ಬಕ್ರೀದ್‌ಗೂ ಮುನ್ನವೇ ಗೋಹತ್ಯೆಗೆ ಅಂಕುಶ: ತೀವ್ರ ಸಂಕಷ್ಟಕ್ಕೆ ಸಿಲುಕಿದ ಪ.ಬಂಗಾಳದ ಹಿಂದೂ ಹೈನುಗಾರರು
x
ಜಾನುವಾರುಗಳನ್ನು ಸಾರ್ವಜನಿಕವಾಗಿ ಸಾಗಾಟ ಮಾಡುವುದು ಮತ್ತು ಹತ್ಯೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿ ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ.

ಬಕ್ರೀದ್‌ಗೂ ಮುನ್ನವೇ ಗೋಹತ್ಯೆಗೆ ಅಂಕುಶ: ತೀವ್ರ ಸಂಕಷ್ಟಕ್ಕೆ ಸಿಲುಕಿದ ಪ.ಬಂಗಾಳದ ಹಿಂದೂ ಹೈನುಗಾರರು

ಈದ್ ಹಬ್ಬಕ್ಕೆ ಕೆಲವೇ ದಿನಗಳಿರುವಾಗ ಪ.ಬಂಗಾಳದ ಜಾನುವಾರು ಹತ್ಯೆ ಕಾಯ್ದೆ ಜಾರಿಮಾಡಿರುವುದು ಜಾನುವಾರು ವ್ಯಾಪಾರಕ್ಕೆ ಅಡ್ಡಿ ಹಾಗೂ ಉದ್ವಿಗ್ನತೆ ಸೃಷ್ಟಿಸಬಹುದು ಎಂದು ರೈತರು ಎಚ್ಚರಿಸಿದ್ದಾರೆ.


Click the Play button to hear this message in audio format

ದಶಕಗಳಷ್ಟು ಹಳೆಯದಾಗಿರುವ ಗೋಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಪಶ್ಚಿಮ ಬಂಗಾಳದ ನೂತನ ಬಿಜೆಪಿ ಸರ್ಕಾರ ದೃಢ ನಿಶ್ಚಯ ಮಾಡಿದೆ. ಆದರೆ, ಇನ್ನೇನು ಈದ್ ಉಲ್-ಅದ್ಹಾ (ಬಕ್ರೀದ್) ಹಬ್ಬ ಸನಿಹದಲ್ಲಿ ರಾಜ್ಯದ ಸಾವಿರಾರು ಕುಟುಂಬಗಳು ಅವಲಂಬಿಸಿರುವ ಗ್ರಾಮೀಣ ಜಾನುವಾರು ಆರ್ಥಿಕತೆಗೆ ಈ ನಿರ್ಧಾರದಿಂದ ಪೆಟ್ಟು ಬೀಳಲಿದೆ. ಹಾಗಾಗಿ ಇದಕ್ಕೆ ಹಿಂದೂ ಹೈನುಗಾರರು ಮತ್ತು ಜಾನುವಾರು ಸಾಕಣೆದಾರರಿಂದಲೇ ಸರ್ಕಾರಕ್ಕೆ ಅನಿರೀಕ್ಷಿತ ವಿರೋಧ ವ್ಯಕ್ತವಾಗುತ್ತಿದೆ.

ಜಾನುವಾರುಗಳನ್ನು ಕಾನೂನುಬದ್ಧವಾಗಿ ಕಡಿಯುವ ಮುನ್ನ ನಾಗರಿಕ ಸಂಸ್ಥೆಗಳು ಮತ್ತು ಸರ್ಕಾರಿ ಪಶು ವೈದ್ಯರು ಜೊತೆಯಲ್ಲಿಯೇ ನೀಡುವ "ಹತ್ಯೆಗೆ ಯೋಗ್ಯ" ಎಂಬ ಪ್ರಮಾಣಪತ್ರ ಹೊಂದುವುದನ್ನು ಕಡ್ಡಾಯಗೊಳಿಸಿರುವ '1950ರ ಪಶ್ಚಿಮ ಬಂಗಾಳ ಪ್ರಾಣಿ ಹತ್ಯೆ ನಿಯಂತ್ರಣ ಕಾಯ್ದೆ,ʼಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಸುವೇಂದು ಅಧಿಕಾರಿ ಸರ್ಕಾರವು ಕಳೆದ ವಾರ ಪುನರುಚ್ಚರಿಸಿದೆ. ಈ ಅಧಿಸೂಚನೆಯು ಜಾನುವಾರು ಮತ್ತು ಎಮ್ಮೆಗಳ ಸಾಗಣೆ ಹಾಗೂ ಸಾರ್ವಜನಿಕ ಹತ್ಯೆಯ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

ಈದ್ ಜಾನುವಾರು ವ್ಯಾಪಾರಕ್ಕೆ ಅಡ್ಡಿ

ಹಬ್ಬಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ ಸರ್ಕಾರದ ಈ ಕ್ರಮವು ದಕ್ಷಿಣ 24 ಪರಗಣ, ನಾದಿಯಾ, ಮುರ್ಷಿದಾಬಾದ್ ಮತ್ತು ಬೀರ್ಭೂಮ್ನಂತಹ ಜಿಲ್ಲೆಗಳಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಸಣ್ಣ ಹೈನುಗಾರರು ತಮ್ಮ ಜಾನುವಾರುಗಳ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಮತ್ತು ಹೊಸ ಜಾನುವಾರುಗಳನ್ನು ಖರೀದಿಸಲು ಹಬ್ಬದ ಸಂದರ್ಭದಲ್ಲಿ ವಯಸ್ಸಾದ ಅಥವಾ ಹಾಲು ಕೊಡದ (ಗೊಡ್ಡು) ಜಾನುವಾರುಗಳನ್ನು ಮಾರಾಟ ಮಾಡುವುದು ವಾಡಿಕೆ.

"ಸರ್ಕಾರಕ್ಕೆ ಜಾನುವಾರು ಅರ್ಥ ವ್ಯವಸ್ಥೆಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ, ಇದ್ದಿದ್ದರೆ 1950ರ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ನಮಗೆ ಕಾಲಾವಕಾಶ ನೀಡುತ್ತಿದ್ದರು" ಎಂದು ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಪ್ರದೇಶದ ಬಾಮನ್ಗಾಚಿಯ ಜಾನುವಾರು ಸಾಕಣೆದಾರ ಶಶಾಂಕ ಮಂಡಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾವು ಜಾನುವಾರುಗಳ ವಯಸ್ಸು ಮತ್ತು ಗಾತ್ರಕ್ಕೆ ಅನುಗುಣವಾಗಿ ಪ್ರತಿದಿನ 200 ರಿಂದ 300 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ. ಹಸುಗಳು ಸಾಮಾನ್ಯವಾಗಿ 14 ವರ್ಷಗಳ ತನಕ ಮಾತ್ರ ಬದುಕುತ್ತವೆ, ಆದರೆ ಜಾನುವಾರುಗಳನ್ನು ಮಾರಾಟ ಮಾಡಲು ಕನಿಷ್ಠ 14 ವರ್ಷ ವಯಸ್ಸಾಗಿರುವುದು ಕಡ್ಡಾಯ ಎಂದು ಸರ್ಕಾರ ಹೇಳುತ್ತದೆ. ಅದಕ್ಕಿಂತ ಮುಂಚೆಯೇ ಹಾಲು ಕೊಡುವುದನ್ನು ನಿಲ್ಲಿಸಿದ ಜಾನುವಾರುಗಳನ್ನು ನಾವು ಏನು ಮಾಡಬೇಕು?" ಎಂದು ಅವರು ಪ್ರಶ್ನಿಸಿದ್ದಾರೆ.

"ಪ್ರತಿ ವರ್ಷ ಈದ್ ಸಂದರ್ಭದಲ್ಲಿ ನಾವು ವಯಸ್ಸಾದ ಜಾನುವಾರುಗಳನ್ನು ಮಾರಾಟ ಮಾಡುತ್ತೇವೆ ಮತ್ತು ಆ ಹಣದ ಒಂದು ಭಾಗವನ್ನು ಹೊಸ ಜಾನುವಾರುಗಳನ್ನು ಖರೀದಿಸಲು ಮರುಹೂಡಿಕೆ ಮಾಡುತ್ತೇವೆ" ಎನ್ನುತ್ತಾರೆ ಮಂಡಲ್.

ಕಾನೂನಿನ ಪ್ರಕಾರ, ಜಾನುವಾರುಗಳಿಗೆ 14 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾಗಿದ್ದು, ಅವು ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅಯೋಗ್ಯವಾಗಿವೆ ಎಂದು ಅಥವಾ ಗಾಯ, ವಿಕಲಾಂಗತೆ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ಶಾಶ್ವತವಾಗಿ ಅಸಮರ್ಥವಾಗಿವೆ ಎಂದು ಅಧಿಕಾರಿಗಳು ಪ್ರಮಾಣೀಕರಿಸಿದರೆ ಮಾತ್ರ ಅವುಗಳನ್ನು ಹತ್ಯೆ ಮಾಡಲು ಅವಕಾಶವಿರುತ್ತದೆ.

ಹೆಚ್ಚುತ್ತಿರುವ ನಷ್ಟದ ಭೀತಿಯಲ್ಲಿ ರೈತರು

ಕಟ್ಟುನಿಟ್ಟಿನ ಜಾರಿಯಿಂದಾಗಿ ಜಾನುವಾರು ವ್ಯಾಪಾರಿಗಳು ಮತ್ತು ಖರೀದಿದಾರರು ಕಾನೂನು ತೊಡಕುಗಳು ಹಾಗೂ ಗೋರಕ್ಷಕರ ದೌರ್ಜನ್ಯಕ್ಕೆ ಹೆದರುತ್ತಿದ್ದಾರೆ. ಇದರಿಂದಾಗಿ ಹಬ್ಬದ ಅವಧಿಯ ಜಾನುವಾರು ಮಾರುಕಟ್ಟೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ರೈತರು ಆತಂಕದಿಂದ ನುಡಿಯುತ್ತಾರೆ.

“ನಮ್ಮ ಕುಟುಂಬ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಈ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ ನಾವು ಈ ವ್ಯವಹಾರಕ್ಕಾಗಿ ಸುಮಾರು 15 ಲಕ್ಷ ರೂಪಾಯಿ ಸಾಲ ಪಡೆದಿದ್ದೇವೆ. ಹಾಲು ಕೊಡುವುದನ್ನು ನಿಲ್ಲಿಸುವ ಜಾನುವಾರುಗಳನ್ನು ಆರರಿಂದ ಏಳು ತಿಂಗಳವರೆಗೆ ಸಾಕಷ್ಟು ಮೇವು-ಹಿಂಡಿ ನೀಡಿ ಈದ್ (ಹಬ್ಬದ) ಸಮಯದಲ್ಲಿ ಮಾರಾಟ ಮಾಡಲು ಸಿದ್ಧಪಡಿಸುತ್ತೇವೆ. ಮಾರಾಟದ ನಂತರ ನಾವು ಸಾಲ ಮರುಪಾವತಿ ಮಾಡುತ್ತೇವೆ," ಎಂದು ಭಾಂಗರ್ನ ಬಾಮುನಿಯಾ ಗ್ರಾಮದ ಜಾನುವಾರು ರೈತರಾದ ಸುರಜಿತ್ ಘೋಷ್ ಅವರು 'ದಿ ಫೆಡರಲ್'ಗೆ ತಿಳಿಸಿದರು. "ಈಗ ಭಯದ ಕಾರಣದಿಂದ ಯಾರೂ ಜಾನುವಾರು ಖರೀದಿಗೆ ಬರುತ್ತಿಲ್ಲ. ಸರ್ಕಾರ ನಮಗೆ ಪರ್ಯಾಯ ಜೀವನೋಪಾಯದ ಮಾರ್ಗಗಳನ್ನು ಒದಗಿಸಬೇಕು." ಎಂದು ಅವರು ಒತ್ತಾಯಿಸಿದ್ದಾರೆ.

ಅದೇ ಗ್ರಾಮದ ಮತ್ತೊಬ್ಬ ರೈತ ಸಂಜಿತ್ ಘೋಷ್ ಮಾತನಾಡಿ, ಈದ್ಗಿಂತ ಮುನ್ನ ತಮ್ಮ ಬಳಿ ಸುಮಾರು 20 ಜಾನುವಾರುಗಳು ಮಾರಾಟಕ್ಕೆ ಸಿದ್ಧವಾಗಿದ್ದವು ಮತ್ತು ಖರೀದಿದಾರರು ಹಿಂದೆ ಸರಿದ ನಂತರ ತಮ್ಮ ಆರು ಸದಸ್ಯರ ಕುಟುಂಬವನ್ನು ಸಾಕಲು ಹೆಣಗಾಡುತ್ತಿರುವುದಾಗಿ ತಿಳಿಸಿದರು. "ಮುಂಗಡ ಹಣ ನೀಡಿದ್ದ ಜನರು ಈಗ ತಮ್ಮ ಹಣವನ್ನು ಮರಳಿ ಕೇಳುತ್ತಿದ್ದಾರೆ, ಭತ್ತ ಖರೀದಿ ಮಾಡುವಂತೆ, ಸರ್ಕಾರವು ಈ ವರ್ಷ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಜಾನುವಾರುಗಳನ್ನು ಖರೀದಿಸಬೇಕು." ಎಂದೂ ಅವರು ಆಗ್ರಹಿಸಿದ್ದಾರೆ.

ರಾಜ್ಯದ ಬೆಂಗಾಲಿ ಇತರ ಹಿಂದುಳಿದ ವರ್ಗಗಳಲ್ಲಿ 'ಘೋಷ್' ಎಂಬ ಉಪನಾಮವು ಸಾಂಪ್ರದಾಯಿಕವಾಗಿ ಗೋವಾಳ ಮತ್ತು ಸದ್ಗೋಪ ಸಮುದಾಯಗಳಿಗೆ ಸಂಬಂಧಿಸಿದ್ದಾಗಿದೆ, ಇವು ಐತಿಹಾಸಿಕವಾಗಿ ಹೈನುಗಾರಿಕೆ ಮತ್ತು ಜಾನುವಾರು ಸಾಕಣೆಯೊಂದಿಗೆ ನಂಟನ್ನು ಹೊಂದಿವೆ. ಗ್ರಾಮೀಣ ಆದಾಯಕ್ಕೆ ಜಾನುವಾರು ವ್ಯಾಪಾರವು ಒಂದು ಪ್ರಮುಖ ಪೂರಕ ಮೂಲವಾದ ಕಾರಣ ಈ ಗುಂಪುಗಳು ತೀವ್ರ ತೊಂದರೆ ಒಳಗಾಗಿವೆ.

ವಯಸ್ಸು, ಗಾತ್ರ ಮತ್ತು ದೈಹಿಕ ಸ್ಥಿತಿಯನ್ನು ಅವಲಂಬಿಸಿ, ಈದ್ ಮಾರುಕಟ್ಟೆಗಾಗಿ ಸಿದ್ಧಪಡಿಸಲಾದ ಜಾನುವಾರುಗಳು 2 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಬೆಲೆ ಬಾಳುತ್ತವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮಕ್ಕೆ ವಿರೋಧ

ಬಿಜೆಪಿ ಸರ್ಕಾರದ ಗೋರಕ್ಷಣೆ ಅಭಿಯಾನವು ಬಂಗಾಳದ ಕೃಷಿ ವಾಸ್ತವಗಳೊಂದಿಗೆ ಸಂಘರ್ಷಕ್ಕೆ ಇಳಿದಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.

"ಸುವೇಂದು ಅಧಿಕಾರಿಯವರ ಬಿಜೆಪಿ ಸರ್ಕಾರವು ಮುಸ್ಲಿಮರನ್ನು ಗುರಿಯಾಗಿಸಲು ಬಯಸಿತ್ತು, ಆದರೆ ಈ ಪ್ರಕ್ರಿಯೆಯಲ್ಲಿ ಹಿಂದೂಗಳಿಗೇ ಹೆಚ್ಚಿನ ತೊಂದರೆಯಾಗಿದೆ" ಎಂದು ಭಾಂಗರ್ನ ಇಂಡಿಯನ್ ಸೆಕ್ಯುಲರ್ ಫ್ರಂಟ್ ಶಾಸಕ ನೌಸಾದ್ ಸಿದ್ದಿಕಿ ಹೇಳಿದರು.

"ಜಾನುವಾರು ಸಾಕಣೆಯಲ್ಲಿ ತೊಡಗಿರುವ ಜನರಲ್ಲಿ ಶೇಕಡಾ 80ರಷ್ಟು ಮಂದಿ ಮುಸ್ಲಿಮೇತರ ಸಹೋದರರು. ಮುಸ್ಲಿಮರಿಗೆ ಕುರ್ಬಾನಿಗಾಗಿ ಆಡು ಮತ್ತು ಇತರ ಪ್ರಾಣಿಗಳಂತಹ ಪರ್ಯಾಯಗಳಿವೆ. ಆದರೆ ಈ ರೈತರು ಕನಿಷ್ಠ 1 ಲಕ್ಷ ರೂಪಾಯಿಗೆ ಮಾರಾಟ ಮಾಡಬಹುದು ಎಂಬ ಆಶಯದೊಂದಿಗೆ ಪ್ರತಿಯೊಂದು ಜಾನುವಾರುಗಳ ಮೇಲೆ 20,000 ದಿಂದ 30,000 ರೂಪಾಯಿಗಳವರೆಗೆ ಹೂಡಿಕೆ ಮಾಡಿರುತ್ತಾರೆ," ಎಂದು ಅವರು ಹೇಳಿದರು.

ಅಧಿಕಾರಿಗಳು ವಿಧಿಸುವ ಷರತ್ತುಗಳಿಗೆ ಒಳಪಟ್ಟು 'ಧಾರ್ಮಿಕ, ವೈದ್ಯಕೀಯ ಅಥವಾ ಸಂಶೋಧನಾ ಉದ್ದೇಶಗಳಿಗಾಗಿ' ಪ್ರಾಣಿಗಳ ಹತ್ಯೆಗೆ ಕಾನೂನಿನ ನಿಬಂಧನೆಗಳಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡುವ 1950ರ ಕಾಯ್ದೆಯ ಸೆಕ್ಷನ್ 12ನ್ನು ಜಾರಿಗೆ ತರುವಂತೆ ಸಿದ್ದಿಕಿ ಸರ್ಕಾರವನ್ನು ಒತ್ತಾಯಿಸಿದರು.

ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಮತ್ತು ಗ್ರಾಮೀಣ ಜಾನುವಾರು ಆರ್ಥಿಕತೆ—ಎರಡೂ ಒಂದೇ ಬಾರಿಗೆ ಅಸ್ತವ್ಯಸ್ತಗೊಳ್ಳದಂತೆ ತಡೆಯಲು, ಆಡಳಿತಾತ್ಮಕ ಮೇಲ್ವಿಚಾರಣೆಯಡಿಯಲ್ಲಿ ನಿಯೋಜಿತ ಪ್ರದೇಶಗಳಲ್ಲಿ ಬಕ್ರೀದ್ ಸಂದರ್ಭದಲ್ಲಿ ತಾತ್ಕಾಲಿಕ ಸಡಿಲಿಕೆ ನೀಡಲು ಈ ನಿಬಂಧನೆ ಬಳಸಿಕೊಳ್ಳಬಹುದು ಎಂದು ಅವರು ವಾದಿಸಿದರು.

ಹೆಚ್ಚುತ್ತಿರುವ ಸಾಲದ ಆತಂಕದಿಂದಾಗಿ ಬಾಮುನಿಯಾ ಗ್ರಾಮದ ರೈತರೊಬ್ಬರು ಹೃದಯಾಘಾತದಿಂದ ನಿಧನರಾಗಿರುವ ಘಟನೆಯ ಕಡೆಗೂ ಅವರು ಬೊಟ್ಟು ಮಾಡುತ್ತಾರೆ, ಆದರೆ ಈ ಘಟನೆ ನಡೆದಿರುವುದು ನಿಜವೇ ಎಂಬುದನ್ನು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು 'ದಿ ಫೆಡರಲ್'ಗೆ ಸಾಧ್ಯವಾಗಲಿಲ್ಲ.

ಜನನ ಪ್ರಮಾಣಪತ್ರದ ಬೇಡಿಕೆ

ಕಳೆದ ವಾರ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕಿ ರೇಖಾ ಪಾತ್ರಾ ಅವರು ಹಿಂಗಲ್ಗಂಜ್ನಲ್ಲಿ ಜಾನುವಾರು ತುಂಬಿದ್ದ ವಾಹನವನ್ನು ತಡೆದು, ಅವುಗಳು ಹತ್ಯೆಗೆ ಅರ್ಹವಾಗಿವೆ ಎಂಬುದನ್ನು ಸಾಬೀತುಪಡಿಸಲು ಹಸುಗಳ ಜನನ ಪ್ರಮಾಣಪತ್ರಗಳನ್ನು ನೀಡುವಂತೆ ಒತ್ತಾಯಿಸಿದ ನಂತರ ಈ ವಿವಾದ ಇನ್ನಷ್ಟು ತೀವ್ರ ಸ್ವರೂಪಪಡೆಯಿತು.

"ನಮ್ಮ ಸರ್ಕಾರ ನಿರ್ದೇಶಿಸಿರುವಂತೆ, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಸುಗಳನ್ನು ಕೊಲ್ಲುವುದರ ಮೇಲೆ ಕಟ್ಟುನಿಟ್ಟಿನ ನಿಷೇಧ ಇರುತ್ತದೆ," ಎಂದು ರೇಖಾ ಪಾತ್ರಾ ಹೇಳುತ್ತಾರೆ. "ಯಾರಾದರೂ ಕಾನೂನುಬಾಹಿರವಾಗಿ ಹಸುಗಳನ್ನು ಸಾಗಿಸುತ್ತಿರುವುದು ಕಂಡುಬಂದರೆ, ನಾವು ಅವರನ್ನು ಹಿಡಿದು ಹಸುಗಳ ಜನನ ಪ್ರಮಾಣಪತ್ರಗಳನ್ನು ತೋರಿಸಲು ಕೇಳಬೇಕು,” ಎಂದೂ ಅವರು ತಾಕೀತು ಮಾಡಿದ್ದಾರೆ.

ಈ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದವು, ಇದು ಈದ್ ಹಬ್ಬದ ಮುನ್ನ ಜಾನುವಾರು ವ್ಯಾಪಾರಿಗಳು ಮತ್ತು ರೈತರಲ್ಲಿ ಆತಂಕವನ್ನು ಹೆಚ್ಚಿಸಲು ಕಾರಣವಾಗಿದೆ.

ಈ ಕ್ರಮವು ವಿರೋಧ ಪಕ್ಷಗಳಿಂದಲೂ ತೀವ್ರ ಟೀಕೆಗೆ ಒಳಗಾಯಿತು. ಜಾನುವಾರು ಸಾಗಣೆ ಮತ್ತು ಕಸಾಯಿಖಾನೆ ನಿಯಮಗಳ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳುವ ಧೋರಣೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ.

ಭಾರತೀಯ ಕಮ್ಯುನಿಸ್ಟ್ ಪಕ್ಷ ಮತ್ತು ಇತರ ವಿರೋಧ ಪಕ್ಷಗಳು, ಇಸ್ಲಾಮಿಕ್ ಹಬ್ಬದ ಮುನ್ನ ಸರ್ಕಾರವು ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿವೆ.

ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ಡಿ. ಸಲೀಮ್ ಮಾತನಾಡಿ, ಗೋರಕ್ಷಣೆಯ "ಅತ್ಯುತ್ಸಾಹಿ ಬೆಂಬಲಿಗರಿಂದ" ಜಾನುವಾರುಗಳನ್ನು ವಶಪಡಿಸಿಕೊಳ್ಳುವುದು, ಜಾನುವಾರು ಮಾರುಕಟ್ಟೆಗಳಿಗೆ ಅಡ್ಡಿಪಡಿಸುವುದು ಮತ್ತು ವ್ಯಾಪಾರಿಗಳಿಗೆ ಕಿರುಕುಳ ನೀಡುವ ಘಟನೆಗಳು ಬಂಗಾಳದಾದ್ಯಂತ ಸಣ್ಣ ವ್ಯಾಪಾರಿಗಳು, ಜಾನುವಾರು ಸಾಕಣೆದಾರರು ಮತ್ತು ಅಲ್ಪಸಂಖ್ಯಾತರಲ್ಲಿ ಭಯ ಬಿತ್ತುವಂತೆ ಮಾಡಿವೆ ಎಂದು ಆರೋಪಿಸಿದರು.

"ಬಲಪ್ರಯೋಗ ಮತ್ತು ಬೆದರಿಕೆ" ಮೂಲಕ ನಿಯಮಗಳನ್ನು ಜಾರಿಗೊಳಿಸುವ ಪ್ರಯತ್ನಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರಬಹುದು ಎಂದು ಅವರು ಎಚ್ಚರಿಸಿದ್ದಾರೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ವಾತಾವರಣ ತಲೆಯೆತ್ತಲು ಬಿಜೆಪಿ ಸರ್ಕಾರವು ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.

ಕೋಮು ಸಾಮರಸ್ಯದ ಆತಂಕ

ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಪತ್ರ ಬರೆದಿದ್ದು, ಈ ಅಧಿಸೂಚನೆಯು ಮುರ್ಷಿದಾಬಾದ್ನಂತಹ ಅಲ್ಪಸಂಖ್ಯಾತ ಬಾಹುಳ್ಯದ ಜಿಲ್ಲೆಗಳಲ್ಲಿ "ಗೊಂದಲ, ಆಕ್ರೋಶ ಮತ್ತು ಆತಂಕ" ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಈ ಕ್ರಮವನ್ನು "ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ" ಎಂದು ಬಣ್ಣಿಸಿದ್ದು, ಇದು ಬಂಗಾಳದ "ಸಾಮಾಜಿಕ ಸಾಮರಸ್ಯ ಮತ್ತು ಶಾಂತಿ"ಗೆ ಧಕ್ಕೆ ತರಬಹುದು ಎಂದು ಹೇಳಿದೆ.

ಎಸ್‌ಯುಐ (ಕಮ್ಯುನಿಸ್ಟ್) ಪ್ರಧಾನ ಕಾರ್ಯದರ್ಶಿ ಪ್ರಭಾಸ್ ಘೋಷ್ ಅವರು ಹೇಳಿಕೆಯೊಂದನ್ನು ನೀಡಿ, ಈ ನಿರ್ಬಂಧಗಳು ತಲೆಮಾರುಗಳಿಂದ ಅನುಸರಿಸಿಕೊಂಡು ಬರುತ್ತಿರುವ ಧಾರ್ಮಿಕ ಪದ್ಧತಿಗಳಿಗೆ ಪರಿಣಾಮಕಾರಿಯಾಗಿ ಅಂಕುಶ ಹಾಕುತ್ತಿವೆ ಎಂದು ಹೇಳಿದ್ದಾರೆ ಮತ್ತು ಈ ಅಧಿಸೂಚನೆಯಿಂದ ಕೋಮು ಸಾಮರಸ್ಯ ಕದಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಈ ಮಧ್ಯೆ, ಮುಸ್ಲಿಂ ಧರ್ಮಗುರುಗಳು ಮತ್ತು ಸಮುದಾಯದ ಮುಖಂಡರು ಕಾನೂನು ಅವಶ್ಯಕತೆಗಳನ್ನು ಪಾಲಿಸುವಂತೆ ಮತ್ತು ಅಗತ್ಯವಿದ್ದಲ್ಲಿ, ಕುರ್ಬಾನಿಗಾಗಿ ಜಾನುವಾರುಗಳ ಬದಲಿಗೆ ಆಡು ಅಥವಾ ಕುರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಭಕ್ತರಲ್ಲಿ ಮನವಿ ಮಾಡಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರ ಕಿರಿಟಿ ರಾಯ್ ಮಾತನಾಡಿ, ಈ ವಿವಾದವು ಹಿಂದುತ್ವ ಪ್ರೇರಿತ ಗೋರಕ್ಷಣೆ ರಾಜಕೀಯ ಮತ್ತು ಬಂಗಾಳದ ವಿಶಿಷ್ಟ ಗ್ರಾಮೀಣ ಆರ್ಥಿಕತೆಯ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. "ಜಾನುವಾರುಗಳ ಮರುಮಾರಾಟ ಮತ್ತು ಮರುಬಳಕೆಯು ಬಂಗಾಳದ ಹೈನುಗಾರಿಕೆ ಆರ್ಥಿಕತೆಯಲ್ಲಿ ಆಳವಾಗಿ ಹಾಸುಹೊಕ್ಕಾಗಿದೆ," ಎಂದು ಅವರು ತಿಳಿಸಿದರು.

"ಸಣ್ಣ ರೈತರಿಗೆ, ವಯಸ್ಸಾದ ಜಾನುವಾರುಗಳನ್ನು ಮಾರಾಟ ಮಾಡುವುದು ಅವರ ಆರ್ಥಿಕ ಚಕ್ರದ ಒಂದು ಭಾಗವಾಗಿದೆ. ಇದು ಅವರ ಗೃಹ ಆದಾಯವನ್ನು ಉಳಿಸಿಕೊಳ್ಳಲು ಮತ್ತು ಜಾನುವಾರು ಸಾಕಣೆಯಲ್ಲಿ ಮರುಹೂಡಿಕೆ ಮಾಡಲು ಸಹಾಯ ಮಾಡುತ್ತದೆ. ಯಾವುದೇ ಪರ್ಯಾಯ ಮಾರ್ಗಗಳಿಲ್ಲದೆ ಇಂತಹ ಕಟ್ಟುನಿಟ್ಟಿನ ಜಾರಿ ಕ್ರಮಗಳನ್ನು ಕೈಗೊಳ್ಳುವುದರಿಂದ, ಬಿಜೆಪಿ ರಾಜಕೀಯವಾಗಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿರುವ ಗ್ರಾಮೀಣ ಕೆಳ ಆದಾಯದ ಹಿಂದೂ ಸಮುದಾಯಗಳಿಗೇ ಭಾರಿ ನಷ್ಟ ಉಂಟಾಗುವ ಅಪಾಯವಿದೆ," ಎಂದೂ ರಾಯ್ ಆತಂಕದಿಂದ ನುಡಿಯುತ್ತಾರೆ.

Read More
Next Story