Bomb Threats| ರಾಜ್ಯದ ನ್ಯಾಯಾಲಯಗಳಿಗೆ ಒಂದೇ ದಿನ 10 ಬಾಂಬ್‌ ಬೆದರಿಕೆ! ಮಾಡಿದವರಾರು? ಕಾರಣಗಳೇನು?
x

Bomb Threats| ರಾಜ್ಯದ ನ್ಯಾಯಾಲಯಗಳಿಗೆ ಒಂದೇ ದಿನ 10 ಬಾಂಬ್‌ ಬೆದರಿಕೆ! ಮಾಡಿದವರಾರು? ಕಾರಣಗಳೇನು?

ಇಂತಹ ಕರೆಗಳು ನಿಜವೇ? ಸುಳ್ಳೇ? ಅಥವಾ ನಿಜವಾಗಿಯೂ ದುಷ್ಕರ್ಮಿಗಳು ಈ ಕರೆಗಳನ್ನು ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆಯೆ? ಮದ್ಯ-ಮಾದಕ ವ್ಯಸನಿಗಳು ಈ ಕೃತ್ಯಗಳನ್ನು ನಡೆಸುತ್ತಿದ್ದಾರೆಯೆ?


Click the Play button to hear this message in audio format

ವಿಮಾನದಲ್ಲಿ ಬಾಂಬ್ ಇಡಲಾಗಿದೆ, ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ, ನ್ಯಾಯಾಲಯದಲ್ಲಿ ಇನ್ನೇನು ಬಾಂಬ್ ಸ್ಫೋಟಗೊಳ್ಳಲಿದೆ...ಹೀಗೆ ಇತ್ತೀಚೆಗೆ ಅನೇಕ ಹುಸಿ ಬಾಂಬ್ ಬೆದರಿಕೆ ಕರೆ ಹಾಗೂ ಇಮೇಲ್‌ಗಳ ಸಂಖ್ಯೆ ರಾಜ್ಯದಲ್ಲಿ, ಅದರಲ್ಲೂ ಐಟಿ ಸಿಟಿ ಬೆಂಗಳೂರಿನಲ್ಲೇ ಹೆಚ್ಚಾಗುತ್ತಿದೆ.

ಸೋಮವಾರ (ಫೆಬ್ರವರಿ 16) ಒಂದೇ ದಿನ ರಾಜ್ಯದ 10 ನ್ಯಾಯಾಲಯಗಳಿಗೆ ಇಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಕಳೆದ 46 ದಿನಗಳಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಿಗೆ ಇಂತಹ 13 ಬೆದರಿಕೆಗಳು ಬಂದಿರುವುದು ದಾಖಲಾಗಿವೆ. ಆದರೆ, ವ್ಯವಸ್ಥಿತ ಜಾಲದ ಮೂಲಕ ವಿದೇಶಗಳಲ್ಲಿ ಕುಳಿತು ಇಂತಹ ಮೇಲ್ ಮಾಡುತ್ತಿರುವುದರಿಂದ ಅಥವಾ ರಾಜ್ಯದಲ್ಲೆ ಕುಳಿತು ಪ್ರಾಕ್ಸಿ-ಸರ್ವರ್ಗಳ ಮೂಲಕ ಕರೆ ಮಾಡುತ್ತಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ತನಿಖಾಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ, ಐಪಿ-ಸರ್ವರ್ (IP-Server) ವಿಳಾಸಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ.

ಇಂತಹ ಕರೆಗಳು ನಿಜವೇ? ಸುಳ್ಳೇ? ಅಥವಾ ನಿಜವಾಗಿಯೂ ದುಷ್ಕರ್ಮಿಗಳು ಈ ಕರೆಗಳನ್ನು ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆಯೆ? ಮದ್ಯ-ಮಾದಕ ವ್ಯಸನಿಗಳು ಈ ಕೃತ್ಯಗಳನ್ನು ನಡೆಸುತ್ತಿದ್ದಾರೆಯೆ? ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತಾಗಲು ಶಾಲೆಗಳಿಗೆ ಇಂತಹ ಕರೆಗಳನ್ನು ಸೈಬರ್‌ ತಂತ್ರಜ್ಞಾನ ಬಳಸಿ ಮಾಡುತ್ತಿದ್ದಾರೆಯೆ? ಪೊಲೀಸರ ತನಿಖೆಯಲ್ಲೇಕೆ ವಿಳಂಬ? ಬಗ್ಗೆ ದ ಫೆಡರಲ್‌ ಕರ್ನಾಟಕದ ಒಂದು ಅವಲೋಕನ ಇಲ್ಲಿದೆ.

ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣ

2025ರ ಜುಲೈನಲ್ಲಿ ಬೆಂಗಳೂರಿನ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಒಟ್ಟಾಗಿ ಹುಸಿ ಇಮೇಲ್ ಬೆದರಿಕೆಗಳು ಬಂದಿದ್ದವು. ರಾಜ್ಯ ಪೊಲೀಸರ ದಾಖಲೆಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಒಟ್ಟು 169 ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2023ರಲ್ಲಿ 53, 2024ರಲ್ಲಿ 64 ಮತ್ತು 2025ರ ಜುಲೈವರೆಗೆ 20 ಪ್ರಕರಣಗಳು ಸೇರಿವೆ. ಬೆಂಗಳೂರು ನಗರವೊಂದರಲ್ಲೇ 2024ರಲ್ಲಿ ಪೊಲೀಸರಿಗೆ 27 ಹುಸಿ ಕರೆಗಳು ಅಥವಾ ಸಂದೇಶಗಳು ಬಂದಿದ್ದವು.

ಕೆಲವು ಶತ್ರು ರಾಷ್ಟ್ರಗಳು ರಾಜ್ಯದಲ್ಲಿ ತಲ್ಲಣ ಸೃಷ್ಟಿಸುವ ಉದ್ದೇಶದಿಂದ ಇಲ್ಲವೇ, ಕೆಲವರು ಮದ್ಯದ ಅಮಲಿನಲ್ಲಿ, ಮಾನಸಿಕ ಖಿನ್ನತೆಯಲ್ಲಿದ್ದ ವೇಳೆಯು ಇಂತಹ ಹುಸಿಬಾಂಬ್‌ ಸ್ಫೋಟಿಸುವ ಬೆದರಿಕೆಯ ಇಮೇಲ್ - ಕರೆ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.

ಇತ್ತೀಚೆಗೆ ಬೆಂಗಳೂರಿನ ಶಾಲೆಗಳು ಮತ್ತು ದೇಶದಾದ್ಯಂತ ವಿಮಾನಗಳಿಗೆ ಬಂದ ಬೆದರಿಕೆ ಇಮೇಲ್‌ಗಳಲ್ಲಿ ನಕಲಿ ಸರ್ವರ್‌ಗಳು ಅಥವಾ ವಿಪಿಎನ್ (Virtual Private Networks) ಬಳಸಲಾಗಿತ್ತು. ಇವುಗಳ ಮೂಲ ಹೆಚ್ಚಾಗಿ ಜರ್ಮನಿ ಅಥವಾ ರಷ್ಯಾ ಆಗಿರುತ್ತದೆ ಎಂದು ಕರ್ನಾಟಕ ಸೈಬರ್ ಕ್ರೈಮ್ ವಿಭಾಗ ಪತ್ತೆಹಚ್ಚಿತ್ತು.

ಇಂತಹ ಬೆದರಿಕೆ ಇಮೇಲ್‌ಗಳು ದತ್ತಾಂಶವನ್ನು ಎನ್‌ಕ್ರಿಪ್ಟ್ ಮಾಡುವ ಇಮೇಲ್ ಸೇವೆಗಳ ಮೂಲಕ ಬರುತ್ತವೆ. ಇವುಗಳನ್ನು ಪತ್ತೆ ಹಚ್ಚಲು ಭಾರತೀಯ ತನಿಖಾ ಸಂಸ್ಥೆಗಳು ಇಂಟರ್‌ಪೋಲ್ (Interpol) ನೆರವು ಪಡೆಯುತ್ತಿವೆ. ಕೆಲವು ತನಿಖಾ ವರದಿಗಳು ಇಂತಹ ಸಾಮೂಹಿಕ ಬೆದರಿಕೆಗಳ ಹಿಂದೆ ಪಾಕಿಸ್ತಾನ ಅಥವಾ ಚೀನಾದ ಸೈಬರ್ ಘಟಕಗಳ ಕೈವಾಡವಿರಬಹುದು ಎಂದು ಶಂಕಿಸಿವೆ. ಭಾರತದ ಆರ್ಥಿಕತೆಯನ್ನು ಕುಗ್ಗಿಸಲು ಮತ್ತು ನಾಗರಿಕರಲ್ಲಿ ಅಸ್ಥಿರತೆ ಉಂಟುಮಾಡಲು ಇಂತಹ 'ಸೈಬರ್ ಭಯೋತ್ಪಾದನೆ'ಯನ್ನು ಬಳಸಲಾಗುತ್ತಿದೆ ಎಂದು ವರದಿಯಾಗಿದೆ.

2024ರ ದೀಪಾವಳಿ ಸಮಯದಲ್ಲಿ 100ಕ್ಕೂ ಹೆಚ್ಚು ವಿಮಾನಗಳಿಗೆ ಬೆದರಿಕೆ ಬಂದಾಗ, ಇದು ವ್ಯವಸ್ಥಿತವಾದ ಹೈಬ್ರಿಡ್ ದಾಳಿ (Hybrid Warfare) ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಶತ್ರು ದೇಶಗಳ ಹ್ಯಾಕರ್ ಗುಂಪುಗಳು ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ವದಂತಿಗಳನ್ನು ಹಬ್ಬಿಸುತ್ತವೆ. ವೆಬ್‌ಸೈಟ್‌ಗಳಲ್ಲಿ ತಲ್ಲಣ ಸೃಷ್ಟಿಸುವುದೇ ಇಂತಹವರ ಮೂಲ ಉದ್ದೇಶ ಎನ್ನಲಾಗಿತ್ತು.

ಇಂತಹವರ ಪತ್ತೆ ಕಷ್ಟ

ವಿದೇಶಿ ಸರ್ವರ್‌ಗಳ ಮೂಲಕ ಬಾಂಬ್‌ ಸ್ಫೋಟಿಸುವ ಬೆದರಿಕೆಯ ಇ-ಮೇಲ್‌ಗಳ ಐಪಿ ವಿಳಾಸ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಡಾರ್ಕ್‌ ವೆಬ್‌, ವಿಪಿಎನ್‌ ಗಳ ಮೂಲಕ ಐಪಿ ವಿಳಾಸವನ್ನು ಬದಲಿಸುವ ದುಷ್ಕ್ರಮಿಗಳ ಪತ್ತೆ ಕಷ್ಟ. ಹೊರ ದೇಶಗಳ ಅಸಹಕಾರದಿಂದಾಗಿ ಆರೋಪಿಗಳ ಪತ್ತೆ ವಿಳಂಭವಾಗುತ್ತಿದೆ ಎನ್ನುತ್ತಾರೆ ಪೊಲೀಸರು.

ದೇಶದಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುವುದು, ದೈನಂದಿನ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವುದು, ವ್ಯವಸ್ಥಿತವಾದ ಹೈಬ್ರಿಡ್‌ ದಾಳಿ, ವೈಯಕ್ತಿಕ ಲಾಭ, ಸೇಡು ತೀರಿಸಿಕೊಳ್ಳುವುದು, ಗಮನ ಸೆಳೆಯುವುದು, ಮಾನಸಿಕ ಖಿನ್ನತೆ, ಮದ್ಯದ ಅಮಲು, ಮೋಜಿಗಾಗಿಯೂ ಕೆಲವು ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದರೆ, ಮತ್ತೊಂದೆಡೆ ಶತ್ರು ರಾಷ್ಟ್ರಗಳ ಪ್ರಚೋದನೆಯಿಂದಾಗಿ ದೇಶದಲ್ಲಿ ತಲ್ಲಣ ಸೃಷ್ಟಿಸುವುದು, ಭದ್ರತಾ ವ್ಯವಸ್ಥೆಯನ್ನು ಅಣಕಿಸುವ ಉದ್ದೇಶದಿಂದಲೂ ಇಂತಹ ಹುಸಿ ಬಾಂಬ್ ಬೆದರಿಕೆಗಳನ್ನು ಒಡ್ಡುತ್ತಾರೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಕೆಲವು ಸುಳ್ಳು ಕರೆ ಪ್ರಕರಣಗಳು!

ಕುಡಿದ ಮತ್ತಿನಲ್ಲಿ ಕರೆ

ಪ್ರಕರಣ 1 : 2024ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ತನಿಖೆ ನಡೆಸಿದಾಗ, ಆತ ಕುಡಿದ ಮತ್ತಿನಲ್ಲಿ ಕೇವಲ ತಮಾಷೆಗಾಗಿ ಕರೆ ಮಾಡಿದ್ದು ಪತ್ತೆಯಾಯಿತು. ಆತನನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಲಾಗಿತ್ತು.

ಪ್ರಕರಣ 2 : 2023ರಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಿ ತಪಾಸಣೆ ನಡೆಸಲಾಗಿತ್ತು. ನಂತರ ಆತ ಮದ್ಯ ಸೇವಿಸಿ ಹತಾಶೆಯಿಂದ ಕರೆ ಮಾಡಿದ್ದ ಎಂದು ತಿಳಿದುಬಂದಿತು.

ವಿಮಾನ ನಿಲ್ಲಿಸಲು ಕರೆ

ಪ್ರಕರಣ 1 : 2024ರ ಮಾರ್ಚ್‌ನಲ್ಲಿ ಒಬ್ಬ ವ್ಯಕ್ತಿ ಅಕಾಸಾ ಏರ್ (Akasa Air) ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಆತನ ಹೆಂಡತಿ ವಿಮಾನ ನಿಲ್ದಾಣಕ್ಕೆ ತಲುಪುವುದು ತಡವಾಗಿದ್ದರಿಂದ, ಅವಳು ವಿಮಾನ ಏರಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಆತ ಈ ಕೃತ್ಯ ಎಸಗಿದ್ದ.

ಪ್ರಕರಣ 2 : 2026ರ ಜನವರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 52 ವರ್ಷದ ಬಟ್ಟೆ ವ್ಯಾಪಾರಿ ಮತ್ತು ಆತನ ಸ್ನೇಹಿತ ಅಹಮದಾಬಾದ್‌ಗೆ ಹೋಗಲು ಬಂದಿದ್ದರು. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮತ್ತು ತಪಾಸಣೆ ನಡೆಯುತ್ತಿದ್ದಾಗ, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಇವರು "ನಮ್ಮ ಬ್ಯಾಗ್‌ನಲ್ಲಿ ಎರಡು ಸಣ್ಣ ಬಾಂಬ್‌ಗಳಿವೆ" ಎಂದು ತಮಾಷೆ ಮಾಡಿದ್ದರು. ಇದರಿಂದ ವಿಮಾನ ಹಾರಾಟ ವಿಳಂಬವಾಯಿತು ಮತ್ತು ಇಬ್ಬರನ್ನೂ ಬಂಧಿಸಲಾಯಿತು.

ಪ್ರಕರಣ 3: ಫೆಬ್ರವರಿಯಲ್ಲಿ ಕೋಲ್ಕತ್ತಾದಿಂದ ಶಿಲ್ಲಾಂಗ್‌ಗೆ ಹೊರಡಬೇಕಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಲಿಪ್‌ಸ್ಟಿಕ್‌ನಿಂದ ಬರೆದ ಬೆದರಿಕೆ ಪತ್ರ ಪತ್ತೆಯಾಗಿತ್ತು. ಇದರಿಂದಾಗಿ ವಿಮಾನವನ್ನು ಐಸೊಲೇಶನ್ ಬೇಗೆ ಸ್ಥಳಾಂತರಿಸಿ 4 ಗಂಟೆಗಳ ಕಾಲ ತಪಾಸಣೆ ನಡೆಸಲಾಗಿತ್ತು. ದೆಹಲಿಯ ವಿಮಾನ ನಿಲ್ದಾಣದಲ್ಲಿ ತರಬೇತಿಯಲ್ಲಿದ್ದ (Trainee) ವ್ಯಕ್ತಿಯೊಬ್ಬ ತನ್ನ ಸ್ನೇಹಿತರು ಇಬ್ಬರು ಯುವತಿಯರ ಜತೆ ಹೆಚ್ಚಿನ ಸಮಯ ಕಳೆಯಲಿ ಎಂಬ ಕಾರಣಕ್ಕೆ ಸ್ಪೈಸ್‌ಜೆಟ್ ವಿಮಾನಕ್ಕೆ ಹುಸಿ ಕರೆ ಮಾಡಿದ್ದ.

ವಿದ್ಯಾರ್ಥಿಗಳಿಂದಲೂ ಬೆದರಿಕೆ

ಪ್ರಕರಣ 1 : 2024ರಲ್ಲಿ ದೆಹಲಿಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ತನಗೆ ಪರೀಕ್ಷೆಗೆ ತಯಾರಿ ನಡೆಸಲು ಸಮಯ ಬೇಕೆಂದು ಮತ್ತು ಶಾಲೆಗೆ ರಜೆ ಸಿಗಲಿ ಎಂಬ ಉದ್ದೇಶದಿಂದ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆದಾಗ, ಆತ ಯೂಟ್ಯೂಬ್ ನೋಡಿ ಇಮೇಲ್ ಐಡಿ ಕ್ರಿಯೇಟ್ ಮಾಡುವುದು ಹೇಗೆಂದು ಕಲಿತಿದ್ದಾಗಿ ಒಪ್ಪಿಕೊಂಡಿದ್ದ.

ಪ್ರಕರಣ 2 : ಬೆಂಗಳೂರಿನ ಬಸವೇಶ್ವರ ನಗರದ ಪ್ರತಿಷ್ಠಿತ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿಯೊಬ್ಬ ತನಗೆ ಪರೀಕ್ಷೆ ಬರೆಯಲು ಇಷ್ಟವಿಲ್ಲದ ಕಾರಣ ಶಾಲೆಯ ಅಧಿಕೃತ ಇಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ. ಸೈಬರ್ ಪೊಲೀಸರು ಐಪಿ ಅಡ್ರೆಸ್ ಮೂಲಕ ತನಿಖೆ ನಡೆಸಿದಾಗ ಅದು ಅದೇ ಶಾಲೆಯ ವಿದ್ಯಾರ್ಥಿಯ ಕೃತ್ಯ ಎಂಬುದು ದೃಢಪಟ್ಟಿತ್ತು.

ಇತರೆ ಕಾರಣಗಳೂ ಇವೆ!

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ತೀವ್ರ ಕೆಲಸದ ಒತ್ತಡ ಮತ್ತು ಖಿನ್ನತೆಯಿಂದಾಗಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದರು. ತನಿಖೆಯ ನಂತರ ಆತ ತೀವ್ರವಾದ ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿರುವುದು ಪತ್ತೆಯಾಯಿತು.

ವಿಚ್ಛೇದನ ಪ್ರಕ್ರಿಯೆಯಲ್ಲಿದ್ದ ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ತೊಂದರೆ ನೀಡಲು ಅಥವಾ ಅವಳ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಇಮೇಲ್ ಕಳುಹಿಸಿ ಅದನ್ನು ಪತ್ನಿಯೇ ಕಳುಹಿಸಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದರು. ಇದು ಅವರ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸಿತ್ತು.

ವಯಸ್ಸಾದ ಒಬ್ಬ ವ್ಯಕ್ತಿ ಒಂಟಿತನದಿಂದ ಬೇಸತ್ತು, ಪೊಲೀಸರು ತನ್ನ ಮನೆಗೆ ಬರಲಿ ಎಂಬ ಕಾರಣಕ್ಕೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ "ನನ್ನ ಮನೆಯ ಬಳಿ ಬಾಂಬ್ ಇದೆ" ಎಂದು ಹೇಳಿದ್ದರು. ಇದು ಅವರ ಮಾನಸಿಕ ಏಕಾಂತದ ಪರಿಣಾಮವಾಗಿತ್ತು. ದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ, ಒಬ್ಬ ಯುವಕ ತನ್ನ ಸುತ್ತಮುತ್ತಲಿನವರ ಗಮನ ಸೆಳೆಯಲು ಮತ್ತು ತಾನು 'ಪ್ರಭಾವಶಾಲಿ' ಎಂದು ತೋರಿಸಿಕೊಳ್ಳಲು ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ.

ವೈದ್ಯಕೀಯ ತಪಾಸಣೆಯಲ್ಲಿ ಆತನಿಗೆ ಪರ್ಸನಾಲಿಟಿ ಡಿಸಾರ್ಡರ್ ಇರುವುದು ಕಂಡುಬಂದಿತ್ತು. ಭೋಪಾಲ್‌ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಗೆ ರಜೆ ಘೋಷಣೆಯಾಗಲಿ ಎಂಬ ಕ್ಷುಲ್ಲಕ ಕಾರಣಕ್ಕೆ ಪೋಷಕರ ಫೋನ್‌ನಿಂದ ಬೆದರಿಕೆ ಸಂದೇಶ ಕಳುಹಿಸಿದ್ದ.

ಶಿಕ್ಷೆಯ ಪ್ರಮಾಣವೇನು?

ಇಂತಹ ಹುಸಿ ಬಾಂಬ್ ಬೆದರಿಕೆ ಹಾಕಿರುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಕನಿಷ್ಠ 3 ರಿಂದ 7 ವರ್ಷಗಳ ವರೆಗೂ ಶಿಕ್ಷೆಯಾಗುವ ಸಾಧ್ಯತೆಗಳಿವೆ. ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸುವ ಭಾರತೀಯ ನ್ಯಾಯ ಸಂಹಿತೆಯಡಿ ಶಿಕ್ಷೆಯ ಪ್ರಮಾಣದಲ್ಲಿ ವ್ಯತ್ಯಾಸಗಳಾಗಬಹುದು. ವಿಮಾನಗಳಿಗೆ ಬೆದರಿಕೆ ಹಾಕುವವರನ್ನು 'ನೋ-ಫ್ಲೈ ಲಿಸ್ಟ್' (No-Fly List) ಗೆ ಸೇರಿಸಲಾಗುತ್ತದೆ. ಇದರಿಂದ ಅವರು ಜೀವನಪರ್ಯಂತ ವಿಮಾನ ಪ್ರಯಾಣ ಮಾಡದಂತೆ ನಿಷೇಧ ಹೇರಬಹುದು.

ಹುಸಿ ಬೆದರಿಕೆಯಿಂದಾಗಿ ವಿಮಾನ ವಿಳಂಬ ಅಥವಾ ತುರ್ತು ಭೂಸ್ಪರ್ಶದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಆರೋಪಿಯಿಂದಲೇ ವಸೂಲಿ ಮಾಡುವ ಅವಕಾಶವಿರುತ್ತದೆ. ಇಂತಹ ಪ್ರಕರಣಗಳನ್ನು ಅರಿವಿನ ಅಪರಾಧ (Cognizable Offense) ಎಂದು ಪರಿಗಣಿಸಿ, ಪೊಲೀಸರು ವಾರಂಟ್ ಇಲ್ಲದೆಯೇ ಬಂಧಿಸಬಹುದು.

ಶಾಲೆಗಳಿಗೆ ಬಾಂಬ್ ಇಟ್ಟಿರುವ ಪ್ರಕರಣಗಳಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿದರೂ, ಅವರು ಅಪ್ರಾಪ್ತರಾಗಿದ್ದರೆ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುತ್ತದೆ. ಇದು ಅವರ ಶೈಕ್ಷಣಿಕ ದಾಖಲೆಯ ಮೇಲೆ ಕಪ್ಪು ಚುಕ್ಕೆಯಾಗಬಹುದು.

ಬೆದರಿಕೆ ಬಂದಾಗ ಪೊಲೀಸರ ಕ್ರಮ

ಹುಸಿ ಬಾಂಬ್ ಬೆದರಿಕೆ ಕರೆ ಅಥವಾ ಇಮೇಲ್ ಬಂದಾಗ ಪೊಲೀಸರು ಅದನ್ನು ನಿರ್ಲಕ್ಷಿಸದೆ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರತಿ ಕರೆಯನ್ನೂ 'ನಿಜವಾದ ಬೆದರಿಕೆ' ಎಂದೇ ಭಾವಿಸಿ ಕಾರ್ಯಾಚರಣೆ ನಡೆಸುತ್ತಾರೆ. ಬಾಂಬ್ ಪತ್ತೆ ದಳ (Bomb Detection and Disposal Squad - BDDS) ಮತ್ತು ಶ್ವಾನ ದಳದೊಂದಿಗೆ ಕಟ್ಟಡವನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗುವುದು. ಲೋಹ ಶೋಧಕಗಳು (Metal Detectors) ಮತ್ತು ಸ್ಫೋಟಕ ಪತ್ತೆ ಮಾಡುವ ಉಪಕರಣಗಳನ್ನು ಬಳಸಿ ಪರಿಶೀಲಿಸುತ್ತಾರೆ.

ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು "ದ ಫೆಡರಲ್‌ ಕರ್ನಾಟಕ"ದೊಂದಿಗೆ ಮಾತನಾಡಿ, ಇಂತಹ ಹುಸಿ ಕರೆಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ. ಕನಿಷ್ಟ ಮೂರರಿಂದ ಏಳು ವರ್ಷಗಳ ವರೆಗೂ ಶಿಕ್ಷೆಯಾಗಬಹುದು. ಹೀಗಾಗಿ, ಇಂತಹ ಹುಚ್ಚಾಟಗಳಿಂದ ದೂರ ಇದ್ದರೆ ಒಳ್ಳೆಯದು. ಮೋಜಿಗಾಗಿ ಮಾಡಿದ ಕರೆಯಿಂದಾಗಿ ಜೈಲು ಸೇರಬೇಕಾಗುತ್ತದೆ. ಶತ್ರು ರಾಷ್ಟ್ರಗಳ ಇಮೇಲ್‌ ಬಗ್ಗೆ ತನಿಖೆ ನಡೆಯುತ್ತದೆ. ಅಲ್ಲಿನ ಸಹಕಾರದ ಆಧಾರದ ಮೇಲೆ ತನಿಖೆ ವೇಗ ಹೇಳಬಹುದು.

ಕೂಲಂಕಷವಾಗಿ ಸ್ಥಳ ಪರಿಶೀಲಿಸಿದ ಬಳಿಕವಷ್ಟೆ ಅದನ್ನು ಹುಸಿ ಬಾಂಬ್‌ ಕರೆ ಎಂದು ಹೇಳಬಹುದು. ಹೀಗಾಗಿ ಇಂತಹ ಯಾವುದೇ ಕರೆಗಳನ್ನು ಸಹ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

Read More
Next Story