
ಕೆರೆಯಿಂದ ಕೆರೆಗೆ ಸಾಗುತ್ತಿವೆ ಕೊಳಚೆ ನೀರು! ಹೆಬ್ಬಾಳ-ನಾಗವಾರ ಕಣಿವೆಯ 44 ಕೆರೆಗಳ ವ್ಯಥೆಯ ಕಥೆ!
ಕೆರೆಯ ನೀರು ಕಲುಷಿತವಾಗಬಾರದು ಎಂಬ ಉದ್ದೇಶದಿಂದ ನಿರ್ಮಿಸಲಾದ ತಿರುವು ಕಾಲುವೆಗಳು ಕೆರೆಗಳನ್ನೇ ಒಣಗಿಸುತ್ತಿವೆ. 44 ಕೆರೆಗಳಲ್ಲಿ ಸುಮಾರು 13 ಕೆರೆಗಳು ಇಂತಹ ಕಾಲುವೆಗಳನ್ನು ಹೊಂದಿವೆ.
ಒಂದೊಮ್ಮೆ 'ಸಾವಿರ ಕೆರೆಗಳ ನಾಡು' ಎಂದು ಕರೆಯಲ್ಪಡುತ್ತಿದ್ದ ಬೆಂಗಳೂರು, ಇಂದು ಜಾಗತಿಕ ತಂತ್ರಜ್ಞಾನ ಭೂಪಟದಲ್ಲಿ ಖ್ಯಾತಿ ಪಡೆದಿದೆ. ಆದರೆ ಈ ಬೆಳವಣಿಗೆಯ ಬೆನ್ನಲ್ಲೇ ನಗರದ ಐತಿಹಾಸಿಕ ಜಲಮೂಲಗಳು ತನ್ನ ನೈಸರ್ಗಿಕತೆಯನ್ನು ಕಳೆದುಕೊಳ್ಳುತ್ತಿವೆ. ಬೆಂಗಳೂರಿನ ಹೆಬ್ಬಾಳ-ನಾಗವಾರ ಕಣಿವೆಯ 44 ಅಂತರ್ ಸಂಪರ್ಕಿತ ಕೆರೆಗಳು ಈಗ ಮಳೆಯಿಂದಲ್ಲ, ಬದಲಾಗಿ ಕೊಳಚೆ ನೀರಿನಿಂದ ಬದುಕುತ್ತಿವೆ..!
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದಲ್ಲಿ ವೆಲ್ ಲ್ಯಾಬ್ಸ್ ನಡೆಸಿರುವ ಅಧ್ಯಯನದಿಂದ ಹೆಬ್ಬಾಳ-ನಾಗವಾರ ಕಣಿವೆಗಳು ಕಲುಷಿತಗೊಂಡಿವೆ ಎಂಬುದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಈ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದು, ಒಂದು ಕೆರೆ ತುಂಬಿದಾಗ ಅದರ ನೀರು ರಾಜಕಾಲುವೆಯ ಮೂಲಕ ಮುಂದಿನ ಕೆರೆಗೆ ಹರಿಯುತ್ತದೆ. 204 ಚ. ಕಿ. ಮೀ ವಿಸ್ತೀರ್ಣದ ಹೆಬ್ಬಾಳ-ನಾಗವಾರ ಕಣಿವೆಯ ಮೇಲೆ ಕೇಂದ್ರೀಕರಿಸಿ 44 ಕೆರೆಗಳ ಕಾರ್ಯವೈಖರಿಯನ್ನು ಅಧ್ಯಯನ ನಡೆಸಲು ಜಲವಿಜ್ಞಾನ ಮಾದರಿ ಸಿದ್ಧಪಡಿಸಲಾಯಿತು. ಈ ಮಾದರಿಯು ಕೇವಲ ಮಳೆ ಮತ್ತು ಹರಿವ ನೀರನ್ನು ಮಾತ್ರವಲ್ಲದೆ, ಸಂಸ್ಕರಿಸಿದ ಮತ್ತು ಸಂಸ್ಕರಿಸದ ಕೊಳಚೆ ನೀರು ಹೇಗೆ ಈ ಕೆರೆಗಳನ್ನು ಸೇರುತ್ತಿದೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ ಕೆರೆಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಿ, ಸುದೀರ್ಘ ಕಾಲದ ದತ್ತಾಂಶಗಳನ್ನು ವಿಶ್ಲೇಷಿಸಲಾಗಿದೆ.
ಮಳೆಗಿಂತ ಕೊಳಚೆ ನೀರೇ ಪ್ರಧಾನ ಮೂಲ
ಅಧ್ಯಯನದ ಅತ್ಯಂತ ಮಹತ್ವದ ಅಂಶವೆಂದರೆ, ನಗರದ ಕೆರೆಗಳಿಗೆ ಈಗ ಮಳೆಗಿಂತ ಒಳಚರಂಡಿ ನೀರೇ ಪ್ರಮುಖ ಆಧಾರವಾಗಿದೆ. ವರದಿಯ ಪ್ರಕಾರ, ಈ ಜಾಲದ ಶೇ. 30ರಷ್ಟು ಕೆರೆಗಳು ಮಳೆನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ನೀರನ್ನು ಪಡೆಯುತ್ತಿವೆ. ಕಣಿವೆಯ ಕೆಳಭಾಗದಲ್ಲಿರುವ ಕೆರೆಗಳಲ್ಲಿ ಕೊಳಚೆ ನೀರಿನ ಪ್ರಮಾಣವು ಶೇ. 62ಕ್ಕೆ ಹೆಚ್ಚಳವಾಗುತ್ತದೆ. ಬರಗಾಲ ಅಥವಾ ಮಳೆ ಕಡಿಮೆ ಇರುವ ವರ್ಷಗಳಲ್ಲಿ, ಕೆಲವು ಕೆರೆಗಳಿಗೆ ಬರುವ ಶೇ. 95ರಷ್ಟು ನೀರು ಕೇವಲ ಕೊಳಚೆ ನೀರೇ ಆಗಿರುತ್ತದೆ. ಇದರಿಂದಾಗಿ, ಹಿಂದೆ ಕೇವಲ ಮಳೆಗಾಲದಲ್ಲಿ ತುಂಬಿ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದ್ದ ಕೆರೆಗಳು ಈಗ ವರ್ಷವಿಡೀ ಕೊಳಚೆ ನೀರಿನಿಂದ ತುಂಬಿರುವುದು ಅಧ್ಯಯನದ ಮೂಲಕ ಗೊತ್ತಾಗಿದೆ.
ಮೇಲ್ಭಾಗದ ಕೆರೆಗಳು ನಗರದ ಹೊರವಲಯದಲ್ಲಿದ್ದು, ಇಂದಿಗೂ ಹೆಚ್ಚಾಗಿ ಮಳೆನೀರನ್ನು ಅವಲಂಬಿಸಿವೆ. ಇವು ಮಳೆಗಾಲದಲ್ಲಿ ಪ್ರವಾಹವನ್ನು ತಡೆಹಿಡಿಯುವ ಸಾಮರ್ಥ್ಯ ಹೊಂದಿವೆ. ಕೆಳಭಾಗದ ಕೆರೆಗಳು ಮೇಲ್ಭಾಗದ ಎಲ್ಲಾ ಕೊಳಚೆ ನೀರು ಮತ್ತು ತ್ಯಾಜ್ಯಗಳು ಹರಿದು ಬಂದು ಇಲ್ಲಿ ಸೇರುತ್ತವೆ. ಇವು ಸದಾ ಕಾಲ ತುಂಬಿರುವುದರಿಂದ, ಮಳೆಗಾಲದಲ್ಲಿ ಹೆಚ್ಚಿನ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿವೆ. ಆದರೆ, ಸರಿಯಾಗಿ ಸಂಸ್ಕರಿಸಿದರೆ ಈ ನೀರನ್ನು ಮರುಬಳಕೆ ಮಾಡಲು ಹೆಚ್ಚಿನ ಅವಕಾಶವಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ನಿರ್ವಹಣಾ ವೈಫಲ್ಯಗಳು ಹಾಗೂ ಅವೈಜ್ಞಾನಿಕ ಕ್ರಮಗಳು
ಬೆಂಗಳೂರಿನ ಕೆರೆಗಳನ್ನು ನಿರ್ವಹಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಥವಾ ಇತರ ಪ್ರಾಧಿಕಾರಗಳು ಎಲ್ಲಾ ಕೆರೆಗಳಿಗೂ ಒಂದೇ ರೀತಿಯ ಸೂತ್ರವನ್ನು ಅಳವಡಿಸುತ್ತಿವೆ. ಅಧ್ಯಯನ ಪ್ರಕಾರ ಇದು ತಪ್ಪು ಎನ್ನಲಾಗಿದೆ. ಉದಾಹರಣೆಗೆ, ಮಳೆಗಾಲಕ್ಕೆ ಮುನ್ನ ಕೆರೆಯನ್ನು ಖಾಲಿ ಮಾಡಲು ಅಳವಡಿಸುವ 'ಸ್ಲೂಯಿಸ್ ಗೇಟ್'ಗಳು ಮೇಲ್ಭಾಗದ ಕೆರೆಗಳಿಗೆ ಉಪಯುಕ್ತ. ಆದರೆ, ಸದಾ ಕಾಲ ಕೊಳಚೆ ನೀರು ಹರಿದು ಬರುವ ಕೆಳಭಾಗದ ಕೆರೆಗಳಲ್ಲಿ ಇವುಗಳಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲಿ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸುವುದು ಮಾತ್ರ ಪರಿಹಾರ ಎಂದು ಹೇಳಲಾಗಿದೆ.
ಕೊಳಚೆ ನೀರು ತಿರುವು ಕಾಲುವೆಗಳ ವಿಪರ್ಯಾಸ
ಕೆರೆಯ ನೀರು ಕಲುಷಿತವಾಗಬಾರದು ಎಂಬ ಉದ್ದೇಶದಿಂದ ನಿರ್ಮಿಸಲಾದ ತಿರುವು ಕಾಲುವೆಗಳು ಕೆಲವೊಮ್ಮೆ ಕೆರೆಗಳನ್ನೇ ಒಣಗಿಸುತ್ತಿವೆ. 44 ಕೆರೆಗಳಲ್ಲಿ ಸುಮಾರು 13 ಕೆರೆಗಳು ಇಂತಹ ಕಾಲುವೆಗಳನ್ನು ಹೊಂದಿವೆ. ಇವು ಸಾಧಾರಣ ದಿನಗಳಲ್ಲಿ ಬರುವ ಕೊಳಚೆ ನೀರನ್ನು ಕೆರೆಗೆ ಸೇರಲು ಬಿಡುವುದಿಲ್ಲ. ಆದರೆ ಆ ಕೆರೆಗಳಿಗೆ ಮಳೆನೀರನ್ನು ಹೊರತುಪಡಿಸಿ ಬೇರೆ ಯಾವುದೇ ನೈಸರ್ಗಿಕ ನೀರಿನ ಮೂಲವಿಲ್ಲದ ಕಾರಣ, ಅಂತಹ ಕೆರೆಗಳು ವರ್ಷದ ಬಹುಭಾಗ ಒಣಗಿರುತ್ತವೆ. ಇದು ಜಲಮೂಲಗಳ ರಕ್ಷಣೆಯ ಹೆಸರಿನಲ್ಲಿ ಜಲಮೂಲವನ್ನೇ ನಾಶಪಡಿಸಿದಂತೆ ಎಂದು ವಿಶ್ಲೇಷಿಸಲಾಗಿದೆ.
ಸಾಮಾನ್ಯವಾಗಿ ಸರ್ಕಾರಗಳು ಯಾವುದಾದರೂ ಒಂದು ದೊಡ್ಡ ಅಥವಾ ಪ್ರಸಿದ್ಧ ಕೆರೆಯನ್ನು (ಉದಾಹರಣೆಗೆ ಅಗರ ಅಥವಾ ಬೆಳ್ಳಂದೂರು) ಮಾತ್ರ ಅಭಿವೃದ್ಧಿಪಡಿಸಲು ಮುಂದಾಗುತ್ತವೆ. ಆದರೆ ಕೆರೆಗಳು ಸರಣಿ ರೂಪದಲ್ಲಿರುವುದರಿಂದ ಮೇಲ್ಭಾಗದ ಕೆರೆಯಲ್ಲಿ ಆಗುವ ಮಾಲಿನ್ಯವು ಇಡೀ ಸರಪಳಿಯ ಮೇಲೆ ಪರಿಣಾಮ ಬೀರುತ್ತದೆ. ಒಂದು ಕೆರೆಯನ್ನು ಮಾತ್ರ ಪ್ರತ್ಯೇಕವಾಗಿ ನೋಡಿ ಸರಿಪಡಿಸಲು ಸಾಧ್ಯವಿಲ್ಲ. ಇಡೀ ಕಣಿವೆಯನ್ನು ಒಂದು ವ್ಯವಸ್ಥೆಯಾಗಿ ನೋಡಿ ನಿರ್ವಹಿಸಬೇಕಿದೆ ಎಂದು ವೆಲ್ ಲ್ಯಾಬ್ಸ್ ಸಂಸ್ಥೆಯ ಸಂಶೋಧಕಿ ರಶ್ಮಿ ಕುಲರಂಜನ್ ದ ಫೆಡರಲ್ ಕರ್ನಾಟಕಕ್ಕೆ ಹೇಳಿದ್ದಾರೆ.
ಮೊದಲ ಬಾರಿಗೆ ಕಣಿವೆಯ ಎಲ್ಲಾ 44 ಕೆರೆಗಳನ್ನು ಒಂದೇ ವ್ಯವಸ್ಥೆಯಾಗಿ ನೋಡಿ ಅಧ್ಯಯನ ಮಾಡಲಾಯಿತು. ಕೆರೆಗಳಲ್ಲಿ ನೀರಿನ ಮಟ್ಟವನ್ನು ಅಳೆಯಲು ವಿಶೇಷ ಸೆನ್ಸರ್‌ಗಳನ್ನು ಅಳವಡಿಸಲಾಯಿತು. ಮಳೆ ನೀರು ಎಷ್ಟು ಬರುತ್ತದೆ ಮತ್ತು ನಗರದ ಮನೆಗಳಿಂದ ಹೊರಬರುವ ಕೊಳಚೆ ನೀರು ಎಷ್ಟು ಸೇರುತ್ತದೆ ಎಂಬುದನ್ನು ಲೆಕ್ಕ ಹಾಕಲು ಒಂದು ಕಂಪ್ಯೂಟರ್ ಮಾದರಿಯನ್ನು ಸಿದ್ಧಪಡಿಸಲಾಯಿತು. ಹಿಂದೆ ಕೆರೆಗಳು ಕೇವಲ ಮಳೆಗಾಲದಲ್ಲಿ ತುಂಬುತ್ತಿದ್ದವು ಮತ್ತು ಬೇಸಿಗೆಯಲ್ಲಿ ಒಣಗುತ್ತಿದ್ದವು. ಆದರೆ ಈಗ ಪರಿಸ್ಥಿತಿ ತಲೆಕೆಳಗಾಗಿದೆ. ನಗರದ ಜನಸಂಖ್ಯೆ ಹೆಚ್ಚಾದಂತೆ ಮನೆಗಳಿಂದ ಹೊರಬರುವ ಕೊಳಚೆ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಈ ನೀರು ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ನೇರವಾಗಿ ಕೆರೆಗಳನ್ನು ಸೇರುತ್ತಿದೆ. ಕೆರೆಗಳು ಮಾಲಿನ್ಯ ರಹಿತವಾಗಿ ರಕ್ಷಣೆ ಮಾಡಬೇಕಿದೆ. ಕೆರೆಗಳು ಕೊಳಚೆ ನೀರಿನಿಂದ ಮಾಲಿನ್ಯವಾಗುವುದರಿಂದ ನೀರಿನಲ್ಲಿನ ಜಲಚರಗಳ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಒಂದು ಕೆರೆಯನ್ನು ಸುಂದರಗೊಳಿಸಿದರೆ ಸಾಲದು. ಆ ಕೆರೆಗೆ ನೀರು ಎಲ್ಲಿಂದ ಬರುತ್ತದೆ ಮತ್ತು ಅಲ್ಲಿಂದ ನೀರು ಎಲ್ಲಿಗೆ ಹೋಗುತ್ತದೆ ಎಂಬ ಇಡೀ ಸರಪಳಿಯನ್ನು ಶುದ್ಧವಾಗಿಡಬೇಕು. ಮೇಲಿನ ಕೆರೆ ಶುದ್ಧವಾದರೆ ಮಾತ್ರ ಕೆಳಗಿನ ಕೆರೆ ಶುದ್ಧವಾಗಲು ಸಾಧ್ಯ. ಕೊಳಚೆ ನೀರನ್ನು ಕೇವಲ ತ್ಯಾಜ್ಯ ಎಂದು ಭಾವಿಸದೆ, ಅದನ್ನು ಆಧುನಿಕ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ, ಆ ನೀರನ್ನು ಕೆರೆಗಳಿಗೆ ಹರಿಸಬೇಕು. ಈ ನೀರನ್ನು ಕೃಷಿ ಅಥವಾ ಇತರೆ ಕಾರ್ಯಗಳಿಗಾಗಿ ಬಳಕೆ ಮಾಡಬಹುದು ಎಂದರು.
ನೀರು ಹರಿವಿನ ಮೂಲ ತಿಳಿದುಕೊಳ್ಳಬೇಕು
ವೆಲ್‌ಲ್ಯಾಬ್ಸ್ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕರಾದ ವೀಣಾ ಶ್ರೀನಿವಾಸನ್ ಮಾತನಾಡಿ, ಮಳೆಯಾಧಾರಿತವಾಗಿದ್ದ ಕೆರೆಗಳು ಕೊಳಚೆ ನೀರಾಧಾರಿತವಾದಾಗ, ಅಂತರ್ಜಲದ ಗುಣಮಟ್ಟವೂ ಹದಗೆಡುತ್ತದೆ. ಅಲ್ಲದೆ, ಕೆರೆಗಳು ಸದಾ ತುಂಬಿರುವುದರಿಂದ ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾಗುವ ಅಪಾಯ ಹೆಚ್ಚಾಗಿದೆ. ಈ ಅಧ್ಯಯನವು ಕೇವಲ ಬೆಂಗಳೂರಿಗೆ ಮಾತ್ರವಲ್ಲದೆ, ಇದೇ ರೀತಿಯ ಭೌಗೋಳಿಕ ರಚನೆ ಹೊಂದಿರುವ ಹೈದರಾಬಾದ್, ಚೆನ್ನೈ ಹಾಗೂ ಮೈಸೂರಿನಂತಹ ನಗರಗಳಿಗೂ ಸಹಕಾರಿಯಾಗಲಿದೆ. ದಕ್ಷಿಣ ಭಾರತದ ನಗರಗಳಲ್ಲಿ ಕೆರೆಗಳ ಸರಣಿ ವ್ಯವಸ್ಥೆ ಸಾಮಾನ್ಯವಾಗಿದ್ದು, ಎಲ್ಲೆಡೆ ನಗರೀಕರಣವು ಇದೇ ರೀತಿಯ ಸವಾಲುಗಳನ್ನು ಎದುರಿಸುವಂತಾಗಿದೆ ಎಂದು ಆಭಿಪ್ರಾಯಪಟ್ಟರು.
ಸಂಶೋಧನೆಯು ಕೆರೆಗಳ ನಿರ್ವಹಣೆಗೆ ಒಂದು ಚೌಕಟ್ಟನ್ನು ನೀಡಲಾಗಿದೆ. ಕೆರೆಯು ಕಣಿವೆಯ ಯಾವ ಭಾಗದಲ್ಲಿದೆ ಎಂಬುದನ್ನು ಸರ್ಕಾರವು ಗುರುತಿಸಬೇಕು. ಅದಕ್ಕೆ ಹರಿದು ಬರುವ ನೀರಿನ ಮೂಲ ಯಾವುದು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆ ಕೆರೆಯ ನೀರಿನ ಮಟ್ಟ ವರ್ಷದ ವಿವಿಧ ಕಾಲಗಳಲ್ಲಿ ಹೇಗೆ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕು. ಒಂದು ಕೆರೆಯು ಮಳೆಯಿಂದ ತುಂಬುತ್ತಿದ್ದರೆ ಅದನ್ನು ಪ್ರವಾಹ ನಿಯಂತ್ರಣ ಮತ್ತು ಪರಿಸರ ವ್ಯವಸ್ಥೆಗಾಗಿ ಬಳಸಿ. ಒಂದು ವೇಳೆ ಕೆರೆಯು ಕೊಳಚೆ ನೀರಿನಿಂದ ತುಂಬುತ್ತಿದ್ದರೆ, ಸಂಸ್ಕರಣಾ ಘಟಕಗಳನ್ನು ಅಳವಡಿಸಿ ಆ ನೀರನ್ನು ಮರುಬಳಕೆಗೆ ಅಥವಾ ಕೈಗಾರಿಕಾ ಉದ್ದೇಶಗಳಿಗೆ ಬಳಸಿಕೊಳ್ಳುವ ಯೋಜನೆ ರೂಪಿಸಬೇಕು ಎಂದು ವೀಣಾ ಶ್ರೀನಿವಾಸನ್ ಹೇಳಿದ್ದಾರೆ.
ನಗರದ ಯೋಜಕರಿಗೆ ಈ ವರದಿಯು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಸಿಮೆಂಟ್ ಕಾಮಗಾರಿಗಳ ಮೂಲಕ ಕೆರೆ ಅಭಿವೃದ್ಧಿ ಮಾಡುವ ಬದಲು, ನೀರಿನ ಹರಿವಿನ ವಿಜ್ಞಾನವನ್ನು ಅರ್ಥೈಸಿಕೊಂಡು ಸಮಗ್ರ ನಿರ್ವಹಣೆ ಮಾಡಿದರೆ ಮಾತ್ರ ಬೆಂಗಳೂರಿನ ಕೆರೆಗಳನ್ನು ಉಳಿಸಲು ಸಾಧ್ಯ. ಹೀಗಾಗಿ ಜಿಬಿಎ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಗಳು ಈ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

