
ಶಿವರಾಮ ಕಾರಂತ ಬಡಾವಣೆ: ದಶಕಗಳ ವಿವಾದಕ್ಕೆ ಮುಕ್ತಿ, 18 ಸಾವಿರ ಕುಟುಂಬಗಳಿಗೆ ಸಿಗಲಿದೆ ಸೂರು
ಬಡಾವಣೆ ನಿರ್ಮಾಣಕ್ಕಾಗಿ 3,052 ಭೂ ಮಾಲೀಕರು ತಮ್ಮ ಆಸ್ತಿಯನ್ನು ನೀಡಿದ್ದು, ಆಸ್ತಿ ಮಾರಾಟ ಮತ್ತು ಕಾನೂನು ಸಮಸ್ಯೆಯಿಂದ ಪ್ರಕ್ರಿಯೆ ವಿಳಂಬವಾಗಿತ್ತು. ನ್ಯಾಯಾಲಯದ ಅನುಮತಿಯೊಂದಿಗೆ ಈಗ ನಿವೇಶನಗಳನ್ನು ನೀಡಲು ಸರ್ಕಾರ ಮುಂದಾಗಿದೆ.
ಬೆಂಗಳೂರು ನಗರದ ಉತ್ತರ ಭಾಗದಲ್ಲಿ ವಸತಿ ಸೌಕರ್ಯ ಒದಗಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಿವರಾಮ ಕಾರಂತ ಬಡಾವಣೆ ಯೋಜನೆ ಜಾರಿಗೊಳಿಸಿತು. ಆದರೆ, ಬಡಾವಣೆ ಯೋಜನೆಯು ಹಲವು ವರ್ಷಗಳಿಂದ ಕಾನೂನು ತೊಡಕುಗಳು ಮತ್ತು ಭೂ ಸ್ವಾಧೀನ ವಿವಾದಗಳಲ್ಲಿ ಸಿಲುಕಿತ್ತು. ಇದೀಗ ಯೋಜನೆಗೆ ಜಮೀನು ನೀಡಿದವರಿಗೆ ರಾಜ್ಯ ಸರ್ಕಾರವು 18 ಸಾವಿರ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಸಾವಿರಾರು ಕುಟುಂಬಗಳಿಗೆ ಭರವಸೆಯ ಬೆಳಕಾಗಿದೆ.
ಶನಿವಾರದಿಂದ ನಿವೇಶನ ಹಂಚಿಕೆಯು ಪ್ರಾರಂಭಗೊಂಡಿದ್ದು, ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ. ಇ-ಗವರ್ನೆನ್ಸ್ ಮೂಲಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವುದು ಮಧ್ಯವರ್ತಿಗಳ ಹಾವಳಿಯನ್ನು ತಡೆಯುತ್ತದೆ. ಸರ್ಕಾರಿ ಯೋಜನೆಗಳಲ್ಲಿ ಪಾರದರ್ಶಕತೆ ತರಲು ಇದು ಅತ್ಯಗತ್ಯ ಕ್ರಮವಾಗಿದೆ.
ಭೂ ಮಾಲೀಕರ ಹಕ್ಕುಗಳ ಸಂರಕ್ಷಣೆ
ಬಡಾವಣೆ ನಿರ್ಮಾಣಕ್ಕಾಗಿ 3,052 ಭೂ ಮಾಲೀಕರು ತಮ್ಮ ಆಸ್ತಿಯನ್ನು ನೀಡಿದ್ದು, ಆಸ್ತಿ ಮಾರಾಟ ಮತ್ತು ಕಾನೂನು ಸಮಸ್ಯೆಗಳಿಂದಾಗಿ ಪ್ರಕ್ರಿಯೆ ವಿಳಂಬವಾಗಿತ್ತು. ನ್ಯಾಯಾಲಯದ ಅನುಮತಿಯೊಂದಿಗೆ ಇದೀಗ ನಿವೇಶನಗಳನ್ನು ನೀಡುತ್ತಿರುವುದು ಬಿಡಿಎಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಒಂದು ಅಥವಾ ಅದಕ್ಕಿಂತ ಹೆಚ್ಚು ಎಕರೆ ಭೂಮಿ ನೀಡಿದವರಿಗೆ ಒಂದೇ ಜಾಗದಲ್ಲಿ ನಿವೇಶನ ನೀಡುವ ನಿರ್ಧಾರವು ಗಮನಾರ್ಹ. 1 ಎಕರೆಗೆ 9,583 ಚದರ ಅಡಿ ಜಾಗ ನೀಡುವುದು ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಭೂ ಮಾಲೀಕರಿಗೆ ಅನುಕೂಲವಾಗಲಿದೆ. ಈ ಮೂಲಕ ಕೇವಲ ವಸತಿ ಮಾತ್ರವಲ್ಲದೆ ವಾಣಿಜ್ಯಕ್ಕಾಗಿ ಭೂಮಿಯನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು 18 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿದೆ. ಒಂದು ಇಲ್ಲವೇ 2 ಎಕರೆ ಅಥವಾ ಹೆಚ್ಚು ಭೂಮಿ ಹೊಂದಿದ್ದ ಮಾಲೀಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ.
ಯೋಜನೆಯ ಹಿನ್ನೆಲೆ ಹಾಗೂ ಉದ್ದೇಶ
2008ರಲ್ಲಿ ಬೆಂಗಳೂರಿನ ಉತ್ತರ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಸೌಕರ್ಯ ಒದಗಿಸುವ ಉದ್ದೇಶದಿಂದ ಬಿಡಿಎ ಶಿವರಾಮ ಕಾರಂತ ಬಡಾವಣೆಯನ್ನು ಘೋಷಿಸಿತು. ಯಲಹಂಕ, ಬಾಗಲೂರು ಮತ್ತು ಜಾಲ ಹೋಬಳಿ ವ್ಯಾಪ್ತಿಯ ಸುಮಾರು 3,546 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿತ್ತು. ಇದರ ಉದ್ದೇಶ ಕೇವಲ ವಸತಿ ನಿರ್ಮಾಣ ಮಾತ್ರವಲ್ಲದೆ, ಸಮಗ್ರ ಮೂಲಸೌಕರ್ಯಗಳೊಂದಿಗೆ ಒಂದು ಮಾದರಿ ಬಡಾವಣೆಯನ್ನು ಸೃಷ್ಟಿಸುವುದಾಗಿತ್ತು. ಈ ಯೋಜನೆ ಘೋಷಣೆಯಾದ ದಿನದಿಂದಲೇ ವಿವಾದಗಳ ಸುಳಿಯಲ್ಲಿ ಸಿಲುಕಿತು. ರೈತರ ಫಲವತ್ತಾದ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂತು. ಬಿಡಿಎ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಆರೋಪಿಸಿ ರೈತರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ವಿವಿಧ ಸರ್ಕಾರಗಳು ಅಧಿಕಾರಕ್ಕೆ ಬಂದಂತೆಲ್ಲ ಯೋಜನೆಯನ್ನು ಕೈಬಿಡುವ ಅಥವಾ ವಿಳಂಬಗೊಳಿಸುವ ರಾಜಕೀಯ ಚದುರಂಗದಾಟಗಳು ನಡೆದವು. ಇದರಿಂದಾಗಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಯಾವುದೇ ಪ್ರಗತಿ ಕಾಣಲಿಲ್ಲ.
ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು, ಸಮಿತಿ ರಚನೆ
ಯೋಜನೆಯು ಸಂಪೂರ್ಣವಾಗಿ ರದ್ದಾಗುವ ಹಂತದಲ್ಲಿದ್ದಾಗ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪೊಂದನ್ನು ನೀಡಿತು. ಯೋಜನೆಯನ್ನು ರದ್ದುಪಡಿಸುವ ಬದಲಾಗಿ, ಅದನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಭೂಸ್ವಾಧೀನ, ಪರಿಹಾರ ವಿತರಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತಿತು. ಇದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಗೆ ಒಂದು ಹೊಸ ಮಾದರಿಯನ್ನು ಸೃಷ್ಟಿಸಿತು. ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಾಯಿತು. ನ್ಯಾಯಾಲಯದ ಸೂಚನೆ ಮೇರೆಗೆ ಶಿವರಾಮ ಕಾರಂತ ಬಡಾವಣೆ ವಿವಾದಕ್ಕೆ ಮುಕ್ತಿ ದೊರಕುವಂತಾಯಿತು.
ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ
ಸದ್ಯ, ಶಿವರಾಮ ಕಾರಂತ ಬಡಾವಣೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ನಡೆಯುತ್ತಿದೆ. ಮುಖ್ಯ ರಸ್ತೆಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಮತ್ತು ನೀರು ಸರಬರಾಜು ಜಾಲದ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಾಗವನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿ ಹಂಚಿಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಬಡಾವಣೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ, ಉದ್ಯಾನವನಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಕ್ರೀಡಾಂಗಣಗಳನ್ನು ಒಳಗೊಂಡಂತೆ ವಿನ್ಯಾಸಗೊಳಿಸಲಾಗುತ್ತಿದೆ. ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ಸಮಿತಿಯ ಮೇಲ್ವಿಚಾರಣೆ ಇಲ್ಲದಿದ್ದರೆ, ಈ ಯೋಜನೆ ಭ್ರಷ್ಟಾಚಾರದ ಕೂಪವಾಗುತ್ತಿತ್ತು ಎಂಬುದು ಸತ್ಯ. ಸರ್ಕಾರಿ ಯೋಜನೆಗಳು ಮತ್ತು ರೈತರ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯವಾಗಿದೆ. ಸರ್ಕಾರಿ ಸಂಸ್ಥೆಗಳು ಮುಂಚಿತವಾಗಿ ಸರಿಯಾದ ಯೋಜನೆ ಮತ್ತು ಅನುಷ್ಠಾನ ಕ್ರಮಗಳನ್ನು ಕೈಗೊಂಡಿದ್ದರೆ ದಶಕಗಳ ವಿಳಂಬವನ್ನು ತಪ್ಪಿಸಬಹುದಿತ್ತು ಎಂದು ಹೇಳಲಾಗಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್: ದೇಶವೇ ಮಾದರಿ ಪರಿಹಾರ ಪ್ಯಾಕೇಜ್
ಈ ನಡುವೆ, ನಗರದ ದಕ್ಷಿಣ ಭಾಗದಲ್ಲಿ ನಿರ್ಮಾಣವಾಗುತ್ತಿರುವ 33 ಕಿ.ಮೀ ಉದ್ದದ ಬ್ಯುಸಿನೆಸ್ ಕಾರಿಡಾರ್, ಬೆಂಗಳೂರಿನ ಆರ್ಥಿಕ ಭವಿಷ್ಯವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ. ರೈತರಿಗೆ ಕೇವಲ ಹಣದ ರೂಪದ ಪರಿಹಾರ ಮಾತ್ರವಲ್ಲದೆ, ರಸ್ತೆಯ ಪಕ್ಕದಲ್ಲೇ ಶೇ.35 ರಷ್ಟು ವಾಣಿಜ್ಯ ಭೂಮಿ, ಶೇ.40 ವಸತಿ ಭೂಮಿ, ಟಿಡಿಆರ್ ಮತ್ತು ಎಫ್‌ಎಆರ್ ಅವಕಾಶಗಳನ್ನು ನೀಡಿರುವುದು ನಿಜಕ್ಕೂ ಅತ್ಯುತ್ತಮ ನಡೆ. ಇದು ಮುಂಬೈ ಅಥವಾ ಇತರ ಮಹಾನಗರಗಳಲ್ಲಿನ ಸ್ವಾಧೀನ ಪ್ರಕ್ರಿಯೆಗಿಂತಲೂ ಹೆಚ್ಚು ರೈತ ಸ್ನೇಹಿಯಾಗಿದೆ. ಯಾವುದೇ ಬೃಹತ್ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಭೂಸ್ವಾಧೀನ ಪ್ರಕ್ರಿಯೆ ಸರಾಗವಾಗಿ ನಡೆಯಬೇಕು. ಶೇ. 80ರಷ್ಟು ಮಂದಿ ರೈತರು ಮೊದಲ ಹಂತಕ್ಕೆ ಒಪ್ಪಿಗೆ ನೀಡಿರುವುದು ಮತ್ತು ಶಾಸಕರು, ಸಚಿವರು ತಮ್ಮ ಆಸ್ತಿಯನ್ನು ನೀಡಲು ಮುಂದೆ ಬಂದಿರುವುದು ಈ ಯೋಜನೆಯ ಗಂಭೀರತೆಯನ್ನು ತೋರಿಸುತ್ತದೆ.

