
ಬೆಳಗಾವಿ ಪಾಲಿಕೆಯಲ್ಲಿ ʼಅವಿಭಾಜ್ಯ ಅಂಗʼದ ಸಂಘರ್ಷ: ಎಂಇಎಸ್ ಪುಂಡಾಟಕ್ಕೆ ಕನ್ನಡಿಗರ ಆಕ್ರೋಶ
ಮಹಾರಾಷ್ಟ್ರವು ತನಗೆ ಸಂಪೂರ್ಣವಾಗಿ ಅನುಕೂಲವಾಗಿಲ್ಲ ಎಂಬ ಕಾರಣಕ್ಕೆ ಮಹಾಜನ್ ವರದಿಯನ್ನು ತಿರಸ್ಕರಿಸಿತು. ಕರ್ನಾಟಕವು ಮಹಾಜನ್ ವರದಿಯನ್ನು ಗೌರವಿಸುತ್ತಾ, ಅದನ್ನು ಅಂತಿಮ ಎಂದು ಪರಿಗಣಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ದಶಕಗಳಷ್ಟು ಹಳೆಯದಾದ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ, ಮಹಾಜನ್ ವರದಿ ಅಂತಿಮ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಅಂಗೀಕರಿಸಬೇಕು ಎಂಬ ಒತ್ತಾಯ ಕೇಳಿಬಂದವು. ಆದರೆ, ಎಂಇಎಸ್ ಸದಸ್ಯರು ಈ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ ಎಂದು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ಸಭೆಯು ನಗರಾಭಿವೃದ್ಧಿ ಇಲಾಖೆ ಸಲಹೆ ಕೇಳುವುದಾಗಿ ತಿಳಿಸಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೆಡೆಸಭೆಯಲ್ಲಿ ಕಾನೂನು ತಜ್ಞರ ಸಲಹೆಗಳನ್ನು ಕೇಳಬೇಕು ಎಂಬ ಅಭಿಪ್ರಾಯಗಳು ಕೇಳಿಬಂದರೆ, ಮತ್ತೊಂದೆಡೆ ವಿಧಾನಸಭೆಯಲ್ಲೇ ಇಂತಹ ನಿರ್ಣಯಗಳು ಆರು ಬಾರಿ ಅಂಗೀಕಾರವಾಗಿವೆ ಎಂದು ಸಮರ್ಥನೀಯ ವಾದಗಳು ಸಹ ಕೇಳಿದವು. ಗಲಾಟೆ ತಾರಕಕ್ಕೇರಿದಾಗ ಮೇಯರ್ ಪ್ರೀತಿ ಕಾಮಕರ ಅವರು, ಸರ್ಕಾರದ ಅಭಿಪ್ರಾಯ ಪಡೆದು ನಂತರ ತೀರ್ಮಾನಿಸಲಾಗುವುದು ಎಂದು ರೂಲಿಂಗ್ ನೀಡುವ ಮೂಲಕ ಸದ್ಯಕ್ಕೆ ತೆರೆ ಎಳೆದರು
1956ರ
ಗಡಿ ವಿವಾದ 1956ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಭಾಷಾವಾರು ಪುನರ್ವಿಂಗಡಣೆ ನಡೆದಾಗ ಅಸ್ತಿತ್ವಕ್ಕೆ ಬಂದವು. ಬ್ರಿಟಿಷರ ಆಡಳಿತಾವಧಿಯಲ್ಲಿ ಬೆಳಗಾವಿ ಜಿಲ್ಲೆಯು ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಆದರೆ, ಜನಗಣತಿಯ ಆಧಾರದ ಮೇಲೆ ಮತ್ತು ಭೌಗೋಳಿಕ ಸಾಮೀಪ್ಯದ ದೃಷ್ಟಿಯಿಂದ ಬೆಳಗಾವಿ ಭಾಗವನ್ನು ಕರ್ನಾಟಕಕ್ಕೆ ಸೇರಿಸಲಾಯಿತು.
ಮಹಾರಾಷ್ಟ್ರದ ವಾದದ ಪ್ರಕಾರ, ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಖಾನಾಪುರ ಭಾಗಗಳಲ್ಲಿ ಮರಾಠಿ ಭಾಷಿಕರ ಜನಸಂಖ್ಯೆ ಹೆಚ್ಚಾಗಿದ್ದರಿಂದ ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಅವರು ದಶಕಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ, ಕರ್ನಾಟಕವು ಮಹಾಜನ್ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಂಡು ಬೆಳಗಾವಿ ಕರ್ನಾಟಕದ ಅಭಾಜ್ಯ ಭಾಗ ಎಂದು ಸಮರ್ಥಿಸಿಕೊಳ್ಳುತ್ತಿದೆ. ಗಡಿ ವಿವಾದವನ್ನು ಶಾಶ್ವತವಾಗಿ ಪರಿಹರಿಸಲು ಕೇಂದ್ರ ಸರ್ಕಾರವು 1966ರಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೇಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ಆಯೋಗವು ಸಮಗ್ರ ಅಧ್ಯಯನ ನಡೆಸಿ, ಬೆಳಗಾವಿ ನಗರ ಮತ್ತು ಜಿಲ್ಲೆಯು ಕರ್ನಾಟಕದ ಭಾಗವಾಗಿಯೇ ಉಳಿಯಬೇಕು ಎಂದು ಖಡಾಖಂಡಿತವಾಗಿ ಶಿಫಾರಸು ಮಾಡಿತು. ಮಹಾರಾಷ್ಟ್ರದ ಹಿತಾಸಕ್ತಿಗೆ ಅಲ್ಪ ಪ್ರಮಾಣದಲ್ಲಿ ಕೆಲವು ಹಳ್ಳಿಗಳನ್ನು ನೀಡಲು ಆಯೋಗ ಸೂಚಿಸಿದ್ದರೂ, ಮಹಾರಾಷ್ಟ್ರವು ತನಗೆ ಸಂಪೂರ್ಣವಾಗಿ ಅನುಕೂಲವಾಗಿಲ್ಲ ಎಂಬ ಕಾರಣಕ್ಕೆ ಈ ವರದಿಯನ್ನು ತಿರಸ್ಕರಿಸಿತು. ಕರ್ನಾಟಕವು ಮಹಾಜನ್ ವರದಿಯನ್ನು ಗೌರವಿಸುತ್ತಾ, ಅದನ್ನು ಅಂತಿಮ ಎಂದು ಪರಿಗಣಿಸಿದೆ.
ಸುಪ್ರೀಂ ಕೋರ್ಟ್ ಅಂಗಳದಲ್ಲಿ ಕಾನೂನು ಸಮರ
ಮಹಾಜನ್ ವರದಿಯನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. 865 ಹಳ್ಳಿಗಳ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ಮಹಾರಾಷ್ಟ್ರದ ನಡೆಯನ್ನು ಕರ್ನಾಟಕ ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ. ಸಂವಿಧಾನದ 3ನೇ ವಿಧಿಯ ಅನ್ವಯ ರಾಜ್ಯಗಳ ಗಡಿ ನಿಗದಿಪಡಿಸುವ ಅಧಿಕಾರ ಸಂಪೂರ್ಣವಾಗಿ ಸಂಸತ್ತಿಗೆ ಸೇರಿದ್ದು, ನ್ಯಾಯಾಲಯದ ವ್ಯಾಪ್ತಿಯಲ್ಲಲ್ಲ. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ಯಾವುದೇ ಅಂತಿಮ ತೀರ್ಪು ಬಂದಿಲ್ಲ.
ಎಂಇಎಸ್ ಅಜೆಂಡಾ
ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಎಂಬ ಸಂಘಟನೆಯೇ ಹುಟ್ಟಿದ್ದು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಅಜೆಂಡಾದೊಂದಿಗೆ. ಒಂದು ಕಾಲದಲ್ಲಿ ಪಾಲಿಕೆ ಮತ್ತು ವಿಧಾನಸಭೆಯಲ್ಲಿ ಪ್ರಬಲವಾಗಿದ್ದ ಎಂಇಎಸ್, ಇಂದು ತನ್ನ ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ರಾಜ್ಯದ ಗಡಿ ಭಾಗದ ಮರಾಠಿ ಭಾಷಿಕರು ಇಂದು ಅಭಿವೃದ್ಧಿ ಬಯಸಿ ರಾಷ್ಟ್ರೀಯ ಪಕ್ಷಗಳತ್ತ ಮುಖ ಮಾಡಿದ್ದಾರೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಂಇಎಸ್ ಪದೇ ಪದೇ ಭಾಷಾ ಭಾವನೆಗಳನ್ನು ಕೆರಳಿಸುತ್ತಿದೆ. ಪಾಲಿಕೆಯಲ್ಲಿ ಅವಿಭಾಜ್ಯ ಅಂಗ ಎಂಬ ನಿರ್ಣಯ ಅಂಗೀಕಾರವಾದರೆ ತಮ್ಮ ರಾಜಕೀಯ ಅಜೆಂಡಾಗೆ ಶಾಶ್ವತ ತಿಲಾಂಜಲಿ ಸಿಗುತ್ತದೆ ಎಂಬ ಭೀತಿ ಎಂಇಎಸ್ ಸದಸ್ಯರಲ್ಲಿದೆ.
ಬೆಳಗಾವಿ ಕರ್ನಾಟಕದ ಹೆಮ್ಮೆಯ ನಗರ ಎಂಬುದನ್ನು ಸಾರಲು ಸರ್ಕಾರ ಅಲ್ಲಿ ಕೋಟ್ಯಂತರ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಿಸಿ, ಜಂಟಿ ಅಧಿವೇಶನಗಳನ್ನು ನಡೆಸುತ್ತಿದೆ. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಗಡಿ ವಿಚಾರದಲ್ಲಿ ಒಂದಾಗಿವೆ. ಕನ್ನಡಿಗರ ಹೋರಾಟಕ್ಕೆ ಸಂಘಟನೆಗಳು ಬೆಂಬಲ ನೀಡುತ್ತಿವೆ.

