Bangalore Traffic: ಮೂರನೇ ಬಾರಿ ಟೆಂಡರ್‌ಗೆ ಬಿಬಿಸಿ ಆಹ್ವಾನ - ಈ ಬಾರಿಯಾದರೂ ತಪ್ಪಲಿದೆಯೇ ಸಂಚಾರ ಕಿರಿಕಿರಿ?
x

Bangalore Traffic: ಮೂರನೇ ಬಾರಿ ಟೆಂಡರ್‌ಗೆ ಬಿಬಿಸಿ ಆಹ್ವಾನ - ಈ ಬಾರಿಯಾದರೂ ತಪ್ಪಲಿದೆಯೇ ಸಂಚಾರ ಕಿರಿಕಿರಿ?

ಒಟ್ಟು 73 -74 ಕಿ.ಮೀ ಉದ್ದದ ವರ್ತುಲ ರಸ್ತೆಯು ಬೆಂಗಳೂರಿನ ಹೊರವಲಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಯೋಜನೆ ಸುಗಮವಾಗಿ ಅನುಷ್ಠಾನಗೊಳಿಸಲು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.


Click the Play button to hear this message in audio format

ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಹಾಡಲು ಮತ್ತು ಜಾಗತಿಕ ಮಟ್ಟದ ಮೂಲಸೌಕರ್ಯ ಒದಗಿಸಲು ರಾಜ್ಯ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ. ಎರಡು ದಶಕಗಳಿಂದ ಕಡತಗಳಲ್ಲೇ ಧೂಳು ಹಿಡಿಯುತ್ತಿದ್ದ 'ಪೆರಿಫೆರಲ್ ವರ್ತುಲ ರಸ್ತೆ' (PRR) ಯೋಜನೆಗೆ ಈಗ 'ಬೆಂಗಳೂರು ಬಿಸಿನೆಸ್ ಕಾರಿಡಾರ್' (BBC) ಎಂಬ ಹೊಸ ನಾಮಕರಣದೊಂದಿಗೆ ಜೀವ ಬಂದಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಮೊದಲ ಹಂತದ 19.80 ಕಿ.ಮೀ ಕಾಮಗಾರಿಗೆ ಬರೋಬ್ಬರಿ 3,348 ಕೋಟಿ ರೂ.ಗಳ ಟೆಂಡರ್ ಕರೆದಿದ್ದು, ನಗರದ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯ ಮುನ್ಸೂಚನೆ ನೀಡಿದೆ. ಒಟ್ಟು 27,000 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಈ ಬೃಹತ್ ಯೋಜನೆ, ಕೇವಲ ರಸ್ತೆಯಾಗಿ ಉಳಿಯದೆ ನಗರದ ಆರ್ಥಿಕತೆಯನ್ನೇ ಬದಲಿಸುವ 'ಬಿಸಿನೆಸ್ ಹಬ್' ಆಗಿ ಮೂಡಿಬರಲಿದೆ. ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಮೊದಲ ಹಂತದ ಟೆಂಡರ್‌ ಕರೆಯುವ ಮೂಲಕ ಹೊಸ ಚೈತ್ಯನ್ಯ ನೀಡಲಾಗಿದೆ.

ಒಟ್ಟು 73 ರಿಂದ 74 ಕಿ.ಮೀ ಉದ್ದದ ಈ ವರ್ತುಲ ರಸ್ತೆಯು ಬೆಂಗಳೂರಿನ ಹೊರವಲಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಯೋಜನೆಯನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ 19.80 ಕಿ.ಮೀ ಉದ್ದ ನಿರ್ಮಾಣ ಮಾಡಲಾಗುವುದು. ತುಮಕೂರು ರಸ್ತೆಯ ಮಾದಾವರದಿಂದ (ನೈಸ್ ರಸ್ತೆ ಜಂಕ್ಷನ್) ಆರಂಭವಾಗಿ ಬಳ್ಳಾರಿ ರಸ್ತೆಯ ವೆಂಕಟಾಲದವರೆಗೆ ವಿಸ್ತರಿಸಲಿದೆ. ಇದಕ್ಕಾಗಿ ಈಗ 3,348 ಕೋಟಿ ರೂ.ಗಳ ಟೆಂಡರ್ ಕರೆಯಲಾಗಿದೆ.

ಎರಡನೇ ಹಂತದಲ್ಲಿ ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯವರೆಗೆ. 19.37 ಕಿ.ಮೀ ನಿರ್ಮಾಣವಾಗಲಿದೆ. ಮೂರನೇ ಹಂತದಲ್ಲಿ ಹಳೆ ಮದ್ರಾಸ್ ರಸ್ತೆಯಿಂದ ಹೊಸೂರು ರಸ್ತೆಯವರೆಗೆ 27.75 ಕಿ.ಮೀ ಉದ್ದ ನಿರ್ಮಾಣ ಮಾಡಲಾಗುವುದು. ಬಾಕಿ ಉಳಿದ ಸುಮಾರು 6 ಕಿ.ಮೀ ರಸ್ತೆಯನ್ನು ಪ್ರಸ್ತುತ ಇರುವ ನೈಸ್ ರಸ್ತೆಗೆ ಸಂಪರ್ಕಿಸುವ ಮೂಲಕ ಇಡೀ ಬೆಂಗಳೂರು ನಗರಕ್ಕೆ ಒಂದು ಸಂಪೂರ್ಣ ವರ್ತುಲ ರಸ್ತೆಯನ್ನು ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ.

ಆರ್ಥಿಕ ಹೂಡಿಕೆ ಮತ್ತು ಅನುಷ್ಠಾನ ಮಾದರಿ

ಈ ಯೋಜನೆಯ ಒಟ್ಟು ಅಂದಾಜು ವೆಚ್ಚ 27 ಸಾವಿರ ಕೋಟಿ ರೂ.ಗಿಂತ ಅಧಿಕವಾಗಿದೆ. ಇದರಲ್ಲಿ ಸಿಂಹಪಾಲು ವೆಚ್ಚವು ಭೂಸ್ವಾಧೀನಕ್ಕಾಗಿಯೇ (ಸುಮಾರು 20,511 ಕೋಟಿ ರೂ.) ಮೀಸಲಿಡಲಾಗಿದೆ. ಈ ಯೋಜನೆಯನ್ನು ಡಿಬಿಎಫ್‌ಒಟಿ (ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಅಂದರೆ, ಗುತ್ತಿಗೆ ಪಡೆದ ಸಂಸ್ಥೆಯು ವಿನ್ಯಾಸ, ನಿರ್ಮಾಣ, ಹಣಕಾಸು ಹೂಡಿಕೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು, 10 ವರ್ಷಗಳ ಕಾಲ ರಸ್ತೆಯನ್ನು ನಿರ್ವಹಿಸಿ ನಂತರ ಸರ್ಕಾರಕ್ಕೆ ಹಸ್ತಾಂತರಿಸಬೇಕಾಗುತ್ತದೆ. ಹುಡ್ಕೋ ಸಂಸ್ಥೆಯು ಈ ಯೋಜನೆಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ.

ನಗರದೊಳಗೆ ಪ್ರವೇಶಿಸುವ ಅಗತ್ಯವಿಲ್ಲದ ಭಾರಿ ವಾಹನಗಳು ಮತ್ತು ಅಂತರರಾಜ್ಯ ವಾಹನಗಳು ಈ ಬಿಸಿನೆಸ್ ಕಾರಿಡಾರ್ ಬಳಸುವುದರಿಂದ ನಗರದ ಕೇಂದ್ರ ಭಾಗದ ಸಂಚಾರ ದಟ್ಟಣೆಯಲ್ಲಿ ಶೇ. 30 ರಿಂದ 40 ರಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಉತ್ತರ ಬೆಂಗಳೂರಿನಿಂದ ದಕ್ಷಿಣ ಅಥವಾ ಪೂರ್ವ ಬೆಂಗಳೂರಿಗೆ ಹೋಗುವ ವಾಹನಗಳಿಗೆ ಇದು 'ಬೈಪಾಸ್' ರಸ್ತೆಯಂತೆ ಕಾರ್ಯನಿರ್ವಹಿಸಲಿದೆ.

ಭೂಸ್ವಾಧೀನ - ರೈತರ ಪ್ರತಿರೋಧ

ಯೋಜನೆಯ ವಿಳಂಬಕ್ಕೆ ಪ್ರಮುಖ ಕಾರಣ ಭೂಸ್ವಾಧೀನ ಪ್ರಕ್ರಿಯೆಯಾಗಿದೆ. 67 ಗ್ರಾಮಗಳ ಸುಮಾರು 2,557 ಎಕರೆ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ರೈತರು 2013ರ ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆಯಡಿ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಕೆಲವು ರೈತರು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಇದು ಯೋಜನೆಯ ವೇಗಕ್ಕೆ ತಡೆಯೊಡ್ಡುತ್ತಿದೆ. 2018ರಿಂದ ಎರಡು ಬಾರಿ ಟೆಂಡರ್ ಕರೆದಿದ್ದರೂ, ರೈತರ ವಿರೋಧ ಮತ್ತು ಜಾಗತಿಕ ಕಂಪನಿಗಳ ಆಸಕ್ತಿಯ ಕೊರತೆಯಿಂದ ಯೋಜನೆ ಯಶಸ್ವಿಯಾಗಿರಲಿಲ್ಲ. ಈಗ ಇದು ಮೂರನೇ ಬಾರಿ ಕರೆದಿರುವ ಟೆಂಡರ್ ಆಗಿದೆ.

ಮೇ 5ಕ್ಕೆ ಟೆಂಡರ್‌ ಸ್ವೀಕೃತಿಯ ಕೊನೆಯ ದಿನ

ರಸ್ತೆ ನಿರ್ಮಾಣ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ. ಮೇ 5ರಂದು ಟೆಂಡರ್ ಸ್ವೀಕೃತಿಯ ಕೊನೆಯ ದಿನವಾಗಿದ್ದು, ಮೇ 6ರಂದು ತಾಂತ್ರಿಕ ಬಿಡ್‌ ಆರಂಭವಾಗಲಿದ್ದು, ಮೇ 11ರಂದು ಹಣಕಾಸು ಬಿಡ್‌ ಪ್ರಾರಂಭವಾಗಲಿದೆ. ಈ ರಸ್ತೆಯನ್ನು ಕೇವಲ ವರ್ತುಲ ರಸ್ತೆ ಎನ್ನದೆ ಬಿಸಿನೆಸ್ ಕಾರಿಡಾರ್ ಎಂದು ಕರೆಯುತ್ತಿರುವುದು ಯೋಜನೆಯ ಆರ್ಥಿಕ ಮಹತ್ವವನ್ನು ತಿಳಿಸುತ್ತದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಕೈಗಾರಿಕಾ ಹಬ್‌ಗಳು, ಮಾಹಿತಿ ತಂತ್ರಜ್ಞಾನ ಪಾರ್ಕ್‌ಗಳು ಮತ್ತು ಲಾಜಿಸ್ಟಿಕ್ ಕೇಂದ್ರಗಳು ತಲೆಯೆತ್ತುವ ಸಾಧ್ಯತೆಗಳಿವೆ. ಇದು ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಹೊಸ ಆಯಾಮ ನೀಡಲಿದೆ. 3 ವರ್ಷಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ.

ಯೋಜನೆಯ ಹಿನ್ನೆಲೆ

2004 - 2005ರಲ್ಲಿ ಯೋಜನೆಯ ಉದಯವಾಯಿತು. 2004ರಲ್ಲಿ ಎಸ್.ಎಂ. ಕೃಷ್ಣ ಅವರ ನಂತರದ ಅವಧಿಯಲ್ಲಿ ಈ ಯೋಜನೆಯ ಪ್ರಾಥಮಿಕ ಚರ್ಚೆಗಳು ಆರಂಭವಾದವು. 2005ರಲ್ಲಿ ಯೋಜನೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಆಗಿನ ಅಂದಾಜು ಉದ್ದ ಸುಮಾರು 65 ಕಿ.ಮೀ ಇತ್ತು ಮತ್ತು ಅಂದಾಜು ವೆಚ್ಚ ಕೇವಲ 3 ಸಾವಿರ ಕೋಟಿ ರೂ. ಆಸುಪಾಸಿನಲ್ಲಿತ್ತು. 2005ರಲ್ಲೇ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು. ಯೋಜನೆ ಘೋಷಣೆಯಾದ ಬೆನ್ನಲ್ಲೇ ಭೂಸ್ವಾಧೀನ ಪ್ರಕ್ರಿಯೆಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಯಿತು. ತಮ್ಮ ಫಲವತ್ತಾದ ಜಮೀನುಗಳನ್ನು ಕಳೆದುಕೊಳ್ಳಲು ರೈತರು ಸಿದ್ಧರಿರಲಿಲ್ಲ. ಪರಿಹಾರ ಧನದ ವಿಚಾರದಲ್ಲಿ ಗೊಂದಲಗಳು ಉಂಟಾದವು. ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಹಲವು ರೈತರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಇದರಿಂದಾಗಿ ಯೋಜನೆ ವರ್ಷಗಳ ಕಾಲ ಸ್ಥಗಿತಗೊಂಡಿತು.

ಹೊಸ ಭೂಸ್ವಾಧೀನ ಕಾಯ್ದೆಯ ಪ್ರಭಾವ

2013ರಲ್ಲಿ ಕೇಂದ್ರ ಸರ್ಕಾರವು ಭೂಸ್ವಾಧೀನದಲ್ಲಿ ಪಾರದರ್ಶಕತೆ ಮತ್ತು ಸರಿಯಾದ ಪರಿಹಾರ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯು ರೈತರಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪರಿಹಾರ ನೀಡಬೇಕೆಂದು ಹೇಳಿತು. ಇದರಿಂದಾಗಿ ಬಿಡಿಎಗೆ ಯೋಜನೆಯ ವೆಚ್ಚವು ಭಾರೀ ಪ್ರಮಾಣದಲ್ಲಿ ಹೆಚ್ಚಾಯಿತು. ಹಳೆಯ ದರದಲ್ಲಿ ಪರಿಹಾರ ನೀಡಬೇಕೇ ಅಥವಾ ಹೊಸ ಕಾಯ್ದೆಯಂತೆ ನೀಡಬೇಕೇ ಎಂಬ ಗೊಂದಲ ಯೋಜನೆಯನ್ನು ಮತ್ತಷ್ಟು ವಿಳಂಬಗೊಳಿಸಿತು.

ವಿಫಲವಾದ ಟೆಂಡರ್ ಪ್ರಯತ್ನಗಳು

ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಹಲವು ಬಾರಿ ಪ್ರಯತ್ನಿಸಿತು. 2018-2019ರಲ್ಲಿ ಯೋಜನೆಗೆ ಮರುಜೀವ ನೀಡಲು ಟೆಂಡರ್ ಕರೆಯಲಾಯಿತಾದರೂ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಕುಸಿತದಿಂದಾಗಿ ಯಾವುದೇ ಜಾಗತಿಕ ಕಂಪನಿಗಳು ಮುಂದೆ ಬರಲಿಲ್ಲ. 2005ರಲ್ಲಿ 3 ಸಾವಿರ ಕೋಟಿ ರೂ. ಇದ್ದ ಯೋಜನೆ, 2022ರ ವೇಳೆಗೆ 21 ಸಾವಿರ ಕೋಟಿ ರೂ.ನಿಂದ 27 ಸಾವಿರ ಕೋಟಿ ರೂ.ಗೆ ಏರಿಕೆಯಾಯಿತು. ಇದರಲ್ಲಿ ಶೇ.70ಕ್ಕೂ ಹೆಚ್ಚು ಭಾಗ ಕೇವಲ ಭೂಸ್ವಾಧೀನಕ್ಕೆ ಮೀಸಲಾಯಿತು.

ಯೋಜನೆಯ ಇತಿಹಾಸದಲ್ಲಿ 2022 ಅತ್ಯಂತ ಪ್ರಮುಖ ವರ್ಷವಾಗಿದೆ. ದಶಕಗಳ ಕಾಲ ನಡೆದ ಕಾನೂನು ಹೋರಾಟಕ್ಕೆ ಸುಪ್ರೀಂಕೋರ್ಟ್ ತೆರೆ ಎಳೆಯಿತು. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಈ ಯೋಜನೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲು ಬಿಡಿಎಗೆ ಅನುಮತಿ ನೀಡಿತು. ಆದರೆ, ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಸೂಚಿಸಿತು.

ಮರುನಾಮಕರಣ

ಪ್ರಸ್ತುತ ಸರ್ಕಾರವು ಈ ಯೋಜನೆಗೆ ಕೇವಲ ರಸ್ತೆ ಎನ್ನುವ ಬದಲು ಆರ್ಥಿಕ ಮೌಲ್ಯ ತುಂಬಲು ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಎಂದು ಮರುನಾಮಕರಣ ಮಾಡಿದೆ. ಈಗಿನ ಯೋಜನೆಯು 73.79 ಕಿ.ಮೀ ಉದ್ದವಿದ್ದು, 100 ಮೀಟರ್ ಅಗಲದ ರಸ್ತೆಯನ್ನು ಹೊಂದಿದೆ. ಇದು ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮತ್ತು ಹೊಸೂರು ರಸ್ತೆಗಳನ್ನು ಸಂಪರ್ಕಿಸುತ್ತದೆ. ಮೊದಲ ಹಂತದ 19.80 ಕಿ.ಮೀ ಕಾಮಗಾರಿಗೆ 3,348 ಕೋಟಿ ರೂ.ಗಳ ಟೆಂಡರ್ ಅನ್ನು ಬಿಡಿಎ ಇತ್ತೀಚೆಗೆ ಕರೆದಿದೆ.

Read More
Next Story