ಪೇಟ ಕಳಚಿ ಕಿರೀಟ ತೊಟ್ಟ ಸಾಮ್ರಾಟ್ ಚೌಧರಿ: ಅಮಿತ್ ಶಾ ಆಪ್ತ ಬಿಹಾರ ಸಿಎಂ ಬೆಳೆದು ನಿಂತ ಬೆರಗಿನ ಪರಿ
x
ಪಾಟ್ನಾದ ಲೋಕಭವನದಲ್ಲಿ ಏಪ್ರಿಲ್ 15ರಂದು ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಸಾಮ್ರಾಣ್ ಚೌಧರಿ ಅವರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್.

ಪೇಟ ಕಳಚಿ ಕಿರೀಟ ತೊಟ್ಟ ಸಾಮ್ರಾಟ್ ಚೌಧರಿ: ಅಮಿತ್ ಶಾ ಆಪ್ತ ಬಿಹಾರ ಸಿಎಂ ಬೆಳೆದು ನಿಂತ ಬೆರಗಿನ ಪರಿ

ವಯಸ್ಸಿನ ವಂಚನೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ಸಾಮ್ರಾಟ್ ಬೆಳೆದು ನಿಂತ ಪರಿ ಅಚ್ಚರಿ ಹುಟ್ಟಿಸಿದೆ. ಅಮಿತ್ ಶಾ ಬೆಂಬಲ, ಸಮರ್ಥ ಕಾರ್ಯನಿರ್ವಹಣೆ, ಲವ-ಕುಶ ಜಾತಿ ಬೆಂಬಲ ಕೂಡ ಕಾರಣ.


Click the Play button to hear this message in audio format

ರಾಜಕೀಯವು ವಿಚಿತ್ರ ಸಾಂಗತ್ಯಗಳಿಗೆ ಸಾಕ್ಷಿಯಾಗುತ್ತದೆ ಎನ್ನುವುದಕ್ಕೆ ಇಲ್ಲಿದೆ ತಾಜಾ ತಾಜಾ ಉದಾಹರಣೆ. ಅದು ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ. ಅಸಲಿಗೆ ಅವರು ಕಳೆದ ಎಂಟು ವರ್ಷಗಳಿಂದ ತಮ್ಮ ಶತ್ರುವಿನೊಂದಿಗೇ ಕಾಲ ಕಳೆದಿದ್ದಾರೆ. ಆದರೆ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ. ಕೇವಲ ಹಿತಾಸಕ್ತಿಗಳಷ್ಟೇ ಸತ್ಯ ಎಂಬ ಮಾತಿನಂತೆ ಚೌಧರಿ ಅವರು ತಮ್ಮ ಪೂರ್ವಾಧಿಕಾರಿ ನಿತೀಶ್ ಕುಮಾರ್ ಅವರಂತೆ ಈ ಸಿದ್ಧಾಂತಕ್ಕೆ ʼಬ್ರಾಂಡ್ ಅಂಬಾಸಿಡರ್ʼ ಎಂದರೆ ಅತಿಶಯೋಕ್ತಿಯಲ್ಲ.

ಏಪ್ರಿಲ್ 15ರಂದು ರಾಕೇಶ್ ಕುಮಾರ್ ಅಲಿಯಾಸ್ ಸಾಮ್ರಾಟ್ ಚೌಧರಿ ಅವರು ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪಟ್ಟಕ್ಕೆ ಏರಿದಾಗ ರಾಜಕೀಯ ಪಂಡಿತರಿಗೆ ಇದರಲ್ಲಿನ ವ್ಯಂಗ್ಯವೇನು ಎಂಬುದು ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ಯಾವ ಕೇಸರಿ ಪಕ್ಷದ ಕಾರಣದಿಂದಲೇ 26 ವರ್ಷಗಳ ಹಿಂದೆ ಸಚಿವ ಸ್ಥಾನ ಕಳೆದುಕೊಂಡಿದ್ದರೋ ಇಂದು ಅದೇ ಪಕ್ಷ ಅವರಿಗೆ ಮುಖ್ಯಮಂತ್ರಿ ಪಟ್ಟವನ್ನು ನೀಡಿದೆ.

ಅಷ್ಟು ಮಾತ್ರವಲ್ಲದೆ ಯಾವ ʼಶತ್ರುʼವನ್ನು ಅಧಿಕಾರದಿಂದ ಕಿತ್ತೊಗೆಯುವ ತನಕವೂ ತಮ್ಮ ಕೇಸರಿ ʼಮುರೇಠಾʼ (ಪೇಟ)ವನ್ನು ಬಿಚ್ಚುವುದಿಲ್ಲ ಎಂದು ಶಪಥ ಮಾಡಿದ್ದರೋ ಅದೇ ವ್ಯಕ್ತಿ ಇಂದು ಇವರಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ.

ಅದೃಷ್ಟವಶಾತ್ ಜೆಡಿಯು ಮುಖ್ತಸ್ಥ ನಿತೀಶ್ ಕುಮಾರ್ ಅವರು ತಮಗಾಗಿ ಅಧಿಕಾರ ಬಿಟ್ಟುಕೊಡುವ ವರೆಗೂ ಚೌಧರಿ ಕಾದು ಕುಳಿತುಕೊಳ್ಳಲಿಲ್ಲ; ನಿತೀಶ್ ಕುಮಾರ್ ಅವರು ಎನ್ಡಿಎಗೆ ಕೂಟಕ್ಕೆ ಮರಳಿದ ಜನವರಿ 2024ರಲ್ಲಿಯೇ ಅವರು ತಮ್ಮ ಪೇಟವನ್ನು ತೆಗೆದಿದ್ದರು. ಈಗ ಅವರ ಕುತ್ತಿಗೆಯಲ್ಲಿ ಸದಾ ಧರಿಸಿರುವ ಕೇಸರಿ ಶಾಲು ಅವರ ಸಿದ್ಧಾಂತ ಮತ್ತು ನಿಷ್ಠೆ ಎಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ಸಾರುತ್ತಿದೆ.

ಬಿಜೆಪಿ ಕಂಡರೆ ಉರಿ ಕೆಂಡ!

ಒಂದು ಕಾಲದಲ್ಲಿ ಇದೇ ವ್ಯಕ್ತಿ ಕೇಸರಿ ಬಣ್ಣವನ್ನು ಕಂಡರೆ ಉರಿದು ಬೀಳುತ್ತಿದ್ದರು. 1999ರಲ್ಲಿ ರಾಬ್ರಿ ದೇವಿ ನೇತೃತ್ವದ ಆರ್.ಜೆ.ಡಿ. ಸರ್ಕಾರದಲ್ಲಿ ತೋಟಗಾರಿಕೆ ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತೆ ಮಾಡಿದ್ದಕ್ಕಾಗಿ ಅವರು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಬಿಜೆಪಿಯ ಮೇಲೆ ಹರಿಹಾಯ್ದಿದ್ದರು.

ಲಭ್ಯ ವರದಿಗಳ ಪ್ರಕಾರ ಚೌಧರಿ ಅವರು ನಾನಾ ಕಡೆ ಸಲ್ಲಿಸಿದ ದಾಖಲೆಗಳಲ್ಲಿ ಮೂರು ಬೇರೆ ಬೇರೆ ಜನ್ಮ ದಿನಾಂಕಗಳನ್ನು ನಮೂದಿಸಿದ್ದರು. ಬಿಜೆಪಿ ಮತ್ತು ಸಮತಾ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿತು. ಅವರು ಸಚಿವ ಸ್ಥಾನಕ್ಕೆ ನಿಗದಿಯಾದ ವಯಸ್ಸಿಗಿಂತ ಕಿರಿಯರು ಎಂದು ದೊಡ್ಡ ಮಟ್ಟದ ಹಂಗಾಮವನ್ನೇ ಸೃಷ್ಟಿಸಿದವು.

ಅಂದಿನ ರಾಜ್ಯಪಾಲ ಹಾಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದ ಸೂರಜ್ ಭಾನ್ ಅವರು 1999ರಲ್ಲಿ ಚೌಧರಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವ ತನಕವೂ ಈ ಹೋರಾಟ ಮುಂದುವರಿದಿತ್ತು.

ಅಷ್ಟಕ್ಕೇ ಸುಮ್ಮನಾಗದೇ ಸಚಿವ ಸ್ಥಾನ ಕಳೆದುಕೊಂಡ ಮೇಲೂ ಅವರ ವಿರುದ್ಧ ತನಿಖೆಗೆ ಆದೇಶಿಸಲಾಯಿತು. ತನಿಖಾ ವರದಿಯೂ ಹೊರಬಂತು. ಅದರ ಆಧಾರದ ಮೇಲೆಯೇ ಚೌಧರಿ ವಿರುದ್ಧ ವಂಚನೆ, ದಾಖಲೆಗಳನ್ನು ತಿರುಚಿರುವುದು ಮತ್ತು ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಕರಣದ ದಾಖಲಿಸುವಂತೆ ರಾಜ್ಯಪಾಲ ಭಾನ್ ಅವರು ಸರ್ಕಾರಕ್ಕೆ ಸೂಚನೆ ನೀಡಿದ್ದರು. ಜೊತೆಗೆ ಸಚಿವರಾಗಿ ಅವರು ಪಡೆದಿದ್ದ ವೇತನ ಮತ್ತು ಭತ್ಯೆಗಳನ್ನು ಹಿಂದಕ್ಕೆ ಪಡೆಯಿರಿ ಎಂದೂ ಅವರು ಆದೇಶ ಮಾಡಿದ್ದರು. ಆರ್ಜೆಡಿ ಸರ್ಕಾರದ ʼಜಂಗಲ್ ರಾಜ್ʼ ವಿರುದ್ಧ ತಮಗೆ ಸಿಕ್ಕ ದೊಡ್ಡ ಜಯ ಎಂದು ಬಿಜೆಪಿ ಇದನ್ನು ವ್ಯಾಪಕವಾಗಿ ಬಿಂಬಿಸಿತ್ತು.

ಈ ದಿಢೀರ್ ಬೆಳವಣಿಗೆಯ ಹಿಂದೆ…

ಹಾಗಾಗಿಯೇ ಅವರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿ ಎಂಟು ವರ್ಷಗಳೇ ಕಳೆದಿದ್ದರೂ ಬಿಹಾರ ಘಟಕದ ಒಂದು ವರ್ಗದ ನಾಯಕರು ಸಾಮ್ರಾಟ್ ಚೌಧರಿ ಅವರನ್ನು ಈಗಲೂ ʼಹೊರಗಿನವರುʼ ಎಂದೇ ನೋಡುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಎಸ್ಎಸ್ ಹಿನ್ನೆಲೆಯಿಂದ ಬಂದ ಅನೇಕ ಮಂದಿ ಹಿರಿಯ ನಾಯಕರಿಗೆ ಚೌಧರಿ ಅವರ ಈ ಕ್ಷಿಪ್ರ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಾಮ್ರಾಟ್ ಬಿಜೆಪಿಯನ್ನು ಸೇರಿಕೊಂಡಿದ್ದು 2018ರಲ್ಲಿ. ಅದೇ ವರ್ಷ ಅವರು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದರು. 2021ರಲ್ಲಿ ಸಚಿವರಾದರು. 2023ರಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರೇ ಆದರು. 2024ರಲ್ಲಿ ಉಪಮುಖ್ಯಮಂತ್ರಿಯಾದರು. ಅಂತಿಮವಾಗಿ ಈಗ ರಾಜ್ಯದ ಮುಖ್ಯಮಂತ್ರಿಯೇ ಆಗಿಬಿಟ್ಟರು.

ಪಕ್ಷದಲ್ಲಿರುವ ಅನೇಕರ ಅಸಮಾಧಾನಕ್ಕೆ ಮುಖ್ಯ ಕಾರಣವೇನೆಂದರೆ ಚೌಧರಿ ಅವರಿಗೆ ಆರ್ಎಸ್ಎಸ್ ಹಿನ್ನೆಲೆ ಇಲ್ಲದೇ ಇರುವುದು. ʼಮೂಲʼ ಕಾರ್ಯಕರ್ತರಿಗಿಂತ ಮಿಗಿಲಾದ ನಂಬಿಕೆಯನ್ನು ಚೌಧರಿ ಅವರ ಮೇಲೆ ಪಕ್ಷದ ನಾಯಕತ್ವ ಹೊಂದಿರುವುದು ಬಿಜೆಪಿಯ ಅನೇಕ ಮಂದಿ ಹಿರಿಯ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ವಾಸ್ತವವಾಗಿ ಹೇಳಬೇಕಿದ್ದರೆ, ರಾಜ್ಯ ಬಿಜೆಪಿಯ ಒಂದು ಪ್ರಬಲ ಗುಂಪು ಚೌಧರಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುವುದನ್ನು ಬಲವಾಗಿ ವಿರೋಧಿಸಿತ್ತು ಕೂಡ. ಆರ್ಎಸ್ಎಸ್ ಕೂಡ ಈ ಉನ್ನತ ಸ್ಥಾನಕ್ಕೆ ಅತ್ಯಂತ ಹಿಂದುಳಿದ ವರ್ಗದ ನಾಯಕರೊಬ್ಬರನ್ನು ನೇಮಕ ಮಾಡಬೇಕು ಎಂಬ ವಾದವನ್ನು ಮಂಡಿಸಿತ್ತು.

ಚೌಧರಿ ಬೆನ್ನಿಗೆ ನಿಂತ ಅಮಿತ್ ಶಾ

ಅವೆಲ್ಲ ವಿರೋಧಗಳು, ಅಭಿಪ್ರಾಯಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಪಕ್ಷದ ಉನ್ನತ ನಾಯಕತ್ವ ಚೌಧರಿ ಹೆಸರನ್ನೇ ಅಖೈರುಗೊಳಿಸಿದೆ. ಅದರಲ್ಲಿಯೂ ಮುಖ್ಯವಾಗಿ ಚೌಧರಿ ಬೆನ್ನಿಗೆ ನಿಂತವರು ಕೇಂದ್ರ ಗೃಹ ಸಚಿವ ಅಮಿತ್ ಶಾ. ಅದಕ್ಕೆ ಕಾರಣವಾದರೂ ಏನು?

ಮೊಟ್ಟ ಮೊದಲನೆಯದಾಗಿ ಚೌಧರಿ ಅವರನ್ನು ರಾಜ್ಯ ಬಿಜೆಪಿಯಲ್ಲಿ ʼಅಮಿತ್ ಶಾ ಅವರ ಆಪ್ತʼ ಎಂದೇ ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. 2022ರಲ್ಲಿ ನಿತೀಶ್ ಕುಮಾರ್ ಬಿಜೆಪಿಗೆ ಕೈಕೊಟ್ಟು ಆರ್ಜೆಡಿ ಜೊತೆ ಕೈಜೋಡಿಸಿದಾಗ ಪಕ್ಷದ ರಾಜ್ಯ ಘಟಕದ ಚುಕ್ಕಾಣಿಯನ್ನು ಚೌಧರಿ ಅವರಿಗೆ ವಹಿಸಿದ್ದು ಸ್ವತಃ ಅಮಿತ್ ಶಾ. ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಚೌಧರಿ ಒಬ್ಬ ಆಕ್ರಮಣಕಾರಿ ವಿರೋಧ ಪಕ್ಷದ ನಾಯಕನ ಪಾತ್ರವನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸುವಲ್ಲಿ ಯಶಸ್ವಿಯಾದರು. ನಿತೀಶ್ ಆರ್ಜೆಡಿ ಮೈತ್ರಿಯೊಂದಿಗೆ ಮಹಾಘಟಬಂಧನ ಸರ್ಕಾರ ನಡೆಸಿದ್ದು ಹದಿನೇಳು ತಿಂಗಳುಗಳು. ಅಂದರೆ 2022ರ ಆಗಸ್ಟ್ನಿಂದ 2024ರ ಜನವರಿ ತನಕ ಚೌಧರಿ ಅವರು ಲಾಲೂ ಪ್ರಸಾದ್ ಮತ್ತು ನಿತೀಶ್ ಇಬ್ಬರನ್ನೂ ಟಾರ್ಗೆಟ್ ಮಾಡುವ ಒಂದೇ ಒಂದು ಅವಕಾಶವನ್ನೂ ಕೈಚೆಲ್ಲಲಿಲ್ಲ.

ಅಮಿತ್ ಶಾ ಯಾವುದೇ ಕೆಲಸವನ್ನು ವಹಿಸಲಿ, ಅದನ್ನು ಚೌಧರಿ ಯಾವುದೇ ಚ್ಯುತಿ ಇಲ್ಲದಂತೆ ಪೂರೈಸಿಬಿಡುತ್ತಾರೆ ಎಂಬುದು ಬಿಜೆಪಿ ನಾಯಕರ ಅಂಬೋಣ. ಪಕ್ಷದ ಹೊಸ ಸಾಂಸ್ಥಿಕ ಸಂರಚನೆಯನ್ನು ರೂಪಿಸುವಲ್ಲಿ ಮತ್ತು ದಾಖಲೆ ಸಮಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಮೇಲ್ಮಟ್ಟದ ತನಕ ಬಲಪಡಿಸುವ ಕೆಲಸವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು. ಸಾಮ್ರಾಟರ ರಾಜಕೀಯ ತಂತ್ರಗಾರಿಕೆ ಮತ್ತು ಆಕ್ರಮಣಕಾರಿ ಪ್ರವೃತ್ತಿ ಶಾ ಅವರಿಗೆ ಮೆಚ್ಚುಗೆಯಾಗಿತ್ತು ಎನ್ನಲಾಗುತ್ತದೆ. ಹಾಗಾಗಿ ಶಾ ಅವರ ಸೂಚನೆಯ ಮೇರೆಗೇ ಕಳೆದ ವರ್ಷ ಎನ್ಡಿಎ ಅಧಿಕಾರಕ್ಕೆ ಮರಳಿದ ಬಳಿಕ ಚೌಧರಿ ಅವರನ್ನು ಒಬ್ಬ ಪ್ರಬಲ ನಾಯಕನಾಗಿ ಬಿಂಬಿಸಲಾಯಿತು.

ಸಾಮ್ರಾಟ್ ಅವರ ಇಂತಹ ಸಾಮರ್ಥ್ಯ ನಿತೀಶ್ ಕುಮಾರ್ ಅವರಿಗೂ ಮನವರಿಕೆಯಾಗಿತ್ತು. ಅಪಾರ ಅನುಭವವನ್ನು ಹೊಂದಿರುವ ನಿತೀಶ್ ಇತ್ತೀಚಿನ ವಾರಗಳಲ್ಲಿ ಸಾರ್ವಜನಿಕವಾಗಿಯೇ ಚೌಧರಿ ಅವರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಬಗ್ಗೆ ಮಾತನಾಡುತ್ತಿದ್ದರು. ಒಂದು ಕಾಲದಲ್ಲಿ ಮುಖ್ಯಮಂತ್ರಿ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸುವ ತನಕವೂ ವಿಶ್ರಮವಿಸುವುದಿಲ್ಲ ಎಂಬುದನ್ನೂ ನಿತೀಶ್ ಮರೆತುಬಿಡುವಷ್ಟು ಚೌಧರಿ ಬೆಳೆದು ನಿಂತಿದ್ದರು.

ಹಿರಿಯ ಸಚಿವರಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಚೌಧರಿ ಅವರ ನಿರ್ವಹಣೆ ಮತ್ತು ಅನುಭವವೂ ಅವರನ್ನು ಸಮರ್ಥ ನಾಯಕನನ್ನಾಗಿ ರೂಪಿಸಲು ನೆರವಾಯಿತು ಎನ್ನುವವರು ಬಹಳ ಮಂದಿ ಇದ್ದಾರೆ.

ಇವೆಲ್ಲವೂ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಅವರ ಪರವಾಗಿ ಕೆಲಸ ಮಾಡಿದೆ ಎಂಬುದು ನಿರ್ವಿವಾದ. ಕಳೆದ ವರ್ಷ ರಾಜ್ಯ ಸರ್ಕಾರದಲ್ಲಿ ಬಿಜೆಪಿ ಪ್ರಬಲ ಪಾತ್ರವನ್ನು ವಹಿಸಿದಾಗ, 20 ವರ್ಷಗಳಲ್ಲಿ ಮೊದಲ ಬಾರಿಗೆ ಪಕ್ಷಕ್ಕೆ ಗೃಹ ಇಲಾಖೆಯ ಪ್ರಮುಖ ಖಾತೆ ಲಭಿಸಿತು ಮತ್ತು ಅದರ ಜವಾಬ್ದಾರಿಯನ್ನು ಚೌಧರಿಯವರಿಗೆ ನೀಡಲಾಯಿತು. ಅದರಲ್ಲಿಯೂ ಅವರು ನಿರಾಸೆ ಮೂಡಿಸಲಿಲ್ಲ.

ಎರಡನೆಯದಾಗಿ, ಮತ್ತು ಬಹುಶಃ ಹೆಚ್ಚು ಮುಖ್ಯವಾಗಿ, ಚೌಧರಿಯವರ ಜಾತಿ ಅಂಶವು ಕೂಡ ಅವರಿಗೆ ವರದಾನವಾಗಿದೆ. ಅವರು ಬಿಹಾರದ ಜಾತಿ ರಾಜಕಾರಣದಲ್ಲಿ ಯಾದವರ ನಂತರದ ಎರಡನೇ ಅತಿದೊಡ್ಡ ಸಾಮಾಜಿಕ ಗುಂಪಾಗಿರುವ ಕೃಷಿಕ ಒಬಿಸಿ ಸಮುದಾಯದ 'ಕುಶ್ವಾಹ' ಅಥವಾ 'ಕೋಯರಿ' ಜಾತಿಗೆ ಸೇರಿದವರು. ನಿತೀಶ್ ಕುಮಾರ್ ಅವರ ಕುರ್ಮಿ ಜಾತಿಯೊಂದಿಗೆ ಸೇರಿ ಕುಶ್ವಾಹಗಳು ಎನ್ಡಿಎಗೆ ಭದ್ರವಾದ ಸಾಂಪ್ರದಾಯಿಕ ಬೆಂಬಲವನ್ನು ನೀಡುತ್ತಾರೆ.

ರಾಜಕೀಯ ತಂತ್ರಗಾರಿಕೆ

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವರೊಬ್ಬರು 'ದ ಫೆಡರಲ್'ಗೆ ತಿಳಿಸಿರುವಂತೆ, ಪಕ್ಷದ ಉನ್ನತ ನಾಯಕತ್ವವು ಚೌಧರಿಯವರಲ್ಲಿ ಒಬ್ಬ ಪ್ರಬಲ ಒಬಿಸಿ ನಾಯಕನನ್ನು ಕಂಡಿದೆ. ಅವರು ಕಟುವಾದ ಹಿಂದುತ್ವದ ನಾಯಕನಾಗಿ ಮಾತ್ರವಲ್ಲದೆ, ಅಭಿವೃದ್ಧಿಯ ವಿಷಯಗಳ ಮೂಲಕ ಯಾದವೇತರ ಒಬಿಸಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕೇವಲ ಬಿಹಾರದಲ್ಲಿ ಮಾತ್ರವಲ್ಲದೆ, ಮುಂದಿನ ವರ್ಷ ವಿಧಾನಸಭೆ ಚುನಾವಣೆಯನ್ನು ಎದುರಿಸಲಿರುವ ನೆರೆಯ ಉತ್ತರ ಪ್ರದೇಶದಲ್ಲೂ ಪಕ್ಷಕ್ಕೆ ದೊಡ್ಡ ಸವಾಲಾಗಿರುವ ಅಂಶವಾಗಿದೆ. ಅವರನ್ನು ಬಿಹಾರದ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು ಉತ್ತರ ಪ್ರದೇಶಕ್ಕೆ, ವಿಶೇಷವಾಗಿ ಬಿಹಾರಕ್ಕೆ ಹೊಂದಿಕೊಂಡಿರುವ ಪೂರ್ವ ಭಾಗದ ಜಿಲ್ಲೆಗಳಿಗೆ ರಾಜಕೀಯ ಸಂದೇಶ ರವಾನಿಸುವ ನಿರೀಕ್ಷೆಯಿದೆ.

ಇದರ ಹೊರತಾಗಿ, ಬಿಜೆಪಿ ಈಗ ನಿತೀಶ್ ಕುಮಾರ್ ಅವರ ಸಾಂಪ್ರದಾಯಿಕ 'ಲವ-ಕುಶ' (ಕುರ್ಮಿ ಮತ್ತು ಕೋಯರಿ/ಕುಶ್ವಾಹ) ಬೆಂಬಲದ ಮೇಲೆ ಕಣ್ಣಿಟ್ಟಿದೆ ಎಂದು ನಂಬಲಾಗಿದೆ.

ನಿತೀಶ್ ಕುಮಾರ್ ಬಿಹಾರ ರಾಜಕಾರಣದಿಂದ ಹೊರಬಂದು ರಾಜ್ಯಸಭಾ ಸಂಸದರಾಗಿ ದೆಹಲಿಗೆ ತೆರಳುತ್ತಿರುವುದರಿಂದ, ಅವರ ಪಕ್ಷವಾದ ಜೆಡಿಯು ಭವಿಷ್ಯ ಅನಿಶ್ಚಿತವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಕಳೆದ ಎರಡು ದಶಕಗಳಲ್ಲಿ ರಾಜ್ಯ ರಾಜಕಾರಣದಲ್ಲಿ ನಿತೀಶ್ ಅವರ ಶಕ್ತಿಯು ಸಂಪೂರ್ಣವಾಗಿ 'ಲವ-ಕುಶ' ಬೆಂಬಲದ ಮೇಲೆ ನಿಂತಿತ್ತು ಎಂಬುದು ಸರ್ವವಿದಿತ. ಈಗ ಚೌಧರಿಯವರ ಮೂಲಕ ಆ ಭದ್ರಕೋಟೆಯನ್ನು ಭೇದಿಸಲು ಬಿಜೆಪಿ ಯೋಜಿಸಿದೆ.

ಜನಸಂಖ್ಯೆಯ ಲೆಕ್ಕಾಚಾರ

ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಕುಶ್ವಾಹಗಳು ಶೇ. 4.21 ರಷ್ಟಿದ್ದರೆ, ಕುರ್ಮಿಗಳು ಶೇ. 2.87 ರಷ್ಟಿದ್ದಾರೆ. ಒಟ್ಟಾರೆಯಾಗಿ ಇವರು ಸುಮಾರು ಶೇ. 7 ರಷ್ಟಿದ್ದು, ಇದು ಯಾದವರ ಶೇ. 14.26 ರ ಅರ್ಧದಷ್ಟಿದ್ದರೂ ಸಹ, 243 ವಿಧಾನಸಭಾ ಸ್ಥಾನಗಳಲ್ಲಿ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಯಾದವೇತರ ಒಬಿಸಿಗಳ ಈ ಜಾತಿ ಸಮೀಕರಣವು ಉತ್ತರ ಪ್ರದೇಶದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. "2024ರ ಲೋಕಸಭಾ ಚುನಾವಣೆಯಲ್ಲಿ, ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವು ತನ್ನ ಸಾಂಪ್ರದಾಯಿಕ ಯಾದವ ಬೆಂಬಲದೊಂದಿಗೆ ಯಾದವೇತರ ಒಬಿಸಿಗಳನ್ನು (ಮುಖ್ಯವಾಗಿ ಲವ-ಕುಶ) ತನ್ನ ಪರವಾಗಿ ಕ್ರೋಢೀಕರಿಸಿತು, ಇದು ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಕಾರಣವಾಯಿತು. ಇದನ್ನು ಎಚ್ಚರಿಕೆಯೆಂದು ಪರಿಗಣಿಸಿರುವ ಬಿಜೆಪಿ, ಲವ-ಕುಶಗಳಿಂದ ಅಭೂತಪೂರ್ವ ಬೆಂಬಲ ಪಡೆದಿದ್ದ 2022 ರ ವಿಧಾನಸಭಾ ಚುನಾವಣೆಯ ಸೂತ್ರವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ. ಚೌಧರಿಯವರ ಪದೋನ್ನತಿಯನ್ನು ನಿರ್ದಿಷ್ಟವಾಗಿ ಈ ವರ್ಗವನ್ನು ಓಲೈಸಲು ಮಾಡಲಾಗಿದೆ" ಎಂದು ಬಿಹಾರದ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಡುತ್ತಾರೆ.

Read More
Next Story