
HAL Airport: ವಾಯುಯಾನ ಕ್ರಾಂತಿ; ಬೆಂಗಳೂರಿನಲ್ಲಿ ತಲೆಎತ್ತಲಿದೆ ‘ಏರೋಸ್ಪೇಸ್ ನವೋದಯ’
ಸುಮಾರು 700 ಎಕರೆ ಭೂಮಿಯನ್ನು ಮರುಅಭಿವೃದ್ಧಿಗೊಳಿಸಿ, ಅದನ್ನು ಜಾಗತಿಕ ಮಟ್ಟದ ‘ಏರೋಸ್ಪೇಸ್ ಹಬ್’ ಆಗಿ ಪರಿವರ್ತಿಸುವ 10 ವರ್ಷಗಳ ಸಮಗ್ರ ಯೋಜನೆಯನ್ನು ಪ್ರಸ್ತಾಪಿಸಿದೆ.
ಭಾರತದ ಸಿಲಿಕಾನ್ ಸಿಟಿ, ಐಟಿ-ಬಿಟಿ ರಾಜಧಾನಿ ಎಂದೇ ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಬೆಂಗಳೂರು, ಇದೀಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಲು ಸಜ್ಜಾಗುತ್ತಿದೆ. 2036ರ ವೇಳೆಗೆ ಬೆಂಗಳೂರನ್ನು ವಿಶ್ವದ ಅಗ್ರಗಣ್ಯ ವಾಯುಯಾನ ಮತ್ತು ಏರೋಸ್ಪೇಸ್ ಕೇಂದ್ರಗಳಲ್ಲಿ (Global Aerospace Hub) ಒಂದನ್ನಾಗಿ ರೂಪಿಸುವ ಬೃಹತ್ ಕನಸನ್ನು ರಾಜ್ಯ ಸರ್ಕಾರ ಬಿತ್ತಿದೆ. ನಗರದ ಹೃದಯಭಾಗದಲ್ಲಿರುವ ಎಚ್‌ಎಎಲ್ (HAL) ಹಳೇ ವಿಮಾನ ನಿಲ್ದಾಣದ ಬಳಕೆಯಾಗದ ಸುಮಾರು 700 ಎಕರೆ ವಿಸ್ತಾರವಾದ ಭೂಮಿಯನ್ನು ಮರುಅಭಿವೃದ್ಧಿಗೊಳಿಸಿ, ಜಾಗತಿಕ ಮಟ್ಟದ ಏರೋಸ್ಪೇಸ್ ಹಬ್ ಆಗಿ ಪರಿವರ್ತಿಸುವ 10 ವರ್ಷಗಳ ದೂರದೃಷ್ಟಿಯ ಸಮಗ್ರ ಯೋಜನೆ ಇದೀಗ ರೂಪುಗೊಂಡಿದೆ.
ಯೋಜನೆಯ ಹಿಂದಿರುವ ಶಕ್ತಿ ಮತ್ತು ಪ್ರಸ್ತಾವನೆ
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗವು ಜಂಟಿಯಾಗಿ ಈ ಬೃಹತ್ ಪ್ರಸ್ತಾವನೆಯನ್ನು ಸಿದ್ಧಪಡಿಸಿವೆ. ಆಯೋಗದ ಸದಸ್ಯರಾದ ಎಸ್. ಮೋಹನದಾಸ್ ಹೆಗ್ಡೆ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಈ ಕುರಿತು ವಿಸ್ತೃತ ಪತ್ರ ಬರೆದಿದ್ದು, 'ಬೆಂಗಳೂರು ಎಚ್‌ಎಎಲ್ ಏರೋಸ್ಪೇಸ್ ನವೋದಯ ಮಾಸ್ಟರ್‌ಪ್ಲಾನ್ (2026-2036)' ಅನ್ನು ಕೇಂದ್ರ ಸರ್ಕಾರದ ಅಂತಿಮ ಅನುಮೋದನೆಗೆ ಸಲ್ಲಿಸುವಂತೆ ಶಿಫಾರಸು ಮಾಡಿದ್ದಾರೆ.
ರಾಜ್ಯ ಸರ್ಕಾರದ ಮುಂದಿರುವ ಈ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಒಪ್ಪಿಗೆ ಹಾಗೂ ಜಂಟಿ ಮೂಲಸೌಕರ್ಯ ಹೂಡಿಕೆಯ ಬೆಂಬಲದ ಅಗತ್ಯವಿದೆ. 2026ರಲ್ಲಿ ಅಧಿಕೃತ ಚಾಲನೆ ಸಿಕ್ಕರೆ, ಮುಂದಿನ ದಶಕದಲ್ಲಿ ಬೆಂಗಳೂರು ಕೇವಲ ಐಟಿ ಮಾತ್ರವಲ್ಲ, ಅಂತರಿಕ್ಷ ಮತ್ತು ವಾಯುಯಾನ ಉತ್ಪಾದನಾ ಕ್ಷೇತ್ರದಲ್ಲೂ ವಿಶ್ವದ ಟಾಪ್-5 ನಗರಗಳಲ್ಲಿ ಒಂದಾಗಬಹುದು ಎಂದು ಈ ಕ್ಷೇತ್ರದ ಪರಿಣತರು ಅಭಿಪ್ರಾಯಪಡುತ್ತಾರೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಆಯೋಗದ ಸದಸ್ಯ ಎಸ್. ಮೋಹನದಾಸ್ ಹೆಗ್ಡೆ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಮತ್ತು ರಾಜ್ಯ ನೀತಿ ಹಾಗೂ ಯೋಜನೆ ಆಯೋಗವು ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಕೇಂದ್ರ ಸರ್ಕಾರದಿಂದ ನಿಯಂತ್ರಕ ಪರವಾನಗಿಗಳು ಮತ್ತು ಹಣಕಾಸಿನ ನೆರವು ಕೋರಿದೆ. ಈ ಸಮಗ್ರ ಯೋಜನೆಯು ಕೇವಲ ರಾಜ್ಯಮಟ್ಟದ ಉಪಕ್ರಮವಲ್ಲ. ಇದು ರಾಷ್ಟ್ರೀಯ ಸಾಮರ್ಥ್ಯವನ್ನು ವೃದ್ಧಿಸುವ ವೇದಿಕೆಯಾಗಿದೆ. ಇದು ಭಾರತದ ರಕ್ಷಣಾ ಸನ್ನದ್ಧತೆ, ವಾಯುಯಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.
ಜಾಗತಿಕ ಮಾದರಿಯಿಂದ ಪ್ರೇರಣೆ
ಜರ್ಮನಿಯ ಹ್ಯಾಂಬರ್ಗ್, ಫ್ರಾನ್ಸ್‌ನ ಟೌಲೌಸ್ ಮತ್ತು ಅಮೆರಿಕದ ಸಿಯಾಟಲ್ ನಗರಗಳು ಏರೋಸ್ಪೇಸ್ ಕ್ಷೇತ್ರದಲ್ಲಿ ಜಗತ್ತಿಗೇ ಮಾದರಿಯಾಗಿವೆ. ಅದೇ ಮಾದರಿಯಲ್ಲಿ ಬೆಂಗಳೂರಿನ ಈ ಯೋಜನೆಯನ್ನು ರೂಪಿಸಲಾಗಿದೆ. ರಕ್ಷಣಾ ಕ್ಷೇತ್ರ, ನಾಗರಿಕ ವಿಮಾನಯಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನಈ ಮೂರೂ ವಲಯಗಳನ್ನು ಒಂದೇ ಸೂರಿನಡಿ ತರುವುದು ಯೋಜನೆಯ ದೊಡ್ಡ ಆಕರ್ಷಣೆ.
ಏರೋಸ್ಪೇಸ್ ನವೋದಯ'ದ ಹಿಂದೆ ಹಲವು ಯೋಜನೆಗಳಿವೆ
ಭವಿಷ್ಯದ ನಗರ ಸಾರಿಗೆಯಲ್ಲಿ ಕ್ರಾಂತಿ ತರಬಲ್ಲ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳ (eVTOL) ಪರೀಕ್ಷೆ ಮತ್ತು ಹಾರಾಟಕ್ಕಾಗಿ ಪ್ರತ್ಯೇಕ ಕಾರಿಡಾರ್‌ಗಳನ್ನು ಇಲ್ಲಿ ಅಭಿವೃದ್ಧಿಯಾಗಲಿದೆ. ಫ್ರೆಂಚ್ ಮೂಲದ ಪ್ರಖ್ಯಾತ ಕಂಪನಿ ಸಫ್ರಾನ್ ಸೇರಿದಂತೆ ಜಾಗತಿಕ ದಿಗ್ಗಜರೊಂದಿಗೆ ಕೈಜೋಡಿಸಿ ರಫೇಲ್ ಯುದ್ಧ ವಿಮಾನಗಳ ಎಂಜಿನ್ ನಿರ್ವಹಣೆ ಮತ್ತು ಬಹು-ಸಂಸ್ಥೆಗಳ ದುರಸ್ತಿ ಮತ್ತು ನಿರ್ವಹಣಾ (MRO) ಕ್ಲಸ್ಟರ್ ಸ್ಥಾಪನೆಯಾಗಲಿದೆ. ಭಾರತ ಈಗಾಗಲೇ ರಫೆಲ್ ಯುದ್ಧ ವಿಮಾನವನ್ನು ಖರೀದಿ ಮಾಡುತ್ತಿದ್ದು, ಅದರ ನಿರ್ವಹಣೆ ಇಲ್ಲಿ ನಡೆಯಲಿದೆ.
ದಶಕಗಳ ಕಾಲ ಸ್ಥಗಿತಗೊಂಡಿದ್ದ ನಾಗರಿಕ ವಿಮಾನ ಸಂಚಾರವನ್ನು ಎಚ್‌ಎಎಲ್‌ನಲ್ಲಿ ಮರುಆರಂಭಿಸಲು ಕೇಂದ್ರ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿದ್ದು, ಟರ್ಮಿನಲ್ ವಿಸ್ತರಣೆಗೆ ಅನುಮೋದನೆ ನೀಡಿದೆ. ಈ ಯೋಜನೆ ಜತೆಗೆ 2033ರ ವೇಳೆಗೆ ಇಲ್ಲಿಂದಲೇ ವಾಣಿಜ್ಯ ಮತ್ತು ಪ್ರಯಾಣಿಕರ ವಿಮಾನಗಳು ಹಾರಾಟ ನಡೆಸುವ ನಿರೀಕ್ಷೆ ಇದೆ.
ಲಕ್ಷಾಂತರ ಉದ್ಯೋಗ ಸೃಷ್ಟಿ
ಈ ಯೋಜನೆ ಕರ್ನಾಟಕದ ಪಾಲಿಗೆ ಆರ್ಥಿಕ ಕ್ರಾಂತಿಯಾಗಲಿದೆ. ಹತ್ತು ವರ್ಷಗಳಲ್ಲಿ ಬರೋಬ್ಬರಿ 20 ಬಿಲಿಯನ್ ಡಾಲರ್ (ಅಂದರೆ ಅಂದಾಜು 1.6 ಲಕ್ಷ ಕೋಟಿ ರೂ.) ಮೊತ್ತದ ಏರೋಸ್ಪೇಸ್ ಆರ್ಥಿಕತೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ವಿಜ್ಞಾನಿಗಳು, ಎಂಜಿನಿಯರ್‌ಗಳು, ಸಂಶೋಧಕರು ಮತ್ತು ತಾಂತ್ರಿಕ ಪರಿಣಿತರಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಉನ್ನತಮಟ್ಟದ ನುರಿತ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಏರ್‌ಬಸ್, ಬೋಯಿಂಗ್, ಎಂಬ್ರಾಯರ್, ರೋಲ್ಸ್ ರಾಯ್ಸ್, ಜಿಇ ಏರೋಸ್ಪೇಸ್ ಮುಂತಾದ ಜಾಗತಿಕ ಉತ್ಪಾದನಾ ಕಂಪನಿಗಳು ಇಲ್ಲಿ ಬಂಡವಾಳ ಹೂಡಲಿದ್ದು, ಭಾರತೀಯ ವಾಯುಪಡೆ, ಡಿಆರ್‌ಡಿಒ ಮತ್ತು ಇಸ್ರೋ ನಂತಹ ದೇಶೀಯ ಸಂಸ್ಥೆಗಳ ಜೊತೆಗೂಡಿ ಬಲಿಷ್ಠ ಪರಿಸರ ವ್ಯವಸ್ಥೆ (Ecosystem) ನಿರ್ಮಾಣವಾಗಲಿದೆ.
ಮೂರು ಹಂತಗಳ 10 ವರ್ಷದ ಮಾಸ್ಟರ್‌ಪ್ಲಾನ್
ಈ 10 ವರ್ಷಗಳ (2026-2036) ಮಾಸ್ಟರ್‌ಪ್ಲಾನ್ ಅನ್ನು ಅತ್ಯಂತ ವ್ಯವಸ್ಥಿತವಾಗಿ ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುತ್ತದೆ.
ಮೊದಲ ಹಂತವಾಗಿರುವ (2026-2029 - ಅಡಿಪಾಯ ಮತ್ತು ಮೂಲಸೌಕರ್ಯ) ಮೊದಲ ಮೂರು ವರ್ಷಗಳು ಸಂಪೂರ್ಣವಾಗಿ ಆಡಳಿತಾತ್ಮಕ ಸಿದ್ಧತೆ, ಪರವಾನಗಿಗಳ ಹಂಚಿಕೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಮೀಸಲು. 700 ಎಕರೆ ಭೂಮಿಯ ಗರಿಷ್ಠ ಬಳಕೆಗೆ ನೀಲನಕ್ಷೆ, ವಾಯುಯಾನ ಕ್ಷೇತ್ರಕ್ಕೆ ಪ್ರತ್ಯೇಕವಾದ 5G/6G ನೆಟ್‌ವರ್ಕ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ವ್ಯವಸ್ಥೆಯ ಜಾರಿ ಹಾಗೂ ಜಾಗತಿಕ ಕಂಪನಿಗಳನ್ನು ಆಕರ್ಷಿಸಲು ವೇದಿಕೆ ಸಿದ್ಧಪಡಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.
ಎರಡನೇ ಹಂತದಲ್ಲಿ (2029-2033 - ತಂತ್ರಜ್ಞಾನ ಮತ್ತು ಸೇವಾ ಕೇಂದ್ರಗಳು): ವಿಮಾನ ಬಿಡಿಭಾಗಗಳ ತಯಾರಿಕೆ, ಸ್ಮಾರ್ಟ್ ಹ್ಯಾಂಗರ್‌ಗಳು, ಮತ್ತು ವಿಮಾನ ನಿಲ್ದಾಣದ ಕಾರ್ಯಕ್ಷಮತೆ ಹೆಚ್ಚಿಸಲು ಡಿಜಿಟಲ್ ಪ್ರತಿರೂಪದ ತಂತ್ರಜ್ಞಾನ ಳಕೆ. ರೋಬೋಟಿಕ್ಸ್ ತಂತ್ರಜ್ಞಾನದ ಮೂಲಕ ವಿಮಾನಗಳ ಅತ್ಯಾಧುನಿಕ ನಿರ್ವಹಣಾ ವ್ಯವಸ್ಥೆ ಅಳವಡಿಕೆಯಾಗಲಿದೆ.
ಮೂರನೇ ಹಂತ (2033-2036 - ಏಕೀಕರಣ ಮತ್ತು ಹಸಿರು ಇಂಧನ): ನಾಗರಿಕ, ರಕ್ಷಣೆ ಮತ್ತು ಬಾಹ್ಯಾಕಾಶ ವಾಯುಯಾನ ವ್ಯವಸ್ಥೆಗಳ ಸಂಪೂರ್ಣ ಏಕೀಕರಣ. ಸಂಪೂರ್ಣವಾಗಿ 'ಕ್ಲೀನ್ ಎನರ್ಜಿ' ಅಥವಾ ಹಸಿರು ಇಂಧನ ಬಳಕೆಗೆ ಒತ್ತು ನೀಡಿ, ಪರಿಸರಸ್ನೇಹಿ ಹಬ್ ಆಗಿ ಕಾರ್ಯಾರಂಭಗೊಳ್ಳಲಿದೆ.

