಷಣಿಕ ಮತ್ತು ಹಿಂದುಳಿದ ಸಮೀಕ್ಷೆ ಬಗ್ಗೆ ಮಾತ್ರ ಸಮೀಕ್ಷೆಯ ವರದಿ ನೀಡಬೇಕಾ ಅಥವಾ ಬೇರೆ ಶಿಫಾರಸುಗಳು ಇರಬೇಕೇ? ಎಂದು ಚರ್ಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾನೂನು ಪ್ರಕಾರ ಶೇ. 50 ರಷ್ಟು ಮೀಸಲಾತಿ ದಾಟಬಾರದು ಎಂಬುದಿದೆ. ಹಿಂದುಳಿದ ವರ್ಗಗಳಿಗೆ ಶೇ. 32 ರಷ್ಟು ಮೀಸಲಾತಿ ಇದೆ. ಪರಿಶಿಷ್ಟರಿಗೆ ಶೇ 15 ರಷ್ಟಿದೆ. ಈ ಮೀಸಲಾತಿ ಆಧಾರದಲ್ಲಿ ನಾವು ಶಿಫಾರಸು ಮಾಡುವುದರಿಂದ ಆಗುವ ಅನುಕೂಲ, ಅನಾನುಕೂಲದ ಬಗ್ಗೆ ಪರಾಮರ್ಷೆ ನಡೆಯುತ್ತಿದೆ. ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಚರ್ಚೆಯ ಹಂತದಲ್ಲಿದೆ.
ಆಂಗ್ಲಭಾಷೆಯಿಂದ ಕನ್ನಡಕ್ಕೆ ಭಾಷಾಂತರ ತಡ ಆಗಲಿದೆ
ಸಮೀಕ್ಷೆಯ ವರದಿ ತಯಾರಿಕೆಯಲ್ಲಿ IIT,JNU, ನ್ಯಾಷನಲ್ ಲಾಸ್ಕೂಲ್ ಸೇರಿದಂತೆ ಬೇರೆ ರಾಜ್ಯದವರು ಸಲಹೆಗಾರರು, ತಜ್ಞರು ಹಾಗು ಪ್ರೊಫೆಸರ್ ಗಳಿದ್ದಾರೆ. ವರದಿ ಅಂತಿಮ ಆದಾಗ ಅದು ಆಂಗ್ಲ ಭಾಷೆಯಲ್ಲಿರುತ್ತದೆ. ಅದಾದ ಬಳಿಕ ತಜ್ಞರು ಮತ್ತೊಮ್ಮೆ ನೋಡಿದ ನಂತರ ಕನ್ನಡಕ್ಕೆ ಭಾಷಾಂತರ ಆಗುತ್ತದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಮಾರ್ಚ್ ಮದ್ಯಭಾಗದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯದ ಮೇಲೆ ವಿಶ್ವಾಸ ಇಡಬೇಕಾಗುತ್ತದೆ. ವರದಿ ಸರ್ಕಾರಕ್ಕೆ ಸಲ್ಲಿಕೆಗೂ ಮುನ್ನ ನ್ಯಾಯಲಯವನ್ನು ವಿಶ್ವಾಸವನ್ನು ತೆಗೆದುಕೊಳ್ಳಬೇಕು. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವವರ ವೈಯಕ್ತಿಕ ಮಾಹಿತಿ ಬಹಿರಂಗ ಆಗಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಅಂಕಿ ಅಂಶವಿಲ್ಲದೆ ವರದಿ ಸಿದ್ದಮಾಡುವಂತಿಲ್ಲ. ತಾಂತ್ರಿಕವಾಗಿ ನ್ಯಾಯಾಲಯದ ಅನುಮತಿ ತೆಗೆದುಕೊಳ್ಳಲು ಚರ್ಚಿಸಲಾಗುತ್ತಿದೆ. ಸಮೀಕ್ಷೆಯ ವರದಿಯಲ್ಲಿ ವೈಯಕ್ತಿಕ ವಿವರಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಮಧುಸೂಧನ್ ನಾಯ್ಕ್ ತಿಳಿಸಿದ್ದಾರೆ.
ಸಮೀಕ್ಷೆ ಚೆನ್ನಾಗಿ ನಡೆದಿದೆ
ಆರಂಭದಲ್ಲಿ ಕೆಲ ಗೊಂದಲವಿದ್ದರೂ ಸರಿಪಡಿಸಿಕೊಂಡು ಸಮೀಕ್ಷೆಯನ್ನು ಉತ್ತಮವಾಗಿ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಕೆಲವರು ಗೈರಾಗಿರುವುದು ವಿಷಯವೇ ಅಲ್ಲ. ಕೆಲವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳದೆ ಇದ್ದರೂ ಸಮೀಕ್ಷೆಯ ಉದ್ದೇಶದ ವರದಿಗೆ ಯಾವುದೇ ಪರಿಣಾಮ ಬೀರಲ್ಲ ಎಂದವರು ಹೇಳಿದ್ದಾರೆ.
ದತ್ತಾಂಶ ಸುರಕ್ಷಿತವಾಗಿ ಸಂಗ್ರಹವಾಗಿದೆ
ಪ್ರಶ್ನಾವಳಿ ತಯಾರು ಮಾಡಬೇಕಾದರೆ ವಿವಿಧ ವಲಯದಿಂದಲೂ ಮಾಹಿತಿ ಹಾಗು ಚರ್ಚಿಸಿ ಮಾಡಲಾಗಿತ್ತು. ಸಾಮಾಜಿಕ ಹಾಗು ಆರ್ಥಿಕ ಸೇರಿದಂತೆ ಸಮಗ್ರ ಮಾಹಿತಿಗೆ ಪ್ರಶ್ನಾವಳಿ ತಯಾರು ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.
ಆಕ್ಷೇಪಣೆ ಮಾಡುವವರಿಗೆ ಸಂದೇಶ
ವರದಿ ವೈಜ್ಞಾನಿಕವಾಗಿಲ್ಲ ಅಥವಾ ವರದಿ ಬಗ್ಗೆ ಅಪಸ್ವರ ಎತ್ತಿದವರಿಗೆ ಸಂದೇಶ ನೀಡಿರುವ ಮಧಸೂದನ್ ಆರ್. ನಾಯ್ಕ್ ಅವರು, "ವರದಿ ಬಂದ ಬಳಿಕ ಆಕ್ಷೇಪ ಎತ್ತಿದವರ ಮನಸ್ಸು ಬದಲಾಗಬಹುದು. ನಾವು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವರದಿ ಸಿದ್ದಪಡಿಸುತ್ತಿದ್ದೇವೆ. ವರದಿ ಬಹಿರಂಗ ಆದಾಗ ಅವರಿಗೆ ಇದು ಅತ್ಯುತ್ತಮ ವರದಿ ಎಂದು ಅರಿವಾಗುತ್ತದೆ. ನಮ್ಮ ರಾಜ್ಯದ ವರದಿ ಇಡೀ ದೇಶಕ್ಕೆ ಮಾದರಿ ಆಗಲಿದೆ ಅತ್ಯುತ್ತಮ ಆಗಿರಲಿದೆ," ಎಂದು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಎದುರಾದ ಸವಾಲು
ಸಮೀಕ್ಷೆಯಲ್ಲಿ ಸವಾಲು ಅಂತಾ ಏನೂ ಇರಲಿಲ್ಲ. ಆಯೋಗದ ಸದಸ್ಯರು ಹಾಗು ತಜ್ಞರ ಮಾರ್ಗದರ್ಶನ ನೀಡಿದ್ದರು. ಸಮೀಕ್ಷೆಯಲ್ಲಿ ಶಿಕ್ಷಕರು ಭಾಗಿಯಾಗಿದ್ದರಿಂದ ರಜೆ ಮುಗಿಯುವ ವೇಳೆ ಸಮೀಕ್ಷೆ ಮುಗಿಸಬೇಕು ಎಂದು ಸ್ವಲ್ಪ ಸವಾಲಾಗಿತ್ತು
ಸಾರ್ವಜನಿಕರಿಗೆ ಧನ್ಯವಾದ
ನಾವು ಸಮೀಕ್ಷೆ ಮಾಡುವಾಗ ಯಾವುದೇ ಒತ್ತಡ ಇರಲಿಲ್ಲ. ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದು ಅವರಿಗೆ ಧನ್ಯವಾದ. ಬೆಂಗಳೂರಿನಲ್ಲಿ ಸಮೀಕ್ಷೆಗೆ ಸರಿಯಾಗಿ ಸಹಕಾರ ಸಿಗಲಿಲ್ಲ ಎನ್ನುವುದು ಈಗ ಚರ್ಚೆಯಲ್ಲ. ಈಗ ಸಮೀಕ್ಷೆ ಮುಗಿದಿದೆ ಸಮೀಕ್ಷೆಯು ವೈಜ್ಞಾನಿಕವಾಗಿ ಆಗಿದೆ ವರದಿ ಬಂದ ನಂತರ ಇದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.

